ನ. 1ರಿಂದ ಆರ್.ಸಿ, ಎಲ್‌ಎಲ್‌ಆರ್ ಸೇರಿ ಹಲವು ಸಾರಿಗೆ ಸೇವೆ ಆನ್‌ಲೈಲ್‌ನಲ್ಲೇ ಲಭ್ಯ!
ನ. 1ರಿಂದ ಆರ್.ಸಿ, ಎಲ್‌ಎಲ್‌ಆರ್ ಸೇರಿ ಹಲವು ಸಾರಿಗೆ ಸೇವೆ ಆನ್‌ಲೈಲ್‌ನಲ್ಲೇ ಲಭ್ಯ!
ವಾಹನದ ನೋಂದಣಿ ಪ್ರಮಾಣಪತ್ರದ ಜತೆಗೆ ಕಲಿಕೆ ಚಾಲನಾ ಪರವಾನಗಿ ಸೇರಿ ಆಯ್ದ 30 ಸೇವೆಗಳು ನ. 1ರಿಂದ ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ! ಈ ಸೇವೆಗಳನ್ನು ಆನ್‌ಲೈನ್‌ನಲ್ಲೇ ಜನರಿಗೆ ಒದಗಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.
ವಾಹನದ ನೋಂದಣಿ ಪ್ರಮಾಣಪತ್ರ (ಆರ್.ಸಿ)ದ ಜತೆಗೆ ನೋಂದಣಿ ಸಂಖ್ಯೆ ಹಂಚಿಕೆ, ತಾತ್ಕಾಲಿಕ ನೋಂದಣಿ, ವಾಹನಗಳ ವರ್ಗಾವಣೆ, ಆರ್.ಸಿ. ನಕಲು ಪ್ರತಿ, ಪ್ರಮಾಣಪತ್ರದಲ್ಲಿ ಬದಲಾವಣೆ, ಕಲಿಕೆ ಚಾಲನಾ ಪರವಾನಗಿ (ಎಲ್.ಎಲ್.ಆರ್.) ವಿತರಣೆ, ಎಲ್.ಎಲ್.ನಲ್ಲಿ ಹೆಸರು / ವಿಳಾಸ ಬದಲಾವಣೆ, ಕಂಡಕ್ಟರ್ ಪರವಾನಗಿ / ನವೀಕರಣ ಸೇರಿದಂತೆ ಆಯ್ದ 30 ಸೇವೆಗಳು ನ. 1ರಿಂದ ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ!
ಕರ್ನಾಟಕ ಆಡಳಿತ ಸುಧಾರಣೆ ಆಯೋಗ-2ರ ಶಿಫಾರಸು ಹಾಗೂ ಕೇಂದ್ರ ಸರಕಾರದ ನಿರ್ದೇಶನ, ನಿಯಮಾವಳಿಗಳನ್ವಯ ಆಯ್ದ 30 ಪ್ರಮುಖ ಸೇವೆಗಳನ್ನು ಆನ್‌ಲೈನ್‌ನಲ್ಲೇ ಜನರಿಗೆ ಒದಗಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಎನ್‌ಐಸಿ ಸಹಯೋಗದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಸದ್ಯದಲ್ಲೇ ಅಂತಿಮ ರೂಪ ಪಡೆಯಲಿದ್ದು, ಭ್ರಷ್ಟಾಚಾರ ಮುಕ್ತ ಸೇವೆ ಸಿಗುವ ನಿರೀಕ್ಷೆ ಮೂಡಿಸಿದೆ.
ರಾಜ್ಯದಲ್ಲಿ ಸಾರಿಗೆ ಇಲಾಖೆಯು 47 ಬಗೆಯ ಸೇವೆ ಒದಗಿಸುತ್ತಿದೆ. ಸಾರಿಗೆ ಇಲಾಖೆ ಸೇವೆಗಾಗಿ ವರ್ಷವಿಡೀ 50 ಲಕ್ಷಕ್ಕೂ ಹೆಚ್ಚು ಜನ ಕಚೇರಿಗಳಿಗೆ ಭೇಟಿ ನೀಡುತ್ತಾರೆ ಎಂಬ ಅಂದಾಜು ಇದೆ. ಇಷ್ಟು ಜನರ ಸಮಯ, ಸಂಚಾರ, ವೆಚ್ಚಕ್ಕೆ ತಡೆ ಹಾಕಿ ಆಯ್ದ ಸೇವೆಗಳನ್ನು ಕುಳಿತಲ್ಲೇ ಪಡೆಯುವ, ಭ್ರಷ್ಟಾಚಾರಕ್ಕೂ ಕಡಿವಾಣ ಹಾಕುವ ಕ್ರಾಂತಿಕಾರಕ ಪ್ರಯತ್ನಕ್ಕೆ ಇಲಾಖೆ ಮುಂದಾಗಿದೆ.
