ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಮಾಲೀಕರೇ ಎಚ್ಚರ. ನಿಯಮ ಉಲ್ಲಂಘಿಸಿದರೂ ತಪ್ಪಿಸಿಕೊಳ್ಳುತ್ತೇವೆ ಎಂದು ಹಿಗ್ಗದಿರಿ. ನಿಯಮ ಉಲ್ಲಂಘಿಸಿದ ತಕ್ಷಣವೇ ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಬರಲಿದೆ !
ಹೌದು. ಇಂತಹದ್ದೊಂದು ಪ್ರಾಯೋಗಿಕ ವ್ಯವಸ್ಥೆಗೆ ನಗರ ಸಂಚಾರ ಪೊಲೀಸರು ಚಾಲನೆ ನೀಡಿದ್ದಾರೆ. ವಾಹನ ಮಾಲೀಕರಿಗೆ ರವಾನೆಯಾಗುವ ಎಸ್‌ಎಂಎಸ್ ಅನ್ನೇ ನೋಟಿಸ್ ಎಂದು ಪರಿಗಣಿಸಿ ದಂಡ ಕಟ್ಟುವುದು ಅನಿವಾರ್ಯವಾಗಲಿದೆ.
ಸಂಚಾರ ನಿಯಮ ಉಲ್ಲಂಘನೆಯಾಗಿದ್ದು ಕಂಡು ಬಂದಲ್ಲಿ ವಾಹನ ಮಾಲೀಕರಿಗೆ ಎಸ್‌ಎಂಎಸ್ ರವಾನೆಯಾಗಲಿದೆ. ಯಾವ ಸಮಯದಲ್ಲಿ ನಿಯಮ ಉಲ್ಲಂಘಿಸಲಾಗಿದೆ, ಪಾವತಿಸಬೇಕಾದ ದಂಡದ ಸಂಕ್ಷಿಪ್ತ ಮಾಹಿತಿ ಎಸ್‌ಎಂಎಸ್ ನಲ್ಲಿ ಸಿಗಲಿದೆ. ಎಸ್‌ಎಂಎಸ್‌ನಲ್ಲಿ ಒದಗಿಸಿರುವ ಲಿಂಕ್ ಮೂಲಕ ದಾಖಲಾಗಿರುವ ಉಲ್ಲಂಘನೆಯ ಸಾಕ್ಷ್ಯಗಳನ್ನು ಪರಿಶೀಲಿಸಬಹುದು.
ದಂಡ ಪಾವತಿಸುವ ಬಗ್ಗೆಯೂ ಲಿಂಕ್‌ನಲ್ಲಿ ಮಾಹಿತಿ ಲಭ್ಯವಾಗಲಿದೆ. ಚಾಲಕರು ನಿಯಮ ಉಲ್ಲಂಘಿಸಿದರೂ ಸಂಬಂಧಪಟ್ಟ ಮಾಲೀಕರಿಗೆ ತಕ್ಷಣವೇ ಸಂದೇಶ ಹೋಗಲಿದೆ. ಸದ್ಯ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿರುವ ಈ ವ್ಯವಸ್ಥೆ ಕುರಿತು ಅಧ್ಯಯನ ನಡೆಸಿ, ಎಲ್ಲೆಡೆ ಜಾರಿಗೆ ತರಲು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.
ಮೊಬೈಲ್ ಸಂಖ್ಯೆ ಸಂಗ್ರಹ ಕಡ್ಡಾಯ
ವಾಹನಗಳ ನೋಂದಣಿ ವೇಳೆ ಮಾಲೀಕರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಖ್ಯೆಗಳನ್ನು ಸಾರಿಗೆ ಇಲಾಖೆಯು, ಸಂಚಾರ ಪೊಲೀಸರೊಂದಿಗೆ ಹಂಚಿಕೊಳ್ಳುತ್ತದೆ. ಇದರಿಂದ ಸಂಚಾರ ನಿಯಮ ಉಲ್ಲಂಘನೆಗಳ ಪ್ರಕರಣಗಳ ವಿವರವನ್ನು ಮಾಲೀಕರ ಮೊಬೈಲ್‌ಗೆ ಕಳುಹಿಸಲು ಸಾಧ್ಯವಾಗಲಿದೆ.
450 ರೂ. ಬದಲಾಗಿ 20 ಪೈಸೆ ಖರ್ಚು !
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪೊಲೀಸ್ ಸಿಬ್ಬಂದಿ ಡಿಜಿಟಲ್ ಎಫ್‌ಟಿಎಆರ್ ಉಪಕರಣಗಳ ಮೂಲಕ ದಾಖಲಿಸುತ್ತಿದ್ದಾರೆ. ಉಲ್ಲಂಘನೆಯ ಫೋಟೊ ಜತೆಗೆ ನೋಟಿಸ್‌ಗಳನ್ನು ಮುದ್ರಿಸಿ ಅಂಚೆ ಮೂಲಕ ಕಳುಹಿಸಿಕೊಡುವ ವ್ಯವಸ್ಥೆ ಸದ್ಯ ಜಾರಿಯಲ್ಲಿದೆ. ಪ್ರತಿದಿನ ಕನಿಷ್ಠ 20 ಸಾವಿರ ಸಂಪರ್ಕ ರಹಿತ ರೀತಿಯಲ್ಲಿ ಉಲ್ಲಂಘನೆಯ ನೋಟಿಸ್ ಹೊರಡಿಸಲಾಗುತ್ತಿದೆ.
