ಬೆಂಗಳೂರಿನ ಜಯದೇವ ಆಸ್ಪತ್ರೆ ಆವರಣದಲ್ಲಿ 350 ಹೆಚ್ಚುವರಿ ಹಾಸಿಗೆಗಳ ನೂತನ ಘಟಕ

​ಆರಂಭದಲ್ಲಿ 200 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿದ್ದ ಇನ್ಫೋಸಿಸ್‌ ಪ್ರತಿಷ್ಠಾನವು ಬಳಿಕ 350 ಹಾಸಿಗೆಗಳ ಆಸ್ಪತ್ರೆಯನ್ನು ಕಟ್ಟಿಸಿಕೊಟ್ಟಿದೆ. 2019 ರಲ್ಲಿ ಆಗಿನ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿಯವರು ಹೊಸ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಬೆಂಗಳೂರಿನ ಜಯದೇವ ಆಸ್ಪತ್ರೆ ಆವರಣದಲ್ಲಿ 350 ಹೆಚ್ಚುವರಿ ಹಾಸಿಗೆಗಳ ನೂತನ ಘಟಕ
Linkup
: ಇನ್ಫೊಸಿಸ್‌ ಪ್ರತಿಷ್ಠಾನವು ನಗರದ ಪ್ರತಿಷ್ಠಿತ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ 350 ಹಾಸಿಗೆಗಳ ಸಾಮರ್ಥ್ಯದ ನೂತನ ಕಟ್ಟಡವನ್ನು ನಿರ್ಮಿಸಿ ಕೊಟ್ಟಿದ್ದು, ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಈ ಮೂಲಕ ಜಯದೇವ ಆಸ್ಪತ್ರೆಯ ಆವರಣವು 1,050 ಹಾಸಿಗೆಗಳ ಸಾಮರ್ಥ್ಯದೊಂದಿಗೆ ದಕ್ಷಿಣ ಏಷ್ಯಾದ ಅತಿ ದೊಡ್ಡ ಹೃದ್ರೋಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 'ಇದೀಗ ನಮ್ಮ ಆಸ್ಪತ್ರೆಗೆ ರಾತ್ರಿ 8 ರಿಂದ ಬೆಳಗ್ಗೆ 8ರವರೆಗೆ ಪ್ರತಿ ಐದು ನಿಮಿಷಕ್ಕೊಬ್ಬರಂತೆ ಹೃದ್ರೋಗಿಗಳು ತುರ್ತು ಚಿಕಿತ್ಸೆಗೆ ದಾಖಲಾಗುತ್ತಾರೆ. ಇದೀಗ 700 ಹಾಸಿಗೆಗಳೊಂದಿಗೆ ದೊಡ್ಡದಿದ್ದರೂ ಹಾಸಿಗೆಗಳ ಕೊರತೆಯಿತ್ತು. ತುರ್ತು ಚಿಕಿತ್ಸೆಗೆ ಬಂದವರಿಗೂ ಹಾಸಿಗೆಗಳ ಕೊರತೆಯಿತ್ತು. ಪ್ರತಿದಿನ ಐಸಿಯುಗೆ 100 ರಿಂದ 120 ಜನ ದಾಖಲಾಗುತ್ತಿದ್ದಾರೆ. ಇದೀಗ ಇನ್‌ಫೋಸಿಸ್‌ ಪ್ರತಿಷ್ಠಾನದವರು ನಿರ್ಮಿಸಿಕೊಡುತ್ತಿರುವ ಹೊಸ ಸಂಕೀರ್ಣವು ಈ ಕೊರತೆಯನ್ನು ನೀಗಿಸಲಿದೆ. ಕಾಮಗಾರಿ ಪೂರ್ಣ ಹಂತದಲ್ಲಿದ್ದು, ನವೆಂಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ' ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಸೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್‌. ಮಂಜುನಾಥ್‌ ಹೇಳಿದರು. 