ವೊಡಾಫೋನ್‌ ಐಡಿಯಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕುಮಾರ್‌ ಮಂಗಲಂ ಬಿರ್ಲಾ

ವೊಡಾಫೋನ್‌ ಐಡಿಯಾ ಕಾರ್ಯನಿರ್ವಾಹಕೇತರ ನಿರ್ದೇಶಕ ಮತ್ತು ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನವನ್ನು ಕುಮಾರ್‌ ಮಂಗಲಂ ಬಿರ್ಲಾ ತೊರೆದಿದ್ದಾರೆ. ಈ ಮೂಲಕ ಕಂಪನಿಯ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.

ವೊಡಾಫೋನ್‌ ಐಡಿಯಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕುಮಾರ್‌ ಮಂಗಲಂ ಬಿರ್ಲಾ
Linkup
ಹೊಸದಿಲ್ಲಿ: ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಾರ್ಯನಿರ್ವಾಹಕೇತರ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನ ತೊರೆಯಲು ಮಾಡಿಕೊಂಡಿದ್ದ ಮನವಿಯನ್ನು ಆಡಳಿತ ಮಂಡಳಿ ಒಪ್ಪಿಕೊಂಡಿದೆ. ಈ ಮೂಲಕ ವೊಡಾಫೋನ್‌ ಐಡಿಯಾ ಮುಖ್ಯಸ್ಥ ಸ್ಥಾನವನ್ನು ಬಿರ್ಲಾ ತೊರೆದಿದ್ದಾರೆ. ಹಿಮಾಂಶು ಕಪಾನಿಯಾ ಅವರನ್ನು ಬಿರ್ಲಾ ನಿರ್ವಹಿಸುತ್ತಿದ್ದ ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕುಮಾರ್‌ ಮಂಗಲಂ ಬಿರ್ಲಾ ಅವರು ತಮ್ಮ ಷೇರುಗಳನ್ನು ಸರಕಾರಕ್ಕೆ ನೀಡುವುದಾಗಿ ಹೇಳಿದ್ದರು. ತಮ್ಮ ಶೇ. 27ರಷ್ಟು ಷೇರುಗಳನ್ನು ಬೇಕಿದ್ದರೆ ಸರಕಾರ ಹೇಳಿದವರಿಗೆ ನೀಡುವುದಾಗಿಯೂ ತಿಳಿಸಿದ್ದರು. ಕಂಪನಿಯನ್ನು ಮುಂದುವರಿಸಿಕೊಂಡು ಹೋಗಲು ಹೀಗೆ ಮಾಡುತ್ತಿರುವುದಾಗಿ ಹೇಳಿದ್ದ ಅವರು, ಈ ಸಂಬಂಧ ಜೂನ್‌ನಲ್ಲಿ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ಅವರಿಗೆ ಪತ್ರ ಬರೆದು ಪ್ರಸ್ತಾವನೆ ಮುಂದಿಟ್ಟಿದ್ದರು. ಅಧಿಕೃತ ಮಾಹಿತಿಗಳ ಪ್ರಕಾರ 58,254 ಕೋಟಿ ರೂ. ಎಜಿಆರ್‌ ಬಾಕಿಯ ಹೊರೆಯನ್ನು ಕಂಪನಿ ಹೊರುತ್ತಿದೆ. ಇದರಲ್ಲಿ 7,854.37 ಕೋಟಿ ರೂ.ಗಳನ್ನು ಕಂಪನಿ ಕಟ್ಟಿದ್ದು 50,399.63 ಕೋಟಿ ರೂ. ಇನ್ನೂ ಕಟ್ಟಬೇಕಿದೆ. ಒಟ್ಟಾರೆ ಲೀಸ್‌ ಹೊಣೆಗಾರಿಕೆ ಹೊರತುಪಡಿಸಿ 1,80,310 ಕೋಟಿ ರೂ. ಹೊಣೆಗಾರಿಕೆಯನ್ನು ಕಂಪನಿ ಹೊಂದಿದೆ. ಇದರಲ್ಲಿ ತರಂಗಾತರದ ಪಾವತಿಯ ಹೊಣೆಗಾರಿಕೆ 96,270 ಕೋಟಿ ರೂ., ಬ್ಯಾಂಕ್‌ ಸಾಲ 23,080 ಕೋಟಿ ರೂ. ಹಾಗೂ ಎಜಿಆರ್‌ ಬಾಕಿಯೂ ಸೇರಿದೆ. ಸರಕಾರಕ್ಕೆ ಬಿರ್ಲಾ ಬರೆದ ಪತ್ರ ಬಹಿರಂಗವಾಗುತ್ತಿದ್ದಂತೆ ಕಂಪನಿಯ ಷೇರುಗಳು ಶೇ. 17ರಷ್ಟು ಕುಸಿದಿದೆ. ಇದರಿಂದ ಕಂಪನಿಯ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.