ಈ ರೀತಿ ಮುದ್ರಿತ ನೋಟೀಸ್‌ಗಳನ್ನು ಅಂಚೆ ಮೂಲಕ ಕಳುಹಿಸಲು ಅಂಚೆ ವೆಚ್ಚ, ಮುದ್ರಣ, ಕಾಗದದ ವೆಚ್ಚ ಸೇರಿ ಒಟ್ಟು ವ್ಯವಸ್ಥೆಗೆ 450 ರೂ. ಖರ್ಚಾಗುತ್ತಿದೆ. ನೋಟಿಸ್ ತಯಾರಿಸಲು, ಅದನ್ನು ವಾರಸುದಾರರ ವಿಳಾಸಕ್ಕೆ ತಲುಪಿಸಲು, ಪೊಲೀಸರು ಮತ್ತು ಅಂಚೆ ಇಲಾಖೆಯ ಸಿಬ್ಬಂದಿ ಶ್ರಮ ಕೂಡ ವ್ಯಯವಾಗುತ್ತಿದೆ. ವಾಹನ ಮಾಲೀಕರು ವಿಳಾಸ ಬದಲಾಯಿಸಿದ್ದಲ್ಲಿ ಕಳುಹಿಸಿದ ನೋಟಿಸ್ ವಾಪಸ್ ಬಂದು ಇದಕ್ಕೆ ಖರ್ಚು ಕೂಡ ವ್ಯರ್ಥವಾಗುತ್ತಿತ್ತು. ಆದರೆ, ಎಸ್‌ಎಂಎಸ್ ಕಳುಹಿಸಲು ಇಲಾಖೆಗೆ ಪ್ರತಿ ಪ್ರಕರಣಕ್ಕೆ 20 ಪೈಸೆ ಮಾತ್ರ ತಗಲುತ್ತದೆ.
ಸವಾರರಿಗೂ ಅನುಕೂಲ
ಸಂಚಾರ ನಿಯಮ ಉಲ್ಲಂಘನೆಯಾದ ತಕ್ಷಣ ಎಸ್‌ಎಂಎಸ್ ಬರುವ ವ್ಯವಸ್ಥೆ ಎಲ್ಲೆಡೆ ಜಾರಿಯಾದಲ್ಲಿ ವಾಹನ ಚಾಲಕರು ಇನ್ನಷ್ಟು ಎಚ್ಚರಿಕೆಯಿಂದ ನಿಯಮ ಪಾಲಿಸುವ ನಿರೀಕ್ಷೆ ಇದೆ. ಕೆಲ ಪ್ರಕರಣಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೂ ಮಾಲೀಕರ ಗಮನಕ್ಕೆ ಬಂದಿರುವುದಿಲ್ಲ. ಪೊಲೀಸರು ತಪಾಸಣೆ ಮಾಡುವಾಗ ಹಳೆ ದಂಡದ ಪ್ರಕರಣಗಳನ್ನು ತೋರಿಸಿದಾಗಲಷ್ಟೇ ಗೊತ್ತಾಗುತ್ತದೆ. ತಕ್ಷಣ ಎಸ್‌ಎಂಎಸ್ ಬಂದಲ್ಲಿ ಉಲ್ಲಂಘನೆಯಾಗಿರುವುದು ತಕ್ಷಣವೇ ಗೊತ್ತಾಗುತ್ತದೆ.
ಬಾಕಿ ವಸೂಲಿಗೆ ಅನುಕೂಲ
ನಗರದಲ್ಲಿ ನಿತ್ಯ 75 ಲಕ್ಷಕ್ಕೂ ವಾಹನಗಳು ಸಂಚರಿಸುತ್ತಿವೆ. ಅಲ್ಲದೇ, ಪ್ರತಿದಿನ ಸಾವಿರಾರು ಹೊಸ ವಾಹನಗಳು ಕೂಡ ನೋಂದಣಿಯಾಗುತ್ತಿವೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತವೆ. ವಸೂಲಾಗದ ದಂಡದ ಮೊತ್ತ ಕೂಡ ದೊಡ್ಡದಿದೆ. ಸಂಚಾರ ನಿಯಮ ಉಲ್ಲಂಘಿಸಿದವರಿಂದ 470 ಕೋಟಿ ರೂ. ದಂಡ ಪಾವತಿ ಹಣ ಬಾಕಿ ಉಳಿದಿದೆ. ಸಂಚಾರ ಪೊಲೀಸರು ಮಾಲೀಕರ ಮನೆಗೆ ತೆರಳಿ ವಸೂಲು ಮಾಡುತ್ತಿದ್ದರೂ ಹೆಚ್ಚಿನ ಬಾಕಿ ಹಣ ವಸೂಲಿ ಸಾಧ್ಯವಾಗಿಲ್ಲ. ಎಸ್‌ಎಂಎಸ್ ವ್ಯವಸ್ಥೆಯಿಂದ ಬಾಕಿ ವಸೂಲಿಯೂ ಸುಲಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.