ಡಿಸಿಗಳ ಗ್ರಾಮ ವಾಸ್ತವ್ಯ 'ಬಂದ ಸಿದ್ಧ ಹೋದ ಸಿದ್ಧ' ಎನ್ನುವಂತಾಗಬಾರದು: ಸಚಿವ ಅಶೋಕ್‌

ಪ್ರಜಾಪ್ರಭುತ್ವ ಎಂದರೆ ಜನರೇ ಎಲ್ಲ, ಅಧಿಕಾರಿಗಳು ಗ್ರಾಮದ ಕಡೆ ಬರಬೇಕು. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸರಕಾರದಲ್ಲಿ ಅದು ಹಾಗೆ ಆಗುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗ್ರಾಮ ವಾಸ್ತವ್ಯ ನಡೆಯುತ್ತಿದೆ.

ಡಿಸಿಗಳ ಗ್ರಾಮ ವಾಸ್ತವ್ಯ 'ಬಂದ ಸಿದ್ಧ ಹೋದ ಸಿದ್ಧ' ಎನ್ನುವಂತಾಗಬಾರದು: ಸಚಿವ ಅಶೋಕ್‌
Linkup
ಬೆಂಗಳೂರು: ಗ್ರಾಮ ವಾಸ್ತವ್ಯ ಎಂದರೆ ಬಂದ ಸಿದ್ಧ ಹೋದ ಸಿದ್ಧ ಆಗಬಾರದು, ಅಧಿಕಾರಿಗಳು ಅಂಗನವಾಡಿಯಲ್ಲೇ ಮಲಗಬೇಕು, ಅಲ್ಲಿಯ ಊಟವನ್ನೇ ತಿನ್ನಬೇಕು ಎಂದು ಆರ್‌ ಅಶೋಕ್‌ ತಾಕೀತು ಮಾಡಿದರು. ಪ್ರಜಾಪ್ರಭುತ್ವ ಎಂದರೆ ಜನರೇ ಎಲ್ಲ, ಅಧಿಕಾರಿಗಳು ಗ್ರಾಮದ ಕಡೆ ಬರಬೇಕು. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸರಕಾರದಲ್ಲಿ ಅದು ಹಾಗೆ ಆಗುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗ್ರಾಮ ವಾಸ್ತವ್ಯ ನಡೆಯುತ್ತಿದೆ. 60 ವರ್ಷ ಆದ ಎಲ್ಲ ಹಿರಿಕರೂ ತಾಲೂಕು ಕಚೇರಿಗೆ ಬರಬಾರದು. ಮನೆ ಬಾಗಿಲಲ್ಲಿ ಅವರಿಗೆ ಎಲ್ಲ ಸೌಲಭ್ಯ ಸಿಗುವಂತಾಗಬೇಕು ಎಂದರು. ರಾಜ್ಯದ 227 ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ನಡೆಯುತ್ತಿದೆ. ಡಿಸಿ, ಎಸಿ, ತಹಸೀಲ್ದಾರ್‌, ರೆವಿನ್ಯೂ ಅಧಿಕಾರಿಗಳು ಹಳ್ಳಿಗಳಿಗೆ ಹೋಗಿದ್ದಾರೆ. ಯಾವುದೇ ದಾಖಲೆ ಕೇಳದೆ, ಜನರನ್ನು ಓಡಾಡಿಸದೆ ತಮ್ಮ ಬಳಿಯೇ ಇರುವ ಆಧಾರ್‌ ಕಾರ್ಡ್‌ ಆಧರಿಸಿ ಆದೇಶ ಪತ್ರ ನೀಡಬೇಕು ಎಂದು ಅಧಿಕಾರಿಗಳಿಗೆ ಸಚಿವ ಆರ್‌ ಅಶೋಕ್‌ ಸುದ್ದಿಗಾರರಿಗೆ ತಿಳಿಸಿದರು. ಬೆಳಗಾವಿ: ಗ್ರಾಮ ವಾಸ್ತವ್ಯದ ವೇಳೆಯೇ ಬಸ್‌ ತಡೆ ಜಿಲ್ಲಾಧಿಕಾರಿ ಅವರು ಗ್ರಾಮ ವಾಸ್ತವ್ಯಕ್ಕೆ ಬಂದಿದ್ದ ದಿನವೇ ವೀರಾಪುರ ಗ್ರಾಮದ ವಿದ್ಯಾರ್ಥಿಗಳು ಸಮರ್ಪಕ ಬಸ್‌ ಸಂಚಾರ ಆರಂಭಿಸುವಂತೆ ಗ್ರಾಮಕ್ಕೆ ಬಂದ ಬಸ್‌ ತಡೆದು ಪ್ರತಿಭಟಿಸಿದ್ದಾರೆ. ಕಿತ್ತೂರು ತಾಲೂಕಿನ ಕೊನೆಯ ಗ್ರಾಮವಾಗಿರುವ ವೀರಾಪುರ ಗ್ರಾಮಕ್ಕೆ ಬೆಳಗ್ಗೆ ಮಾತ್ರ ಒಂದು ಬಸ್‌ ಬಂದು ಹೋಗುತ್ತಿತ್ತು. ಅನೇಕ ಬಾರಿ ಮನವಿ ಮಾಡಿದರೂ ಬಸ್‌ ಸೌಲಭ್ಯ ಹೆಚ್ಚಿಸಿರಲಿಲ್ಲ. ಹಾಗಾಗಿ ಗ್ರಾಮದ ವಿದ್ಯಾರ್ಥಿಗಳು ಶನಿವಾರ ಬೆಳಗ್ಗೆ ಗ್ರಾಮಕ್ಕೆ ಬಂದ ಬಸ್‌ ತಡೆದು ಪ್ರತಿಭಟಿಸಿದರು. ಗ್ರಾಮಕ್ಕೆ ಹೆಚ್ಚಿನ ಬಸ್‌ ಸಂಚಾರ ಆರಂಭಿಸಬೇಕು ಎಂದು ಒತ್ತಾಯ ಮಾಡಿದರು. ಜಿಲ್ಲಾಧಿಕಾರಿ ಜತೆಗೆ ಗ್ರಾಮ ವಾಸ್ತವ್ಯಕ್ಕೆ ಬಂದಿದ್ದ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ದಿನಕ್ಕೆ ಐದು ಬಾರಿ ಬಸ್‌ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಮೌಖಿಕ ಭರವಸೆ ಒಪ್ಪದ ವಿದ್ಯಾರ್ಥಿಗಳು ಲಿಖಿತವಾಗಿ ನೀಡುವಂತೆ ಪಟ್ಟು ಹಿಡಿದರು. ಬಳಿಕ ಈ ಕುರಿತು ಲಿಖಿತ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಕೂಡ ಪ್ರತಿಭಟನೆ ಹಿಂಪಡೆದರು.