ಜನಪ್ರಿಯ 'ಪಾರ್ಲೆ-ಜಿ' ಬಿಸ್ಕತ್‌ ಮಾರಾಟಕ್ಕೆ ಐಬಿಎಂ ಕ್ಲೌಡ್‌ ಸಾಥ್‌!

ಪಾರ್ಲೆ-ಜಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಕಾಲದಲ್ಲಿ ತಲುಪಿಸಲು ಹಾಗೂ ಸರಿಯಾದ ಸ್ಥಳಗಳಲ್ಲಿ ಮಾರಾಟ ಮಾಡಲು ಐಬಿಎಂನ ಹೈಬ್ರಿಡ್‌ ಕ್ಲೌಡ್‌, ಸೆಕ್ಯುರಿಟಿ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಕಂಪನಿ ಬಳಸಿಕೊಳ್ಳಲಿದೆ.

ಜನಪ್ರಿಯ 'ಪಾರ್ಲೆ-ಜಿ' ಬಿಸ್ಕತ್‌ ಮಾರಾಟಕ್ಕೆ ಐಬಿಎಂ ಕ್ಲೌಡ್‌ ಸಾಥ್‌!
Linkup
ಹೊಸದಿಲ್ಲಿ: ಮಾಹಿತಿ ತಂತ್ರಜ್ಞಾನ ವಲಯದ ದಿಗ್ಗಜ , ಪಾರ್ಲೆ-ಜಿ ಬಿಸ್ಕತ್‌ ಕಂಪನಿಗೆ ಬಿಸ್ಕತ್‌ ಮಾರಾಟದಲ್ಲಿ ತಂತ್ರಜ್ಞಾನದ ನೆರವನ್ನು ನೀಡಲಿದೆ. ಈ ಸಂಬಂಧ ಒಪ್ಪಂದ ಮಾಡಿಕೊಂಡಿದೆ. ಜನಪ್ರಿಯ ಬಿಸ್ಕತ್‌ ಉತ್ಪಾದಕ ಪಾರ್ಲೆ-ಜಿಗೂ, ಟೆಕ್‌ ದೈತ್ಯ ಐಬಿಎಂಗೂ ಎತ್ತಣ ಸಂಬಂಧ ಎಂದುಕೊಳ್ಳಬಹುದು. ಆದರೆ ಐಬಿಎಂನ ಹೈಬ್ರಿಡ್‌ ಕ್ಲೌಡ್‌ ತಂತ್ರಜ್ಞಾನದ ನೆರವಿನಿಂದ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾರಾಟ ಮಾಡುವ ನಿರೀಕ್ಷೆ ಪಾರ್ಲೆಗೆ ಇದೆ. ಐಬಿಎಂನ ಹೈಬ್ರಿಡ್‌ ಕ್ಲೌಡ್‌, ಸೆಕ್ಯುರಿಟಿ ಮತ್ತು ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಪಾರ್ಲೆ-ಜಿ ಪಡೆಯಲಿದೆ. ಇದರಿಂದ ಪಾರ್ಲೆ-ಜಿಯ ಉತ್ಪನ್ನಗಳು ಮಾರುಕಟ್ಟೆಗೆ ಸಕಾಲದಲ್ಲಿ ಹಾಗೂ ಸರಿಯಾದ ಸ್ಥಳಗಳಲ್ಲಿ ಮಾರಾಟವಾಗಲಿದೆ. "ಪಾರ್ಲೆ-ಜಿ ಬಿಸ್ಕತ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಐಬಿಎಂ ತಂತ್ರಜ್ಞಾನ ನೆರವಾಗಲಿದೆ. ಮಾರುಕಟ್ಟೆಯಲ್ಲಿನ ಕಂಪನಿಯ ಕಾರ್ಯಾಚರಣೆಗಳು ಸುಗಮವಾಗಲಿದೆ," ಎಂದು ಕಂಪನಿಯ ಕಾರ್ಯಕಾರಿ ನಿರ್ದೇಶಕ ಅಜಯ್‌ ಚೌಹಾಣ್‌ ತಿಳಿಸಿದ್ದಾರೆ. ಕೋವಿಡ್‌-19 ಬಿಕ್ಕಟ್ಟಿನ ಪರಿಣಾಮ ಪೂರೈಕೆಯ ಸರಣಿ ಕಡಿತವಾಗಿದೆ. ಕಂಪನಿಯ ಹಲವು ಉದ್ಯೋಗಿಗಳು ಕಚೇರಿಯಿಂದ ದೂರವಿದ್ದು ಕಾರ್ಯ ನಿರ್ವಹಿಸಬೇಕಾಗಿದೆ. ಇಂಥ ಸವಾಲನ್ನೆದುರಿಸಲು ತಂತ್ರಜಾನ ನೆರವು ಅವಶ್ಯಕ ಎಂದು ಕಂಪನಿ ಹೇಳಿದೆ. "ಪಾರ್ಲೆಯಂಥ ದಶಕಗಟ್ಟಲೆ ಅನುಭವಿ ಬ್ರ್ಯಾಂಡ್‌ಗಳು ಈಗ ತಮ್ಮ ವಹಿವಾಟನ್ನು ಮತ್ತಷ್ಟು ವಿಸ್ತರಿಸಲು ಐಬಿಎಂನ ತಂತ್ರಜ್ಞಾನ ನೆರವು ಪಡೆಯುತ್ತಿವೆ. ಇದರಿಂದ ಸರಿಯಾದ ಉತ್ಪನ್ನವನ್ನು ಸರಿಯಾದ ಸಂದರ್ಭದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಾಧ್ಯವಾಗಲಿದೆ," ಎಂದು ಐಬಿಎಂನ ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ ಪಟೇಲ್‌ ತಿಳಿಸಿದ್ದಾರೆ.