ಬೆಂಗಳೂರಿನಲ್ಲಿ ನಿಗೂಢ ಸ್ಫೋಟದ ಸದ್ದು ಕೇಳಿ ಬಂದ ದಿನವೇ ಅವರನ್ನು ಮಿಸ್ ಮಾಡಿಕೊಳ್ಳಬೇಕಾಗುತ್ತೆ ಎಂದು ಯಾರಿಗೆ ತಾನೇ ಗೊತ್ತಿತ್ತು..? ಜುಲೈ 2 ಶುಕ್ರವಾರ ಮಧ್ಯಾಹ್ನ 12.20ಕ್ಕೆ ಇಡೀ ಬೆಂಗಳೂರೇ ಬೆಚ್ಚಿ ಬೀಳುವಂಥಾ ಸ್ಫೋಟದ ಸದ್ದು ಕೇಳಿಬಂತು..! ಆ ಕೂಡಲೇ ಸುದ್ದಿಯನ್ನು ಪ್ರಕಟಿಸಿ ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕು ಎಂಬ ಯೋಚನೆ ಬಂದ ಕೂಡಲೇ ನೆನಪಾಗಿದ್ದು, ಸುಧೀಂದ್ರ ಹಾಲ್ದೊಡ್ಡೇರಿ..!
ಹೌದು..! ವಿಜ್ಞಾನದ ಕ್ಲಿಷ್ಠಕರ ಸಂಗತಿಗಳನ್ನು ಆಡುಭಾಷೆಯಲ್ಲಿ, ಸರಳವಾಗಿ, ಸಂಕ್ಷಿಪ್ತವಾಗಿ ವಿವರಿಸುವ ಕಲೆ ಸುಧೀಂದ್ರ ಸರ್‌ಗೆ ಒಲಿದಿತ್ತು.. ಯಾವುದೋ ಒಂದು ನೈಸರ್ಗಿಕ ವಿದ್ಯಮಾನ ಏಕೆ ಸಂಭವಿಸಿತು? ಹೇಗೆ ಸಂಭವಿಸಿತು? ಪರಿಹಾರವೇನು..? ರಕ್ಷಣೆ ಹೇಗೆ..? ನಮ್ಮ ಎಲ್ಲಾ ಪ್ರಶ್ನೆಗಳನ್ನೂ ಬಹಳ ತಾಳ್ಮೆಯಿಂದ ಚಿಕ್ಕ ಮಕ್ಕಳಿಗೆ ಪಾಠ ಮಾಡುವಂತೆ ತಿಳಿ ಹೇಳುವ ಪರಿಯನ್ನು ಅವರಿಂದ ಕಲಿಯಬೇಕು..!
ಆ ಸಮಯದಲ್ಲಿ ಅವರು ಕಾಲ್ ರಿಸೀವ್ ಮಾಡ್ತಿರಲಿಲ್ಲ..!
ವೈಯಕ್ತಿಕವಾಗಿ ನನಗೆ ಸುಧೀಂದ್ರ ಸರ್ ಪರಿಚಯ ಆಗಿದ್ದು, ಟಿವಿ ದುನಿಯಾದಲ್ಲಿ..! ನ್ಯೂಸ್ ಚಾನಲ್‌ಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಪರಿಚಯವಾದ ಸುಧೀಂದ್ರ ಹಾಲ್ದೊಡ್ಢೇರಿ ಅವರು ದಶಕಗಳ ಕಾಲ ವೈಜ್ಞಾನಿಕ ವಿಚಾರಗಳ ವರದಿಗೆ ನೆರವು ನೀಡಿದ್ದರು.. ಅದೆಲ್ಲಿಯೋ ನಿಗೂಢ ಬೆಳಕು ಕಂಡಿತು, ಇನ್ನೆಲ್ಲೋ ಏಲಿಯನ್ಸ್ ಕುರಿತ ಚರ್ಚೆ ಆಯಿತು, ಮತ್ತೆಲ್ಲೋ ನೈಸರ್ಗಿಕ ವಿದ್ಯಮಾನವೊಂದು ಹುಬ್ಬೇರಿಸಿತು ಎಂದಾಗ ಮೊದಲು ನೆನಪಾಗುತ್ತಿದ್ದದ್ದು ಸುಧೀಂದ್ರ ಸರ್.. ‘ನನಗೆ ಫೋನ್ ಮಾಡಿ, ಸಿಗಲಿಲ್ಲವಾದ್ರೆ ಇಮೇಲ್ ಕಳಿಸಿ’ ಎನ್ನುತ್ತಿದ್ದರು ಅವರು.. ನಾವು ಕೇಳುವ ಪ್ರಶ್ನೆಗಳಿಗೆ ಅವರು ತುಂಬಾ ಸಮಗ್ರವಾಗಿ ಉತ್ತರಿಸಿ ನಮ್ಮೆಲ್ಲ ಸಂಶಯಗಳನ್ನೂ ಬಗೆಹರಿಸಿಬಿಡುತ್ತಿದ್ದರು.. ಆದ್ರೆ, ಕೆಲವೊಂದು ಸಂದರ್ಭದಲ್ಲಿ ಮಾತ್ರ ಫುಲ್ ಸೈಲೆಂಟ್..!
