![](https://vijaykarnataka.com/photo/83036378/photo-83036378.jpg)
ಹೊಸದಿಲ್ಲಿ: ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಕಲೈಕುಂಡ ವಾಯು ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಪ್ರಧಾನಿ ಶುಕ್ರವಾರ ಭೇಟಿಯಾಗಿದ್ದಾರೆ. ಆದರೆ ಅವರ ಭೇಟಿ 15 ನಿಮಿಷಗಳಲ್ಲಿಯೇ ಮುಕ್ತಾಯವಾಗಿದೆ.
ಬಂಗಾಳ ಹಾಗೂ ಒಡಿಶಾದಲ್ಲಿ ಉಂಟುಮಾಡಿದ ಹಾನಿಯ ಬಗ್ಗೆ ಈ ಇಬ್ಬರೂ ನಾಯಕರು ಪರಾಮರ್ಶನಾ ಸಭೆ ನಡೆಸಬೇಕಿತ್ತು. ಆದರೆ, ಈ ಸಭೆಗೆ ಮಮತಾ ಗೈರು ಹಾಜರಾದರು. ಚಂಡಮಾರುತದಿಂದ ರಾಜ್ಯದಲ್ಲಿ ಉಂಟಾದ ಹಾನಿಯ ಬಗ್ಗೆ ಅವರು ಪ್ರಧಾನಿಗೆ ವರದಿ ಸಲ್ಲಿಸಿದರು.
'ಪ್ರಧಾನಿ ಸಭೆ ಕರೆದಿದ್ದರು. ನಮಗೆ ಅದರ ಬಗ್ಗೆ ತಿಳಿದಿರಲಿಲ್ಲ. ಡಿಘಾದಲ್ಲಿ ನನಗೆ ಸಭೆ ಇತ್ತು. ಆದರೆ ಕಲೈಕುಂಡಕ್ಕೆ ತೆರಳಿ 20,000 ಕೋಟಿ ರೂ ಪರಿಹಾರಕ್ಕಾಗಿ ಕೋರುವ ವರದಿ ಸಲ್ಲಿಸಿದ್ದೇನೆ. ರಾಜ್ಯದ ಅಧಿಕಾರಿಗಳು ನನ್ನನ್ನು ಭೇಟಿ ಮಾಡಲು ಬಯಸಿದ್ದಾರೆ ಎಂದು ಅವರ (ಪ್ರಧಾನಿ ಮೋದಿ) ಅನುಮತಿ ಪಡೆದು ಅಲ್ಲಿಂದ ಹೊರಟೆ' ಎಂದು ಮಮತಾ ತಿಳಿಸಿದ್ದಾರೆ.
ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆದು ಮಮತಾ ಬ್ಯಾನರ್ಜಿ ಅವರು ಮೂರನೇ ಅವಧಿಗೆ ಮರು ಆಯ್ಕೆಯಾದ ಬಳಿಕ ಇಬ್ಬರು ನಾಯಕರು ಇದೇ ಮೊದಲ ಬಾರಿ ಭೇಟಿಯಾಗಿದ್ದಾರೆ. ಜನವರಿ 23ರಂದು ಕೋಲ್ಕತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಇಬ್ಬರೂ ಕೊನೆಯ ಬಾರಿ ಮುಖಾಮುಖಿಯಾಗಿದ್ದರು. ಇದರ ಬಳಿಕ ಪ್ರಧಾನಿ ಮೋದಿ ಅವರು ಕೋವಿಡ್ ನಿರ್ವಹಣೆ ಹಾಗೂ ಚಂಡಮಾರುತದ ಸನ್ನಿವೇಶದ ತಯಾರಿಗೆ ಸಂಬಂಧಿಸಿದಂತೆ ನಡೆಸಿದ ಯಾವ ವಿಡಿಯೋ ಕಾನ್ಫರೆನ್ಸ್‌ಗೆ ಕೂಡ ಮಮತಾ ಹಾಜರಾಗಿರಲಿಲ್ಲ.