
ಮನೋಜ್ ಬಾಜ್‌ಪೇಯಿ, ಪ್ರಿಯಾಮಣಿ, ಅಭಿನಯದ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸಿರೀಸ್‌ನ ಟ್ರೇಲರ್ ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿತ್ತು. ಈ ಸೀಸನ್ 2ರಲ್ಲಿ ಕಥೆ ದಕ್ಷಿಣ ಭಾರತದಲ್ಲಿ ಸಾಗಲಿದೆ. ಎಲ್‌ಟಿಟಿಇ ಸಂಘಟನೆ ಬಗ್ಗೆ ಇದರಲ್ಲಿ ಹೇಳಲಾಗಿದೆ ಎಂಬ ಮಾತುಗಳು ಟ್ರೇಲರ್ ನೋಡಿದವರಿಂದ ಕೇಳಿಬಂದಿದೆ. ಸಮಂತಾ ಕೂಡ ಇಲ್ಲಿ ಎಲ್‌ಟಿಟಿಇ ಸಂಘಟನೆಯ ಸದಸ್ಯಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ತಮಿಳರ ಬಗ್ಗೆ ಈ ವೆಬ್ ಸಿರೀಸ್‌ನಲ್ಲಿ ಕೆಟ್ಟದಾಗಿ ತೋರಿಸಲಾಗಿದೆ. ಹಾಗಾಗಿ, ಇದನ್ನು ಬ್ಯಾನ್ ಮಾಡಬೇಕು ಎಂಬ ಮಾತುಗಳು ಕೂಡ ಕೇಳಿಬಂದಿವೆ. ಅದಕ್ಕೀಗ ನಿರ್ದೇಶಕರು ಉತ್ತರ ಕೊಟ್ಟಿದ್ದಾರೆ.
ನಿಷೇಧ ಮಾಡಿ ಎಂದ ತಮಿಳಿಗರು!
ಟ್ರೇಲರ್ ನೋಡಿದಾಗಿನಿಂದ ಕೆಲ ತಮಿಗಳಿಗರಿಗೆ ಈ ವೆಬ್ ಸಿರೀಸ್ ಮೇಲೆ ಸಿಟ್ಟು ಬಂದಿದೆ. ಇದರಲ್ಲಿ ತಮಿಳರನ್ನು ಉಗ್ರಗಾಮಿಗಳ ರೀತಿಯಲ್ಲಿ ತೋರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಂತಹ ಮಾತುಗಳು ಕೇಳಿಬರುತ್ತಿದ್ದಂತೆಯೇ, ಟ್ರೇಲರ್‌ನಲ್ಲಿ ವಿವಾದಕ್ಕೊಳಗಾದ ಅಂಶಗಳನ್ನು ಕತ್ತರಿಸಲಾಗಿದೆ ಕೂಡ. ಆದರೂ ಕೂಡ ವೆಬ್ ಸೀರಿಸ್ ಅನ್ನೇ ಬ್ಯಾನ್ ಮಾಡುವಂತೆ ಅಭಿಯಾನ ಶುರುವಾಗಿದೆ. ಈ ಸಂಬಂಧ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ರಾಜ್ಯಸಭಾ ಸದಸ್ಯ ವೈಕೊ ಪತ್ರ ಬರೆದಿದ್ದಾರೆ.
'ಈ ವೆಬ್ ಸೀರಿಸ್ ಟ್ರೇಲರ್‌ನಲ್ಲಿ ತಮಿಳರನ್ನು ಉಗ್ರರು, ಐಎಸ್ಐ ಏಜೆಂಟ್ಗಳು ಎಂದು ಬಿಂಬಿಸಲಾಗಿದೆ. ಈಲಂ ತಮಿಳು ಯೋಧರು ಮಾಡಿದ ತ್ಯಾಗಗಳನ್ನು ಭಯೋತ್ಪಾದಕ ಕೃತ್ಯದ ರೀತಿ ತಪ್ಪಾಗಿ ತೋರಿಸಲಾಗಿದೆ. ಇದರಿಂದ ತಮಿಳು ಜನರ ಭಾವನೆಗೆ, ಸಂಸ್ಕೃತಿ ಧಕ್ಕೆ ಉಂಟಾಗಿದೆ. ಆದ್ದರಿಂದ ಈ ವೆಬ್ ಸೀರಿಸ್ ಬ್ಯಾನ್ ಮಾಡಬೇಕು' ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ರಾಜ್ & ಡಿಕೆ ಏನು ಹೇಳುತ್ತಾರೆ?
ಈ ವೆಬ್ ಸಿರೀಸ್ ನಿರ್ದೇಶನ ಮಾಡಿರುವುದು ರಾಜ್ ಮತ್ತು ಡಿಕೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, 'ತಮಿಳರ ಭಾವನೆಗಳನ್ನು ನಾವು ಗೌರವಿಸುತ್ತೇವೆ. ಕೇವಲ ಟ್ರೇಲರ್ ಆಧರಿಸಿ ಅನಾವಶ್ಯಕ ವಿವಾದ ಮಾಡಬಾರದು. ಅಲ್ಲಿರುವ ಕೆಲವೇ ಕೆಲವು ಶಾಟ್ ಗಳನ್ನು ಆಧರಿಸಿ ತಪ್ಪಾಗಿ ಬಿಂಬಿಸಲಾಗಿದೆ. ತಮಿಳು ಜನರ ಭಾವನೆಗಳನ್ನು, ಅವರ ತಮಿಳು ಸಂಸ್ಕೃತಿಯನ್ನು ತುಂಬ ತಿಳಿದುಕೊಂಡಿದ್ದೇವೆ. ನಮಗೆ ತಮಿಳಿಗರ ಬಗ್ಗೆ ಅಪಾರವಾದ ಪ್ರೀತಿ, ಗೌರವ ಇದೆ. ಇಡೀ ಸಿರೀಸ್ ನೋಡಿದ ನಂತರ ಪ್ರೇಕ್ಷಕರು ಅದನ್ನು ಮೆಚ್ಚುವ ನಂಬಿಕೆ ನಮಗೆ ಇದೆ. ಈ ಸಿರೀಸ್‌ಗಾಗಿ ನಾವು ಹಲವು ವರ್ಷಗಳ ಪರಿಶ್ರಮವನ್ನು ಹಾಕಿದ್ದೇವೆ. ಮೊದಲ ಸೀಸನ್‌ನಲ್ಲಿ ಇದ್ದಂತೆಯೇ, ಇಲ್ಲಿಯೂ ಪ್ರೇಕ್ಷಕರಿಗೆ ರೋಚಕವಾದ ಕಥೆಯನ್ನು ಹೇಳಲು ತುಂಬ ಕಷ್ಟಪಟ್ಟಿದ್ದೇವೆ. ಅದು ರಿಲೀಸ್ ಆಗುವವರೆಗೂ ಎಲ್ಲರೂ ಕಾಯಿರಿ' ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.