ಬೆಂಗಳೂರು: ಹಸೆಮಣೆ ಏರುವ ತಿಂಗಳ ಮುಂಚೆ ಟೆಕ್ಕಿಯ ಜೀವ ಕಸಿದ ಮಹಾಮಾರಿ ಕೋವಿಡ್!

ಜೂನ್ ತಿಂಗಳಲ್ಲಿ ಹಸೆಮಣೆ ಏರಿ ವೈವಾಹಿಕ ಜೀವನಕ್ಕೆ ಕಾಲಿರಿಸಬೇಕಿದ್ದ ಬೆಂಗಳೂರಿನ ನಾಗರಭಾವಿ ನಿವಾಸಿ ಸಾಗರ್, ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರಿಗೆ ವೆಂಟಿಲೇಟರ್ ಅವಶ್ಯಕತೆ ಇತ್ತು. ಆದರೆ ಸತತ ಹುಡುಕಾಟದ ಬಳಿಕವೂ ಅವರಿಗೆ ವೆಂಟಿಲೇಟರ್ ಸಿಕ್ಕಿರಲಿಲ್ಲ.

ಬೆಂಗಳೂರು: ಹಸೆಮಣೆ ಏರುವ ತಿಂಗಳ ಮುಂಚೆ ಟೆಕ್ಕಿಯ ಜೀವ ಕಸಿದ ಮಹಾಮಾರಿ ಕೋವಿಡ್!
Linkup
ಬೆಂಗಳೂರು: ಆ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಇನ್ನು ಒಂದು ತಿಂಗಳು ಕಳೆದಿದ್ದರೆ, ನಗರದ ಸಾಗರ್ ಹಸೆಮಣೆ ಏರಿ ವೈವಾಹಿಕ ಬದುಕಿಗೆ ಕಾಲಿರಿಸಬೇಕಿತ್ತು. ಆದರೆ ವೈರಸ್ ಎಂಬ ಕಾಣದ ಜೀವಿ ಸಾಗರ್ ಅವರ ಬದುಕನ್ನೇ ಕಸಿದುಕೊಂಡಿದೆ. ವೃತ್ತಿಯಿಂದ ಸಾಫ್ಟ್‌‌ವೇರ್ ಎಂಜಿನಿಯರ್ ಆಗಿದ್ದ ಸಾಗರ್ ಅವರ ಜೀವ ಉಳಿಸಲು ಸಂಬಂಧಿಕರು ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಿದ್ದಾರೆ. ವೆಂಟಿಲೇಟರ್ ಹುಡುಕಲು ಹೈರಾಣಾಗಿದ್ದಾರೆ. ಆದರೆ ಅದು ಸಿಗುವ ಮುನ್ನವೇ ಸಾಗರ್ ಪ್ರಾಣಪಕ್ಷಿ ಹಾರಿಹೋಗಿದೆ. ನಾಗರಭಾವಿ ನಿವಾಸಿಯಾಗಿರುವ 28 ವರ್ಷದ ಸಾಗರ್ ಎಜಿ, ಜೂನ್ ತಿಂಗಳಲ್ಲಿ ಸಾಂಸಾರಿಕ ಬಂಧನಕ್ಕೆ ಕಾಲಿರಿಸುವ ಉತ್ಸಾಹದಲ್ಲಿದ್ದರು. ಆದರೆ ಕಳೆದ 15 ದಿನಗಳಿಂದ ಅವರ ಮನೆಯಲ್ಲಿದ್ದ ಉತ್ಸಾಹ ಮಾಯವಾಗಿ ಭಯ, ದುಃಖ, ಉದ್ವೇಗ ತುಂಬಿಕೊಂಡಿತ್ತು. ಅದು ಕೊನೆಗೆ ಶೋಕದ ಸನ್ನಿವೇಶವಾಗಿ ಮಾರ್ಪಟ್ಟಿತು. ಸಾಗರ್ ಅವರಲ್ಲಿ ಏ. 12ರಂದು ಅನಾರೋಗ್ಯ ಕಾಣಿಸಿಕೊಂಡಿತ್ತು. ಖಾಸಗಿ ಲ್ಯಾಬೊರೇಟರಿಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದಾಗ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಆದರೆ ಎರಡು ದಿನಗಳ ಬಳಿಕ ಅವರಲ್ಲಿ ಜ್ವರ ಮತ್ತು ಶೀತ ತೀವ್ರವಾಯಿತು. ವೈದ್ಯರನ್ನು ಸಂಪರ್ಕಿಸಿದ ಬಳಿಕ ಅವರು ಮತ್ತೆ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಿದರು. ಈ ಬಾರಿ ಅವರಲ್ಲಿ ಪಾಸಿಟಿವ್ ಇದೆ ಎಂಬ ವರದಿ ಬಂದಿತು. ಐದು ದಿನಗಳ ಬಳಿಕ ಬಿಬಿಎಂಪಿ ಅಧಿಕಾರಿಗಳು ಕರೆ ಮಾಡಿ ಅವರ ಆರೋಗ್ಯದ ಸ್ಥಿತಿಯ ಮಾಹಿತಿ ಪಡೆದು, ಮನೆಯಲ್ಲಿಯೇ ಪ್ರತ್ಯೇಕವಾಗಿರಲು ಸಲಹೆ ನೀಡಿದ್ದರು. ಆದರೆ ಅತಿಯಾದ ಆಯಾಸ ಮತ್ತು ಭೇದಿ ಉಂಟಾಗಿದ್ದರಿಂದ ಅವರ ಸ್ಥಿತಿ ತೀವ್ರ ಹದಗೆಟ್ಟಿತು. ಸಮೀಪದ ಆಸ್ಪತ್ರೆಗೆ ಕರೆದೊಯ್ದು ಸಿಟಿ ಸ್ಕ್ಯಾನ್ ಮಾಡಿಸಲಾಯಿತು. ಅವರಲ್ಲಿ ನ್ಯುಮೋನಿಯಾ ಇದೆ. ಹೀಗಾಗಿ ಕೂಡಲೇ ಐಸಿಯುಗೆ ದಾಖಲಿಸಬೇಕು ಎಂದು ವೈದ್ಯರು ಹೇಳಿದರು ಎಂದು ಸಾಗರ್ ಅವರ ತಮ್ಮ ಅಕ್ಷಯ್ ತಿಳಿಸಿದ್ದಾರೆ. ಏಪ್ರಿಲ್ 21ರಿಂದ ಸತತ ಪ್ರಯತ್ನಗಳ ಬಳಿಕ ಹಾಗೂ ಸುಮಾರು 30 ಆಸ್ಪತ್ರೆಗಳಿಗೆ ಕರೆ ಮಾಡಿದ ಬಳಿಕವೂ ಸಾಗರ್ ಕುಟುಂಬಕ್ಕೆ ಐಸಿಯು ಬೆಡ್ ಮತ್ತು ವೆಂಟಿಲೇಟರ್ ಸಿಗಲಿಲ್ಲ. ಇತ್ತ ಸಾಗರ್ ಆರೋಗ್ಯ ಮತ್ತಷ್ಟು ಕೆಡುತ್ತಲೇ ಇತ್ತು. ಅವರ ಸ್ನೇಹಿತರು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಹಾಯಕ್ಕಾಗಿ ಮನವಿ ಮಾಡಿದರು. ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಪ್ರತಿ ಆಸ್ಪತ್ರೆಯಲ್ಲಿಯೂ ಕನಿಷ್ಠ ನಾಲ್ಕು ರೋಗಿಗಳು ವೆಂಟಿಲೇಟರ್‌ ಪಡೆದುಕೊಳ್ಳಲು ತಮ್ಮ ಸರದಿಗಾಗಿ ಕಾಯುತ್ತಿರುವುದನ್ನು ಕಂಡು ಕಂಗಾಲಾದರು. ಸಾಗರ್ ಅವರನ್ನು ಉಳಿಸಿಕೊಳ್ಳಲು ಅವರ ಮನೆಯವರು ಮತ್ತು ಸ್ನೇಹಿತರು ನಡೆಸಿದ ಪ್ರಯತ್ನ ಫಲಕೊಡಲಿಲ್ಲ. ಏಪ್ರಿಲ್ 27ರಂದು ಮಹಾಮಾರಿ ವೈರಸ್ ಸಾಗರ್ ಜೀವವನ್ನು ಕಸಿದುಕೊಂಡಿತು. ಕೋವಿಡ್-19 ಎರಡನೆಯ ಅಲೆಯ ಭೀಕರತೆ ಪ್ರತಿ ದಿನವೂ ಹಲವಾರು ಹೃದಯವಿದ್ರಾವಕ ಘಟನೆಗಳನ್ನು ತೆರೆದಿಡುತ್ತಿದೆ. ಆರಂಭದಲ್ಲಿ ವೃದ್ಧರು, ಆರೋಗ್ಯ ಸಮಸ್ಯೆಯುಳ್ಳವರನ್ನು ಬಲಿಪಡೆದುಕೊಳ್ಳುತ್ತಿದ್ದ ಕೋವಿಡ್, ಈ ಬಾರಿ ಯುವಕರು ಮತ್ತು ಆರೋಗ್ಯವಂತರ ಜೀವಗಳನ್ನೂ ತೆಗೆಯುತ್ತಿರುವುದು ಆತಂಕ ಹೆಚ್ಚಿಸಿದೆ.