ಚೀನಾ ಮೇಲಿನ ಅವಲಂಬನೆ ಹೆಚ್ಚಿದಷ್ಟೂ ತಲೆಬಾಗಬೇಕಾಗುತ್ತದೆ: ಮೋಹನ್ ಭಾಗವತ್

'ಸರ್ವರ ಒಳಿತನ್ನು ಪರಿಗಣಿಸಿದಾಗ ಮಾತ್ರ ನಾವು ಸಂತೋಷವಾಗಿ ಇರುತ್ತೇವೆ. ನಾವು ಸಂತೋಷವಾಗಿರಬೇಕೆಂದರೆ ಆರ್ಥಿಕ ಸ್ಥಿತಿ ಸುಧಾರಿಸಬೇಕು. ಇದಕ್ಕಾಗಿ ನಮಗೆ ಹಣಕಾಸಿನ ಬಲ ಬೇಕು' - ಮೋಹನ್ ಭಾಗವತ್

ಚೀನಾ ಮೇಲಿನ ಅವಲಂಬನೆ ಹೆಚ್ಚಿದಷ್ಟೂ ತಲೆಬಾಗಬೇಕಾಗುತ್ತದೆ: ಮೋಹನ್ ಭಾಗವತ್
Linkup
: ನಾವು ಇಂಟರ್‌ನೆಟ್ ಹಾಗೂ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಆದ್ರೆ, ನಿಜವಾದ ತಂತ್ರಜ್ಞಾನ ನಮ್ಮ ಬಳಿ ಇಲ್ಲ. ಹೊರಗಿನಿಂದ ನಾವು ಆಮದು ಮಾಡಿಕೊಂಡಿದ್ದೇವೆ. ಈ ಹೊತ್ತಲ್ಲಿ ಉತ್ಪನ್ನಗಳನ್ನು ನಿಷೇಧಿಸುವ ಮಾತನ್ನಾಡುತ್ತೇವೆ. ಆದ್ರೆ, ನಿಮ್ಮ ಮೊಬೈಲ್‌ಗೆ ತಂತ್ರಜ್ಞಾನ ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ , ಚೀನಾ ಮೇಲಿನ ನಮ್ಮ ಅವಲಂಬನೆ ಹೆಚ್ಚಿದಷ್ಟೂ ನಾವು ಅವರಿಗೆ ತಲೆಬಾಗಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಅವರು, ವಿಕೇಂದ್ರೀಕೃತ ಉತ್ಪಾದನಾ ನೀತಿ ಭಾರತದ ಆರ್ಥಿಕತೆಯನ್ನು ಸುಧಾರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ. 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮುಂಬೈನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿಕೇಂದ್ರೀಕೃತ ಉತ್ಪಾದನಾ ನೀತಿಯಿಂದ ಉದ್ಯೋಗ ಸೃಷ್ಟಿ ಹಾಗೂ ಸ್ವಉದ್ಯೋಗ ಅವಕಾಶ ಹೆಚ್ಚುತ್ತದೆ ಎಂದು ಹೇಳಿದರು. ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ ತಡೆಯಲು ನಿಯಂತ್ರಿತ ಗ್ರಾಹಕ ವ್ಯವಸ್ಥೆ ಸೃಷ್ಟಿಸುವ ಅಗತ್ಯತೆ ಇದೆ ಎಂದೂ ಮೋಹನ್ ಭಾಗವತ್ ಹೇಳಿದರು. ನಮ್ಮ ಜೀವನ ಮಟ್ಟವು ನಾವು ಎಷ್ಟು ಗಳಿಸುತ್ತೇವೆ ಎಂಬುದನ್ನು ಆಧರಿಸಿ ಇರಬಾರದು. ಬದಲಿಗೆ ನಾವು ಎಷ್ಟು ವಾಪಸ್ ಕೊಡುತ್ತೇವೆ ಎಂಬುದನ್ನು ಆಧರಿಸಿರಬೇಕು ಎಂದು ಭಾಗವತ್ ಸ್ಪಷ್ಟಪಡಿಸಿದರು. ಸರ್ವರ ಒಳಿತನ್ನು ಪರಿಗಣಿಸಿದಾಗ ಮಾತ್ರ ನಾವು ಸಂತೋಷವಾಗಿ ಇರುತ್ತೇವೆ. ನಾವು ಸಂತೋಷವಾಗಿರಬೇಕೆಂದರೆ ಆರ್ಥಿಕ ಸ್ಥಿತಿ ಸುಧಾರಿಸಬೇಕು. ಇದಕ್ಕಾಗಿ ನಮಗೆ ಹಣಕಾಸಿನ ಬಲ ಬೇಕು ಎಂದು ಮೋಹನ್ ಭಾಗವತ್ ಹೇಳಿದರು. ಸ್ವದೇಶಿ ಎಂದರೆ ನಮ್ಮ ನಿಯಮ ಹಾಗೂ ನಿಬಂಧನೆಗಳ ಅನುಸಾರವಾಗಿ ವ್ಯಾಪಾರ ಮಾಡೋದಷ್ಟೇ ಎಂದು ಮೋಹನ್ ಭಾಗವತ್ ವಿವರಿಸಿದರು. ಉದ್ಯಮಗಳು ಉತ್ತಮವಾಗಿ ನಡೆಯಲು ಸರ್ಕಾರ ಬೆಂಬಲ ನೀಡಬೇಕು, ಪ್ರೋತ್ಸಾಹಿಸಬೇಕು. ಅಷ್ಟೇ ಅಲ್ಲ, ದೇಶದ ಅಭಿವೃದ್ಧಿಗೆ ಪೂರಕವಾಗುವ ಉತ್ಪನ್ನಗಳ ಉತ್ಪಾದನೆಗೆ ನಿರ್ದೇಶನ ನೀಡಬೇಕು ಎಂದು ಮೋಹನ್ ಭಾಗವತ್ ಹೇಳಿದರು. ಕೈಗಾರಿಕಾ ಉತ್ಪನ್ನಗಳ ಉತ್ಪಾದನೆಯು ಜನಕೇಂದ್ರಿತವಾಗಿರಬೇಕು ಎಂದು ಪ್ರತಿಪಾದಿಸಿದ ಮೋಹನ್ ಭಾಗವತ್, ಎಂಎಸ್‌ಎಂಇ ಹಾಗೂ ಸಹಕಾರಿ ವಲಯದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಕೊಡಬೇಕು ಎಂದು ಒತ್ತಾಯಿಸಿದರು.