‘ಗಣ್ಯರು ಮಾತ್ರವಲ್ಲ, ಸಾರ್ವಜನಿಕರು ಓಡಾಡೋ ರಸ್ತೆಗುಂಡಿಯನ್ನೂ ಮುಚ್ಚಿ’; BBMPಗೆ ಹೈಕೋರ್ಟ್ ತಾಕೀತು

ಗುಂಡಿ ಮುಚ್ಚಿದ್ದ ರಸ್ತೆಗಳಲ್ಲಿ ಎರಡು- ಮೂರು ತಿಂಗಳಲ್ಲೇ ಮತ್ತೆ ಗುಂಡಿ ಬೀಳುತ್ತಿವೆ. ಕೇವಲ ಸಚಿವರ ಮನೆಗಳ ಮುಂದಿನ ರಸ್ತೆ ಉತ್ತಮವಾಗಿದ್ದರೆ ಸಾಲದು, ಸಾಮಾನ್ಯ ಜನರ ಮನೆಗಳ ಬಳಿಯೂ ರಸ್ತೆಗಳು ಉತ್ತಮ ಸ್ಥಿತಿಯಲ್ಲಿರಬೇಕು. ಪದೇಪದೆ ರಸ್ತೆಗಳಲ್ಲಿ ಗುಂಡಿ ಬೀಳದ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಪಾಲಿಕೆಗೆ ಹೈಕೋರ್ಟ್‌ ತಾಕೀತು ಮಾಡಿತು.

‘ಗಣ್ಯರು ಮಾತ್ರವಲ್ಲ, ಸಾರ್ವಜನಿಕರು ಓಡಾಡೋ ರಸ್ತೆಗುಂಡಿಯನ್ನೂ ಮುಚ್ಚಿ’; BBMPಗೆ ಹೈಕೋರ್ಟ್ ತಾಕೀತು
Linkup
ಬೆಂಗಳೂರು: ಗಣ್ಯರು ಓಡಾಡುವ ರಸ್ತೆಗಳು ಮಾತ್ರವಲ್ಲ ಸಾರ್ವಜನಿಕರು ಸಂಚರಿಸುವ ರಸ್ತೆಗಳ ಗುಂಡಿಗಳನ್ನು ಮುಚ್ಚಬೇಕು. ರಿಪೇರಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಹೈಕೋರ್ಟ್‌ ಗುರುವಾರ ಬಿಬಿಎಂಪಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಮತ್ತು ರಸ್ತೆಗಳ ನಿರ್ವಹಣೆ ಸಂಬಂಧ 2015ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತು. ಪರ ವಾದ ಮಂಡಿಸಿದ ನ್ಯಾಯವಾದಿ ಕೆ.ಎನ್‌. ಪುಟ್ಟೇಗೌಡ, ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ‍್ಯ ನಿರಂತರವಾಗಿ ನಡೆದಿದೆ. ಕಳೆದ 15ದಿನಗಳಿಂದ ನಗರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಗುಂಡಿ ಮುಚ್ಚುವ ಕಾರ‍್ಯಕ್ಕೆ ಹಿನ್ನಡೆಯಾಗಿದೆ. ಆ ಬಗ್ಗೆ ವಸ್ತು ಸ್ಥಿತಿ ವರದಿ ಸಲ್ಲಿಸಲು ಸಮಯ ನೀಡಬೇಕೆಂದು ಕೋರಿದರು. ಆಗ ನ್ಯಾಯಪೀಠ, ಗುಂಡಿ ಮುಚ್ಚಿದ್ದ ರಸ್ತೆಗಳಲ್ಲಿ ಎರಡು- ಮೂರು ತಿಂಗಳಲ್ಲೇ ಮತ್ತೆ ಗುಂಡಿ ಬೀಳುತ್ತಿವೆ. ಕೇವಲ ಸಚಿವರ ಮನೆಗಳ ಮುಂದಿನ ರಸ್ತೆ ಉತ್ತಮವಾಗಿದ್ದರೆ ಸಾಲದು, ಸಾಮಾನ್ಯ ಜನರ ಮನೆಗಳ ಬಳಿಯೂ ರಸ್ತೆಗಳು ಉತ್ತಮ ಸ್ಥಿತಿಯಲ್ಲಿರಬೇಕು. ಪದೇಪದೆ ರಸ್ತೆಗಳಲ್ಲಿ ಗುಂಡಿ ಬೀಳದ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಪಾಲಿಕೆಗೆ ತಾಕೀತು