ಕೃಷಿ ತ್ಯಾಜ್ಯ ಸುಡುವಿಕೆ ಮಾಹಿತಿ ಕುರಿತು ಅಸಮಾಧಾನ: ಕೇಂದ್ರದ ವಿರುದ್ಧ ಮತ್ತೆ ಸುಪ್ರೀಂ ಗರಂ..!

'ದಿಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ನಿಮ್ಮ ಬಳಿ ಯಾವ ವೈಜ್ಞಾನಿಕ ಆಧಾರವಿದೆ ಎನ್ನುವುದನ್ನು ತಿಳಿಸಿ. ಸುಮ್ಮನೆ ಖಾಲಿ ಚೀಲ ತೋರಿಸಿ, ಇದರಲ್ಲಿ ಬೆಕ್ಕು ಅಡಗಿದೆ ಎಂದು ಹೆದರಿಸುವ ಪ್ರಯತ್ನ ಮಾಡಬೇಡಿ' - ನ್ಯಾಯಪೀಠ ಗರಂ

ಕೃಷಿ ತ್ಯಾಜ್ಯ ಸುಡುವಿಕೆ ಮಾಹಿತಿ ಕುರಿತು ಅಸಮಾಧಾನ: ಕೇಂದ್ರದ ವಿರುದ್ಧ ಮತ್ತೆ ಸುಪ್ರೀಂ ಗರಂ..!
Linkup
: ಪಂಜಾಬ್‌ ಹಾಗೂ ಹರಿಯಾಣದಲ್ಲಿ ರೈತರು ಸುಡುತ್ತಿರುವುದರಿಂದ ದಿಲ್ಲಿಯಲ್ಲಿ ಆಗುತ್ತಿರುವ ವಾಯು ಮಾಲಿನ್ಯದ ಪ್ರಮಾಣದ ಕುರಿತು ಕೇಂದ್ರ ಸರಕಾರ ನೀಡಿರುವ ಮಾಹಿತಿಗೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. 'ದಿಲ್ಲಿಯ ಒಟ್ಟು ವಾಯು ಮಾಲಿನ್ಯದಲ್ಲಿ ಕೃಷಿ ತ್ಯಾಜ್ಯ ಸುಡುವುದರಿಂದ ಆಗುತ್ತಿರುವ ಮಾಲಿನ್ಯದ ಪ್ರಮಾಣ ಶೇ.10ರಷ್ಟಿದೆ' ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಕೋರ್ಟ್‌ಗೆ ಮಾಹಿತಿ ನೀಡಿದರು. ಇದರಿಂದ ಅಸಮಾಧಾನಗೊಂಡ ಮುಖ್ಯ ನ್ಯಾಯಮೂರ್ತಿ ಎನ್‌. ವಿ. ರಮಣ ನೇತೃತ್ವದ ನ್ಯಾಯ ಪೀಠವು, ' ಮಾಲಿನ್ಯದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯ ಪ್ರಮಾಣ ಗಂಭೀರವಾದುದಲ್ಲ ಎಂಬುದನ್ನು ನೀವು ಒಪ್ಪಿಕೊಂಡಂತಾಯಿತಲ್ಲ' ಎಂದಿತು. ಇದಕ್ಕೆ ಸ್ಪಷ್ಟನೆ ನೀಡಿದ ತುಷಾರ್‌ ಮೆಹ್ತಾ, 'ವೈಜ್ಞಾನಿಕ ವರದಿ ಪ್ರಕಾರ ದಿಲ್ಲಿ ವಾಯು ಮಾಲಿನ್ಯದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಪ್ರಮಾಣ ಶೇ. 4 ರಷ್ಟಿದೆ. ಬೇಸಿಗೆಯಲ್ಲಿ ಇದು ಶೇ.7ರಷ್ಟು ಇರುತ್ತದೆ. ರೈತರನ್ನು ದೂಷಿಸುವುದಕ್ಕಾಗಿಯೇ ದಿಲ್ಲಿ ಸರಕಾರ ಅಫಿಡವಿಟ್‌ ಸಲ್ಲಿಸಿದೆ' ಎಂದು ತಿಳಿಸಿದರು. 'ಯಾವುದೇ ಆಧಾರವಿಲ್ಲದೆ ಮಾತನಾಡಬೇಡಿ. ದಿಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ನಿಮ್ಮ ಬಳಿ ಯಾವ ವೈಜ್ಞಾನಿಕ ಆಧಾರವಿದೆ ಎನ್ನುವುದನ್ನು ತಿಳಿಸಿ. ಸುಮ್ಮನೆ ಖಾಲಿ ಚೀಲ ತೋರಿಸಿ, ಇದರಲ್ಲಿ ಬೆಕ್ಕು ಅಡಗಿದೆ ಎಂದು ಹೆದರಿಸುವ ಪ್ರಯತ್ನ ಮಾಡಬೇಡಿ. ಸುಮ್ಮನೆ ಕೂಗಾಡುವುದರಿಂದ ಯಾವುದೇ ಪ್ರಯೋಜನವಿಲ್ಲ' ಎಂದು ನ್ಯಾಯಪೀಠ ಹೇಳಿತು. 