ಚಂಡೀಗಢ: ಪಂಜಾಬ್‌ನಲ್ಲಿ ಹೊಸ ಪಕ್ಷ ಹುಟ್ಟು ಹಾಕುವ ಉಮೇದು ತೋರಿರುವ ಮಾಜಿ ಮುಖ್ಯಮಂತ್ರಿ , ರಾಜ್ಯದಲ್ಲಿ ಹೊಸ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಿದ್ದಾರೆ.
ಕಾಂಗ್ರೆಸ್ ತೊರೆದು ಶೀಘ್ರದಲ್ಲಿಯೇ ಹೊಸ ಪಕ್ಷ ಕಟ್ಟುವ ಘೋಷಣೆ ಮಾಡಿರುವ ಕ್ಯಾಪ್ಟನ್, ಜತೆ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ''ಅಮರಿಂದರ್ ಮನವಿ ಮೇರೆಗೆ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿದ್ದೇವೆ,'' ಎಂದು ಪಂಜಾಬಿನ ಬಿಜೆಪಿ ಉಸ್ತುವಾರಿ ದುಷ್ಯಂತ್ ಗೌತಮ್ ಬುಧವಾರ ತಿಳಿಸಿದ್ದಾರೆ.
''ನಮ್ಮ ಸಂಸದೀಯ ಮಂಡಳಿಯಿಂದಲೇ ಅಂತಿಮ ತೀರ್ಮಾನ ಹೊರಬೀಳಲಿದೆ. ಆದರೂ ಕೂಡ ನಮ್ಮ ಪಕ್ಷದಲ್ಲಿ ಸಿಂಗ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದು, ಮುಂಬರುವ ಚುನಾವಣೆ ದೃಷ್ಟಿಯಿಂದ ಮೈತ್ರಿಗೆ ಮುಕ್ತರಾಗಿದ್ದೇವೆ. ರಾಷ್ಟ್ರೀಯ ಹಿತಾಸಕ್ತಿ, ದೇಶದ ಸುರಕ್ಷತೆಗೆ ಆದ್ಯತೆ ಕೊಡುವುದರೊಂದಿಗೆ ಕಮಲ ಪಾಳಯವು ಸದಾಕಾಲ ಬೆಂಗಾವಲಾಗಿ ನಿಲ್ಲಲಿದೆ,'' ಎಂದು ಅವರು ಹೇಳಿದ್ದಾರೆ. ಈ ಮೂಲಕ ತಮ್ಮ ಮೈತ್ರಿ ಮುರಿದುಕೊಂಡ ಶಿರೋಮಣಿ ಅಕಾಲಿ ದಳಕ್ಕೆ ಪರ್ಯಾಯವಾಗಿ ಹೊಸ ಪ್ರಾದೇಶಿಕ ಪಕ್ಷವೊಂದನ್ನು ಪೋಷಿಸಲು ಕಮಲ ಪಾಳಯವು ಸಿದ್ಧತೆ ನಡೆಸಿದೆ.
ಮತ್ತೊಂದೆಡೆ, ಸಿಎಂ ಬದಲಾವಣೆ ಮೂಲಕ ಹೊಸ ನಾಯಕರು ಮತ್ತು ಸ್ವಚ್ಛ ಆಡಳಿತದ ವರ್ಚಸ್ಸಿನೊಂದಿಗೆ ಮುಂದಿನ ವರ್ಷದ ವಿಧಾನಸಭೆ ಚುನಾವಣೆ ಎದುರಿಸಲು ಹೊರಟಿದ್ದ ಕಾಂಗ್ರೆಸ್ ಹೈಕಮಾಂಡ್‌ನ ತಂತ್ರ ಪೂರ್ಣ ವಿಫಲವಾಗಿದೆ. ರಾಜ್ಯ ಕಾಂಗ್ರೆಸ್‌ನ್ನು ಡೋಲಾಯಮಾನ ಪರಿಸ್ಥಿತಿಗೆ ದೂಡಿದ ಹೈಕಮಾಂಡ್ ನಾಯಕರು ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಮೇಲೆ ಎಲ್ಲ ಜವಾಬ್ದಾರಿ ಹೊರಿಸಿ ತಟಸ್ಥವಾಗಿಬಿಟ್ಟಿದೆ.
ಹಠಾತ್ತಾಗಿ ತಮ್ಮನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ತೀವ್ರ ಬೇಸರಗೊಂಡಿರುವ ಕ್ಯಾ. ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ತೊರೆದು ಹೊಸ ಪಕ್ಷ ಕಟ್ಟುವ ತೀರ್ಮಾನವನ್ನು ಮಂಗಳವಾರ ಪ್ರಕಟಿಸಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಜತೆಗಿನ ಒಡನಾಟ ಕಡಿದುಕೊಂಡು, ಹೊಸ ಪ್ರಾದೇಶಿಕ ಪಕ್ಷ ರಚಿಸುವ ಸುಳಿವನ್ನು ಮಾಧ್ಯಮಗಳಿಗೆ ಸಿಂಗ್ ನೀಡಿದ್ದಾರೆ.