ಹೌದು.. ವಾಟ್ಸಪ್ ಭರಾಟೆ ಆರಂಭವಾದ ಕಾಲದಲ್ಲಂತೂ ಯಾರೂ ನಮ್ಮ ಸಂಪರ್ಕಕ್ಕೆ ಸಿಗೋದಿಲ್ಲ ಎನ್ನುವಂತೆಯೇ ಇಲ್ಲ..! ಆದರೆ, ಆ ವಿಚಾರದಲ್ಲಿ ಸುಧೀಂದ್ರ ಹಾಲ್ಡೊಡ್ಡೇರಿ ಮಾತ್ರ ಕಷ್ಟ ಕಷ್ಟ.. ಒಮ್ಮೆ ಹೀಗಾಯ್ತು.. ಯಾವುದೋ ಒಂದು ವೈಜ್ಞಾನಿಕ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಂದ ಮಾಹಿತಿ ಪಡೆಯಲು ಫೋನ್ ಕಾಲ್ ಮಾಡಿದರೆ ನೋ ರೆಸ್ಪಾನ್ಸ್..! ಬ್ಯುಸಿ ಇರಬಹುದು ಎಂದುಕೊಂಡು ವಾಟ್ಸಪ್ ಮಾಡಿದರೂ ಮೌನ..! ಅವರು ನನ್ನ ಮೆಸೇಜ್ ನೋಡಿದ್ದಾರೆ ಅನ್ನೋದಕ್ಕೆ ಸಾಕ್ಷಿಯಾಗಿ ಬ್ಲೂ ಟಿಕ್ ಕಾಣುತ್ತಿತ್ತು..! ಆದ್ರೆ, ಸಾಹೇಬ್ರು ಕಡೆಯಿಂದ ಉತ್ತರವೇ ಇಲ್ಲ..! ಇದಾದ 2 ದಿನಕ್ಕೆ ಆ ಕಡೆಯಿಂದ ಉತ್ತರ ಬಂತು.. ಗ್ರಹಣ ಇತ್ತಲ್ಲವೇ ಹಾಗಾಗಿ ಉತ್ತರಿಸಲಿಲ್ಲ ಎಂದು..!
ನನಗೋ ಆಶ್ಚರ್ಯ..! ಗ್ರಹಣವಿದ್ದರೇನು ಸರ್ ಉತ್ತರಿಸಲು ಎಂದು ಕೇಳಿದರೆ, ನೀವು ಟಿವಿಯವರು ಸಂದರ್ಶನಕ್ಕೆ ಕರೆಯುತ್ತೀರಿ.. ಮೂಢನಂಬಿಕೆ ಸಾರುವವರ ನಡುವೆ ನನ್ನನ್ನು ಕೂರಿಸುತ್ತೀರಿ.. ಮುಜುಗರವಾಗುತ್ತೆ ಅನ್ನೋದೇ..! ಕ್ಷಮಿಸಿ ಸರ್.. ನಾನೀಗ ವಿಜಯ ಕರ್ನಾಟಕ ವೆಬ್‌ನಲ್ಲಿ ಇದ್ದೇನೆ, ಆ ರೀತಿಯ ಮುಜುಗರ ಮಾಡೋದಿಲ್ಲ ಎಂದಾಗ ಮತ್ತೆ ಮೊದಲಿನಂತಾದರು.. ಎಷ್ಟರ ಮಟ್ಟಿಗೆ ಎಂದರೆ ವಿಜಯ ಕರ್ನಾಟಕ ವೆಬ್‌ನ ಸಾಮಾನ್ಯ ವರದಿಗಾರನಂತೆ ನಮಗಾಗಿ ಲೇಖನ ಬರೆದು ಕೊಡುತ್ತಿದ್ದರು..!
ಕೊರೊನಾ ಸಂದರ್ಭದಲ್ಲಂತೂ ವೈದ್ಯಕೀಯ ವಿಜ್ಞಾನದ ಸೂಕ್ಷ್ಮ ಸಂಗತಿಗಳನ್ನು ಓದುಗರಿಗೆ ಮನಮುಟ್ಟುವಂತೆ ವಿವರಿಸುವ ಲೇಖನ, ವಿಡಿಯೋ ಸಂದರ್ಶನ ಸೇರಿದಂತೆ ಹಲವು ರೀತಿಯಲ್ಲಿ ವಿಜಯ ಕರ್ನಾಟಕ ವೆಬ್‌ಗೆ ಸುಧೀಂದ್ರ ಹಾಲ್ದೊಡ್ಡೇರಿ ಅವರು ನೆರವಾಗಿದ್ದಾರೆ.
ಸಾಹಿತ್ಯ ಹುಡುಗಾಟವಲ್ಲ..!
