ದೆಹಲಿಗೆ ನಿತೀಶ್ 'ಖಾಸಗಿ ಭೇಟಿ': ಮೋದಿ ಸಂಪುಟದಲ್ಲಿ ಸ್ಥಾನಕ್ಕಾಗಿ ಬಿಡಲಿದ್ದಾರಾ ಬೇಡಿಕೆಯ'ಬಾಣ'?

ನಾಳೆ(ಜೂನ್ 22-ಮಂಗಳವಾರ) ದೆಹಲಿಗೆ ಭೇಟಿ ನೀಡಲಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೇಂದ್ರ ಸಚಿವ ಸಂಪುಟದಲ್ಲಿ ಜೆಡಿಯುಗೆ ಪ್ರಾತಿನಿಧ್ಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ದೆಹಲಿಗೆ ನಿತೀಶ್ 'ಖಾಸಗಿ ಭೇಟಿ': ಮೋದಿ ಸಂಪುಟದಲ್ಲಿ ಸ್ಥಾನಕ್ಕಾಗಿ ಬಿಡಲಿದ್ದಾರಾ ಬೇಡಿಕೆಯ'ಬಾಣ'?
Linkup
ಹೊಸದಿಲ್ಲಿ: ಬಿಹಾರ ಮುಖ್ಯಮಂತ್ರಿ ನಾಳೆ(ಜೂನ್ 22-ಮಂಗಳವಾರ) ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಲಿದ್ದು, ಅವರನ್ನು ಭೇಟಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಜೆಡಿಯು ಪಕ್ಷಕ್ಕೆ ಮನ್ನಣೆ ನೀಡಬೇಕು ಎಂಬ ಬೇಡಿಕೆಯೊಂದಿಗೆ, ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 2019ರಲ್ಲಿ ಪ್ರಧಾನಿ ಮೋದಿ ತಮ್ಮ ಎರಡನೇ ಅವಧಿ ಆರಂಭಿಸಿದಾಗ, ಸಚಿವ ಸಂಪುಟದಲ್ಲಿ ಎರಡು ಸ್ಥಾನಕ್ಕಾಗಿ ಜೆಡಿಯು ಬೇಡಿಕೆ ಮಂಡಿಸಿತ್ತು. ಆದರೆ ಒಂದು ಸ್ಥಾನ ಸಿಗುವುದು ಖಚಿತವಾದಾಗ ಸಚಿವ ಸಂಪುಟ ಸೇರದಿರುವ ನಿರ್ಣಯ ಕೈಗೊಂಡಿತ್ತು. ಆದರೆ ಈ ಬಾರಿ ಮತ್ತೆ ಅದೇ ಬೇಡಿಕೆಯೊಂದಿಗೆ ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಲೋಕಸಭೆಯಲ್ಲಿ ಜೆಡಿಯು ಪಕ್ಷದ 16 ಸದಸ್ಯರಿದ್ದು, ಪಕ್ಷ ಎನ್‌ಡಿಎ ಭಾಗವಾಗಿರುವುದರಿಂದ ಕೇಂದ್ರ ಸಂಪುಟದಲ್ಲಿ ಕನಿಷ್ಠ ಎರಡು ಸ್ಥಾನಕ್ಕಾಗಿ ಬೇಡಿಕೆ ಮಂಡಿಸಲಾಗುತ್ತಿದೆ. ಆದರೆ ಪಕ್ಷಕ್ಕೆ ಕೇವಲ ಒಂದು ಸ್ಥಾನ ನೀಡಲು ಬಿಜೆಪಿ ತಯಾರಿದೆ. ಈ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ನಿತೀಶ್ ಕುಮಾರ್ ಹಾಗೂ ಪ್ರಧಾನಿ ಮೋದಿ ನಡುವೆ ಮಾತುಕತೆ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಇವೆಲ್ಲವೂ ಕೇವಲ ಊಹಾಪೋಹ ಎಂದು ಕರೆದಿರುವ ಜೆಡಿಯು, ನಿತೀಶ್ ಕುಮಾರ್ ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ತರಳಲಿದ್ದಾರೆ ಎಂದು ಹೇಳಿದೆ. ಅಲ್ಲದೇ ಪ್ರಧಾನಿ ಮೋದಿ ಅವರನ್ನು ನಿತೀಶ್ ಕುಮಾರ್ ಭೇಟಿ ಮಾಡುವುದಿಲ್ಲ ಎಂದೂ ಜೆಡಿಯು ಸ್ಪಷ್ಟಪಡಿಸಿದೆ. ಆದರೆ ಮೂಲಗಳ ಪ್ರಕಾರ ನಿತೀಶ್ ಕುಮಾರ್ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷ(ಎಲ್‌ಜೆಪಿ) ಆಂತರಿಕ ಬಿಕ್ಕಟ್ಟು ಉಲ್ಬಣಿಸಿರುವ ಈ ಸಂದರ್ಭದಲ್ಲಿ, ರಾಜ್ಯದಲ್ಲಿ ಪಕ್ಷದ ಬೇರನ್ನು ಮತ್ತಷ್ಟು ಗಟ್ಟಿಗೊಳಿಸುವುದು ನಿತೀಶ್ ಕುಮಾರ್ ಉದ್ದೇಶ ಎನ್ನಲಾಗಿದೆ.