ಬೆಂಗಳೂರು: ಮಹಾನಗರಿ ಬೆಂಗಳೂರಿನಲ್ಲಿ ವರುಣನ ರುದ್ರನರ್ತನ ಮುಂದುವರಿದಿದ್ದು, ಹಲವು ಕೆರೆಗಳು ತುಂಬಿ ಹರಿದು ಸಾಕಷ್ಟು ಅನಾಹುತ ಸೃಷ್ಟಿಸುತ್ತಿವೆ. ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಉತ್ತರ ದಿಕ್ಕಿನ ಹಲವು ಬಡಾವಣೆಗಳು ಜಲಾವೃತಗೊಂಡಿದ್ದವು. ಇದರಿಂದ 'ಜಲ ದಿಗ್ಬಂಧನ'ಕ್ಕೊಳಗಾಗಿದ್ದ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು.
ನಗರದ ಉತ್ತರ ಭಾಗದಲ್ಲಿ 130 ಮಿ.ಮೀ ಗಿಂತ ಹೆಚ್ಚು ಮಳೆಯಾದ ಪರಿಣಾಮ ರಾಜಕಾಲುವೆಗಳು ಉಕ್ಕಿ ಹರಿದು, ಸಮೀಪದ ಬಡಾವಣೆಗಳು ಭಾಗಶಃ ದ್ವೀಪಗಳಾಗಿ ಮಾರ್ಪಟ್ಟಿದ್ದವು. ಯಲಹಂಕ ಕೆರೆ ಕೋಡಿ ಬಿದ್ದಿದ್ದರಿಂದ ಸನಿಹದಲ್ಲೇ ಇರುವ ಸಂಪೂರ್ಣ ಜಲಾವೃತಗೊಂಡಿತ್ತು. ಹಾಗೆಯೇ, ಸಿಂಗಪುರ ಕೆರೆ, ದೊಡ್ಡಬೊಮ್ಮಸಂದ್ರ ಕೆರೆ ಮತ್ತು ಮಲ್ಲಸಂದ್ರ ಕೆರೆ ಕೋಡಿ ಬಿದ್ದು, ಜಲಪ್ರಳಯದಿಂದ ಹಲವು ಬಡಾವಣೆಗಳ ಜನರು ನಲುಗಿ ಹೋಗಿದ್ದಾರೆ. ನೀರಿನೊಂದಿಗೆ ಮನೆಗಳಿಗೆ ನುಗ್ಗಿದ ಕೊಳಚೆ ನೀರಿನಿಂದ ದಿನಸಿ, ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿವೆ. ಕೆಲ ಪ್ರದೇಶಗಳ ಜನರು ಕುಡಿಯುವ ನೀರು, ಊಟ, ತಿಂಡಿಗಾಗಿ ಪರದಾಡಿದರು.
ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನಲ್ಲಿ 604 ಫ್ಲ್ಯಾಟ್‌ಗಳಿದ್ದು, ಸುಮಾರು 1600 ಮಂದಿ ವಾಸವಿದ್ದಾರೆ. ರಾತ್ರಿ ಸುರಿದ ಜೋರು ಮಳೆಯಿಂದ ಯಲಹಂಕ ಕೆರೆಯಿಂದ ಜಕ್ಕೂರು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣ ಜಾಸ್ತಿಯಾಗಿ, ಪಕ್ಕದ ಅಪಾರ್ಟ್‌ಮೆಂಟ್ ಆವರಣಕ್ಕೆ ನುಗ್ಗಿದೆ. ನೀರಿನ ಪ್ರಮಾಣ ಜಾಸ್ತಿಯಾಗಿ ನೆಲ ಮಹಡಿಯು ಸಂಪೂರ್ಣ ಮುಳುಗಡೆಯಾಗಿದ್ದರಿಂದ ನಿವಾಸಿಗಳು ಫ್ಲ್ಯಾಟ್‌ಗಳಿಂದ ಹೊರಬರಲಾಗದೆ ಬಂದಿಯಾದರು. ಕೆಲಸ ಕಾರ್ಯದ ನಿಮಿತ್ತ ಹೊರ ಹೋಗಿದ್ದವರು ಒಳ ಹೋಗಲಾಗದೆ ತಡರಾತ್ರಿವರೆಗೆ ಕಾದು ಕುಳಿತಿದ್ದರು.
