ನೊಂದಿರುವ ಜೀವಗಳಿಗೆ ಆತ್ಮವಿಶ್ವಾಸ ತುಂಬುವ 'ಭರವಸೆಯ ಬದುಕು' ಗೀತೆ

ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಅವರು ಹಾಡಿರುವ 'ಭರವಸೆಯ ಬದುಕು' ವಿಡಿಯೋ ಸಾಂಗ್ ಆಲ್ಬಂ ಇದೇ ಜೂನ್‌ 9ರಂದು ರಿಲೀಸ್ ಆಗಲಿದೆ. ಈಗಾಗಲೇ ಬದುಕಿನಲ್ಲಿ ಸಾಕಷ್ಟು ನೋವುಂಡವರಿಗೆ ಈ ಗೀತೆ ಸಾಕಷ್ಟು ಆತ್ಮವಿಶ್ವಾಸ ತುಂಬಲಿದೆಯಂತೆ. ಈ ಗೀತೆಯ ಕುರಿತು ಇಲ್ಲಿದೆ ಮಾಹಿತಿ.

ನೊಂದಿರುವ ಜೀವಗಳಿಗೆ ಆತ್ಮವಿಶ್ವಾಸ ತುಂಬುವ 'ಭರವಸೆಯ ಬದುಕು' ಗೀತೆ
Linkup
ಸದ್ಯ ಎಲ್ಲ ಕಡೆಯೂ ಕೋವಿಡ್‌ನಿಂದಾಗಿ ಬರೀ ಸಾವು-ನೋವಿನ ವಿಚಾರವೇ ತುಂಬಿ ಹೋಗಿದೆ. ಒಂದು ಕಡೆ ಕೊರೊನಾ ಕಿರಿಕಿರಿಯಾದರೆ, ಮತ್ತೊಂದೆಡೆ ಲಾಕ್ಡೌನ್‌ನಿಂದಾಗಿ ಜನರ ಆರ್ಥಿಕ ಪರಿಸ್ಥಿತಿ ಕಂಗೆಟ್ಟಿದೆ. ಇಂತಹ ಸಮಯದಲ್ಲಿ ಜನರಲ್ಲಿ ಸಕಾರಾತ್ಮಕತೆ ತುಂಬುವ ನಿಟ್ಟಿನಲ್ಲಿ ಹಾಡೊಂದನ್ನು ಮಾಡಿದ್ದಾರೆ 'ಫಾರ್ ರಿಜಿಸ್ಟ್ರೇಷನ್' ಸಿನಿಮಾ ನಿರ್ದೇಶಕ ನವೀನ್ ದ್ವಾರಕನಾಥ್‌. 'ಸಾಕು ಇನ್ನು ಸಾಕು ಬರಿ ದೂಷಣೆಯ ನಿಲ್ಲಿಸಿರಿ ಸಾಕು...' ಎಂಬ ಹಾಡಿನ ಮೂಲಕ ಜನಸಾಮಾನ್ಯರಲ್ಲಿ ಭರವಸೆಯನ್ನು ಮೂಡಿಸಲು ಹೊರಟಿದ್ದಾರೆ. ತಮ್ಮ ಆಲಾಪ್ ಕ್ರಿಯೇಷನ್ಸ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ '' ಎಂಬ ಈ ವಿಡಿಯೋ ಆಲ್ಬಂ ಅನ್ನು ಅವರು ಹೊರತಂದಿದ್ದಾರೆ. ನವೀನ್ ನಿರ್ದೇಶನವಿರುವ ಈ ಹಾಡಿಗೆ ಚಂದನವನದ ಹಾಗೂ ರಂಗಭೂಮಿ ಕಲಾವಿದರು ಸಾಥ್ ನೀಡಿದ್ದಾರೆ. 'ಅದೆಷ್ಟೋ ಮನಸ್ಸುಗಳು ನಕಾರಾತ್ಮಕ ಆಲೋಚನೆಯಲ್ಲಿ ಭರವಸೆಯನ್ನು ಕಳೆದುಕೊಂಡಿದ್ದು, ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಹದೆಗೆಟ್ಟಿರುವುದರಿಂದ ಜನರಲ್ಲಿನ ಆತ್ಮ ವಿಶ್ವಾಸ ಕುಂದುತ್ತಿದೆ. ಈ ನಿಟ್ಟಿನಲ್ಲಿ ಶ್ರೀಸಾಮಾನ್ಯರಲ್ಲಿ ಪಾಸಿಟಿವ್ ಆಲೋಚನೆ ಬೆಳೆಸಲು, ಆತ್ಮ ವಿಶ್ವಾಸ ತುಂಬಲು ಹಾಗೂ ಭರವಸೆ ಮೂಡಿಸಲೆಂದೇ ಈ ಗೀತೆಯನ್ನು ನಿರ್ದೇಶಿಸಿದ್ದೇನೆ' ಎನ್ನುತ್ತಾರೆ ನಿರ್ದೇಶಕ ನವೀನ್ ದ್ವಾರಕನಾಥ್. ಜೂ. 9ರಂದು ಬುಧವಾರ ಸಂಜೆ 5 ಗಂಟೆಗೆ ಈ ಹಾಡು ಬಿಡುಗಡೆಯಾಗಲಿದ್ದು, ಈ ಹಾಡಿನಲ್ಲಿ ಅನಿರುದ್ಧ ಜತ್ಕರ್, ಚಂದನ್ ಶರ್ಮಾ, ಪೃಥ್ವಿ ಅಂಬರ್, ಸಿಂಪಲ್ ಸುನಿ, ವಸಿಷ್ಠ ಸಿಂಹ, ಸೋನು ಗೌಡ, ನಾಗೇಂದ್ರ ಪ್ರಸಾದ್, ಪಿ.ಡಿ. ಸತೀಶ್ ಚಂದ್ರ, ಕೃಷಿ ತಾಪಂಡ, ಹರ್ಷಿಕಾ ಪೂಣಚ್ಚ, ರಂಜನಿ ರಾಘವನ್, ರಘು ರಾಮನಕೊಪ್ಪ, ರೆಮೋ, ಜಯರಾಮ್ ಕಾರ್ತಿಕ್, ಕಿಶನ್ ಬೆಳಗಲಿ, ನವೀನ್ ಶಂಕರ್, ಮಯೂರ ರಾಘವೇಂದ್ರ, ಆರ್.ಜೆ. ಸೌಜನ್ಯ, ವರ್ಷಿಣಿ ಜಾನಕಿರಾಮ್, ಆರ್. ಅಭಿಲಾಷ್, ಯಶ್ ಶೆಟ್ಟಿ, ತ್ರಿವೇಣಿ ರಾವ್‌ ಕಾಣಿಸಿಕೊಂಡಿದ್ದಾರೆ. ಗಾಯಕರಾದ ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಈ ಹಾಡಿಗೆ ಧ್ವನಿ ನೀಡಿದ್ದು, ಹರೀಶ್-ಸಿದ್ಧಾರ್ಥ್ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡಿಗೆ ಸಾಹಿತ್ಯವನ್ನು ಹರೀಶ್ ಬರೆದಿದ್ದಾರೆ.