ದಿಲ್ಲಿಯಲ್ಲಿ ರೆಸ್ಟೋರೆಂಟ್, ಬಾರ್ ಕ್ಲೋಸ್: ವರ್ಕ್ ಫ್ರಂ ಹೋಮ್‌ಗೆ ಖಾಸಗಿ ಕಚೇರಿಗಳಿಗೆ ಆದೇಶ

ರಾಜಧಾನಿ ದಿಲ್ಲಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ. ಎರಡನೇ ಅಲೆಯಲ್ಲಿ ಕಂಡಿದ್ದಷ್ಟೇ ಪ್ರಕರಣಗಳ ಪ್ರತಿದಿನ ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ಕಚೇರಿಗಳಿಗೆ ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡುವಂತೆ ಆದೇಶಿಸಲಾಗಿದೆ.

ದಿಲ್ಲಿಯಲ್ಲಿ ರೆಸ್ಟೋರೆಂಟ್, ಬಾರ್ ಕ್ಲೋಸ್: ವರ್ಕ್ ಫ್ರಂ ಹೋಮ್‌ಗೆ ಖಾಸಗಿ ಕಚೇರಿಗಳಿಗೆ ಆದೇಶ
Linkup
ಹೊಸದಿಲ್ಲಿ: ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡಿರುವ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸೋಂಕು ನಿಯಂತ್ರಣಕ್ಕೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ರೆಸ್ಟೋರೆಂಟ್ ಹಾಗೂ ಬಾರ್‌ಗಳನ್ನು ಮುಚ್ಚುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ಆದೇಶಿಸಿದೆ. ಜತೆಗೆ ಅಗತ್ಯ ಸೇವೆಗಳಲ್ಲಿ ತೊಡಗಿರುವ ಕಂಪೆನಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಖಾಸಗಿ ಕಚೇರಿಗಳೂ ವರ್ಕ್ ಫ್ರಂ ಹೋಮ್ (WFH) ವ್ಯವಸ್ಥೆಗೆ ಬದಲಾಗಬೇಕು ಎಂದು ಸೂಚಿಸಿದೆ. ಖಾಸಗಿ ಕಚೇರಿಗಳು ತಮ್ಮ ಅರ್ಧದಷ್ಟು ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಲು ಈ ಮೊದಲು ಅವಕಾಶ ನೀಡಲಾಗಿತ್ತು. ಸರ್ಕಾರಿ ಆಸ್ಪತ್ರೆಗಳು ಶೇ 50ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆ ಮುಂದುವರಿಸಬಹುದಾಗಿದೆ. ಖಾಸಗಿ ಬ್ಯಾಂಕ್‌ಗಳು, ಅಗತ್ಯ ಸೇವೆಗಳನ್ನು ಒದಗಿಸುವ ಕಂಪೆನಿಗಳು, ವಿಮಾ ಕಂಪೆನಿಗಳು, ಔಷಧ ಕಂಪೆನಿಗಳು, ಸಣ್ಣ ಹಣಕಾಸು ಕಂಪೆನಿಗಳು ವಕೀಲರ ಕಚೇರಿಗಳು ಮತ್ತು ಕೊರಿಯರ್ ಸೇವೆಗಳಿಗೆ ಹೊಸ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಸೋಮವಾರ ಆದೇಶ ಹೊರಡಿಸಿದ್ದ ಡಿಡಿಎಂಎ, ಎಲ್ಲ ರೆಸ್ಟೋರೆಂಟ್ ಹಾಗೂ ಬಾರ್‌ಗಳನ್ನು ಮುಚ್ಚಲು ಆದೇಶಿಸಿತ್ತು. ಪಾರ್ಸೆಲ್ ಕೊಂಡೊಯ್ಯಲು ಹಾಗೂ ಹೋಮ್ ಡೆಲಿವರಿ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ನಗರದಲ್ಲಿ ಕೋವಿಡ್ ಪ್ರಕರಣಗಳು ಉತ್ತುಂಗಕ್ಕೆ ತಲುಪಲಿವೆ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ. 'ನಗರದಲ್ಲಿ ಇನ್ನು ಒಂದು ಅಥವಾ ಎರಡು ದಿನಗಳಲ್ಲಿ, ಖಂಡಿತವಾಗಿಯೂ ಇದೇ ವಾರ ಪ್ರಕರಣಗಳು ಉತ್ತುಂಗಕ್ಕೆ ತಲುಪಬಹುದು. ಅದರ ಬಳಿಕ ಮೂರನೇ ಅಲೆಯ ಸೋಂಕು ಕಡಿಮೆಯಾಗಬಹುದು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ' ಗರಿಷ್ಠ ಮಟ್ಟ ಬಂದಿದೆ ಅಥವಾ ಇನ್ನು ಒಂದೆರಡು ದಿನಗಳಲ್ಲಿ ಬರಲಿದೆ. ಅದು ಈ ವಾರವಂತೂ ಉಂಟಾಗುವುದು ನಿಶ್ಚಿತ. ಪ್ರಕರಣಗಳು ಅದರ ಬಳಿಕ ಇಳಿಕೆಯಾಗಲು ಶುರುವಾಗುತ್ತದೆ. ಆದರೆ, ಜನರು ತಮ್ಮ ರಕ್ಷಣಾ ಸೂಚನೆಗಳನ್ನು ಕಡಿಮೆ ಮಾಡಬಾರದು ಎಂದು ಜನರಿಗೆ ನೆನಪಿಸಲು ನಾವು ಇನ್ನೊಂದು ಕರ್ಫ್ಯೂ ಹೇರಿಕೆ ಮಾಡುವ ಸಾಧ್ಯತೆ ಇದೆ' ಎಂದು ತಿಳಿಸಿದ್ದಾರೆ. ದಿಲ್ಲಿಯಲ್ಲಿ ಭಾನುವಾರ 22,751 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದವು. ಸೋಮವಾರ 19,000 ಹೊಸ ಪ್ರಕರಣ ದಾಖಲಾಗಿವೆ. ರಾಜಧಾನಿಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗುವ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಕೋವಿಡ್ ದೃಢಪಡುತ್ತಿದೆ. ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳು ಇಲ್ಲಿ ಇಳಿಯುವುದರಿಂದ ದಿಲ್ಲಿಯಲ್ಲಿ ಕೋವಿಡ್ ಕೇಸ್‌ಗಳು ಹೆಚ್ಚು. ಈ ಕಾರಣದಿಂದಲೇ ದಿಲ್ಲಿಯಲ್ಲಿ ಹೆಚ್ಚುತ್ತಿದೆ. ಆದರೆ ಆಸ್ಪತ್ರೆ ದಾಖಲೀಕರಣ ಬಹಳ ಕಡಿಮೆ ಇರುವುದು ಸಮಾಧಾನಕರ ಸಂಗತಿ. ಪ್ರತಿ ದಿನ ಸುಮಾರು 20,000 ಪ್ರಕರಣ ದಾಖಲಾಗುತ್ತಿದ್ದರೂ, ಆಸ್ಪತ್ರೆ ಹಾಸಿಗೆಗಳು 2,000ದಷ್ಟು ಮಾತ್ರ ಭರ್ತಿಯಾಗುತ್ತಿವೆ. ಕೋವಿಡ್ ರೋಗಿಗಳಿಗೆ ಮೀಸಲಾಗಿಸಿರುವ ಇನ್ನೂ 12,000 ಹಾಸಿಗೆಗಳು ಖಾಲಿ ಉಳಿಯುತ್ತಿವೆ. ಕಳೆದ ಅಲೆ ವೇಳೆ ಪ್ರತಿದಿನ 20 ಸಾವಿರ ಪ್ರಕರಣ ದಾಖಲಾದಾಗ, ಕನಿಷ್ಠ 12,000 ದಿಂದ 13,000 ಹಾಸಿಗೆಗಳು ಭರ್ತಿಯಾಗಿದ್ದವು ಎಂದು ಸತ್ಯೇಂದರ್ ಜೈನ್ ತಿಳಿಸಿದ್ದಾರೆ.