Paytm: ಷೇರು ಮಾರುಕಟ್ಟೆ ಪ್ರವೇಶಿಸಿದ ಪೇಟಿಎಂಗೆ ನಿರಾಶಾದಾಯಕ ಸ್ವಾಗತ!

ದೇಶದ ಅತಿ ದೊಡ್ಡ ಐಪಿಒ ಎನಿಸಿರುವ ಪೇಟಿಎಂ ಗುರುವಾರ ಷೇರು ವಿನಿಮಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಆರಂಭಿಕ ಷೇರು 2150 ರೂಪಾಯಿ ಮೇಲೆ ಶೇ 9.3ರ ರಿಯಾಯಿತಿಯೊಂದಿಗೆ ಅದು ಪದಾರ್ಪಣೆ ಮಾಡಿದೆ. ಇದು ಐಪಿಒ ಹೂಡಿಕೆದಾರರಲ್ಲಿ ನಿರಾಶೆ ಮೂಡಿಸಿದೆ.

Paytm: ಷೇರು ಮಾರುಕಟ್ಟೆ ಪ್ರವೇಶಿಸಿದ ಪೇಟಿಎಂಗೆ ನಿರಾಶಾದಾಯಕ ಸ್ವಾಗತ!
Linkup
ಹೊಸದಿಲ್ಲಿ: ದೇಶದ ಪ್ರಮುಖ ಡಿಜಿಟಲ್ ಪಾವತಿ ಸಂಸ್ಥೆ ಗುರುವಾರ ಷೇರು ವಿನಿಮಯ ಮಾರುಕಟ್ಟೆ ಪ್ರವೇಶಿಸಿದೆ. ಆದರೆ ಅದರ ಪದಾರ್ಪಣೆ ಸಾಕಷ್ಟು ಕುತೂಹಲ ಮೂಡಿಸಿದ್ದರೂ, ಗಮನ ಸೆಳೆಯುವ ಆರಂಭ ಪಡೆದುಕೊಂಡಿಲ್ಲ. ಪೇಟಿಎಂ ಪೋಷಕ ಸಂಸ್ಥೆಯಾದ ಎನ್‌ಎಸ್‌ಇ ದಲ್ಲಿ 1,950 ರೂ ದರದಲ್ಲಿ ಹಾಗೂ ಬಿಎಸ್‌ಇಯಲ್ಲಿ 1955 ರೂ ದರದಲ್ಲಿ ಆರಂಭಿಕ ವಹಿವಾಟಿನೊಂದಿಗೆ ನಿರಾಶೆ ಮೂಡಿಸಿದೆ. ಪೇಟಿಎಂ ಪ್ರವೇಶವು 2,150 ರೂಪಾಯಿಯೊಂದಿಗೆ ಆರಂಭವಾಗಿತ್ತು. ಆದರೆ 200 ರೂಪಾಯಿ (ಶೇ 9.3) ರಿಯಾಯಿತಿಯೊಂದಿಗೆ 1955 ರೂಪಾಯಿಯಲ್ಲಿ ಟ್ರೇಡಿಂಗ್ ಆರಂಭಿಸಿತ್ತು. ಷೇರು ಮಾರುಕಟ್ಟೆ ಪ್ರವೇಶಸಿದ 15 ನಿಮಿಷದಲ್ಲಿಯೇ ಅದು ಶೇ 20ರಷ್ಟು ಕುಸಿತ ಕಂಡಿತ್ತು. ಬೆಳಿಗ್ಗೆ 10 ಗಂಟೆಗೆ ಲಿಸ್ಟಿಂಗ್ ಆದ ಷೇರುಗಳು 10.25ರ ವೇಳೆಗೆ 1701 ರೂಪಾಯಿಗೆ ಕುಸಿದಿತ್ತು. ಮಧ್ಯಾಹ್ನ 12 ಗಂಟೆ ವೇಳೆಗೆ ಅದರ ಷೇರು ಮೌಲ್ಯ 1655.20 ರೂಪಾಯಿಗೆ ಇಳಿಕೆಯಾಗಿತ್ತು. ಒನ್ 97 ಕಮ್ಯುನಿಕೇಷನ್‌ನ ಆರಂಭಿಕ ಷೇರು ಮಾರಾಟದ ಸಬ್‌ಸ್ಕ್ರಿಪ್ಷನ್ ನವೆಂಬರ್ 8 ರಿಂದ 10ರ ನಡುವೆ ನಡೆದಿತ್ತು. ಆಗ ಕಂಪೆನಿಯು ಷೇರುಗಳನ್ನು 2080 ರಿಂದ 2150ರ ಪ್ರಮಾಣದಲ್ಲಿ ಮಾರಾಟ ಮಾಡಿತ್ತು. ಷೇರು ಮಾರುಕಟ್ಟೆಗೆ ಅಡಿಯಿಟ್ಟ ಪ್ರಾರಂಭದಲ್ಲಿ 1.89 ಪಟ್ಟು ಹೆಚ್ಚಿನ ಸಬ್‌ಸ್ಕ್ರೈಬ್‌ನೊಂದಿಗೆ ಹೂಡಿಕೆದಾರರಿಂದ ಸಾಧಾರಣೆ ಸ್ಪಂದನೆ ಸಿಕ್ಕಿತ್ತು. ಅರ್ಹತೆ ಪಡೆದ ಸಂಸ್ಥೆಗೆ 2.79 ಪಟ್ಟು ಸಬ್‌ಸ್ಕ್ರೈಬ್ ಕೋಟಾ ನಿಗದಿಪಡಿಸಲಾಗಿದೆ. ಇದರಲ್ಲಿ ಚಿಲ್ಲರೆ ಹೂಡಿಕೆದಾರರ ಭಾಗವು 1.66 ಪಟ್ಟು ಇದೆ. ಸಾಂಸ್ಥಿಕೇತರ ಹೂಡಿಕೆದಾರರ ಕೋಟಾವು ಶೇ 24ರಷ್ಟು ಸಬ್‌ಸ್ಕ್ರೈಬ್ ಮಾತ್ರ ಇರುತ್ತದೆ. ಆದರೆ ಗ್ರೇ ಮಾರ್ಕೆಟ್‌ನಲ್ಲಿ ಕಂಪೆನಿಯು 25 ರಿಂದ 35 ರೂ ರಿಯಾಯಿತಿಯೊಂದಿಗೆ ವಿನಿಮಯ ಹೊಂದಿರುವುದರಿಂದ ಪೇಟಿಎಂ ಷೇರುಗಳು ನಿರೀಕ್ಷಿತ ಸರದಿಯಲ್ಲಿ ಲಿಸ್ಟಿಂಗ್ ಆಗಿವೆ. 18,300 ಕೋಟಿ ರೂ ಮೊತ್ತದ ಪೇಟಿಎಂ ದೇಶದ ಷೇರು ಮಾರುಕಟ್ಟೆ ಇತಿಹಾಸದಲ್ಲಿಯೇ ಅತಿ ದೊಡ್ಡ ಐಪಿಒ ಆಗಿದೆ. ಷೇರು ಮಾರುಕಟ್ಟೆ ಲಿಸ್ಟಿಂಗ್‌ಗೂ ಮುನ್ನ ಅದು 8,235 ಕೋಟಿ ರೂ ಮೊತ್ತದ ಷೇರುಗಳನ್ನು ಸಾಂಸ್ಥಿಕ ಹೂಡಿಕೆದಾರರಲ್ಲಿ ಹಂಚಿಕೆ ಮಾಡಿತ್ತು. ಆದರೆ ಪೇಟಿಎಂ ನಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅದರ ಸುಮಾರು 1.40 ಲಕ್ಷ ಕೋಟಿ ರೂ ಮೌಲ್ಯದ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ. ಪೇಟಿಎಂಗೆ ಇರುವ ಸಮಸ್ಯೆ ಏನು?ಪೇಟಿಎಂನ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್‌ಗೆ ವಿದೇಶಿ ದಲ್ಲಾಳಿ ಸಂಸ್ಥೆ ಮ್ಯಾಕ್ವಾರಿ ಕಡಿಮೆ ರೇಟಿಂಗ್ ನೀಡಿತ್ತು. ಪೇಟಿಎಂನ ಆರಂಭಿಕ ದರ 2,150ಕ್ಕಿಂತ ಶೇ 44ರಷ್ಟು ಕಡಿಮೆ, ಅಂದರೆ 1,200 ರೂ ಗುರಿಯನ್ನು ನಿಗದಿಪಡಿಸಿತ್ತು. ಪೇಟಿಎಂನ ವ್ಯಾವಹಾರಿಕ ಮಾದರಿಯು ಗಮನ ಹಾಗೂ ನಿರ್ದೇಶನದ ಕೊರತೆ ಎದುರಿಸುತ್ತಿದೆ ಎಂದು ವ್ಯಾಖ್ಯಾನಿಸಿದ್ದ ಮ್ಯಾಕ್ವಾರಿ, ಕಂಪೆನಿಯು ಅತಿ ಆಸೆಯಿಂದ ಹಣವನ್ನು ಸ್ವಾಹ ಮಾಡುವಂತದ್ದಾಗಿದೆ ಎಂದು ಹೇಳಿತ್ತು. ಪೇಟಿಎಂ ಲಾಭ ಪಡೆಯುವುದು ದೊಡ್ಡ ಸವಾಲಾಗಿದ್ದು, ನಿಯಂತ್ರಣ ನಿಯಮಗಳು ಹಾಗೂ ಸ್ಪರ್ಧೆಗಳು ಇದಕ್ಕೆ ಮತಷ್ಟು ತೊಡಕಾಗಿವೆ. ಪೇಟಿಎಂ ಮಾಡುವ ಕೆಲಸವನ್ನು ಇತರೆ ದೊಡ್ಡ ಆರ್ಥಿಕತೆ ಸಂಸ್ಥೆಗಳಾದ ಅಮೇಜಾನ್, ಫ್ಲಿಪ್‌ಕಾರ್ಟ್, ಗೂಗಲ್ ಮುಂತಾದವು ಕೂಡ ಮಾಡುತ್ತಿವೆ. ಬಿಎನ್‌ಪಿಎಲ್ (ಮೊದಲು ಕೊಳ್ಳಿ, ನಂತರ ಪಾವತಿಸಿ) ಕ್ಷೇತ್ರದಲ್ಲಿ ಮತ್ತು ವಿವಿಧ ಆರ್ಥಿಕ ಉತ್ಪನ್ನಗಳ ಹಂಚಿಕೆಯಲ್ಲಿನ ಸ್ಪರ್ಧೆ ಸ್ಪಷ್ಟವಾಗಿದೆ ಎಂದು ಅದು ತಿಳಿಸಿತ್ತು. ಆಸಕ್ತಿ ತೋರಿಸಿದ್ದ ಹೂಡಿಕೆದಾರರುರಾಷ್ಟ್ರೀಯ ಷೇರು ಮಾರುಕಟ್ಟೆ (ಎನ್‌ಎಸ್‌ಇ) ದಾಖಲೆಗಳ ಪ್ರಕಾರ ಪೇಟಿಎಂ ಷೇರುಗಳಿಗೆ 1.66 ಪಟ್ಟು ಹೆಚ್ಚಿನ ಚಿಲ್ಲರೆ ಹೂಡಿಕೆದಾರರು, 2.79 ಪಟ್ಟು ಅರ್ಹ ಸಾಂಸ್ಥಿಕ ಖರೀದಿದಾರರು ಮತ್ತು 0.24 ಪಟ್ಟು ಸಾಂಸ್ಥಿಕೇತರ ಹೂಡಿಕೆದಾರರು ಆಸಕ್ತಿ ತೋರಿಸಿದ್ದರು. ಪೇಟಿಎಂ ಷೇರುಗಳು ಹಂಚಿಕೆಯಾಗಿರುವ ಮಾಹಿತಿಯನ್ನು ಬಿಎಸ್‌ಇಯಲ್ಲಿ ಅಥವಾ ರೆಜಿಸ್ಟ್ರಾರ್‌ ಅವರ ವೆಬ್‌ಸೈಟ್‌ನಲ್ಲಿ ನೋಡಬಹುದು. ಐಪಿಒ ವೇಳೆ ಪೇಟಿಎಂ8,300 ಕೋಟಿ ರೂ. ಮೊತ್ತದ ಷೇರುಗಳನ್ನು ಹೊಸದಾಗಿ ಬಿಡುಗಡೆ ಮಾಡಿದ್ದರೆ, ಹಾಲಿ ಷೇರುದಾರರ 10,000 ಕೋಟಿ ರೂ. ಮೊತ್ತದ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿದೆ. 2,080-2150 ರೂ. ಮೊತ್ತದಲ್ಲಿ ಪ್ರತಿ ಷೇರುಗಳನ್ನು ಪೇಟಿಎಂ ಮಾರಾಟ ಮಾಡಿದೆ. ಚಿಲ್ಲರೆ ಹೂಡಿಕೆದಾರರು 6 ಷೇರುಗಳಿರುವ ಒಂದು ಲಾಟ್‌ಗೆ ಬಿಡ್‌ ಮಾಡಬಹುದಾಗಿತ್ತು. ಓರ್ವ ಹೂಡಿಕೆದಾರ ಗರಿಷ್ಠ 15 ಲಾಟ್‌ಗಳಿಗೆ ಬಿಡ್‌ ಮಾಡಲು ಅವಕಾಶ ನೀಡಲಾಗಿತ್ತು. ಅಪ್ಪರ್‌ ಪ್ರೈಸ್‌ ಬ್ಯಾಂಡ್‌ನಲ್ಲಿ ಪೇಟಿಎಂನ ಒಂದು ಲಾಟ್‌ಗೆ 12,900 ರೂ. ಬೆಲೆ ಕಟ್ಟಲಾಗಿತ್ತು. ಮೀಮ್‌ಗಳ ಸೃಷ್ಟಿ ಮೊದಲ ದಿನವೇ ಪೇಟಿಎಂ ಷೇರುಗಳು ನೆಲಕಚ್ಚಿರುವುದು ಹೂಡಿಕೆದಾರರಲ್ಲಿ ಆಘಾತ ಮೂಡಿಸಿದೆ. ಬಹು ನಿರೀಕ್ಷೆಯೊಂದಿಗೆ ಷೇರುಗಳ ಖರೀದಿಗೆ ಮುಂದಾಗಿದ್ದವರಿಗೆ ಇದು ಗಾಸಿ ಉಂಟುಮಾಡಿದೆ. ಇದೇ ವೇಳೆ ಇದು ಸಾಮಾಜಿಕ ಜಾಲತಾಣದಲ್ಲಿ ಮೀಮ್‌ಗಳ ಸೃಷ್ಟಿಗೂ ಕಾರಣವಾಗಿದೆ. ಪೇಟಿಎಂ ಹೂಡಿಕೆ ಕುರಿತಾಗಿ ನೂರಾರು ಮೀಮ್‌ಗಳು ಹರಿದಾಡುತ್ತಿವೆ.