‘ನಾನು ಮೋದಿ ಅಭಿಮಾನಿ ಹೌದು’; ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಪ್ರಕಾಶ್‌ ಬೆಳವಾಡಿ ಅಭಿಮತ

ಕಲಾ ಕುಟುಂಬದ ರಂಗ ಪರಿಸರದಲ್ಲಿ ಬೆಳೆದರೂ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದುತ್ತಲೇ ಹಲವಾರು ಸಾಧ್ಯತೆಗಳ ಕಡೆ ಮನ ಸೆಳೆಯುತ್ತಿತ್ತು. ಬರೆಯುವ ಹಂಬಲ ತುಂಬಾ ಇದ್ದುದರಿಂದ ಆಗಿನ ರಂಗಖ್ಯಾತರು, ಪತ್ರಕರ್ತರೂ ಆಗಿದ್ದ ಬಿ.ವಿ. ವೈಕುಂಠರಾಜು, ಪಿ.ಲಂಕೇಶ್‌ ಅವರು ನನಗೆ ಪತ್ರಿಕೆಗಳಲ್ಲಿ ಬರಹಕ್ಕೆ ಅವಕಾಶ ನೀಡದಿದ್ದಾಗ ಛಲದಿಂದ ಜರ್ನಲಿಸಂ ಓದಿ ಇಂಗ್ಲಿಷ್‌ ಪತ್ರಿಕೆಗಳ ವರದಿಗಾರ, ವಿಶೇಷ ವರದಿಗಾರನಾದೆ ಎಂದು ಬೆಳವಾಡಿ ನೆನಪಿಸಿಕೊಂಡರು.

‘ನಾನು ಮೋದಿ ಅಭಿಮಾನಿ ಹೌದು’; ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಪ್ರಕಾಶ್‌ ಬೆಳವಾಡಿ ಅಭಿಮತ
Linkup
ಬೆಂಗಳೂರು: ನಾನು ಪ್ರಧಾನ ಮಂತ್ರಿ ಅವರ ಅಭಿಮಾನಿ ಹೌದು ಎಂದು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಹೇಳಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯು ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಸಂವಾದಕ ಅಭಿರುಚಿ ಚಂದ್ರು ಅವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಕಾಶ್‌ ಬೆಳವಾಡಿ, ನಾನು ಮೋದಿ ಅಭಿಮಾನಿ ಹೌದು. ದೇಶದ ಬಗೆಗಿನ ಅವರ ಕಾಳಜಿ, ತುಡಿತ, ಪ್ರಯತ್ನ, ಎಂದೂ ಜಾತಿವಾದದ ಬಗ್ಗೆ ಮಾತನಾಡದ ಅವರ ನಡೆ ಇಷ್ಟ’ ಎಂದರು. ‘ಕನ್ನಡ ನಾಟಕಗಳು, ಕನ್ನಡ ಸೇರಿದಂತೆ ಬಹುಭಾಷೆಯ ಸಿನಿಮಾಗಳಲ್ಲಿ ನಟನೆ, ಕನ್ನಡ- ಇಂಗ್ಲಿಷ್‌ ನಾಟಕಗಳ ನಿರ್ದೇಶನ, ಸೀರಿಯಲ್‌ ವೆಬ್‌ ಸೀರೀಸ್‌ ಮುಂತಾದವುಗಳ ಕಲಾ ನೈಪುಣ್ಯತೆಗೆ ಕನ್ನಡ ರಂಗಭೂಮಿಯೇ ಮೂಲದ್ರವ್ಯ ಎಂದ ಪ್ರಕಾಶ್‌ ಬೆಳವಾಡಿ, ಮೇಕಪ್‌ ನಾಣಿ, ಭಾರ್ಗವಿ ನಾರಾಯಣ್‌ರಂತಹ ಕಲಾ ಕುಟುಂಬದ ರಂಗ ಪರಿಸರದಲ್ಲಿ ಬೆಳೆದರೂ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದುತ್ತಲೇ ಹಲವಾರು ಸಾಧ್ಯತೆಗಳ ಕಡೆ ಮನ ಸೆಳೆಯುತ್ತಿತ್ತು. ಬರೆಯುವ ಹಂಬಲ ತುಂಬಾ ಇದ್ದುದರಿಂದ ಆಗಿನ ರಂಗಖ್ಯಾತರು, ಪತ್ರಕರ್ತರೂ ಆಗಿದ್ದ ಬಿ.ವಿ. ವೈಕುಂಠರಾಜು, ಪಿ.ಲಂಕೇಶ್‌ ಅವರು ನನಗೆ ಪತ್ರಿಕೆಗಳಲ್ಲಿ ಬರಹಕ್ಕೆ ಅವಕಾಶ ನೀಡದಿದ್ದಾಗ ಛಲದಿಂದ ಜರ್ನಲಿಸಂ ಓದಿ ಇಂಗ್ಲಿಷ್‌ ಪತ್ರಿಕೆಗಳ ವರದಿಗಾರ, ವಿಶೇಷ ವರದಿಗಾರನಾದೆ’ ಎಂದು ನೆನಪಿಸಿಕೊಂಡರು. ಎರಡು ಮೂರು ವರ್ಷದ ಮಗುವಾಗಿದ್ದಾಗಿನಿಂದಲೂ ರಂಗಭೂಮಿಯ ನಿಕಟ ವಾತಾವರಣ, ಮನೆಯಲ್ಲೇ ರಿಹರ್ಸಲ್‌, ಅತ್ಯುತ್ತಮ ಜ್ಞಾಪಕ ಶಕ್ತಿ, ಉತ್ತಮ ನಿಲುವು ಇದ್ದಾಗಲೂ ನನಗೆ ಕನ್ನಡ ಸೂಕ್ತ ಅವಕಾಶ ನೀಡಲಿಲ್ಲ. ನಾಟಕಗಳಿಗೆ ಲೈಟಿಂಗ್‌ ನನ್ನ ಹವ್ಯಾಸವಾದರೂ ಅವಕಾಶ ಸಿಗಲಿಲ್ಲ. ಒಮ್ಮೆ ಇಂಗ್ಲಿಷ್‌ ನಿರ್ದೇಶಕರೊಬ್ಬರು ಕಾರ್ನಾಡರ 'ಅಗ್ನಿ ಮತ್ತು ಮಳೆ' ನಾಟಕ ನಿರ್ದೇಶಿಸುತ್ತಿರುವಾಗ ಅಕಸ್ಮಾತ್‌ ನಾನಿತ್ತ ವಿವರಣೆ ಅವರಿಗೆ ಇಷ್ಟವಾಗಿ ಇಂಗ್ಲಿಷ್‌ ರಂಗಭೂಮಿ ತೆರೆಯಿತು. ಬೆಂಗ್ಳೂರು ಲಿಟ್ಲ್‌ ಥಿಯೇಟರ್‌ ಮೂಲಕ ಹಲವಾರು ಇಂಗ್ಲಿಷ್‌ ನಾಟಕಗಳ ಪ್ರದರ್ಶನ ಆಯಿತು. ಅಲ್ಲದೆ, ನಾನೇ ಬರೆದು ನಿರ್ದೇಶಿಸಿದ 'ಸ್ಟಂಬಲ್‌' ಇಂಗ್ಲಿಷ್‌ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ದಕ್ಕಿತು’ ಎಂದರು. ಸಂವಾದದ ಆರಂಭದಲ್ಲಿ ರಾಜಗುರು-ನಯನ ಅವರ ರಂಗ ಪಯಣ ತಂಡದಿಂದ ರಂಗ ಸಂಗೀತ ಕಾರ್ಯಕ್ರಮ ನಡೆಯಿತು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ. ಭೀಮಸೇನ, ಸದಸ್ಯರಾದ ಪ್ರೇಮಾ ಬದಾಮಿ, ಪ್ರವೀಣ್‌ ರಾಥೋಡ್‌, ರಂಗಕರ್ಮಿಗಳಾದ ಸೇತುರಾಂ, ಶ್ರೀಪತಿ ಮಂಜನಬೈಲು, ನಾ.ದಾ.ಶೆಟ್ಟಿ, ಡಾ. ಬಿ.ವಿ.ರಾಜಾರಾಂ ದಂಪತಿ, ಡಾ. ಹೆಲನ್‌, ಮಾ. ನಾಗರಾಜ, ಎಲ್‌.ಎಂ.ವಿಶ್ವೇಶ್ವರ ದಂಪತಿ ಮತ್ತಿತರರು ಉಪಸ್ಥಿತರಿದ್ದರು.