ದೊಡ್ಡಣ್ಣ ಕುರಿತು ಹರಿದಾಡಿತು ಸುಳ್ಳು ಸುದ್ದಿ! ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಹಿರಿಯ ನಟ!

ಹಿರಿಯ ಕಲಾವಿದರ ಬಗ್ಗೆ ಆಗಾಗ ಫೇಕ್‌ ಸುದ್ದಿಗಳನ್ನು ಹರಿಬಿಡುವುದು ಹೊಸದೇನಲ್ಲ. ಕೆಲವೊಮ್ಮೆ ಕಿಡಿಗೇಡಿಗಳು ಇಂಥ ವಿಕೃತಿಯನ್ನು ಮೆರೆಯುತ್ತಿರುತ್ತಾರೆ. ಸಾವಿನ ಕುರಿತು ಸಾಮಾಜಿಕ ಮೀಡಿಯಾದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿಬಿಡುತ್ತಾರೆ.

ದೊಡ್ಡಣ್ಣ ಕುರಿತು ಹರಿದಾಡಿತು ಸುಳ್ಳು ಸುದ್ದಿ! ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಹಿರಿಯ ನಟ!
Linkup
ಕೊರೊನಾ ಎರಡನೇ ಅಲೆಯಿಂದಾಗಿ ಈಗಾಗಲೇ ದೇಶದ್ಯಾಂತ ನೋವಿನ ವಾತಾವರಣ ಇದೆ. ನಮ್ಮ ರಾಜ್ಯದಲ್ಲಂತೂ ಭಾರಿ ಪ್ರಮಾಣದದಲ್ಲಿ ಕೊರೊನಾ ಹೊಸ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ, ಎರಡನೇ ಅಲೆಯಿಂದಾಗಿ ಒಂದು ರೀತಿಯಲ್ಲಿ ಎಲ್ಲೆಡೆ ಸೂತಕವಾದ ವಾತಾವರಣ ಇದೆ. ಇಂತಹ ಒಂದು ಸಂಕಟದ ಸಮಯದಲ್ಲೇ ಹಿರಿಯ ನಟ ಅವರ ಕುರಿತು ಇಂದು ಒಂದು ವದಂತಿ ಹರಿದಾಡಿತು. ಅದೇನೆಂದರೆ, 'ದೊಡ್ಡಣ್ಣ ನಿಧನರಾಗಿದ್ದಾರೆ' ಎಂದು. ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಣ್ಣ ಅವರ ಫೋಟೋಗಳನ್ನು ಶೇರ್ ಮಾಡಿಕೊಂಡು, ಕೆಲವರು RIP ಅಂತ ಶ್ರದ್ಧಾಂಜಲಿ ಕೋರಿದ್ದೂ ಆಗಿತ್ತು! ಆದರೆ, ಇದೆಲ್ಲ ಸುಳ್ಳು. ತಮ್ಮ ಬಗ್ಗೆ ಇಂಥದ್ದೊಂದು ಆಘಾತಕಾರಿ ವದಂತಿ ಹಬ್ಬಿದ್ದೇ ತಡ ನಟ ದೊಡ್ಡಣ್ಣ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 'ಇದೆಲ್ಲ ಶುದ್ಧ ಸುಳ್ಳು, ನಾನು ಆರೋಗ್ಯವಾಗಿದ್ದೇನೆ' ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗೊಂದು ಸುದ್ದಿ ಹರಿದಾಡಲು ಶುರುವಾಗುತ್ತಿದ್ದಂತೆಯೇ, ಅನೇಕ ಆತ್ಮೀಯರು, ಸ್ನೇಹಿತರು, ಪತ್ರಕರ್ತರು ದೊಡ್ಡಣ್ಣಗೆ ಕರೆ ಮಾಡಿ, ವಿಚಾರಿಸಿದ್ದಾರೆ. ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ. ನಂತರ ಈ ಬಗ್ಗೆ ಸ್ಪಷ್ಟನೆ ನೀಡುವ ಸಲುವಾಗಿಯೇ ದೊಡ್ಡಣ್ಣ ಒಂದು ವಿಡಿಯೋವನ್ನು ಬಿಡುಗಡೆ ಮಾಡಿದರು. 'ಕನ್ನಡ ನಾಡಿನ ಎಲ್ಲ ನನ್ನ ತಂದೆ ತಾಯಿಗಳಿಗೆ ದೊಡ್ಡಣ್ಣ ನಮಸ್ಕಾರಗಳು... ಈ ವಿಡಿಯೋ ಮಾಡಿದ್ದರ ಉದ್ದೇಶ ಏನೆಂದರೆ, ಇಂದು (ಮೇ 5) ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾರೋ ಕಿಡಿಗೇಡಿಗಳು ನನ್ನ ಫೋಟೋ ಹಾಕಿ RIP ಅಂತ ಬರೆದಿದ್ದರು. ಅದನ್ನು ನೋಡಿದವರು ದೊಡ್ಡಣ್ಣ ನಿಧನರಾಗಿದ್ದಾರೆ ಎಂದು ಸುದ್ದಿ ಹರಿದಾಡಿದೆ. ಮಾಧ್ಯಮ ಮಿತ್ರರು, ನನ್ನ ಗೆಳೆಯರು, ಅಭಿಮಾನಿಗಳು ಕರೆ ಮಾಡುತ್ತಿದ್ದಾರೆ. ನಾನು ಮನೆಯಲ್ಲೇ ಇದ್ದೇನೆ. ಆರೋಗ್ಯವಾಗಿದ್ದೇನೆ. ಯಾರೂ ಭಯಪಡುವ ಅಗತ್ಯವಿಲ್ಲ. ಕನ್ನಡ ನಾಡಿನ ತಂದೆ-ತಾಯಿಗಳ ಆಶೀರ್ವಾದ ಇರುವ ತನಕ ನಿಮ್ಮ ದೊಡ್ಡಣ್ಣಗೆ ಏನೂ ಆಗಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ ದೊಡ್ಡಣ್ಣ.