ಕೃಷಿ ಕಾನೂನು ರದ್ದು ಷರತ್ತು
ಅಮರಿಂದರ್, ಬಿಜೆಪಿ ಜತೆಗಿನ ಮೈತ್ರಿಗೆ ಹೊಸ ರಣತಂತ್ರವೊಂದನ್ನು ರೂಪಿಸಿದ್ದಾರೆ. ಕಳೆದ 10 ತಿಂಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸರಕಾರದ ಹೊಸ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ಪಂಜಾಬ್-ಹರಿಯಾಣ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ''ಇದಕ್ಕೆ ಮನ್ನಣೆ ನೀಡಿ ಬಿಜೆಪಿಯು ಕೃಷಿ ಕಾಯಿದೆಗಳನ್ನು ಹಿಂಪಡೆದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ವೇಳೆ ಸೀಟುಗಳ ಹಂಚಿಕೆ ವೇಳೆ ಮೈತ್ರಿ ಬಗ್ಗೆ ಒಲವು ತೋರಿಸುತ್ತೇವೆ,'' ಎಂದು ಸಿಂಗ್ ಹೇಳಿದ್ದಾರೆ. ಈ ಸಂಬಂಧ ಅವರು ಇತ್ತೀಚೆಗೆ ದಿಲ್ಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಅವರೊಂದಿಗೂ ಮಹತ್ವದ ಮಾತುಕತೆ ನಡೆಸಿದ್ದರು. ಪಂಜಾಬಿನಲ್ಲಿ ತನ್ನ ದೀರ್ಘಕಾಲದ ಮೈತ್ರಿ ಪಕ್ಷ ಅಕಾಲಿ ದಳದ ಸಂಪರ್ಕ ಕಡಿದುಕೊಂಡಿರುವ ಬಿಜೆಪಿಗೆ , ಹೊಸ ಪ್ರಾದೇಶಿಕ ಪಕ್ಷದ ಸಖ್ಯ ಅಗತ್ಯವಿದೆ.
ಸಿಧು ಅಧ್ಯಕ್ಷರಾಗಿದ್ದೇ 'ಕೈ'ಗೆ ಮುಳ್ಳು
ಕಳೆದ ಆರು ತಿಂಗಳ ಮುನ್ನ ಕೂಡ ಪಂಜಾಬಿನಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಸ್ಥಿತಿಯಲ್ಲೇ ಇತ್ತು. ಚುನಾವಣೆ ನಡೆದರೆ ಖಂಡಿತ ಬಹುಮತ ಸಿಗುವ ಸಾಧ್ಯತೆ ಇತ್ತು. ಆದರೆ ನವಜೋತ್ ಸಿಂಗ್ ಸಿಧುಗೆ ಪಿಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ ನಂತರ ಪಕ್ಷದ ಅವನತಿ ಪರ್ವ ಆರಂಭಗೊಂಡಿತು. ''ವ್ಯರ್ಥ ಮಾತುಗಳನ್ನೇ ಬಂಡವಾಳ ಮಾಡಿಕೊಂಡಿರುವ ಸಿಧು ಕಾಂಗ್ರೆಸ್ ಪಾಲಿನ ಮಗ್ಗಲ ಮುಳ್ಳು. ಬಣ ರಾಜಕೀಯದಿಂದ ಕಾಂಗ್ರೆಸ್ ಅಧೋಗತಿಗೆ ಇಳಿದಿದೆ,'' ಎಂದು ಕ್ಯಾ.ಅಮರಿಂದರ್ ಸಿಂಗ್ ಅವರು ಗುಡುಗಿದ್ದಾರೆ.