ಕೆರೆ ನೀರು ನೆಲ ಮಹಡಿಗೆ ನುಗ್ಗಿದ್ದರಿಂದ ಕಾರು, ದ್ವಿಚಕ್ರ ವಾಹನಗಳು ತೇಲಿದವು. ಇದರಿಂದ ಹಲವು ವಾಹನಗಳು ಹಾನಿಗೊಳಗಾದವು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ಬಂದ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ತಂಡಗಳು, ಅಗ್ನಿಶಾಮಕ ಮತ್ತು ಬಿಬಿಎಂಪಿ ಸಿಬ್ಬಂದಿ ದೋಣಿಗಳ ಮೂಲಕ ನಿವಾಸಿಗಳನ್ನು ರಕ್ಷಿಸಿದರು. ಸೋಮವಾರ ಸಂಜೆವರೆಗೂ ನೀರಿನ ಮಟ್ಟ ಕಡಿಮೆಯಾಗಲೇ ಇಲ್ಲ. ಹೀಗಾಗಿ, ದೋಣಿ, ಟ್ರ್ಯಾಕ್ಟರ್‌ಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ವಯೋವೃದ್ಧರು, ಅನಾರೋಗ್ಯದಿಂದ ಬಳಲುತ್ತಿರುವವರು ಸೇರಿದಂತೆ ಹಲವರು ಫ್ಲ್ಯಾಟ್‌ಗಳನ್ನು ಖಾಲಿ ಮಾಡಿ ಸಂಬಂಧಿಕರ ಮನೆಗೆ ತೆರಳಿದರು.
ಜೋರು ಮಳೆ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಹೀಗಾಗಿ, ನಿವಾಸಿಗಳು ರಾತ್ರಿಯಿಡೀ ಕತ್ತಲಲ್ಲೇ ಕಾಲ ಕಳೆಯುವಂತಾಯಿತು. ಕುಡಿಯುವ ನೀರು ಹಾಗೂ ಅಗತ್ಯ ವಸ್ತುಗಳಿಗಾಗಿ ಪರದಾಡಿದರು. ಪಾಲಿಕೆ ಸಿಬ್ಬಂದಿ ಹಾಗೂ ಸ್ವಯಂಸೇವಕರ ತಂಡವು ನಿವಾಸಿಗಳಿಗೆ ಹಾಲು, ಬಿಸ್ಕೆಟ್, ಕ್ಯಾಂಡಲ್, ಬ್ರೆಡ್, ಹಣ್ಣು, ಹಂಪಲು ಹಾಗೂ ಕುಡಿಯುವ ನೀರು ವಿತರಿಸಿದರು. ವಸತಿ ಸಮುಚ್ಚಯದ ಆವರಣದಲ್ಲಿ 4 ಅಡಿಯಷ್ಟು ನೀರು ನಿಂತಿತ್ತು. ಮಳೆ ನೀರಿನೊಂದಿಗೆ ಹಾವುಗಳು ಹರಿದು ಬಂದಿದ್ದರಿಂದ ನಿವಾಸಿಗಳು ಭಯಭೀತರಾಗಿದ್ದರು. ಆತಂಕದ ನಡುವೆಯೂ ಕೆಲ ಯುವಕ-ಯುವತಿಯರು ಅಡಿಗಟ್ಟಲೆ ನಿಂತಿದ್ದ ನೀರಿನಲ್ಲೇ ವಾಲಿಬಾಲ್ ಆಟವಾಡುವ ಮೂಲಕ ಖುಷಿಪಟ್ಟರು.
18 ಎನ್‌ಡಿಆರ್‌ಎಫ್ ತಂಡಗಳು, ಅಗ್ನಿಶಾಮಕ ತಂಡಗಳು ದೋಣಿಗಳು ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ನಿವಾಸಿಗಳನ್ನು ಮನೆಯಿಂದ ಹೊರಗೆ ಕರೆದೊಯ್ಯುವ ಹಾಗೂ ಹೊರಗಿದ್ದವರನ್ನು ಒಳಗೆ ಕರೆದೊಯ್ಯುವ ಕೆಲಸ ಮಾಡಿದರು. ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳ ತಂಡವು ನಿವಾಸಿಗಳ ಮನೆಗಳಿಗೆ ತೆರಳಿ, ಸಮಸ್ಯೆಗಳ ಮಾಹಿತಿ ಸಂಗ್ರಹಿಸಿದರು. 8 ಮಂದಿ ವೈದ್ಯರನ್ನೊಳಗೊಂಡ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ದಿನದ 24 ಗಂಟೆಯೂ ಒಬ್ಬ ವೈದ್ಯರು, ಸಿಬ್ಬಂದಿ ಹಾಗೂ ಬೇಸಿಕ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್‌ನ ವ್ಯವಸ್ಥೆ ಮಾಡಲಾಗಿದೆ. ನಿವಾಸಿಗಳಿಗೆ ಏನಾದರೂ ತೊಂದರೆಯಾದರೆ, ವೈದ್ಯಕೀಯ ತಂಡವು ಕೂಡಲೇ ಸ್ಪಂದಿಸಲಿದೆ. ಆಸ್ಪತ್ರೆಗೆ ತೆರಳಬೇಕಿದ್ದವರಿಗೆ ಆಂಬ್ಯುಲೆನ್ಸ್ ಸೇವೆ ಕೂಡ ಕಲ್ಪಿಸಲಾಗಿದೆ.
