ರೇಖಾ ಕದಿರೇಶ್‌ ಮಾತ್ರವಲ್ಲ ಇನ್ನೂ ಮೂವರ ಕೊಲೆಗೆ ಸಂಚು ರೂಪಿಸಿದ್ದರು ಆರೋಪಿಗಳು: ಸತ್ಯ ಬಾಯ್ಬಿಟ್ಟಾಗ ಖಾಕಿ ಶಾಕ್‌!

ರೇಖಾ ಕದಿರೇಶ್‌ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಲಾ ಬಗ್ಗೆ ಒಂದೊಂದೇ ವಿಷಯಗಳು ಹೊರಬರುತ್ತಿವೆ. ಕಾಟನ್‌ಪೇಟೆ ಮಾಲಾ ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿದ್ದ ಈಕೆ ಬೆಂಗಳೂರಿನ ಮಹಿಳಾ ರೌಡಿಶೀಟರ್‌ಗಳಲ್ಲಿ ಒಬ್ಬಳಾಗಿದ್ದಳು. ಕದಿರೇಶ್‌ ಗ್ಯಾಂಗ್‌ ಜತೆ ಸೇರಿ ಜೋಪಡಿ ರಾಜೇಂದ್ರನ ಹತ್ಯೆಯಲ್ಲಿ ಮಾಲಾ ಭಾಗಿಯಾಗಿದ್ದಳು.

ರೇಖಾ ಕದಿರೇಶ್‌ ಮಾತ್ರವಲ್ಲ ಇನ್ನೂ ಮೂವರ ಕೊಲೆಗೆ ಸಂಚು ರೂಪಿಸಿದ್ದರು ಆರೋಪಿಗಳು: ಸತ್ಯ ಬಾಯ್ಬಿಟ್ಟಾಗ ಖಾಕಿ ಶಾಕ್‌!
Linkup
ಬೆಂಗಳೂರು: ಮಾಜಿ ಕಾರ್ಪೊರೇಟರ್‌ ಕೊಲೆ ಪ್ರಕರಣ ದಿನಕ್ಕೊಂದು ಆಯಾಮ ಪಡೆಯುತ್ತಿದ್ದು, ಕೇವಲ ರೇಖಾ ಹತ್ಯೆ ಅಲ್ಲದೆ, ಇನ್ನೂ ಮೂವರ ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದ ಬಗ್ಗೆ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ರೇಖಾ ಕದಿರೇಶ್‌ ಕೊಲೆಗೂ ಮುನ್ನ 2018ರಲ್ಲಿ ಕದಿರೇಶ್‌ ಹತ್ಯೆಯಲ್ಲಿ ಭಾಗಿಯಾಗಿದ್ದ ಗಾರ್ಡನ್‌ ಶಿವ ಹಾಗೂ ಆತನ ಅಕ್ಕನ ಮಕ್ಕಳಾದ ವಿನಯ್‌ ಹಾಗೂ ನವೀನ್‌ ಕೊಲೆ ಮಾಡಲು ಪೀಟರ್‌ ಹಾಗೂ ಆತನ ತಂಡ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ. ಗಾಂಜಾ ಮಾರಾಟ ಹಾಗೂ ಕಳ್ಳಭಟ್ಟಿ ತಯಾರಿಸುತ್ತಿದ್ದ ಹಾಗೂ ಕರಿಯ ಚಿತ್ರದಲ್ಲಿ ನಟನೆ ಮಾಡಿದ್ದ ಜೋಪಡಿ ರಾಜೇಂದ್ರ ರೌಡಿಸಂನಲ್ಲಿ ಹಿಡಿತ ಸಾಧಿಸಿದ್ದ. ವಿನಾಯಕ ವೃತ್ತದಲ್ಲಿ ಜೋಪಡಿ ರಾಜೇಂದ್ರ ತನ್ನ ಹವಾ ಇಟ್ಟಿದ್ದ. ಈ ವೇಳೆ ಅಂದಿನ ರೌಡಿಶೀಟರ್‌ ಕದಿರೇಶ್‌, ಪೀಟರ್‌, ಇನ್ನಿತರರು ಸೇರಿ ಜೋಪಡಿ ರಾಜೇಂದ್ರನ ಹತ್ಯೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ರಾಜೇಂದ್ರನ ಆಪ್ತರಾದ ಗಾರ್ಡನ್‌ ಶಿವ, ವಿನಯ್‌ ಮತ್ತು ನವೀನ್‌ ಜತೆಯಾಗಿ ಕದಿರೇಶ್‌ನನ್ನು ಛಲವಾದಿ ಪಾಳ್ಯದ ಮುನೀಶ್ವರ ದೇವಾಲಯದ ಬಳಿ ಆಟೋದಲ್ಲಿ ಬಂದು ಭೀಕರವಾಗಿ ಹತ್ಯೆಗೈದು ಜೈಲು ಸೇರಿದ್ದರು. ಕದಿರೇಶ್‌ ಹತ್ಯೆಯಿಂದ ಕುದಿಯುತ್ತಿದ್ದ ಕದಿರೇಶ್‌ನ ಬಂಟ ಪೀಟರ್‌ ಹಾಗೂ ಆತನ ಸಹಚರರು ಈ ಮೂವರ ಹತ್ಯಗೆ ಸಂಚು ರೂಪಿಸಿದ್ದರಂತೆ. ಕೊಲೆ ಮಾಡಿದ ಬಳಿಕ ತಲೆಮರೆಸಿಕೊಳ್ಳಲು ರೇಖಾ ಬಳಿ ಹಣಕಾಸಿನ ನೆರವು ಕೇಳಿದ್ದರಂತೆ. ಇದಕ್ಕೆ ರೇಖಾ ಸಹಕರಿಸದೆ, ದ್ವೇಷ ಬೆಳೆಸುವುದು ಬೇಡ ಎಂದು ನಿರಾಕರಿಸಿದ್ದರು. ಹೀಗಾಗಿ ರೇಖಾ ವಿರುದ್ಧ ಪೀಟರ್‌ ಕೋಪಗೊಂಡಿದ್ದ. ಅದೇ ವೇಳೆಗೆ ಮಾಲಾ ಪುತ್ರ ಅರುಣ್‌ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ಈ ವೇಳೆ ತಮ್ಮ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಮುಂದಾದ ಮಾಲಾ ಮತ್ತು ಅರುಣ್‌, ರೇಖಾ ವಿರುದ್ಧ ಪೀಟರ್‌ನನ್ನು ಎತ್ತಿಕಟ್ಟಿದ್ದರಂತೆ. ಕದಿರೇಶ್‌ ಹತ್ಯೆ ಮಾಡಿದ್ದ ಗಾರ್ಡನ್‌ ಶಿವ, ವಿನಯ್‌ ಮತ್ತು ನವೀನ್‌ಗೆ ರೇಖಾ ಸಹಾಯ ಮಾಡುತ್ತಿದ್ದಾಳೆ ಎಂದು ಕಿವಿ ಊದಿದ್ದರು. ಹೀಗಾಗಿ, ಮೊದಲು ರೇಖಾ ಮುಗಿಸಿ, ನಂತರ ಉಳಿದ ಮೂವರನ್ನು ಕೊಲ್ಲುವ ಸಂಚು ರೂಪಿಸಲಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ. ಮಾಲಾ ಹಿನ್ನೆಲೆ! ರೇಖಾ ಕದಿರೇಶ್‌ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಲಾ ಬಗ್ಗೆ ಒಂದೊಂದೇ ವಿಷಯಗಳು ಹೊರಬರುತ್ತಿವೆ. ಕಾಟನ್‌ಪೇಟೆ ಮಾಲಾ ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿದ್ದ ಈಕೆ ಬೆಂಗಳೂರಿನ ಮಹಿಳಾ ರೌಡಿಶೀಟರ್‌ಗಳಲ್ಲಿ ಒಬ್ಬಳಾಗಿದ್ದಳು. ಕದಿರೇಶ್‌ ಗ್ಯಾಂಗ್‌ ಜತೆ ಸೇರಿ ಜೋಪಡಿ ರಾಜೇಂದ್ರನ ಹತ್ಯೆಯಲ್ಲಿ ಮಾಲಾ ಭಾಗಿಯಾಗಿದ್ದಳು. ಕಳ್ಳಭಟ್ಟಿ ದಂಧೆ ನಡೆಸುತ್ತಿದ್ದ ಮಾಲಾಳನ್ನ 2000 ದಲ್ಲಿ ಬಂಧಿಸಿ ರೌಡಿಶೀಟರ್‌ ಪಟ್ಟಿಯಲ್ಲಿ ಸೇರಿಸಲಾಗಿತ್ತು ಎಂದು ತಿಳಿದುಬಂದಿದೆ.