ಹೊಸ ಪಕ್ಷ ಸ್ಥಾಪನೆ ಬಗ್ಗೆ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ''ರಾಜೀವ್ ಗಾಂಧಿ ಜತೆಗೆ ಆಪ್ತನಾಗಿದ್ದ ನನ್ನನ್ನೇ ರಾಜೀನಾಮೆ ನೀಡುವಂತೆ ಹೈಕಮಾಂಡ್ ತೀವ್ರ ಒತ್ತಡ ಹೇರಿತು. ದಿಲ್ಲಿಯಲ್ಲೇ ಕೂತು ಎಲ್ಲವನ್ನೂ ನಿರ್ಧರಿಸುವ ಚಾಳಿಯೇ ಕಾಂಗ್ರೆಸ್‌ಗೆ ಮಾರಕ. ಸೋನಿಯಾ ಕರೆ ಮಾಡಿ ರಾಜೀನಾಮೆ ನೀಡಿ ಎಂದು ಒಂದೇ ವಾಕ್ಯ ಆದೇಶಿಸಿದರು. ಕ್ಷಣಾರ್ಧದಲ್ಲಿ ನಾನು ಆ ಕೆಲಸ ಮಾಡಿದೆ. ಆದರೆ, ಮನೆಯಲ್ಲೇ ಸುಮ್ಮನೆ ಕೂರುವವನು ನಾನಲ್ಲ. ಮೊರಾರ್ಜಿ ದೇಸಾಯಿ ಅವರು 92ನೇ ವಯಸ್ಸಿನಲ್ಲಿ ಪ್ರಧಾನಿ ಆದರು, ಪ್ರಕಾಶ್ ಸಿಂಗ್ ಬಾದಲ್ ಕೂಡ ಸಕ್ರಿಯರಾಗಿಯೇ ಇದ್ದಾರೆ. ಹಾಗಾಗಿ, 79 ವರ್ಷದ ನಾನು ಕೂಡ ಹೊಸ ಪಕ್ಷ ಸ್ಥಾಪಿಸಿ ಬ್ಯುಸಿ ಆಗುವೆ,'' ಎಂದು ಸಿಂಗ್ ಮನದಾಳ ತೆರೆದಿಟ್ಟಿದ್ದಾರೆ.
ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಕಾಂಗ್ರೆಸ್‌ನ ಬಣ ಜಗಳದಿಂದ ಬಿಜೆಪಿ ರಾಜ್ಯದಲ್ಲಿಉತ್ತಮ ಸಾಧನೆ ಮಾಡುವ ಸಾಧ್ಯತೆ ಇದೆ. ಅಮರಿಂದರ್ ಅವರು ಕಾಂಗ್ರೆಸ್‌ನ ಮತ ಒಡೆಯುವುದರಿಂದ ಹಿಂದೂ ಮತಗಳ ಕ್ರೋಢೀಕರಣದ ಮೂಲಕ ಬಿಜೆಪಿ ಅಧಿಕಾರದ ಸನಿಹ ಬರಬಹುದು ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ.
ಕಾಂಗ್ರೆಸ್ ಅಸಮತೋಲನಕ್ಕೆ ಕಾರಣಗಳು:
* ಸಿಎಂ ಬದಲಾವಣೆ ನಂತರ ಹೈಕಮಾಂಡ್ ತಟಸ್ಥ, ರಾಜ್ಯ ನಾಯಕರಿಗೆ ಎಲ್ಲ ಹೊಣೆ
* ಚರಣ್‌ಜಿತ್ ಚನ್ನಿ ಆಡಳಿತದಲ್ಲಿ ಅನವಶ್ಯಕವಾಗಿ ಸಿಧು ಹಸ್ತಕ್ಷೇಪ
* ಸಿಎಂ ಚನ್ನಿ ಮೇಲೆ ಪಕ್ಷ ಬಿಕ್ಕಟ್ಟು ಶಮನದ ಹೊಣೆ ಇದ್ದರೂ, ಪರಿಹರಿಸಲು ಸಾಕಷ್ಟು ಅನುಭವ ಇಲ್ಲದಿರುವುದು ಶಾಪವಾಗಿ ಪರಿಣಮಿಸಿದೆ
ಸಿಧು ಅವರೇ ಮುಂದಿನ ಎರಡು ತಿಂಗಳು ನೀವೇ ಸಿಎಂ ಆಗಿ, ತಾಕತ್ತಿದ್ದರೆ ನಿಮ್ಮ 13 ಅಂಶಗಳ ಅಜೆಂಡಾವನ್ನು ಪೂರ್ಣವಾಗಿ ಜಾರಿಗೆ ತನ್ನಿ ಎಂದು ಮಂಗಳವಾರ ತಡರಾತ್ರಿಯ ಗೌಪ್ಯ ಸಭೆಯಲ್ಲಿ ಆಕ್ರೋಶ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಹಾಂಗ ಪಂಗಡದ ಮುಖ್ಯಸ್ಥ ಬಾಬಾ ಅಮನ್ ಸಿಂಗ್ ಜತೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ ತೋಮರ್ ಮಾತುಕತೆಯ ಫೋಟೊ ವೈರಲ್ ಆಗಿದೆ. ಸಮಾಜವನ್ನು ಒಡೆದು ಹಾಕಿ, ಪಂಜಾಬಿನಲ್ಲಿ ರಾಜಕೀಯ ಅತಂತ್ರ ಸ್ಥಿತಿ ಸೃಷ್ಟಿಸಲು ಕೇಂದ್ರ ಸರಕಾರ, ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಸುನಿಲ್ ಜಾಖರ್ ಆರೋಪಿಸಿದ್ದಾರೆ.