ದೇಶದಲ್ಲಿ ಆಕ್ಸಿಜನ್‌ ಉತ್ಪಾದನೆ ಸಾಕಷ್ಟಿದೆ, ಆದರೆ ಸರಬರಾಜಿನದೇ ಸಮಸ್ಯೆ!

ಕೊರೊನಾ ಹಿನ್ನೆಲೆಯಲ್ಲಿ ಪ್ರಾಣವಾಯುವಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಿದ್ದೂ ದೇಶದಲ್ಲಿ ಆಮ್ಲಜನಕದ ಉತ್ಪಾದನೆ ಸಮೃದ್ಧವಾಗಿದೆ ಎನ್ನುತ್ತಿದ್ದಾರೆ ಉದ್ಯಮ ವಲಯದ ಪ್ರಮುಖರು. ಆದರೆ, ಆಮ್ಲಜನಕದ ದಾಸ್ತಾನು ಹಾಗೂ ಫ್ಯಾಕ್ಟರಿಗಳಿಂದ ಆಸ್ಪತ್ರೆಗಳಿಗೆ ಸಾಗಣೆಯಲ್ಲಿ ಸಮಸ್ಯೆಯಾಗಿದೆ ಎನ್ನುತ್ತಿದ್ದಾರೆ ಇವರು.

ದೇಶದಲ್ಲಿ ಆಕ್ಸಿಜನ್‌ ಉತ್ಪಾದನೆ ಸಾಕಷ್ಟಿದೆ, ಆದರೆ ಸರಬರಾಜಿನದೇ ಸಮಸ್ಯೆ!
Linkup
ಮುಂಬಯಿ: ದೇಶದಲ್ಲಿ ಆಮ್ಲಜನಕದ ಉತ್ಪಾದನೆ ಸಮೃದ್ಧವಾಗಿದೆ. ಆದರೆ, ದಾಸ್ತಾನು ಸಮಸ್ಯೆ ಇದೆ. ಅಲ್ಲದೇ, ಫ್ಯಾಕ್ಟರಿಗಳಿಂದ ಆಸ್ಪತ್ರೆಗಳಿಗೆ ಸಾಗಣೆಯಲ್ಲಿ ಸಮಸ್ಯೆಯಾಗಿದೆ ಎಂದು ಉದ್ಯಮ ವಲಯದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು ಕೆಲವು ರಾಜ್ಯಗಳಲ್ಲಿ ಆಮ್ಲಜನಕದ ಕೊರತೆ ಉಂಟಾಗಿದೆ. ಆದಾಗ್ಯೂ, ಉತ್ಪಾದನೆಯ ಕೊರತೆಯಿಂದ ಉಂಟಾಗಿರುವ ಸಮಸ್ಯೆ ಇದಲ್ಲ. ದೇಶದಲ್ಲಿಯೇ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ. ಗುಜರಾತ್‌ ನಂತರದ ಸ್ಥಾನದಲ್ಲಿದೆ. ಇವೆರಡು ರಾಜ್ಯಗಳಲ್ಲಿ ಬೇಡಿಕೆಗೆ ತಕ್ಕನಾಗಿ ಆಮ್ಲಜನಕ ಲಭ್ಯವಾಗುತ್ತಿದೆ. ಮತ್ತೊಂದು ಕಡೆ, ಮಧ್ಯಪ್ರದೇಶದಲ್ಲಿಆಮ್ಲಜನಕ ಉತ್ಪಾದಿಸುವ ಒಂದೇ ಒಂದು ಘಟಕವೂ ಇಲ್ಲ. ಇದು ನೆರೆ ರಾಜ್ಯಗಳನ್ನು ಅವಲಂಬಿಸಿದೆ. ಆಂಧ್ರ ಪ್ರದೇಶ, ಜಾರ್ಖಂಡ್‌ ಮತ್ತು ಒಡಿಶಾದಂಥ ರಾಜ್ಯಗಳಲ್ಲಿ ಹೆಚ್ಚುವರಿ ಆಮ್ಲಜನಕ ಲಭ್ಯವಿದೆ. ಆದರೆ, ಅದರ ದಾಸ್ತಾನು ಮತ್ತು ಸರಬರಾಜು ವ್ಯವಸ್ಥೆಯು ಉತ್ತಮವಾಗಿಲ್ಲ. ಏತನ್ಮಧ್ಯೆ, ಭಾರತೀಯ ರೈಲ್ವೆಯು ಆಮ್ಲಜನಕ ಸರಬರಾಜಿಗೆ ವಿಶೇಷ ಒತ್ತು ನೀಡಿದೆ. ''ಪಶ್ಚಿಮದ ಎರಡು ರಾಜ್ಯಗಳು ಪ್ರಾಣವಾಯುವಾದ ಆಕ್ಸಿಜನ್‌ ಅನ್ನು ಗರಿಷ್ಠ ಮಟ್ಟದಲ್ಲಿ ಉತ್ಪಾದಿಸುತ್ತಿವೆ. ಅಲ್ಲದೇ, ಉತ್ಪಾದಿಸಿದ ಅಷ್ಟೂ ಆಮ್ಲಜನಕದಲ್ಲಿ ಬಹುಭಾಗವನ್ನು ತಾವೇ ಬಳಸಿಕೊಳ್ಳುತ್ತಿವೆ. ಎಲ್ಲಿ ಅಗತ್ಯವಿದೆಯೇ ಆ ರಾಜ್ಯಗಳಲ್ಲಿಯೇ ಉತ್ಪಾದನಾ ಘಟಕಗಳನ್ನು ತೆರೆಯಬೇಕು,'' ಎಂದು ಐನಾಕ್ಸ್‌ ಏರ್‌ ಪ್ರಾಡಕ್ಟ್ಸ್‌ ನಿರ್ದೇಶಕ ಸಿದ್ಧಾರ್ಥ್‌ ಜೈನ್‌ ಹೇಳಿದ್ದಾರೆ. ''ಆಮ್ಲಜನಕ ಎಂದರೆ ಗಾಳಿ. ಅದು ನಮ್ಮ ಸುತ್ತಲೂ ಇರುವಂಥದ್ದು. ಆದರೆ, ಅಗತ್ಯವಿರುವ ಪ್ರದೇಶಕ್ಕೆ ಅದು ಸಿಗುವಂತಾಗಬೇಕು,'' ಎಂದು ಜೈನ್‌ ಅಭಿಪ್ರಾಯಪಟ್ಟಿದ್ದಾರೆ. ಆಮ್ಲಜನಕ ಉತ್ಪಾದಿಸುವ ಈ ಕಂಪನಿಯಲ್ಲಿ ಜೈನ್‌ ಕುಟುಂಬವು ಶೇ.50ರಷ್ಟು ಪಾಲನ್ನು ಹೊಂದಿದೆ. ಭಾರತದಲ್ಲಿ 27 ಘಟಕಗಳನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ನಾಲ್ಕು ಮತ್ತು ಗುಜರಾತ್‌ನಲ್ಲಿ ಮೂರು ಘಟಕಗಳನ್ನು ಹೊಂದಿದೆ. ಕೆಲವು ಕೈಗಾರಿಕೆಗಳು ಕೊರೊನಾ ಕಾಲಘಟ್ಟದಲ್ಲಿ ಸ್ವಲ್ಪ ತ್ಯಾಗವನ್ನು ಮಾಡಬೇಕು. ಕೈಗಾರಿಕೆಗೆ ಬೇಕಾದ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ವರ್ಗಾಯಿಸಬೇಕು. ಒಂದು ಅಥವಾ ಎರಡು ತಿಂಗಳು ಹೀಗೆ ಮಾಡಬೇಕಾಗುತ್ತದೆ ಎಂದು ಸಿದ್ಧಾರ್ಥ್‌ ಜೈನ್‌ ವಿವರಿಸಿದ್ದಾರೆ. ದಿನಕ್ಕೆ 7,000 ಟನ್‌ ಉತ್ಪಾದನೆ ದೇಶದಲ್ಲಿ ದಿನಕ್ಕೆ 7,000 ಟನ್‌ ಲಿಕ್ವಿಡ್‌ ಆಕ್ಸಿಜನ್‌ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಐನಾಕ್ಸ್‌ ಏರ್‌ ಪ್ರಾಡಕ್ಟ್ಸ್‌ ಕಂಪನಿಯ ಪಾಲು 2,000 ಟನ್‌ನಷ್ಟಿದೆ. ಕೋವಿಡ್‌ಗೂ ಮೊದಲಿನ ದಿನಗಳಲ್ಲಿ ಒಟ್ಟು ಉತ್ಪಾದನೆಯಲ್ಲಿ ಶೇ.20ರಷ್ಟು ಆಮ್ಲಜನಕವು ಆರೋಗ್ಯ ವಲಯಕ್ಕೆ ಮಾರಾಟವಾಗುತ್ತಿತ್ತು. ಕಳೆದ ಸೆಪ್ಟೆಂಬರ್‌ನಿಂದ ಕೋವಿಡ್‌ ತೀವ್ರ ಮಟ್ಟಕ್ಕೆ ಏರಿಕೆಯಾಗಿದ್ದು, ಆರೋಗ್ಯ ವಲಯಕ್ಕೆ ಒಟ್ಟು ಉತ್ಪಾದನೆಯ ಶೇ.70ರಷ್ಟು ಆಮ್ಲಜನಕವು ಸರಬರಾಜಾಗುತ್ತಿದೆ. ಈಗ ಉತ್ಪಾದನೆಯ ಪೂರ್ಣ ಪ್ರಮಾಣದ ಆಮ್ಲಜನಕ ಆರೋಗ್ಯ ವಲಯಕ್ಕೆ ಹೋಗುತ್ತಿದೆ.