ಮಾಡಿತು. ಬಿಬಿಎಂಪಿಯಲ್ಲೇ ಸಮಸ್ಯೆ: ‘ಪಾಲಿಕೆಯ ಮಸೂರದಲ್ಲೇ ಸಮಸ್ಯೆ ಇದ್ದು, ಅದು ಹೆಚ್ಚು ಪಾರದರ್ಶಕವಾಗಿಲ್ಲ. ಆ ಮಸೂರದಲ್ಲಿ 7 ಸಚಿವರ ಬಂಗಲೆಗಳ ಮುಂದೆ ಹಾದುಹೋಗುವ ಕುಮಾರಕೃಪಾ ರಸ್ತೆ, ಹೈಕೋರ್ಟ್‌ ಹಾಗೂ ವಿಧಾನಸೌಧಗಳ ಮುಂದಿನ ರಸ್ತೆಗಳಲ್ಲಿರುವ ಗುಂಡಿಗಳು ಮಾತ್ರ ಕಾಣುತ್ತವೆ. ಆದರೆ, ಸಾಮಾನ್ಯ ಜನ ವಾಸಿಸುವ ಇತರ ಪ್ರದೇಶಗಳ ಆ ಮಸೂರದಲ್ಲಿ ಕಾಣಿಸುವುದಿಲ್ಲ’ ಎಂದು ಮೌಖಿಕವಾಗಿ ಹೇಳಿತು. ಅರ್ಜಿದಾರರ ಪರ ವಕೀಲರಾದ ಎಸ್‌.ಆರ್‌.ಅನುರಾಧ, ‘ಗುಂಡಿ ಮುಚ್ಚುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡುತ್ತಿಲ್ಲ. ನ್ಯಾಯಾಲಯದ ನಿರ್ದೇಶನಗಳನ್ನು ಪಾಲನೆ ಮಾಡುತ್ತಿಲ್ಲ’ ಎಂದು ದೂರಿದರು. ಅದಕ್ಕೆ ಉತ್ತರಿಸಿದ ಬಿಬಿಎಂಪಿ ಪರ ವಕೀಲರು, ‘ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು ಒಂದೇ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಗರದಾದ್ಯಂತ ಪ್ರತಿದಿನ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದೆ. ಆದರೆ, ಭಾರಿ ಮಳೆಯ ಕಾರಣದಿಂದ ಗುಂಡಿ ಮುಚ್ಚುವ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಎಲ್ಲೆಲ್ಲಿ ಹೆಚ್ಚು ಅಗತ್ಯವಿದೆಯೋ ಅಲ್ಲಿ ಗುಂಡಿ ಮುಚ್ಚುವ ಕೆಲಸವಾಗುತ್ತಿದೆ. ಈ ಬಗ್ಗೆ ಮುಂದಿನ ವಿಚಾರಣೆ ವೇಳೆ ಫೋಟೋ ಸಹಿತ ವಸ್ತುಸ್ಥಿತಿ ವರದಿ ಸಲ್ಲಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅಂತಿಮವಾಗಿ, ನಗರದ ಎಲ್ಲ ರಸ್ತೆಗಳಲ್ಲಿನ ಗುಂಡಿಗಳನ್ನೂ ಮುಚ್ಚಬೇಕು ಹಾಗೂ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಪಾಲಿಕೆಗೆ ನಿರ್ದೇಶಿಸಿದ ಪೀಠ, ಕಾಮಗಾರಿಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿಯನ್ನು 2 ವಾರಗಳೊಳಗೆ ಸಲ್ಲಿಸಬೇಕು ಹಾಗೂ ಗುಂಡಿಗಳನ್ನು ಮುಚ್ಚಲು ಅಳವಡಿಸಿಕೊಂಡ ಕಾರ್ಯವಿಧಾನಗಳಿಗೆ ಸಂಬಂಧಿಸಿದ ಎಲ್ಲದಾಖಲೆಗಳನ್ನೂ ಒದಗಿಸಬೇಕು ಎಂದು ಪಾಲಿಕೆ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ನ.15ಕ್ಕೆ ಮುಂದೂಡಿತು.