ದೇಶದ ಶೇ.67ರಷ್ಟು ಜನರಲ್ಲಿ ಕೊರೊನಾ ಪ್ರತಿಕಾಯ ಸೃಷ್ಟಿ; ಇನ್ನೂ 40 ಕೋಟಿ ಜನರಿಗಿದೆ ಸೋಂಕಿನ ಅಪಾಯ!

ಈ ಸಮೀಕ್ಷೆಯು ನಮಗೆ ಆಶಾಕಿರಣವಾಗಿದೆ ಎಂದಿರುವ ಐಸಿಎಂಆರ್‌ ಮುಖ್ಯಸ್ಥ ಡಾ. ಬಲರಾಮ್‌ ಭಾರ್ಗವ, ಹಾಗಂತ ಕೊರೊನಾ ತಡೆ ಮುನ್ನೆಚ್ಚರಿಕೆ ಕ್ರಮಗಳ ನಿರ್ಲಕ್ಷ್ಯ ಬೇಡ ಎಂದು ಕಿವಿಮಾತು ಹೇಳಿದ್ದಾರೆ.

ದೇಶದ ಶೇ.67ರಷ್ಟು ಜನರಲ್ಲಿ ಕೊರೊನಾ ಪ್ರತಿಕಾಯ ಸೃಷ್ಟಿ; ಇನ್ನೂ 40 ಕೋಟಿ ಜನರಿಗಿದೆ ಸೋಂಕಿನ ಅಪಾಯ!
Linkup
ಹೊಸದಿಲ್ಲಿ: ದೇಶದಲ್ಲಿ ಆರು ವರ್ಷಕ್ಕೂ ಮೇಲ್ಪಟ್ಟ ಶೇ.68ರಷ್ಟು ಜನರ ದೇಹದಲ್ಲಿ ಕೊರೊನಾ ವೈರಾಣು ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗಿವೆ ಎಂದು ಕೇಂದ್ರ ಸರಕಾರ ನಡೆಸಿದ 4ನೇ ಸೆರೊ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಅಲ್ಲಿಗೆ, ಬಾಕಿ 40 ಕೋಟಿ ಜನರು ಈಗಲೂ ಸಾಂಕ್ರಾಮಿಕಕ್ಕೆ ತುತ್ತಾಗುವ ಅಪಾಯದಲ್ಲಿದ್ದಾರೆ ಎಂದು ಸಮೀಕ್ಷೆ ನಡೆಸಿದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಐಸಿಎಂಆರ್‌ ಮುಖ್ಯಸ್ಥ ಡಾ. ಬಲರಾಮ್‌ ಭಾರ್ಗವ ಅವರು, ''ಈ ಸಮೀಕ್ಷೆಯು ನಮಗೆ ಆಶಾಕಿರಣವಾಗಿದೆ. ಹಾಗಂತ ಕೊರೊನಾ ತಡೆ ಮುನ್ನೆಚ್ಚರಿಕೆ ಕ್ರಮಗಳ ನಿರ್ಲಕ್ಷ್ಯ ಬೇಡ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ ಕಡ್ಡಾಯ ಪಾಲನೆ ಇನ್ನೂ ಹಲವು ತಿಂಗಳು ಮುಂದುವರಿಯಲೇಬೇಕು,'' ಎಂದಿದ್ದಾರೆ. ಸಮೀಕ್ಷೆಯಲ್ಲಿ 8,691 ಮಕ್ಕಳ (6 ವರ್ಷದಿಂದ 17 ವರ್ಷದವರೆಗೆ ) ರಕ್ತದ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಆ ಪೈಕಿ ಶೇ. 50ರಷ್ಟು ಮಕ್ಕಳಲ್ಲಿ ಕೊರೊನಾ ನಿರೋಧಕ ಪ್ರತಿಕಾಯಗಳು ಇರುವುದು ಕಂಡುಬಂದಿರುವುದು ಸಮಾಧಾನಕರ ಸಂಗತಿಯಾಗಿದೆ. ಕೊರೊನಾ ಮೂರನೇ ಅಲೆಯು ಮಕ್ಕಳನ್ನು ಗುರಿಯಾಗಿಸಲಿದೆ ಎಂದು ತಜ್ಞರು ಎಚ್ಚರಿಸುತ್ತಿರುವ ನಡುವೆ ಹಲವು ಮಕ್ಕಳಲ್ಲಿ ಪ್ರತಿಕಾಯಗಳು ಈಗಾಗಲೇ ಉತ್ಪತ್ತಿ ಆಗಿರುವ ವಿಚಾರ ಪೋಷಕರಿಗೆ ಸಮಾಧಾನ ಮೂಡಿಸಿದೆ. 18 ವರ್ಷಕ್ಕೂ ಕಡಿಮೆ ವಯೋಮಾನದವರನ್ನು ಸೇರಿಸಿಕೊಂಡು ನಡೆಸಲಾದ ರಾಷ್ಟ್ರಮಟ್ಟದ ಮೊದಲ ಸಮೀಕ್ಷೆ ಇದಾಗಿದೆ. 21 ರಾಜ್ಯಗಳ 70 ಜಿಲ್ಲೆಗಳಲ್ಲಿ ನಡೆದ ಸಮೀಕ್ಷೆಯಲ್ಲಿ 36,227 ಜನ ಭಾಗವಹಿಸಿದ್ದರು. ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿಲ್ಲ! ಕೊರೊನಾ ಸೋಂಕಿನ ಎರಡನೇ ಅಲೆಯ ವೇಳೆ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಮ್ಲಜನಕದ ಕೊರತೆಯಿಂದ ಒಂದೇ ಒಂದು ಸಾವು ಕೂಡ ಸಂಭವಿಸಿಲ್ಲ ಎಂದು ಕೇಂದ್ರ ಸರಕಾರವು ರಾಜ್ಯಸಭೆಗೆ ತಿಳಿಸಿದೆ. ಮೊದಲ ಕೊರೊನಾ ಅಲೆಯ ವೇಳೆ ನಿತ್ಯ 3,095 ಮೆಟ್ರಿಕ್‌ ಟನ್‌ ಆಮ್ಲಜನಕದ ಬೇಡಿಕೆಯಿತ್ತು. ಆದರೆ ಎರಡನೇ ಅಲೆಯ ವೇಳೆ ಆಮ್ಲಜನಕದ ಬೇಡಿಕೆಯು 9,000 ಮೆಟ್ರಿಕ್‌ ಟನ್‌ ಮುಟ್ಟಿತ್ತು. ಇದಕ್ಕೆ ಸೂಕ್ತ ವ್ಯವಸ್ಥೆಯನ್ನು ಕೇಂದ್ರ ಸರಕಾರ ಕಲ್ಪಿಸಿತ್ತು ಎಂದು ಆರೋಗ್ಯ ಸಚಿವಾಲಯ ಸಹಾಯಕ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ತಿಳಿಸಿದ್ದಾರೆ.