'ಆಸ್ಪತ್ರೆಗೊಮ್ಮೆ ಭೇಟಿ ನೀಡಿದ್ದ ನಾರಾಯಣ ಮೂರ್ತಿಯವರು ರೋಗಿಗಳ ಊರು ಮತ್ತು ಆರ್ಥಿಕ ಸ್ಥಿತಿ ಗತಿ ತಿಳಿದುಕೊಂಡರು. ಕಡು ಬಡವರಿಗೂ ಇಲ್ಲಿ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗುತ್ತಿರುವುದನ್ನು ಹಾಗೂ ಇಲ್ಲಿ ಹಾಸಿಗೆಗಳ ಕೊರತೆ ಇರುವುದನ್ನು ಗಮನಿಸಿದರು. ಇದಾದ ಮರು ದಿನವೇ ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾ ಮೂರ್ತಿ ಕರೆ ಮಾಡಿ ಆಸ್ಪತ್ರೆಗೆ ಹೊಸ ಕಟ್ಟಡ ಕಟ್ಟಿಸಿಕೊಡುವ ವಿಚಾರ ತಿಳಿಸಿದರು. ಸುಮಾರು 103 ಕೋಟಿ ವೆಚ್ಚದಲ್ಲಿ ನೂತನ ಘಟಕವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಈ ಹೊಸ ಆಸ್ಪತ್ರೆಯು ಈಗಿರುವ ಜಯದೇವ ಆಸ್ಪತ್ರೆಯ ಪಕ್ಕದಲ್ಲೇ ಇರುವುದರಿಂದ ರೋಗಿಗಳಿಗೂ ಅನುಕೂಲ' ಎಂದು ಮಂಜುನಾಥ್‌ ನುಡಿದರು. ಆರಂಭದಲ್ಲಿ 200 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿದ್ದ ಇನ್ಫೋಸಿಸ್‌ ಪ್ರತಿಷ್ಠಾನವು ಬಳಿಕ 350 ಹಾಸಿಗೆಗಳ ಆಸ್ಪತ್ರೆಯನ್ನು ಕಟ್ಟಿಸಿಕೊಟ್ಟಿದೆ. 2019 ರಲ್ಲಿ ಆಗಿನ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿಯವರು ಹೊಸ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕೋವಿಡ್‌ ಸಾಂಕ್ರಾಮಿಕ, ಲಾಕ್‌ಡೌನ್‌ಗಳ ನಡುವೆಯೂ ಕಾಮಗಾರಿ ಅಲ್ಪಾವಧಿಯಲ್ಲಿ ಪೂರ್ಣಗೊಂಡಿದೆ. ಕೇವಲ 36 ಗುಂಟೆ ಜಾಗದಲ್ಲಿ ನಾಲ್ಕು ಮಹಡಿಗಳ ಹಾಗೂ 1.8 ಲಕ್ಷ ಚದರ ಅಡಿ ವಿಸ್ತೀರ್ಣದ ಆಸ್ಪತ್ರೆ ಇದಾಗಿದೆ ಎಂದರು. ಹೊಸ ಘಟಕದ ವಿಶೇಷ ಹೊಸ ಘಟಕದಲ್ಲಿ 350 ಹಾಸಿಗೆಗಳ ಪೈಕಿ 100 ಐಸಿಯು ಬೆಡ್‌ಗಳು, 250 ಜನರಲ್‌ ಬೆಡ್‌ಗಳಿರುತ್ತವೆ. ಎರಡು ಶಸ್ತ್ರಚಿಕಿತ್ಸೆ ಘಟಕಗಳು, ಎರಡು ಕಾರ್ಡಿಯಾಕ್‌ ಕ್ಯಾಥ್‌ಲ್ಯಾಬ್‌ಗಳು, ಒಂದು ಹೈಬ್ರಿಡ್‌ ಆಪರೇಷನ್‌ ಥಿಯೇಟರ್‌ ಕೂಡ ಇದೆ. ಭೌತಿಕವಾಗಿ ಜಯದೇವ ಒಂದೇ ಯುನಿಟ್‌ ಆಗಿರುತ್ತದೆ. ಜಯದೇವದಲ್ಲಿ ಸದ್ಯ 105 ಮಂದಿ ಕಾರ್ಡಿಯಾಲಜಿಸ್ಟ್‌ಗಳಿದ್ದಾರೆ. ನರ್ಸ್‌ಗಳ ಕೊರತೆಯೂ ಇಲ್ಲ. ಇತರೆ ಖಾಸಗಿ ಆಸ್ಪತ್ರೆಗಳಿಗೆ ಹೋಲಿಕೆ ಮಾಡಿದಲ್ಲಿ, ಜಯದೇವದಲ್ಲಿ ಶೇ.60ರಷ್ಟು ಚಿಕಿತ್ಸಾ ವೆಚ್ಚ ಕಡಿಮೆಯಿದೆ.