ಅಪಾರ್ಟ್‌ಮೆಂಟ್‌ನಿಂದಲೇ ಕಾಲುವೆ ಒತ್ತುವರಿ
ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನಿಂದಲೇ ರಾಜಕಾಲುವೆ ಒತ್ತುವರಿಯಾಗಿದ್ದು, ಇದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಹೀಗಾಗಿ, ವಸತಿ ಸಮುಚ್ಚಯದ ಆವರಣಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ, ಸುತ್ತಮುತ್ತಲ ಹಲವು ಬಡಾವಣೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ನೀರಿನ ಮಟ್ಟ ತಗ್ಗದ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿಯು ಅಪಾರ್ಟ್‌ಮೆಂಟ್‌ನ ಕಾಂಪೌಂಡ್ ಒಡೆದು ನೀರು ಹೊರಹರಿಸಿದರು.
ಯಲಹಂಕ ಕೆರೆ ಜಲಾನಯನ ಪ್ರದೇಶದಲ್ಲಿ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಇದೆ. ಸುಮಾರು ಏಳು ಎಕರೆ ಜಾಗದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಲಾಗಿದೆ. ಯಲಹಂಕ ಕೆರೆ ತುಂಬಿದಾಗ ಎರಡು ಕಡೆ ಕೋಡಿ ಹರಿಯುತ್ತದೆ. ಚೌಡೇಶ್ವರಿ ಲೇಔಟ್ ಕಡೆಯಲ್ಲಿರುವ ಕೋಡಿ ನೀರು ಸರಾಗವಾಗಿ ಜಕ್ಕೂರು ಕೆರೆಗೆ ಸೇರುತ್ತದೆ. ಮತ್ತೊಂದು ಭಾಗದ ವೆಂಕಟಾಲ ಕಡೆಯ ಕೋಡಿಯ ರಾಜಕಾಲುವೆಯನ್ನು ಒತ್ತುವರಿ ಮಾಡಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದ್ದು, ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಪ್ರತಿ ಬಾರಿ ಕೆರೆ ಕೋಡಿ ಹೋದಾಗಲೂ ಅವಾಂತರ ಸೃಷ್ಟಿಯಾಗುತ್ತದೆ.
ಜಲಪ್ರಳಯದಿಂದ ನಿವಾಸಿಗಳು ತತ್ತರ
ಯಲಹಂಕದ ಅಂಬೇಡ್ಕರ್‌ನಗರ, ಸಂಪಿಗೆಹಳ್ಳಿ, ಅಗ್ರಹಾರ ಬಡಾವಣೆ, ಜಕ್ಕೂರು, ಕೋಗಿಲು ಕ್ರಾಸ್, ರಾಚೇನಹಳ್ಳಿ, ತಿರುಮೇನಹಳ್ಳಿ, ಶಿವರಾಮಕಾರಂತ ನಗರ, ಟೆಲಿಕಾಂ ಲೇಔಟ್, ಡಿಫೆನ್ಸ್ ಲೇಔಟ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ಜಲಪ್ರಳಯದಿಂದ ತತ್ತರಿಸಿ ಹೋಗಿದ್ದಾರೆ. ಮನೆಯಲ್ಲಿದ್ದ ದಿನಸಿ ಸೇರಿದಂತೆ ಅಗತ್ಯ ವಸ್ತುಗಳು ನೀರು ಪಾಲಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡಾವಣೆಗಳಲ್ಲಿನ ರಸ್ತೆಗಳೆಲ್ಲವೂ ಕೆರೆಗಳಾಗಿ ಬದಲಾಗಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಮನೆಯಿಂದ ಹೊರಬರಲಾಗದೆ ತೀವ್ರ ತೊಂದರೆಗೀಡಾದರು.
