ಭಾರತದಲ್ಲಿ ಕೊರೊನಾಗೆ ಬಲಿಯಾಗಿದ್ದು 4 ಲಕ್ಷವಲ್ಲ 50 ಲಕ್ಷ ಜನ?: ಅಮೆರಿಕದ ವರದಿಯಲ್ಲಿ ಬಹಿರಂಗ!

ಕೊರೊನಾದಿಂದ ಇಷ್ಟೇ ಜನ ಮೃತಪಟ್ಟಿದ್ದಾರೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಆದರೆ, ಭಾರತದಲ್ಲಿ 2020ರ ಜನವರಿಯಿಂದ 2021ರ ಜೂನ್‌ ಅವಧಿಯಲ್ಲಿ 34 ಲಕ್ಷದಿಂದ 49 ಲಕ್ಷ ಜನ ಸೋಂಕಿಗೆ ಬಲಿಯಾಗಿದ್ದಾರೆ. ಅಧಿಕೃತವಾಗಿ ನೀಡಿರುವ ಮಾಹಿತಿಗಿಂತ 40 ಲಕ್ಷ ಅಧಿಕ ಜನರಂತೂ ಸಾವಿಗೀಡಾಗಿದ್ದಾರೆ, ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಕೊರೊನಾಗೆ ಬಲಿಯಾಗಿದ್ದು 4 ಲಕ್ಷವಲ್ಲ 50 ಲಕ್ಷ ಜನ?: ಅಮೆರಿಕದ ವರದಿಯಲ್ಲಿ ಬಹಿರಂಗ!
Linkup
ಹೊಸದಿಲ್ಲಿ: ದೇಶದಲ್ಲಿ ಕೊರೊನಾದಿಂದ ಇದುವರೆಗೆ 4 ಲಕ್ಷಕ್ಕಿಂತ ಅಧಿಕ ಜನ ಮೃತಪಟ್ಟಿದ್ದಾರೆ ಎಂದು ಅಧಿಕೃತ ವೆಬ್‌ಸೈಟ್‌ ತಿಳಿಸಿದೆ. ಆದರೆ, ನೂತನ ವರದಿ ಪ್ರಕಾರ ಸೋಂಕಿನಿಂದ ಇದುವರೆಗೆ ಸುಮಾರು 34-49 ಲಕ್ಷ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ನೂತನ ವರದಿಯೊಂದು ತಿಳಿಸಿದೆ. ದೇಶದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಸಹ ಲೇಖಕರಾಗಿರುವ, ಅಮೆರಿಕ ಮೂಲದ ಗ್ಲೋಬಲ್‌ ಡೆವ-ಲಪ್‌ಮೆಂಟ್‌ ಸಂಸ್ಥೆಯ ಜಸ್ಟಿನ್‌ ಸ್ಯಾಂಡೆಫರ್‌ ಹಾಗೂ ಹಾರ್ವರ್ಡ್‌ ವಿಶ್ವವಿದ್ಯಾಲಯದ ಅಭಿಷೇಕ್‌ ಆನಂದ್‌ ತಯಾರಿಸಿದ ವರದಿ ಮಂಗಳವಾರ ಬಿಡುಗಡೆಯಾಗಿದ್ದು, ಇದರಲ್ಲಿ ಕೊರೊನಾ ಸಾವಿನ ಸಂಖ್ಯೆ ಉಲ್ಲೇಖಿಸಲಾಗಿದೆ. ''ಕೊರೊನಾದಿಂದ ಇಷ್ಟೇ ಜನ ಮೃತಪಟ್ಟಿದ್ದಾರೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಆದರೆ, ಭಾರತದಲ್ಲಿ 2020ರ ಜನವರಿಯಿಂದ 2021ರ ಜೂನ್‌ ಅವಧಿಯಲ್ಲಿ 34 ಲಕ್ಷದಿಂದ 49 ಲಕ್ಷ ಜನ ಸೋಂಕಿಗೆ ಬಲಿಯಾಗಿದ್ದಾರೆ. ಅಧಿಕೃತವಾಗಿ ನೀಡಿರುವ ಮಾಹಿತಿಗಿಂತ 40 ಲಕ್ಷ ಅಧಿಕ ಜನರಂತೂ ಸಾವಿಗೀಡಾಗಿದ್ದಾರೆ,'' ಎಂದು ವರದಿ ತಿಳಿಸಿದೆ. ''ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ನಡೆದ ಮಹಾ ದುರಂತಗಳಿಗಿಂತ ಹೆಚ್ಚಿನ ಪ್ರಮಾಣದ ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಖಂಡಿತವಾಗಿಯೂ ಇದು ನೂರು, ಸಾವಿರ ಇಲ್ಲ. ಲಕ್ಷಾಂತರ ಜನ ಸೋಂಕಿಗೆ ಬಲಿಯಾಗಿದ್ದಾರೆ,'' ಎಂದು ಲೇಖಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಆಮ್ಲಜನಕ ಕೊರತೆಗೆ ಪ್ರತಿಪಕ್ಷ ಕನ್ನಡಿಹೊಸದಿಲ್ಲ: ''ಕೊರೊನಾ ಎರಡನೇ ಅಲೆ ವೇಳೆ ದೇಶಾದ್ಯಂತ ಆಮ್ಲಜನಕ ಕೊರತೆಯಿಂದ ಒಬ್ಬರೂ ಮೃತಪಟ್ಟಿಲ್ಲ,'' ಎಂಬ ಕೇಂದ್ರ ಸರಕಾರದ ಪ್ರತಿಕ್ರಿಯೆಗೆ ಪ್ರತಿಪಕ್ಷಗಳು ಭಾರಿ ಟೀಕೆ ವ್ಯಕ್ತಪಡಿಸಿದ್ದು, ''ಮುಂದೊಂದು ದಿನ ದೇಶದಲ್ಲಿ ಕೊರೊನಾವೇ ಇಲ್ಲ ಎಂದು ಕೇಂದ್ರ ಸರಕಾರ ಹೇಳಿದರೂ ಅಚ್ಚರಿಯಿಲ್ಲ,'' ಎಂದು ದಿಲ್ಲಿಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ತಿರುಗೇಟು ನೀಡಿದ್ದಾರೆ. ''ಕೊರೊನಾದಿಂದ ಒಬ್ಬರೂ ಮೃತಪಟ್ಟಿಲ್ಲ ಎಂದು ಕೇಂದ್ರ ಸರಕಾರ ಹೇಳಿರುವುದು ಸರಿಯಲ್ಲ. ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸರಕಾರ ಇಂತಹ ಯತ್ನ ಮಾಡುತ್ತಿದೆ. ಆಮ್ಲಜನಕ ಕೊರತೆಯೇ ಇಲ್ಲ ಎಂದಿದ್ದರೆ ಆಸ್ಪತ್ರೆಗಳೇಕೆ ಆಮ್ಲಜನಕ ಕುರಿತು ಮನವಿ ಸಲ್ಲಿಸುತ್ತಿದ್ದವು,'' ಎಂದು ಪ್ರಶ್ನಿಸಿದ್ದಾರೆ. ''ದೇಶದಲ್ಲಿಆಮ್ಲಜನಕ ಕೊರತೆಯಿಂದ ಒಬ್ಬರೂ ಮೃತಪಟ್ಟಿಲ್ಲ,'' ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ ಪವಾರ್‌ ಅವರು ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ. ಇದಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ ಶಿವಸೇನೆ ವಕ್ತಾರ ಸಂಜಯ್‌ ರಾವತ್‌, ''ಆಮ್ಲಜನಕ ಕೊರತೆಯಿಂದ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಕೇಂದ್ರ ಸರಕಾರಕ್ಕೆ ಕೇಳುವುದಿಲ್ಲ. ಮೃತರ ಕುಟುಂಬಸ್ಥರು ಕೇಂದ್ರ ಸರಕಾರದ ವಿರುದ್ಧ ದೂರು ದಾಖಲಿಸಬೇಕು,'' ಎಂದಿದ್ದಾರೆ.