'ಈಗ ಎಲ್ಲ ರಹಸ್ಯ ಬಯಲಾದಂತಾಗಿದೆ. ಕೃಷಿ ತ್ಯಾಜ್ಯದ ಸುಡುವಿಕೆಯ ಪಾಲು ಮಾಲಿನ್ಯದಲ್ಲಿ ಕೇವಲ ಶೇ.4ರಷ್ಟು ಪಾಲು ಹೊಂದಿದೆ. ಅಲ್ಲಿಗೆ ಇದು ಮಹತ್ವದ ವಿಷಯ ಅಲ್ಲ ಎಂದಾಯಿತು' ಎಂದು ನ್ಯಾ. ಡಿ. ವೈ. ಚಂದ್ರಚೂಡ್‌ ಹೇಳಿದರು. 'ದಿಲ್ಲಿ ಮಾಲಿನ್ಯಕ್ಕೆ ಉದ್ಯಮಗಳು, ಧೂಳು ಹಾಗೂ ವಾಹನಗಳೇ ಕಾರಣ ಎಂದು ಕೇಂದ್ರ ಸರಕಾರ ಅಫಿಡವಿಟ್‌ ನೀಡಿದೆ. ಆದರೆ, ಗಾಳಿ ಗುಣಮಟ್ಟ ನಿರ್ವಹಣೆ ಸಮಿತಿಯು ಮಾಲಿನ್ಯದ ಪ್ರಮುಖ ಕಾರಣ ತಿಳಿಸಿಲ್ಲ. ಹಾಗಾಗಿ ಕೇಂದ್ರ ಸರಕಾರವು ಮಂಗಳವಾರವೇ ತುರ್ತು ಸಭೆ ನಡೆಸಬೇಕು' ಎಂದು ನ್ಯಾಯಪೀಠ ಸೂಚಿಸಿತು. ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ತಡೆಗೆ ಸಂಪೂರ್ಣವಾಗಿ ಲಾಕ್‌ಡೌನ್‌ ಜಾರಿಗೆ ಸಿದ್ಧ ಎಂದು ವಿಚಾರಣೆ ವೇಳೆ ದಿಲ್ಲಿ ಸರಕಾರವು ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿತು. ಈ ನಡುವೆ ದಿಲ್ಲಿಯಲ್ಲಿ ಸೋಮವಾರವೂ ಗಾಳಿ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯುಐ) ಪ್ರಮಾಣ 342 ದಾಖಲಾಗಿರುವುದು ಆತಂಕ ಹೆಚ್ಚಿಸಿದೆ. ಸುಪ್ರೀಂ ಕೋರ್ಟ್‌ ಪ್ರಮುಖ ಸೂಚನೆ - ಇಂಗಾಲದ ಹೊರಸೂಸುವಿಕೆ ತಡೆ, ಅನಗತ್ಯ ಯೋಜನೆಗಳಿಗೆ ತಡೆ ನೀಡುವುದು ಸೇರಿ ಹಲವು ವಿಷಯಗಳ ತೀರ್ಮಾನಕ್ಕೆ ಮಂಗಳವಾರ ತುರ್ತು ಸಭೆ ನಡೆಸಬೇಕು - ಕೇಂದ್ರ ಸರಕಾರದ ಸಭೆಯಲ್ಲಿ ದಿಲ್ಲಿ, ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶ ಸರಕಾರಗಳು ಭಾಗವಹಿಸಬೇಕು ಮತ್ತು ಸಭೆ ನಿರ್ಧಾರದ ಕುರಿತು ಕೋರ್ಟ್‌ಗೆ ಮಾಹಿತಿ ನೀಡಬೇಕು - ದಿಲ್ಲಿ ಮಾಲಿನ್ಯ ನಿಯಂತ್ರಣ ಕುರಿತು ಮಂಗಳವಾರ ಸಂಜೆಯೊಳಗೆ ಸಮಗ್ರ ಕ್ರಿಯಾಯೋಜನೆ ರೂಪಿಸಬೇಕು - ಎರಡು ವಾರ ಕೃಷಿ ತ್ಯಾಜ್ಯ ಸುಡುವುದನ್ನು ನಿಲ್ಲಿಸಲು ಪಂಜಾಬ್‌ ಮತ್ತು ಹರಿಯಾಣ ಸರಕಾರಗಳು ಕ್ರಮ ಕೈಗೊಳ್ಳಬೇಕು - ನೌಕರರು ಮನೆಯಿಂದಲೇ ಕೆಲಸ ಮಾಡುವ ಕುರಿತು ಕೇಂದ್ರ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿ (ಎನ್‌ಸಿಆರ್‌) ರಾಜ್ಯ ಸರಕಾರಗಳು ಪರಿಶೀಲಿಸಬೇಕು