ಮೇಕೆದಾಟು ಯೋಜನೆ: ಎನ್‌ಜಿಟಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ತಮಿಳುನಾಡು

ಎನ್‌ಜಿಟಿಯು ಮೇಕೆದಾಟು ಯೋಜನೆ ಸಂಬಂಧಿತ ಪ್ರಕರಣವನ್ನು ಕೈಬಿಡುವ ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ, ತಮಿಳುನಾಡು ಸರಕಾರವು ಸುಪ್ರೀಂಕೋರ್ಟ್‌ನಲ್ಲಿಸಿವಿಲ್‌ ಮನವಿ ಸಲ್ಲಿಕೆಗೆ ಸಿದ್ಧತೆ ನಡೆಸಿದೆ.

ಮೇಕೆದಾಟು ಯೋಜನೆ: ಎನ್‌ಜಿಟಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ತಮಿಳುನಾಡು
Linkup
ಚೆನ್ನೈ: ತಮಗೆ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡದೆಯೇ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು (ಎನ್‌ಜಿಟಿ) ಸಂಬಂಧಿತ ಪ್ರಕರಣವನ್ನು ಕೈಬಿಡುವ ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ, ಸರಕಾರವು ಸುಪ್ರೀಂಕೋರ್ಟ್‌ನಲ್ಲಿ ಸಿವಿಲ್‌ ಮನವಿ ಸಲ್ಲಿಕೆಗೆ ಸಿದ್ಧತೆ ನಡೆಸಿದೆ. ಜೂ.17ರಂದು ಆದೇಶ ಹೊರಡಿಸಿದ್ದ ಎನ್‌ಜಿಟಿ, ಸುಪ್ರೀಂ ಕೋರ್ಟ್‌ನಲ್ಲಿ ಕೂಡ ಮೇಕೆದಾಟು ಯೋಜನೆ ವ್ಯಾಜ್ಯ ಸಂಬಂಧ ವಿಚಾರಣೆ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿತ್ತು. ಕರ್ನಾಟಕ ಸಲ್ಲಿಸಿದ್ದ ಪರಿಶೀಲನಾ ಅರ್ಜಿ ಪುರಸ್ಕರಿಸಿ, ಯೋಜನೆ ಸಂಬಂಧ ವಿಚಾರಣೆ ಕೈಚೆಲ್ಲಿತ್ತು. ಈ ಸಂಬಂಧ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈಮುರುಗನ್‌ ಅವರು ವಿಧಾನಸಭೆಗೆ ಸೋಮವಾರ ಮಾಹಿತಿ ನೀಡಿದ್ದಾರೆ. ಕರ್ನಾಟಕಕ್ಕೆ ಯೋಜನೆ ಕೈಬಿಡುವಂತೆ ಸೂಚಿಸಲು ಏ. 27ರಂದು ಕೇಂದ್ರ ಸರಕಾರಕ್ಕೂ ಮನವಿ ಮಾಡಲಾಗಿದೆ ಎಂದಿದ್ದಾರೆ. ಯೋಜನೆ ಸಂಬಂಧ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದ್ದ ಎನ್‌ಜಿಟಿಯು, ಸಮಿತಿ ರಚನೆಗೆ ಸೂಚಿಸಿತ್ತು. ಕರ್ನಾಟಕದಿಂದ ಮೇಕೆದಾಟು ಯೋಜನೆಗೆ ಅಗತ್ಯವಾದ ನಿರ್ಮಾಣ ಕಾಮಗಾರಿ ಅನುಮತಿ, ಪರಿಸರ ಸಚಿವಾಲಯದ ಸಮ್ಮತಿ ಪಡೆಯಲಾಗಿದೆಯೇ ಎಂದು ಪರಿಶೀಲಿಸಿ ವರದಿ ಸಲ್ಲಿಸಲು ಸಮಿತಿ ನಿರ್ದೇಶಿಸಿತ್ತು.