ತಮಿಳುನಾಡು: ಡಿಎಂಕೆ ಬೆಂಬಲಿಗರಿಂದ ಅಮ್ಮಾ ಕ್ಯಾಂಟೀನ್‌ನಲ್ಲಿ ದಾಂಧಲೆ

ತಮಿಳುನಾಡಿನ ಚೆನ್ನೈನಲ್ಲಿ ಡಿಎಂಕೆಯ ಇಬ್ಬರು ಸದಸ್ಯರು ಜಯಲಲಿತಾ ಅವರ ಕನಸಿನ ಕೂಸು ಅಮ್ಮಾ ಕ್ಯಾಂಟೀನ್‌ನಲ್ಲಿ ದಾಂಧಲೆ ನಡೆಸಿ, ತರಕಾರಿಗಳನ್ನು ಎಸೆದಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆದ ಬಳಿಕ ಡಿಎಂಕೆ ಇಬ್ಬರನ್ನೂ ಪಕ್ಷದಿಂದ ಉಚ್ಚಾಟನೆ ಮಾಡಿದೆ.

ತಮಿಳುನಾಡು: ಡಿಎಂಕೆ ಬೆಂಬಲಿಗರಿಂದ ಅಮ್ಮಾ ಕ್ಯಾಂಟೀನ್‌ನಲ್ಲಿ ದಾಂಧಲೆ
Linkup
ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿರುವ ಜೆಜೆ ನಗರದಲ್ಲಿ ಕಾರ್ಯಕರ್ತರು ಮಂಗಳವಾರ ಬೆಳಿಗ್ಗೆ ಅಮ್ಮಾ ಕ್ಯಾಂಟೀನ್‌ನಲ್ಲಿ ದಾಂಧಲೆ ನಡೆಸಿದೆ. ಕ್ಯಾಂಟೀನ್‌ನ ನಾಮಫಲಕಗಳನ್ನು ತುಂಡುಮಾಡಿ, ತರಕಾರಿಗಳನ್ನು ನೆಲಕ್ಕೆ ಎಸೆದು ರಂಪಾಟ ಎಸಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಭರ್ಜರಿ ಬಹುಮತದ ಫಲಿತಾಂಶ ಪಡೆದ ಎರಡೇ ದಿನದಲ್ಲಿ ಈ ಘಟನೆ ನಡೆದಿದೆ. ಜನಸಾಮಾನ್ಯರಿಗೆ ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಸಲುವಾಗಿ ನಾಯಕಿ ಜೆ. ಜಯಲಲಿತಾ ಅವರು 2013ರಲ್ಲಿ ಅಮ್ಮಾ ಕ್ಯಾಂಟೀನ್‌ಗಳನ್ನು ಆರಂಭಿಸಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಕಿಡಿಗೇಡಿಗಳು ಕ್ಯಾಂಟೀನ್ ಒಳಗೆ ನುಗ್ಗಿ ಆಟಾಟೋಪ ಪ್ರದರ್ಶಿಸಿದ್ದಾರೆ. ಈ ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜನರು ಪ್ರತಿಭಟನೆ ನಡೆಸಿದ್ದಾರೆ. 'ದಾಂಧಲೆ ನಡೆಸಿದ ಇಬ್ಬರು ಆರೋಪಿಗಳ ವಿರುದ್ಧ ನಾವು ಪೊಲೀಸರಿಗೆ ದೂರು ನೀಡಿದ್ದು, ಅವರನ್ನು ಬಂಧಿಸಲಾಗಿದೆ' ಎಂದು ಚೆನ್ನೈನ ಮಾಜಿ ಮೇಯರ್ ಮತ್ತು ಡಿಎಂಕೆ ನಾಯಕ ಮಾ ಸುಬ್ರಮಣಿಯನ್ ತಿಳಿಸಿದ್ದಾರೆ. ಆ ಇಬ್ಬರನ್ನೂ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಆದೇಶಿಸಿದ್ದಾರೆ. ಕ್ಯಾಂಟೀನ್ ಫಲಕಗಳನ್ನು ಯಥಾಸ್ಥಿತಿಗೆ ತರಲಾಗಿದೆ. ಅವರಿಬ್ಬರೂ ಪಕ್ಷದಲ್ಲಿ ಯಾವುದೇ ಹುದ್ದೆ ಹೊಂದಿರಲಿಲ್ಲ. ಅವರು ಸಾಮಾನ್ಯ ಸದಸ್ಯರಾಗಿದ್ದರು ಮತ್ತು ಅವರನ್ನು ಹೊರಹಾಕಲಾಗಿದೆ. ಎಐಎಡಿಎಂಕೆ ಕೂಡ ಈ ಘಟನೆಯ ಚಿತ್ರಗಳನ್ನು ಹಂಚಿಕೊಂಡಿದೆ. ಜಯಲಲಿತಾ ಅವರ ಫೋಟೊ, ತರಕಾರಿ ಮತ್ತು ಕೆಲವು ಪಾತ್ರೆಗಳು ಕ್ಯಾಂಟೀನ್‌ನ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದರನ್ನು ಇದು ತೋರಿಸಿದೆ.