ವಿಜ್ಞಾನವನ್ನು ಕನ್ನಡದ ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಸುಧೀಂದ್ರ ಹಾಲ್ದೊಡ್ಡೇರಿ ಅವರ ಸಾಧನೆ ಅಪಾರ.. ವಿಜ್ಞಾನ ವಿಷಯವನ್ನು ಕನ್ನಡದಲ್ಲಿ ಬರೆಯುವ ಲೇಖಕರ ಸಂಖ್ಯೆ ತುಂಬಾನೇ ಕಡಿಮೆ.. ಕನ್ನಡದ ವಿಜ್ಞಾನ ಸಾಹಿತ್ಯದ ಪರಿಧಿ ಇನ್ನಷ್ಟು ಮತ್ತಷ್ಟು ವಿಸ್ತರಿಸಬೇಕೆಂದರೆ ಸುಧೀಂದ್ರ ಅವರಂಥಾ ವಿಜ್ಞಾನಿಗಳು ಬೇಕೇ ಬೇಕು..! ಏಕೆಂದರೆ ವಿಜ್ಞಾನ ಲೇಖಕರಿಗೆ ಕನ್ನಡದ ಜ್ಞಾನ ಎಷ್ಟು ಮುಖ್ಯವೋ, ವೈಜ್ಞಾನಿಕ ತಳಹದಿ ಅದಕ್ಕಿಂತಾ ಹೆಚ್ಚು ಮುಖ್ಯವಾದದ್ದು.. ಈ ವಿಚಾರದಲ್ಲಿ ಸುಧೀಂದ್ರ ಅವರಿಗೆ ಸಾಟಿಯಾಗಬಲ್ಲ ಲೇಖಕರು ತುಂಬಾನೇ ಕಡಿಮೆ..
ಅತ್ಯಂತ ಕ್ಲಿಷ್ಟಕರವಾದ ವಿಜ್ಞಾನ ವಿಷಯವನ್ನು ಮೊದಲು ಅಧ್ಯಯನ ಮಾಡಿ ಅದನ್ನು ಅರ್ಥೈಸಿಕೊಂಡ ಬಳಿಕ ಸಾಮಾನ್ಯ ಓದುಗನಿಗೆ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ಅದನ್ನು ವಿವರಿಸಬೇಕು. ಇದು ಸುಲಭದ ಕೆಲಸವಲ್ಲ. ಎಷ್ಟೋ ಕನ್ನಡಿಗರು ದೊಡ್ಡ ದೊಡ್ಡ ವಿಜ್ಞಾನಿಗಳಾಗಿದ್ದಾರೆ. ಆದ್ರೆ, ಅವರಿಗೆ ತಾವು ಇಂಗ್ಲೀಷ್‌ನಲ್ಲಿ ತಿಳಿದುಕೊಂಡಿದ್ದನ್ನು ಕನ್ನಡದಲ್ಲಿ ವಿವರಿಸೋಕೆ ಸಾಧ್ಯವಾಗಲ್ಲ. ಅದೇ ರೀತಿ ಕನ್ನಡವನ್ನು ಅರೆದು ಕುಡಿದ ಎಷ್ಟೇ ದೊಡ್ಡ ಪಂಡಿತರಿದ್ದರೂ, ಅವರಿಗೆ ವಿಜ್ಞಾನದ ತಲೆಬುಡ ಅರ್ಥವಾಗಲ್ಲ..! ಹೀಗಾಗಿ, ಇವೆರಡೂ ವಿಷಯಗಳು ದಕ್ಷಿಣ ಹಾಗೂ ಉತ್ತರ ಧ್ರುವ ಪ್ರದೇಶ ಇದ್ದಂತೆ..! ಸುಧೀಂದ್ರ ಹಾಲ್ದೊಡ್ಡೇರಿಯಂಥಾ ಲೇಖಕರು ಇವೆರಡನ್ನೂ ಬೆಸೆಯುವ ಕೊಂಡಿ ಇದ್ದಂತೆ..!
ಎಚ್‌ಎಎಲ್ ವಿಜ್ಞಾನಿಯಾಗಿ, ಡಿಆರ್‌ಡಿಒ ತಜ್ಞರಾಗಿ, ಹಲವು ವೈಜ್ಞಾನಿಕ ಆವಿಷ್ಕಾರಗಳಿಗೆ ಕಾರಣೀಭೂತರಾಗುವ ಜೊತೆಯಲ್ಲೇ ಪ್ರೊಫೆಸರ್ ಕೂಡಾ ಆಗಿ ದುಡಿದ ಸುಧೀಂದ್ರ ಸರ್, ತಮ್ಮ ಕೊನೆಯ ದಿನಗಳನ್ನು ಕನ್ನಡದ ವಿಜ್ಞಾನ ಸಾಹಿತ್ಯದ ಶ್ರೇಯೋಭಿವೃದ್ಧಿಗಾಗಿ ಕಳೆದರು.. ಅವರ ಸಾಧನೆ, ಅವರ ಕೊಡುಗೆ, ಕನ್ನಡದ ಮನಸ್ಸುಗಳಿಗೆ ಅವರು ವಿಜ್ಞಾನವನ್ನು ಬಿತ್ತಿದ ರೀತಿಗೆ ನಾವೆಲ್ಲರೂ ಚಿರಋಣಿ.