ಯಲಹಂಕ ವಲಯದ ಸುರಭಿ ಬಡಾವಣೆ ಸೇರಿದಂತೆ ಮಳೆಯಿಂದ ಹಾನಿಗೊಳಗಾದ ಇತರೆ ಪ್ರದೇಶಗಳ ನಿವಾಸಿಗಳಿಗೆ ಪಾಲಿಕೆ ವತಿಯಿಂದ ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ಈರುಳ್ಳಿ, ಟೊಮೊಟೊ ಸೇರಿದಂತೆ ದಿನಸಿ ಸಾಮಗ್ರಿಗಳ ಪೊಟ್ಟಣಗಳನ್ನು ವಿತರಣೆ ಮಾಡಲಾಯಿತು. ಮನೆಗಳು ಹಾಗೂ ರಸ್ತೆಗಳಲ್ಲಿನಿಂತಿದ್ದ ನೀರನ್ನು ಪಂಪ್‌ಗಳ ಮೂಲಕ ಹೊರ ಹಾಕಲಾಯಿತು.
ಕೋಡಿ ಹರಿದ ಸಿಂಗಪುರ ಕೆರೆ
ದೊಡ್ಡಬೊಮ್ಮಸಂದ್ರ, ಸಿಂಗಪುರ ಕೋಡಿ ಬಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ. ಬಸವ ಸಮಿತಿ ಲೇಔಟ್, ವಿದ್ಯಾರಣ್ಯಪುರದ ದೇಶಬಂಧುನಗರ, ಗುರುದರ್ಶನ್ ಬಡಾವಣೆ, ಭದ್ರಪ್ಪ ಲೇಔಟ್, ಟಾಟಾನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು ದ್ವೀಪಗಳಾಗಿ ಮಾರ್ಪಟ್ಟಿವೆ. ಟಾಟಾ ನಗರದ 8 ರಸ್ತೆಗಳೂ ನೀರಿನಿಂದ ತುಂಬಿ ಹೋಗಿವೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ನೀರಿನ ಮಟ್ಟ ಕಡಿಮೆಯಾಗಿಲ್ಲ. ಸಂಪ್‌ನಲ್ಲಿ ಕೊಳಚೆ ನೀರು ತುಂಬಿಕೊಂಡಿದ್ದು, ದುರ್ನಾತದಿಂದ ನಿವಾಸಿಗಳು ಕಂಗೆಟ್ಟು ಹೋಗಿದ್ದಾರೆ.
ದಾಸರಹಳ್ಳಿ ಬಳಿಯ ಬಾಗಲಗುಂಟೆ, ಬೆಲ್ಮಾರ್ ಲೇಔಟ್, ಚಿಕ್ಕಬಾಣಾವರ, ನಾಗಸಂದ್ರಕಾಲೊನಿ, ರುಕ್ಮಿಣಿನಗರ, ಗುಂಡಪ್ಪ ಲೇಔಟ್, ರಾಯಲ್‌ಎನ್‌ಕ್ಲೇವ್, ಮಾರುತಿನಗರ, ರಾಜರಾಜೇಶ್ವರಿನಗರದ ಭವಾನಿನಗರ, ಹೊರಮಾವು ಸಮೀಪದ ತಿಮ್ಮೇಗೌಡ ಲೇಔಟ್, ಪೈ ಲೇಔಟ್, ಪೂರ್ಣಪ್ರಜ್ಞ ಲೇಔಟ್‌ನ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡಿದರು.
ಜಲಾವೃತಗೊಂಡಿದ್ದ ಮಾನ್ಯತಾ ಟೆಕ್‌ಪಾರ್ಕ್
ಉದ್ಯಾನನಗರಿಯ ಪ್ರತಿಷ್ಠಿತ ಮಾನ್ಯತಾ ಟೆಕ್‌ಪಾರ್ಕ್ ಆವರಣವೂ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿತ್ತು. ಅಡಿಗಟ್ಟಲೆ ನೀರು ನಿಂತಿದ್ದರಿಂದ ಬಹುತೇಕ ಉದ್ಯೋಗಿಗಳು ಸೋಮವಾರ ಬೆಳಗ್ಗೆ ಕಚೇರಿಗೆ ತೆರಳಲಾಗದೆ ಮನೆಗಳಿಗೆ ವಾಪಸ್ಸಾದರು. ಕೊಡಿಗೇಹಳ್ಳಿಯ ರೈಲ್ವೆ ಅಂಡರ್‌ಪಾಸ್ ಸಹ ನೀರಿನಿಂದ ತುಂಬಿ ಹೋಗಿತ್ತು. ಹೀಗಾಗಿ, ವಾಹನ ಸವಾರರು ತೀವ್ರ ತೊಂದರೆ ಅನುಭವಿಸಬೇಕಾಯಿತು.
