ಮನೆಯಿಂದ ಅನಗತ್ಯವಾಗಿ ಹೊರಬರಬೇಡಿ, ಲಾಕ್‌ಡೌನ್‌ ಕಡೆಯ ಅಸ್ತ್ರವಾಗಲಿ: ಮೋದಿ ಕಿವಿಮಾತು

ಕೊರೊನಾ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಈಗಾಗಲೇ ದಿಲ್ಲಿಯಲ್ಲಿ ಲಾಕ್‌ಡೌನ್‌ ಜಾರಿಯಾಗಿದೆ. ಸೋಮವಾರವಷ್ಟೆ ಅಲಹಾಬಾದ್‌ ಹೈಕೋರ್ಟ್‌ ಉತ್ತರ ಪ್ರದೇಶ ಐದು ನಗರಗಳಲ್ಲಿ ಲಾಕ್‌ಡೌನ್‌ ಹೇರಿತ್ತು.

ಮನೆಯಿಂದ ಅನಗತ್ಯವಾಗಿ ಹೊರಬರಬೇಡಿ, ಲಾಕ್‌ಡೌನ್‌ ಕಡೆಯ ಅಸ್ತ್ರವಾಗಲಿ: ಮೋದಿ ಕಿವಿಮಾತು
Linkup
ಹೊಸದಿಲ್ಲಿ: ಮಂಗಳವಾರ ರಾತ್ರಿ 8.45ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಭಾಷಣ ಮಾಡಿದರು. ದೇಶದಲ್ಲಿ ಪ್ರಕರಣಗಳು ಮಿತಿ ಮೀರಿ ಹೆಚ್ಚುತ್ತಿರುವ ಹೊತ್ತಲ್ಲೇ ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡಿ, ದೇಶ ಈಗ ಕೊರೊನಾ ವಿರುದ್ಧ ಯುದ್ಧ ಮಾಡಬೇಕಾಗಿದೆ ಎಂದರು. ಈಗ ದೇಶದಲ್ಲಿ ಆಮ್ಲಜನಕ ಬೇಡಿಕೆ ಹೆಚ್ಚಾಗಿದೆ. ಔಷಧ ತಯಾರಿಕೆ ಹಾಗೂ ಖ್ಯಾತ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ ಈಗ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು. ಭಾರತದಲ್ಲಿ ಅತಿ ಕಡಿಮೆ ದರದಲ್ಲಿ ಲಸಿಕೆ ಲಭ್ಯವಾಗುತ್ತಿದೆ. ಈಗಾಗಲೇ ಹಿರಿಯರಿಗೆ ಲಸಿಕೆ ನೀಡಲಾಗುತ್ತಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಕೊರೊನಾ ವಿರುದ್ಧ ಹೋರಾಟ ಮಾಡಲು ನಮಗೆ ಇನ್ನಷ್ಟು ಶಕ್ತಿ ದೊರೆತಂತಾಗುತ್ತದೆ ಎಂದು ಪ್ರಧಾನಿ ತಿಳಿಸಿದರು. ದೇಶದಲ್ಲಿ ಉತ್ಪಾದನೆ ಮಾಡುತ್ತಿರುವ ಕೊರೊನಾ ಲಸಿಕೆ ಇಡೀ ವಿಶ್ವದಲ್ಲಿ ಮಾನ್ಯತೆ ಪಡೆದಿದೆ. ಲಸಿಕೆ ಅಭಿಯಾನ ಇಡೀ ಜಗತ್ತಿನಲ್ಲಿಯೇ ಅತಿ ದೊಡ್ಡ ಅಭಿಯಾನವಾಗಿದೆ. ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಕೊರೊನಾ ಔಷಧ, ಕೊರೊನಾ ಲಸಿಕೆ ಉತ್ಪಾದನೆ ಹೆಚ್ಚಳ ಮಾಡಲಾಗಿದ ಎಂದರು ತಿಳಿಸಿದರು. ನಮ್ಮ ದೇಶದ ವಿಜ್ಞಾನಿಗಳು ಅತಿ ಕಡಿಮೆ ಸಮಯದಲ್ಲಿ ಲಸಿಕೆಯನ್ನು ತಯಾರಿಸಿದ್ದಾರೆ. ಇದು ಶ್ಲಾಘನೀಯ ಕ್ರಮ. ಕೊರೊನಾ ಸೋಂಕು ಪತ್ತೆಯಾದ ಬೆನ್ನಲ್ಲೇ ಲಸಿಕೆ ಸಂಶೋಧನೆಯನ್ನು ಕ್ಷಿಪ್ರಗತಿಯಲ್ಲಿ ಮಾಡಿ ನಮ್ಮ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂದು ಮೋದಿ ತಿಳಿಸಿದರು. ದೇಶದ ಜನರೆಲ್ಲರ ಸಹಕಾರದಿಂದ ಇದುವರೆಗಿನ ಕೊರೊನಾ ವಿರುದ್ಧ ಹೋರಾಟದಲ್ಲಿ ಮುನ್ನಡೆದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೈ ಜೋಡಿಸಿದರೆ ಈ ವಿನಾಶಕಾರಿ ವೈರಸ್‌ ನಿಯಂತ್ರಣ ಮಾಡಬಹುದಾಗಿದೆ ಎಂದರು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಾರ್ಮಿಕರು ಯಾವುದೇ ಕಾರಣಕ್ಕೂ ಗುಳೇ ಹೋಗಬಾರದು. ಎಲ್ಲಿ ಇರುತ್ತೀರೋ ಅಲ್ಲಿಯೇ ಇರಿ. ಕೊರೊನಾ ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದರು. ಸ್ವಚ್ಛತಾ ಅಭಿಯಾನ ಆರಂಭ ಮಾಡಿದಾಗ, ದೇಶದ ಚಿಣ್ಣರು ನಿಜಕ್ಕೂ ಉತ್ತಮ ರೀತಿಯಲ್ಲಿ ಕೈ ಜೋಡಿಸಿದ್ದರು. ಮನೆಯಲ್ಲಿ ಪ್ರತಿಯೊಬ್ಬರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ದೊಡ್ಡವರಿಗೆ ನಮ್ಮ ದೇಶದ ಮಕ್ಕಳು ತಿಳಿ ಹೇಳಿದ್ದರು ಎಂದು ತಿಳಿಸಿದರು. ಈಗ ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಹಿರಿಯರು ಬೇಕಾಬಿಟ್ಟಿಗೆ ಮನೆ ಬಿಟ್ಟು ಹೊರ ಹೋಗದಂತೆ ಮಕ್ಕಳು ತಿಳಿಹೇಳಬೇಕು. ಈ ವಿಷಯದಲ್ಲಿ ಮಕ್ಕಳಲ್ಲಿ ಮನವಿ ಮಾಡುತ್ತೇನೆ ಎಂದು ಮೋದಿ ತಿಳಿಸಿದರು. ಕೊರೊನಾ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಈಗಾಗಲೇ ದಿಲ್ಲಿಯಲ್ಲಿ ಲಾಕ್‌ಡೌನ್‌ ಜಾರಿಯಾಗಿದೆ. ಸೋಮವಾರವಷ್ಟೇ ಅಲಹಾಬಾದ್‌ ಹೈಕೋರ್ಟ್‌ ಉತ್ತರ ಪ್ರದೇಶ ಐದು ನಗರಗಳಲ್ಲಿ ಲಾಕ್‌ಡೌನ್‌ ಹೇರಿತ್ತು. ನಂತರ ಸುಪ್ರೀಂ ಕೋರ್ಟ್‌ ಲಾಕ್‌ಡೌನ್‌ ರದ್ದುಗೊಳಿಸಿತ್ತು. ಇತ್ತ ಜಾರ್ಖಂಡ್‌ ಸರಕಾರ ಏಪ್ರಿಲ್‌ 22ರಿಂದ ಆರಂಭಿಸಿ ರಾಜ್ಯದಲ್ಲಿ ಕರ್ಫ್ಯೂ ಘೋಷಿಸಿದೆ.