ಭೀಕರ ಘಟನೆ: ಕೇಂದ್ರ ಸರ್ಕಾರಿ ನೌಕರನನ್ನು ಏಳನೇ ಮಹಡಿಯಿಂದ ಎಸೆದು ಕೊಂದ ತಾಯಿ-ಮಗ

ಮುಂಬಯಿಯ ಅಂಧೇರಿ ಪಶ್ಚಿಮ ಭಾಗದಲ್ಲಿ ತಾಯಿ ಮತ್ತು ಮಗ ಸೇರಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಅವರ ರಕ್ತನಾಳ ಕತ್ತರಿಸಿ ಏಳನೇ ಮಹಡಿಯಿಂದ ಎಸೆದ ಭೀಕರ ಘಟನೆ ನಡೆದಿದೆ. ಮೃತ ಶಂತನು ಕೃಷ್ಣ ಶೇಷಾದ್ರಿ ಅವರು ಕೇಂದ್ರ ಸರ್ಕಾರಿ ಸ್ವಾಮ್ಯದ ಎಸ್‌ಐಡಿಬಿಐ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು. ಮಗ ಉನ್ನತ ಶಿಕ್ಷಣಕ್ಕೆಂದು ವಿದೇಶಕ್ಕೆ ತೆರಳಲು ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ವಾಗ್ವಾದ ನಡೆದ ಬಳಿಕ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೀಕರ ಘಟನೆ: ಕೇಂದ್ರ ಸರ್ಕಾರಿ ನೌಕರನನ್ನು ಏಳನೇ ಮಹಡಿಯಿಂದ ಎಸೆದು ಕೊಂದ ತಾಯಿ-ಮಗ
Linkup
ಮುಂಬಯಿ: ಪತ್ನಿ ಮತ್ತು ಮಗ ಸೇರಿ ವ್ಯಕ್ತಿಯೊಬ್ಬರನ್ನು ಥಳಿಸಿ ಕೊಂದು, ಅವರ ದೇಹವನ್ನು ಕಟ್ಟಡವೊಂದರ ಏಳನೇ ಮಹಡಿಯಿಂದ ಎಸೆದ ಘಟನೆ ನಗರದ ಅಂಬೋಲಿ ಪ್ರದೇಶದಲ್ಲಿ ನಡೆದಿದೆ. ಮಹಿಳೆ ಹಾಗೂ ಆಕೆಯ ಮಗನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 54 ವರ್ಷದ ಶಂತನು ಕೃಷ್ಣ ಶೇಷಾದ್ರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಾಯಿ ಮತ್ತು ಮಗ ಇಬ್ಬರೂ ಆರಂಭದಲ್ಲಿ ವಾದಿಸಿದ್ದರು. ಅವರು ಈ ಹಿಂದೆ ಕೂಡ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು ಎಂದು ತಿಳಿಸಿದ್ದರು. ಆದರೆ ತನಿಖೆ ನಡೆಸುವ ವೇಳೆ ಅವರಿಬ್ಬರೂ ಸುಳ್ಳು ಹೇಳುತ್ತಿದ್ದಾರೆ ಎಂದು ಪೊಲೀಸರಿಗೆ ಗೊತ್ತಾಯಿತು. ಅವರಿಬ್ಬರೂ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಆಘಾತಕಾರಿ ಅಪರಾಧ ಕೃತ್ಯಕ್ಕೆ ಕೌಟುಂಬಿಕ ಕಲಹ ಕಾರಣ ಎನ್ನುವುದು ಪ್ರಾಥಮಿಕ ತನಿಖೆಗಳಿಂದ ತಿಳಿದು ಬಂದಿದೆ ಎಂದು ಉಪ ಪೊಲೀಸ್ ಆಯುಕ್ತ ಮಂಜುನಾಥ್ ಶಿಂಗೆ ತಿಳಿಸಿದ್ದಾರೆ. ಆ ವ್ಯಕ್ತಿಯ ಹೆಂಡತಿ ಮತ್ತು ಮಗ ಇಬ್ಬರನ್ನೂ ಬಂಧಿಸಲಾಗಿದೆ ಹಾಗೂ ಮುಂದಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಶಂತನು ಕೃಷ್ಣ ಶೇಷಾದ್ರಿ ಅವರು ಕೇಂದ್ರ ಸರ್ಕಾರಿ ನೌಕರರಾಗಿದ್ದು, ಮಗ ಮತ್ತು ಹೆಂಡತಿ ಜತೆಗೆ ಅಂಧೇರಿಯಲ್ಲಿ ವಾಸಿಸುತ್ತಿದ್ದರು. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ನಲ್ಲಿ () ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿದ್ದ ಅವರನ್ನು ಕೆನಡಾದಲ್ಲಿ ಉನ್ನತ ಶಿಕ್ಷಣ ಮಾಡಲು ಹಣ ನೀಡಬೇಕೆಂಬ ಮಗನ ಒತ್ತಾಯಕ್ಕೆ ನಿರಾಕರಿಸಿದ್ದರು ಎನ್ನಲಾಗಿದೆ. ಅಂಧೇರಿ ಪಶ್ಚಿಮ ಭಾಗದ ವೀರ ದೇಸಾಯಿ ರಸ್ತೆಯ ಎಸ್‌ಐಡಿಬಿಐ ಅಧಿಕಾರಿಗಳ ಕ್ವಾರ್ಟರ್ಸ್‌ನಲ್ಲಿ ಈ ಕುಟುಂಬ ವಾಸಿಸುತ್ತಿತ್ತು. ಶೇಷಾದ್ರಿ ಅವರ ಮಗ 26 ವರ್ಷದ ಅರವಿಂದ್, ಎರಡು ವರ್ಷಗಳ ಹಿಂದೆ ಎಂಜಿನಿಯರಿಂಗ್ ಮುಗಿಸಿದ್ದ. ಆತ ಉನ್ನತ ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳಲು ಬಯಸಿದ್ದ. ಈ ವಿಚಾರವಾಗಿ ಶೇಷಾದ್ರಿ ಅವರೊಂದಿಗೆ ಪತ್ನಿ ಜಯಶೀಲಾ (52) ಮತ್ತು ಮಗ ಅರವಿಂದ್ ಹಲವು ಬಾರಿ ವಾಗ್ವಾದ ನಡೆಸಿದ್ದರು. ಆದರೆ ಮಗ ಕೆನಡಾಕ್ಕೆ ತೆರಳುವ ಉದ್ದೇಶಕ್ಕೆ ಹಣ ನೀಡಲು ಅವರು ನಿರಾಕರಿಸಿದ್ದರು. ಹಣಕಾಸಿನ ವಿಚಾರವಾಗಿ ತಾಯಿ ಮತ್ತು ಮಗ ಶೇಷಾದ್ರಿ ಅವರನ್ನು ಕೊಲೆ ಮಾಡಲು ಗುರುವಾರ ರಾತ್ರಿ ನಿರ್ಧರಿಸಿದ್ದರು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಲಗಿದ್ದ ಶೇಷಾದ್ರಿ ಅವರ ಮೇಲೆ ತಾಯಿ ಮತ್ತು ಮಗ ಹಲ್ಲೆ ನಡೆಸಲು ಆರಂಭಿಸಿದರು. ಅವರ ಉಸಿರುಗಟ್ಟಿಸಿ ಕೊಲೆ ಮಾಡಲು ಪ್ರಯತ್ನಿಸಿದರು. ಇಬ್ಬರೂ ಸೇರಿ ಶೇಷಾದ್ರಿ ಅವರ ತಲೆಯನ್ನು ಮರದ ಮಂಚದ ತುದಿಗೆ ಐದಾರು ಬಾರಿ ಚಚ್ಚಿದ್ದಾರೆ. ಬಳಿಕ ಕೈಯಲ್ಲಿನ ಒಂದು ರಕ್ತನಾಳವನ್ನು ಕತ್ತರಿಸಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಬಿಂಬಿಸಲು ಉದ್ದೇಶಿಸಿದ್ದರು. ಆದರೆ, ಭೀಕರ ಹಲ್ಲೆಯಿಂದ ದೇಹದ ಎಲ್ಲೆಡೆ ಗಾಯಗಳಾಗಿರುವುದರಿಂದ ಅವರು ಯೋಜನೆ ಬದಲಿಸಿದರು. ಕ್ವಾರ್ಟರ್ಸ್‌ನ ಏಳನೇ ಮಹಡಿ ಬಾಲ್ಕನಿಯಿಂದ ಶೇಷಾದ್ರಿ ಅವರನ್ನು ಕೆಳಕ್ಕೆ ಎಸೆದಿದ್ದಾರೆ. ಅವರು ರಕ್ತನಾಳ ಕತ್ತರಿಸಿದ್ದಾಗ ರಕ್ತವು ಸೀಲಿಂಗ್‌ಗೆ ಚಿಮ್ಮಿ ಅಂಟಿಕೊಂಡಿತ್ತು. ಮನೆಯಲ್ಲಿ ಇದ್ದ ರಕ್ತದ ಕಲೆಯನ್ನೆಲ್ಲ ಅಳಿಸಿ ಸ್ವಚ್ಛಗೊಳಿಸಿದ್ದ ಆರೋಪಿಗಳು, ತಮ್ಮ ರಕ್ತಸಿಕ್ತ ಬಟ್ಟೆಗಳನ್ನು ವಾಷಿಂಗ್ ಮೆಷಿನ್‌ಗೆ ಹಾಕಿದ್ದರು. ಬಳಿಕ ನಿದ್ರೆ ಮಾಡುತ್ತಿದ್ದಂತೆ ನಾಟಕವಾಡಿದ್ದರು. ಮೇಲಿನಿಂದ ಏನೋ ಬಿದ್ದ ಶಬ್ಧ ಕೇಳಿಸಿಕೊಂಡ ಭದ್ರತಾ ಸಿಬ್ಬಂದಿ, ಅದನ್ನು ಪರಿಶೀಲಿಸಿ ಕೂಡಲೇ ಶೇಷಾದ್ರಿ ಅವರ ಫ್ಲ್ಯಾಟ್‌ಗೆ ಹೋಗಿ ಮಾಹಿತಿ ನೀಡಿದ್ದ. ತನಿಖೆ ಆರಂಭಿಸಿದ ಪೊಲೀಸರಿಗೆ ಫ್ಲ್ಯಾಟ್‌ಗೆ ತೆರಳಿದಾಗಲೇ ಅನುಮಾನ ವ್ಯಕ್ತವಾಗಿತ್ತು. ತಾಯಿ ಮತ್ತು ಮಗನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ ಇಬ್ಬರೂ ಸತ್ಯ ಬಾಯ್ಬಿಟ್ಟಿದ್ದಾರೆ.