ರೈತರ ಕೊಲೆ ಆರೋಪ, ಕೇಂದ್ರ ಸಚಿವರ ಪುತ್ರ ಆಶೀಶ್‌ ಮಿಶ್ರಾ 3 ದಿನ ಪೊಲೀಸ್‌ ಕಸ್ಟಡಿಗೆ

ಲಖಿಂಪುರ್‌ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ ಆರೋಪ ಎದುರಿಸುತ್ತಿರುವ ಆಶೀಶ್‌ ಮಿಶ್ರಾನನ್ನು ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಸೋಮವಾರ ಆದೇಶ ನೀಡಿದೆ.

ರೈತರ ಕೊಲೆ ಆರೋಪ, ಕೇಂದ್ರ ಸಚಿವರ ಪುತ್ರ ಆಶೀಶ್‌ ಮಿಶ್ರಾ 3 ದಿನ ಪೊಲೀಸ್‌ ಕಸ್ಟಡಿಗೆ
Linkup
ಲಖನೌ: ಉತ್ತರ ಪ್ರದೇಶದ ಲಖಿಂಪುರ್‌ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಅಜಯ್‌ ಮಿಶ್ರಾ ಪುತ್ರ ಆಶೀಶ್‌ ಮಿಶ್ರಾನನ್ನು ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಸೋಮವಾರ ಆದೇಶ ನೀಡಿದೆ. ಈ ಘಟನೆಯಲ್ಲಿ ನಾಲ್ವರು ರೈತರು ಸೇರಿ ಒಟ್ಟು 8 ಮಂದಿ ಸಾವಿಗೀಡಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಶನಿವಾರ ಸತತ 12 ಗಂಟೆಗಳ ವಿಚಾರಣೆ ಬಳಿಕ ತಡ ರಾತ್ರಿ ಆಶೀಶ್‌ ಮಿಶ್ರಾನನ್ನು ಪೊಲೀಸರು ಬಂಧಿಸಿದ್ದರು. ಆತ ನುಣಿಚಿಕೊಳ್ಳುವ ಉತ್ತರಗಳನ್ನು ನೀಡುತ್ತಿದ್ದಾನೆ ಹಾಗೂ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ಈ ಸಂದರ್ಭದಲ್ಲಿ ದೂರಿದ್ದರು. ಲಖಿಂಪುರ ಖೇರಿ ಘಟನೆ ನಡೆದು ಎಫ್‌ಐಆರ್‌ ದಾಖಲಾದ ಐದು ದಿನಗಳ ಬಳಿಕ ಬಂಧನವಾಗಿತ್ತು. ಇದಕ್ಕೂ ಮೊದಲು, ಕೊಲೆ ಆರೋಪದ ಹಿನ್ನಲೆಯಲ್ಲಿ ಆರೋಪಿಯನ್ನು ತಕ್ಷಣವೇ ಬಂಧಿಸಬೇಕಿತ್ತು. ಆದರೆ ತಂದೆ ಕೇಂದ್ರ ಸಚಿವರಾಗಿರುವ ಕಾರಣ ಈತನಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಪೊಲೀಸ್‌ ಮೂಲಗಳ ಪ್ರಕಾರ, ಕೆಲವು ಪ್ರಶ್ನೆಗಳಿಗೆ ಆಶೀಶ್‌ ಮಿಶ್ರಾ ಸ್ಪಷ್ಟ ಉತ್ತರ ನೀಡಿಲ್ಲ. ಅಕ್ಟೋಬರ್‌ 3 ರಂದು ಘಟನೆ ನಡೆದಾಗ ತಾನೆಲ್ಲಿದ್ದೆ ಎಂಬುದರ ಬಗೆಗಿನ ಕೆಲವು ಸವಾಲುಗಳಿಗೆ ಆತ ಸ್ಪಷ್ಟ ಉತ್ತರ ನೀಡಿಲ್ಲ. ಜತೆಗೆ ಘಟನಾ ಸ್ಥಳದಲ್ಲಿ ದೊರೆತ ಎರಡು ಖಾಲಿ ಗುಂಡುಗಳ ಬಗೆಗಿನ ಪ್ರಶ್ನೆಗೂ ಸರಿಯಾದ ಉತ್ತರ ಸಿಕ್ಕಿಲ್ಲ. ಸ್ಥಳದಲ್ಲಿ ಗುಂಡು ಹಾರಿಸಲಾಗಿತ್ತು ಎಂಬ ರೈತರ ವಾದಕ್ಕೆ ಈ ಗುಂಡುಗಳು ಪುಷ್ಠಿ ನೀಡಿವೆ. ಈ ಘಟನೆ ನಡೆದ ವೇಳೆ ತಾನು ಕಾರ್ಯಕ್ರಮವೊಂದರಲ್ಲಿದ್ದೆ ಎಂದು ಆಶೀಶ್‌ ಮಿಶ್ರಾ ವಾದಿಸಿದ್ದ. ಆದರೆ ಮಧ್ಯಾಹ್ನ 2 - 4 ಗಂಟೆ ನಡುವೆ ಆತ ಅಲ್ಲಿರಲಿಲ್ಲ ಎಂದು ಸಾಕ್ಷಿಗಳು ಹೇಳಿವೆ. ಇದೇ ಅವಧಿಯಲ್ಲಿ ಈ ಲಖಿಂಪುರ್‌ ಖೇರಿ ಹಿಂಸಾಚಾರ ನಡೆದಿತ್ತು. ಆತನ ಫೋನ್‌ ಲೊಕೇಷನ್‌ ಕೂಡ ಘಟನೆ ನಡೆದ ಸ್ಥಳದ ಪಕ್ಕದಲ್ಲೇ ತೋರಿಸುತ್ತಿದೆ. ಇದೇ ಸಂದರ್ಭದಲ್ಲಿ, ರೈತರ ಮೇಲೆ ಹರಿದ ಎಸ್‌ಯುವಿ ಕಾರನ್ನು ಚಾಲನೆ ಮಾಡುತ್ತಿದ್ದ ಎನ್ನಲಾದ ಚಾಲಕ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಆಶೀಶ್‌ ಮಿಶ್ರಾ ನೀಡಿದ ಹೇಳಿಕೆಗೆ ಹೋಲಿಕೆ ಮಾಡುವುದು ಸಾಧ್ಯವಾಗಿಲ್ಲ. ಆಶೀಶ್‌ ಮಿಶ್ರಾನ ವಿಚಾರಣೆಗಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಶುಕ್ರವಾರ ಮೂರು ಗಂಟೆಗಳ ಕಾಲ ಕಾದಿದ್ದರು. ಆದರೆ ಅಂದು ಆತ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಎರಡನೇ ಸಮನ್ಸ್‌ ನೀಡಿದ ಬಳಿಕ ಶನಿವಾರ ಪೊಲೀಸರ ಮುಂದೆ ಹಾಜರಾಗಿದ್ದ ಮಿಶ್ರಾನನ್ನು ಸತತ 12 ಗಂಟೆಗಳ ಕಾಲ ವಿಚಾರಣೆ ನಡೆಸಿ ನಂತರ ಬಂಧಿಸಲಾಗಿತ್ತು. ಭಾನುವಾರ ಮಾಜಿಸ್ಟ್ರೇಟ್‌ ನ್ಯಾಯಾಲಯ ಆಶೀಶ್‌ ಮಿಶ್ರಾನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದೇ ವೇಳೆ ತಮ್ಮ ಕಸ್ಟಡಿಗೆ ನೀಡುವಂತೆಯೂ ಪೊಲೀಸರು ಕೇಳಿದ್ದರು. ಅದರ ವಿಚಾರಣೆ ನಡೆದು ಇದೀಗ 3 ದಿನಗಳ ಕಸ್ಟಡಿಗೆ ನೀಡಲಾಗಿದೆ. ಇದಕ್ಕೂ ಮುನ್ನ ಉತ್ತರ ಪ್ರದೇಶ ಪೊಲೀಸರ ನಡೆಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದ ನ್ಯಾಯಾಲಯ. ‘ಇದುವರೆಗಿನ ಕ್ರಮದಿಂದ ನಾವು ತೃಪ್ತರಾಗಿಲ್ಲ’ ಎಂದು ಸರಕಾರಕ್ಕೆ ಬಲವಾಗಿ ಚಾಟಿ ಬೀಸಿತ್ತು.