ಪತಿ ರಾಮು ನಿಧನದ ಬಳಿಕ ಮೊದಲ ಬಾರಿ ಮನದಾಳದ ಮಾತು ಹಂಚಿಕೊಂಡ ನಟಿ ಮಾಲಾಶ್ರೀ

ಪ್ರೀತಿಯ ಪತಿ ರಾಮುರನ್ನು ಕಳೆದುಕೊಂಡು ದುಃಖತಪ್ತರಾದ ಮಾಲಾಶ್ರೀ ಇದೀಗ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಪತಿ ರಾಮು ನಿಧನದ ಬಳಿಕ ಮೊದಲ ಬಾರಿ ಮನದಾಳದ ಮಾತು ಹಂಚಿಕೊಂಡ ನಟಿ ಮಾಲಾಶ್ರೀ
Linkup
ಕನ್ನಡ ಚಿತ್ರರಂಗದಲ್ಲಿ 'ಕೋಟಿ ನಿರ್ಮಾಪಕ' ಅಂತಲೇ ಖ್ಯಾತಿ ಪಡೆದಿದ್ದ ನಿರ್ಮಾಪಕ ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾದರು. ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ನಿರ್ಮಾಪಕ ರಾಮು ಕಳೆದ ಏಪ್ರಿಲ್ 26 ರಂದು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವಿಧಿವಶರಾದರು. ಪತಿ ರಾಮು ಅಗಲಿಕೆಯಿಂದ ಪತ್ನಿ ಹಾಗೂ ಇಬ್ಬರು ಮಕ್ಕಳು ನೋವಿನ ಮಡುವಿನಲ್ಲಿ ಮುಳುಗಿದ್ದರು. ಪ್ರೀತಿಯ ಪತಿ ರಾಮುರನ್ನು ಕಳೆದುಕೊಂಡು ದುಃಖತಪ್ತರಾದ ಮಾಲಾಶ್ರೀ ಇದೀಗ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಬಹಿರಂಗ ಪತ್ರದ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ನಟಿ ಮಾಲಾಶ್ರೀ ತಮ್ಮ ಒಡಲೊಳಗಿನ ಸಂಕಟವನ್ನು ಬಿಚ್ಚಿಟ್ಟಿದ್ದಾರೆ. ಭಾವುಕರಾಗಿ ತಾವು ಬರೆದ ಪತ್ರವನ್ನು ನಟಿ ಮಾಲಾಶ್ರೀ ಟ್ವೀಟ್ ಮಾಡಿದ್ದಾರೆ. ನಟಿ ಮಾಲಾಶ್ರೀರವರ ಭಾವುಕ ಪತ್ರ ''ಕಳೆದ 12 ದಿನಗಳು ತುಂಬಾ ನೋವಿನಿಂದ ಕೂಡಿದ್ದವು. ನಮಗೆ ದಿಕ್ಕೇ ತೋಚುತ್ತಿಲ್ಲ. ನಮ್ಮೆಲ್ಲರಿಗೂ ಬೆನ್ನೆಲುಬಾಗಿದ್ದ ಪ್ರೀತಿಯ ಪತಿ ರಾಮು ಅಗಲಿಕೆಯಿಂದ ಇಡೀ ಕುಟುಂಬ ದಿಗ್ಭ್ರಮೆಗೊಂಡಿದೆ. ನನ್ನ ಹೃದಯ ಛಿದ್ರಗೊಂಡಿದೆ. ರಾಮು ಅವರೇ ನಮಗೆ ಯಾವಾಗಲೂ ಬೆನ್ನೆಲುಬು. ಅವರೇ ನಮಗೆ ದಾರಿ ತೋರಿಸುವ ಬೆಳಕು.'' ''ಈ ಪರಿಸ್ಥಿತಿಯಲ್ಲಿ ರಾಮುಗಾಗಿ ಇಡೀ ಕನ್ನಡ ಚಿತ್ರರಂಗ ಪ್ರೀತಿ ತೋರಿಸಿದೆ. ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಪ್ರೀತಿ, ಕಾಳಜಿ ತೋರಿಸಿದ ಮೀಡಿಯಾ, ಕಲಾವಿದರು, ನಿರ್ಮಾಪಕರು, ತಂತ್ರಜ್ಞರು, ತಾಂತ್ರಿಕ ವರ್ಗದವರು ಹಾಗೂ ರಾಮು ಅವರ ಎಲ್ಲಾ ಅಭಿಮಾನಿಗಳು ಹಾಗೂ ಹಿತೈಷಿಗಳಿಗೂ ನನ್ನ ಧನ್ಯವಾದಗಳು'' ಎಂದು ಪತ್ರದಲ್ಲಿ ರಾಮು ಪತ್ನಿ ಮಾಲಾಶ್ರೀ ಉಲ್ಲೇಖಿಸಿದ್ದಾರೆ. ಜೊತೆಗೆ, ''ಎಲ್ಲರೂ ಸುರಕ್ಷಿತವಾಗಿರಿ. ನಿಮ್ಮ ಪ್ರೀತಿಪಾತ್ರರನ್ನ ಚೆನ್ನಾಗಿ ನೋಡಿಕೊಳ್ಳಿ. ಮನೆಯಲ್ಲೇ ಇರಿ'' ಎಂದು ನಟಿ ಮಾಲಾಶ್ರೀ ಮನವಿ ಮಾಡಿದ್ದಾರೆ. 35ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದ ರಾಮು ರಾಮು ಎಂಟರ್‌ಪ್ರೈಸಸ್ ಮೂಲಕ 'ಗೋಲಿಬಾರ್', 'ಲಾಕಪ್ ಡೆತ್', 'ಹಲೋ ಸಿಸ್ಟರ್', 'ಸರ್ಕಲ್ ಇನ್ಸ್‌ಪೆಕ್ಟರ್', 'ಸಿಂಹದ ಮರಿ', 'ಲೇಡಿ ಕಮಿಷನರ್', 'ಎಕೆ 47', 'ಚಾಮುಂಡಿ', 'ಭಾವ ಭಾಮೈದ', 'ಹಾಲಿವುಡ್', 'ಕಿಚ್ಚ', 'ಕಲಾಸಿಪಾಳ್ಯ', 'ದುರ್ಗಿ', 'ಆಟೋ ಶಂಕರ್' ಮುಂತಾದ ಹಲವು ಚಿತ್ರಗಳನ್ನು ರಾಮು ನಿರ್ಮಾಣ ಮಾಡಿದ್ದರು. ರಾಮು ನಿರ್ಮಾಣದ 'ಅರ್ಜುನ್ ಗೌಡ' ಸಿನಿಮಾ ಬಿಡುಗಡೆಯಾಗಬೇಕಿದೆ. (ಚಿತ್ರಕೃಪೆ: ಮಾಲಾಶ್ರೀ ಇನ್ಸ್ಟಾಗ್ರಾಮ್ ಪ್ರೊಫೈಲ್)