ಯಲಹಂಕ ಕೆರೆ ಒಡೆದಿಲ್ಲ
ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಎಸ್.ಆರ್.ವಿಶ್ವನಾಥ್, ''ಯಲಹಂಕ ಕೆರೆ ಒಡೆದಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅದು ನಿಜವಲ್ಲ. ಈ ಕೆರೆಯೊಂದಿಗೆ ಸಂಪರ್ಕ ಹೊಂದಿರುವ ಇತರೆ 8 ಕೆರೆಗಳು ತುಂಬಿದ್ದು ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಸಮಸ್ಯೆಯಾಗಿದೆ. ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿರುವುದು ಅನಾಹುತಕ್ಕೆ ಪ್ರಮುಖ ಕಾರಣವಾಗಿದೆ,'' ಎಂದು ಹೇಳಿದರು.
''ಯಲಹಂಕ ಕೆರೆಯಿಂದ ಜಕ್ಕೂರು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯು ಕಿರಿದಾಗಿದೆ. ಹೀಗಾಗಿ, ಕೆರೆ ಕೋಡಿ ಬಿದ್ದಾಗ ಹೆಚ್ಚಿನ ನೀರು ಹರಿಯಲು ಜಾಗವಿಲ್ಲದಂತಾಗಿದೆ. ಹಾಗಾಗಿ ರಾಜಕಾಲುವೆ ವಿಸ್ತರಣೆಗೆ ಸರಕಾರ 60 ಕೋಟಿ ರೂ. ಬಿಡುಗಡೆ ಮಾಡಿದೆ,'' ಎಂದು ತಿಳಿಸಿದರು.
33 ಅಡಿಯಷ್ಟು ಕಾಲುವೆ ವಿಸ್ತರಣೆ
''ಯಲಹಂಕ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ 130 ಮಿ.ಮೀ.ಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ಕೆರೆ ತುಂಬಿದೆ. ಹೀಗಾಗಿ, ರಾಜಕಾಲುವೆ ಉಕ್ಕಿ ಹರಿದು ಅಪಾರ್ಟ್‌ಮೆಂಟ್ ಜಲಾವೃತಗೊಂಡಿದೆ. ಪಾಲಿಕೆ ವತಿಯಿಂದ ನಿವಾಸಿಗಳಿಗೆ ತಿಂಡಿ, ಹಾಲು ವಿತರಣೆ ಮಾಡಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ,'' ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
''ಅಪಾರ್ಟ್‌ಮೆಂಟ್ ಆವರಣದಲ್ಲಿ ನಿಂತಿರುವ ನೀರನ್ನು ರಾಜಕಾಲುವೆ ಮೂಲಕ ಹರಿದು ಹೋಗುವಂತೆ ಮಾಡಲಾಗಿದೆ. ಯಲಹಂಕ ಕೆರೆಯಿಂದ ಜಕ್ಕೂರು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯು 8 ಅಡಿಯಷ್ಟು ಅಗಲವಿದ್ದು, ಅದನ್ನು 33 ಅಡಿಯಷ್ಟು ವಿಸ್ತರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ,'' ಎಂದು ಹೇಳಿದರು.
''ಭಾನುವಾರ ರಾತ್ರಿಯಿಂದಲೂ ವಿದ್ಯುತ್ ಸಂಪರ್ಕ ಇಲ್ಲ. ಕುಡಿಯುವ ನೀರಿಗೂ ಸಮಸ್ಯೆಯಾಗಿತ್ತು. ಪಾಲಿಕೆ ಹಾಗೂ ಸ್ಥಳೀಯ ಸ್ವಯಂ ಸೇವಕರು ಹಾಲು, ನೀರು, ಬ್ರೆಡ್, ಹಣ್ಣು-ಹಂಪಲು ವಿತರಿಸಿದರು,''.
ರಾಜೇಶ್, ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ನಿವಾಸಿ