ಭೀಕರ ಅಪಘಾತ: ಮಹಾರಾಷ್ಟ್ರ ಬಿಜೆಪಿ ಶಾಸಕ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ಸಾವು

ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿ ಶಾಸಕ ವಿಜಯ್ ರಹಂಗದಾಲೆ ಅವರ ಮಗ ಸೇರಿದಂತೆ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಭೀಕರ ಅಪಘಾತ: ಮಹಾರಾಷ್ಟ್ರ ಬಿಜೆಪಿ ಶಾಸಕ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ಸಾವು
Linkup
ಪುಣೆ: ಮಹಾರಾಷ್ಟ್ರದಲ್ಲಿ ಸೋಮವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿ ಶಾಸಕನ ಮಗ ಸೇರಿದಂತೆ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ರಾತ್ರಿ 11.30ರ ಸುಮಾರಿಗೆ ಈ ಸಂಭವಿಸಿದೆ. ಜಿಲ್ಲೆಯ ಸೆಲ್ಸುರಾ ಗ್ರಾಮದ ಮೂಲಕ ಕಾರಿನಲ್ಲಿ ಅವರು ತೆರಳುತ್ತಿದ್ದಾಗ ಎದುರಿನಿಂದ ಹಠಾತ್ತನೆ ವನ್ಯಪ್ರಾಣಿಯೊಂದು ಅಡ್ಡ ಬಂದಿದೆ. ಪ್ರಾಣಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲನೆ ಮಾಡುತ್ತಿದ್ದ ವ್ಯಕ್ತಿ, ಕಾರನ್ನು ಸಂಪೂರ್ಣವಾಗಿ ತಿರುಗಿಸಿದ್ದಾನೆ. ಇದರಿಂದ ನಿಯಂತ್ರಣ ತಪ್ಪಿದ ಕಾರು, ಮೋರಿಯೊಂದರ ಅಡಿಯಲ್ಲಿ ಇದ್ದ ಗುಂಡಿಗೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವಾರ್ಧಾ ಎಸ್‌ಪಿ ಪ್ರಶಾಂತ್ ಹೋಲ್ಕರ್ ತಿಳಿಸಿದ್ದಾರೆ. ಮೃತರಲ್ಲಿ ತಿರೋರಾ ಕ್ಷೇತ್ರದ ವಿಜಯ್ ರಹಂಗದಾಲೆ ಅವರ ಮಗ ಅವಿಷ್ಕಾರ್ ಕೂಡ ಸೇರಿದ್ದಾರೆ. ನೀರಜ್ ಚೌಹಾಣ್, ನಿತೇಶ್ ಸಿಂಗ್, ವಿವೇಕ್ ನಂದನ್, ಪ್ರತ್ಯುಷ್ ಸಿಂಗ್, ಶುಭಂ ಜೈಸ್ವಾಲ್ ಮತ್ತು ಪವನ್ ಶಕ್ತಿ ಮೃತರಾದ ಇತರೆ ವಿದ್ಯಾರ್ಥಿಗಳಾಗಿದ್ದಾರೆ. ಮಹೀಂದ್ರಾ ಎಕ್ಸ್‌ಯುವಿ 500 ವಾಹನದಲ್ಲಿ ದಿಯೋಲಿಯಿಂದ ವಾರ್ಧಾಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಸುಮಾರು 40 ಅಡಿ ಆಳದ ಕಮರಿಗೆ ವಾಹನ ಪಲ್ಟಿ ಹೊಡೆದಿದೆ. ಮೃತರೆಲ್ಲರೂ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದು, ವಾರ್ಧಾ ಜಿಲ್ಲೆಯ ಸವಾಂಗಿ ಪ್ರದೇಶದಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದರು. ಮಹಾರಾಷ್ಟ್ರದಲ್ಲಿ ಕಳೆದ 48 ಗಂಟೆಗಳಲ್ಲಿ ಇದು ಮೂರನೇ ದೊಡ್ಡ ಅಪಘಾತವಾಗಿದೆ. ಭಾನುವಾರ ಪುಣೆ- ಅಹ್ಮದನಗರ ರಸ್ತೆಯಲ್ಲಿ ಭಾನುವಾರ ಸಂಜೆ ಟ್ರಕ್ ಒಂದು ಕಾರ್ ಮತ್ತು ಎರಡು ಮೋಟಾರ್‌ಸೈಕಲ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದರು. ಕಾರಿನಲ್ಲಿ ಇದ್ದ ಆರು ಮಂದಿಯಲ್ಲಿ ಮೂವರು ಮೃತಪಟ್ಟರೆ, ಉಳಿದ ಮೂವರು ಗಾಯಗೊಂಡಿದ್ದರು. ಬೈಕ್‌ನಲ್ಲಿದ್ದ ಇಬ್ಬರು ಬಲಿಯಾಗಿದ್ದರು.