ಬಿಗ್ ಟೆಕ್ ಶೋ@ಮೈಸೂರು: ಏರ್ ಪೋರ್ಟ್ ರನ್ ವೇ ವಿಸ್ತರಣೆಗೆ ತಕ್ಷಣವೇ ಭೂಮಿ

ವಿಮಾನ ನಿಲ್ದಾಣ ವಿಸ್ತರಣೆ ಸಂಬಂಧ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದು, ಸಕಾರಾತ್ಮಕ ಸ್ಪಂದನ ಸಿಕ್ಕಿದೆ. ಜತೆಗೆ ಇಲ್ಲಿರುವ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸುಸಜ್ಜಿತ ‘ಮೈಸೂರು ಅನುಭವ ಕೇಂದ್ರ’ವನ್ನು (ಮೈಸೂರು ಎಕ್ಸ್ಫಿರಿಯನ್ಸ್ ಸೆಂಟರ್) ತೆರೆಯಲಾಗುವುದು

ಬಿಗ್ ಟೆಕ್ ಶೋ@ಮೈಸೂರು: ಏರ್ ಪೋರ್ಟ್ ರನ್ ವೇ ವಿಸ್ತರಣೆಗೆ ತಕ್ಷಣವೇ ಭೂಮಿ
Linkup
ಮೈಸೂರು: ನಗರದ ವಿಮಾನ ನಿಲ್ದಾಣದ ಸಮೀಪ ಇರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಸೇರಿದ ಕಟ್ಟಡದಲ್ಲಿ ಟೆಕ್ ಪಾರ್ಕ್ ಸ್ಥಾಪನೆ ಮಾಡಲಾಗುವುದು. ಹಾಗೆಯೇ ಇಲ್ಲಿನ ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೆ ತಕ್ಷಣವೇ ಅಗತ್ಯವಿರುವ ಭೂಮಿಯನ್ನು ಒದಗಿಸಲಾಗುತ್ತದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಹೇಳಿದರು. ಸೋಮವಾರ ಇಲ್ಲಿ ಐಟಿಬಿಟಿ ಇಲಾಖೆ ಆಯೋಜಿಸಿದ್ದ `ದಿ ಬಿಗ್ ಟೆಕ್ ಷೋ@ಮೈಸೂರು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೆಕ್ ಪಾರ್ಕ್ ಗೆ ಅಗತ್ಯವಿರುವ 1 ಲಕ್ಷ ಚದರಡಿ ಜಾಗವನ್ನು ಪೂರೈಸಲು ಮುಕ್ತ ವಿವಿಯೊಂದಿಗೆ ಮಾತನಾಡಲಾಗಿದೆ. ವಿಮಾನ ನಿಲ್ದಾಣ ವಿಸ್ತರಣೆ ಸಂಬಂಧ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದು, ಸಕಾರಾತ್ಮಕ ಸ್ಪಂದನ ಸಿಕ್ಕಿದೆ. ಜತೆಗೆ ಇಲ್ಲಿರುವ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸುಸಜ್ಜಿತ ‘ಮೈಸೂರು ಅನುಭವ ಕೇಂದ್ರ’ವನ್ನು (ಮೈಸೂರು ಎಕ್ಸ್ಫಿರಿಯನ್ಸ್ ಸೆಂಟರ್) ತೆರೆಯಲಾಗುವುದು’ ಎಂದರು. ಈ ‘ಅನುಭವ ಕೇಂದ್ರ’ವು ಜನರಿಗೆ ಸಾಮಾನ್ಯ ಪರಿಚಯ ಮಾಡಿಕೊಡುವುದಷ್ಟೇ ಅಲ್ಲದೆ, ತಂತ್ರಜ್ಞಾನ, ಆವಿಷ್ಕಾರ ಹಾಗೂ ಇಲ್ಲಿನ ಉದ್ಯಮ ವಾತಾವರಣದ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಿದೆ ಎಂದು ತಿಳಿಸಿದರು. ಈ ನಗರದಲ್ಲಿ ಸದ್ಯಕ್ಕೆ 100 ನವೋದ್ಯಮಗಳಿವೆ. ಇದರ ಜೊತೆಗೆ ಜಾಗತಿಕ ಮಟ್ಟದ 15 ಕಂಪನಿಗಳಾದರೂ ಇಲ್ಲಿ ತಮ್ಮ ಜಿಸಿಸಿ (ಗ್ಲೋಬಲ್ ಕೆಪ್ಯಾಸಿಟಿ ಸೆಂಟರ್) ಕೇಂದ್ರಗಳನ್ನು ತೆಗೆಯುವಂತಾಗಬೇಕು ಎಂಬ ಗುರಿ ಇದೆ ಎಂದು ಸಚಿವರು ತಿಳಿಸಿದರು.. ಇತ್ತೀಚೆಗೆ ದುಬೈ ಎಕ್ಸ್ ಪೋಗೆ ಹೋಗಿದ್ದಾಗ ಅಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡ ಅವರು, “ರಾಜ್ಯದಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಮೊತ್ತದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಸಿದ್ಧವಿದ್ದಾರೆ. ಅದಕ್ಕೆ ತಕ್ಕಂತೆ ನಾವು ಇಲ್ಲಿನ ವ್ಯವಸ್ಥೆಯನ್ನು ಸದೃಢಗೊಳಿಸಲು ಬೆಂಗಳೂರು ಹೊರತುಪಡಿಸಿ ಬೇರೆಡೆಗಳಲ್ಲೂ ವ್ಯವಸ್ಥಿತವಾಗಿ ಅಭಿವೃದ್ಧಿಗೊಳ್ಳಬೇಕಿದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದರು. ಬೆಂಗಳೂರಿನ ಆಚೆಗೂ ಉದ್ದಿಮೆಗಳು ಬೇರೂರಬೇಕೆನ್ನುವುದು ಸರಕಾರದ ಸಂಕಲ್ಪವಾಗಿದೆ. ಇದಕ್ಕೆ ಅನುಗುಣವಾಗಿ `ಬಿಯಾಂಡ್ ಬೆಂಗಳೂರು’ ಕಾರ್ಯಕ್ರಮ, 600 ಕೋಟಿ ವೆಚ್ಚದೊಂದಿಗೆ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ, ಹೊಸ ಕೈಗಾರಿಕಾ ನೀತಿ ಮತ್ತು ಫ್ಯಾಬ್ ನೀತಿಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು. ಈಗ ನಮ್ಮ ನವೋದ್ಯಮಗಳಿಗೆ ವಿದೇಶೀ ಬಂಡವಾಳ ಯಥೇಚ್ಛವಾಗಿ ಬರುತ್ತಿದ್ದು, ಇದು ಶೇ 90ರಷ್ಟಿದೆ. ಸ್ಥಳೀಯರ ಹೂಡಿಕೆ ಶೇ.10ರಷ್ಟು ಮಾತ್ರವಿದೆ. ಒಳಗಿನವರು ಕೂಡ ಬಂಡವಾಳ ಹೂಡಿ, ಉದ್ಯಮಶೀಲತೆ ಬೆಳೆಸಿ ಅವಕಾಶಗಳ ಲಾಭ ಪಡೆಯಬೇಕು. ಉದ್ದಿಮೆಗಳ ಅಗತ್ಯಕ್ಕೆ ತಕ್ಕಂತೆ ನಮ್ಮ ಎಂಜಿನಿಯರಿಂಗ್, ಪದವಿ, ಐಟಿಐ ಮತ್ತು ಪಾಲಿಟೆಕ್ನಿಕ್ ಶಿಕ್ಷಣಗಳನ್ನು ಸಮಗ್ರವಾಗಿ ಸುಧಾರಿಸಲಾಗಿದೆ ಎಂದು ಸಚಿವರು ಹೇಳಿದರು. ಕಾರ್ಯಕ್ರಮದಲ್ಲಿ ವರ್ಚುಯಲ್ ಆಗಿ ಮಾತನಾಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, `2025ರ ಹೊತ್ತಿಗೆ ದೇಶದ ಡಿಜಿಟಲ್ ಆರ್ಥಿಕತೆಯನ್ನು 1 ಟ್ರಿಲಿಯನ್ ಮಟ್ಟಕ್ಕೆ ಏರಿಸುವುದು ಪ್ರಧಾನಿ ಮೋದಿಯವರ ಗುರಿಯಾಗಿದೆ. ಇದು ಸಾಧ್ಯವಾಗಬೇಕೆಂದರೆ, ಕರ್ನಾಟಕವು ಒಂದೆರಡು ವರ್ಷಗಳಲ್ಲಿ 300 ಶತಕೋಟಿ ಡಾಲರ್ ಮೊತ್ತದ ಡಿಜಿಟಲ್ ವಹಿವಾಟನ್ನು ನಡೆಸುವಂತಾಗಬೇಕು’ ಎಂದು ಆಶಿಸಿದರು.