ಫೇಸ್‌ಲೆಸ್-ಕಾಂಟ್ಯಾಕ್ಟ್ ಲೆಸ್‌ಕೌಶಲ ಪರೀಕ್ಷೆ, ಭೌತಿಕ ಪರಿಶೀಲನೆ ಸೇರಿದಂತೆ ನೇರವಾಗಿ ಪರಿಶೀಲಿಸಿ ಖಾತರಿಪಡಿಸಿಕೊಳ್ಳಬೇಕಾದ ಸೇವೆಗಳನ್ನು ಹೊರತುಪಡಿಸಿ ಫೇಸ್‌ಲೆಸ್ - ಕಾಂಟ್ಯಾಕ್ಟ್ ಲೆಸ್‌ನಡಿ ಒದಗಿಸಬಹುದಾದ ಸೇವೆಗಳನ್ನು ಆನ್‌ಲೈನ್‌ನಲ್ಲೇ ನೀಡಲು ಸಿದ್ಧತೆ ನಡೆದಿದೆ. ರಾಜ್ಯದಲ್ಲಿ ವಾರ್ಷಿಕ 20 ಲಕ್ಷಕ್ಕೂ ಹೆಚ್ಚು ವಾಹನಗಳು ನೋಂದಣಿಯಾಗುತ್ತಿದ್ದು, ಲಕ್ಷಾಂತರ ಮಂದಿ ಸಾರಿಗೆ ಇಲಾಖೆ ಕಚೇರಿಗಳಿಗೆ ಭೇಟಿ ನೀಡುತ್ತಾರೆ. ಬಹುಪಾಲು ಕಡೆ ಡೀಲರ್‌ಗಳೇ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದು, ಆರ್.ಸಿ. ದಾಖಲೆ ಪಡೆಯಲು 15- 20 ದಿನ ಬೇಕಾಗುತ್ತಿದೆ. ಜತೆಗೆ ಖರೀದಿದಾರರು ಹೆಚ್ಚುವರಿ ಶುಲ್ಕ ಭರಿಸಬೇಕಿದೆ.
ಇನ್ನು ಮುಂದೆ ಆನ್‌ಲೈನ್‌ನಲ್ಲೇ ಆರ್.ಸಿ (ಡಿಜಿಟಲ್ ಡಾಕ್ಯುಮೆಂಟ್) ಪಡೆಯುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜತೆಗೆ ಶುಲ್ಕ ಪಾವತಿಸಿದರೆ ಆ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ (ರನ್ನಿಂಗ್ ನಂಬರ್) ನೋಂದಣಿ ಸಂಖ್ಯೆಯನ್ನೂ ಪಡೆಯಲು ಅವಕಾಶವಿರಲಿದೆ. ಇದರಿಂದ ಕೆಲ ಹೊತ್ತಿನಲ್ಲೇ ನೋಂದಣಿ ಸಂಖ್ಯೆ, ಆರ್.ಸಿ. ದಾಖಲೆ ಸಿಗಲಿದೆ. ಹಾಗೆಯೇ ಆಯ್ದ ದಾಖಲೆಗಳ ನಕಲು ಪ್ರತಿ, ನವೀಕರಣ ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯವಾಗಲಿವೆ. ಕೆಲ ನಿರ್ದಿಷ್ಟ ಸೇವೆಗೆ ಸಂಬಂಧಪಟ್ಟಂತೆ ಜನ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಕಾಲ ಮಿತಿಯಲ್ಲಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಿ ಒದಗಿಸಲಿದ್ದಾರೆ.