ಒಣ ಭಾಷಣ ಬೇಕಿಲ್ಲ, ದೇಶಕ್ಕೆ ಪರಿಹಾರ ಬೇಕು: ಪ್ರಧಾನಿ ಮೋದಿಗೆ ರಾಹುಲ್ ಮಾತಿನ ಚಾಟಿ

'ಬಡವರು ಕೇವಲ ಸಂಖ್ಯೆಯಲ್ಲ, ಅದು ಜೀವಗಳು. ನೂರಾರು ಕುಟುಂಬಗಳು ನಿರಾಶ್ರಿತವಾಗಿವೆ. ಮಧ್ಯಮ ವರ್ಗವು ಬಡತನದ ಕೂಪಕ್ಕೆ ತಳ್ಳಲ್ಪಡುತ್ತಿವೆ' - ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಒಣ ಭಾಷಣ ಬೇಕಿಲ್ಲ, ದೇಶಕ್ಕೆ ಪರಿಹಾರ ಬೇಕು: ಪ್ರಧಾನಿ ಮೋದಿಗೆ ರಾಹುಲ್ ಮಾತಿನ ಚಾಟಿ
Linkup
: ದೇಶದಲ್ಲಿ ಈಗ ಸಂಕಷ್ಟ ಪರಿಸ್ಥಿತಿ ಎದುರಾಗಿರೋದು ಕೇವಲ ಕೊರೊನಾ ವೈರಸ್‌ನಿಂದ ಮಾತ್ರವಲ್ಲ, ಸರ್ಕಾರದ ಜನ ವಿರೋಧಿ ನೀತಿಯಿಂದಲೂ ಸಂಕಟ ಎದುರಾಗಿದೆ ಎಂದು ಕಾಂಗ್ರೆಸ್ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಈಗ ಪರಿಹಾರ ಬೇಕಿದೆ, ನಿಮ್ಮ ಒಣ ಭಾಷಣ ಬೇಕಿಲ್ಲ ಎಂದು ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಮಾತಿನ ಚಾಟಿ ಬೀಸಿದ್ದಾರೆ. ದೇಶದ ಆರ್ಥಿಕತೆಗೆ ಹಲವು ಅಡೆತಡೆಗಳನ್ನ ತಂದೊಡ್ಡಿರುವ ಕೇಂದ್ರ ಸರ್ಕಾರ, ಮಧ್ಯಮ ವರ್ಗವನ್ನು ಬಡತನದ ಕೂಪಕ್ಕೆ ತಳ್ಳುತ್ತಿದೆ ಎಂದೂ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿನ ನಿರ್ವಹಣೆಯ ಕಾರ್ಯವಿಧಾನವನ್ನು ಮೇಲಿಂದ ಮೇಲೆ ಪ್ರಶ್ನಿಸುತ್ತಿರುವ ಕಾಂಗ್ರೆಸ್ ಪಕ್ಷ, ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸುತ್ತಿದೆ. ‘ಕೊರೊನಾ ಸೋಂಕಿತನಾಗಿ ನಾನು ಕ್ವಾರಂಟೈನ್ ಆಗಿದ್ದೇನೆ. ಮೇಲಿಂದ ಮೇಲೆ ಕೆಟ್ಟ ಸುದ್ದಿಗಳನ್ನೇ ಕೇಳುತ್ತಿದ್ದೇನೆ. ದೇಶದಲ್ಲಿ ಸದ್ಯ ಕೊರೊನಾ ವೈರಸ್‌ನಿಂದ ಮಾತ್ರ ಸಂಕಷ್ಟ ಎದುರಾಗಿಲ್ಲ. ಜೊತೆಯಲ್ಲೇ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯಿಂದಲೂ ಸಂಕಷ್ಟ ಎದುರಾಗಿದೆ. ಜನರಿಗೆ ಸುಳ್ಳು ಭರವಸೆ ನೀಡಿ, ಸಂಭ್ರಮಾಚರಿಸಬೇಡಿ. ಒಣ ಭಾಷಣ ಬೇಕಿಲ್ಲ. ದೇಶಕ್ಕೆ ಈಗ ಪರಿಹಾರ ಬೇಕು’ ಎಂದು ಹಿಂದಿ ಭಾಷೆಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ಸರ್ಕಾರದ ವಿರುದ್ಧ ಇನ್ನಷ್ಟು ಹರಿಹಾಯ್ದಿರುವ ರಾಹುಲ್ ಗಾಂಧಿ, ಬಡವರು ಕೇವಲ ಸಂಖ್ಯೆಯಲ್ಲ, ಅದು ಜೀವಗಳು. ನೂರಾರು ಕುಟುಂಬಗಳು ನಿರಾಶ್ರಿತವಾಗಿವೆ. ಮಧ್ಯಮ ವರ್ಗವು ಬಡತನದ ಕೂಪಕ್ಕೆ ತಳ್ಳಲ್ಪಡುತ್ತಿವೆ ಎಂದೂ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ. ಕಳೆದ 45 ವರ್ಷಗಳಲ್ಲಿ ಬಡತನ ಪಟ್ಟಿಗೆ ಸೇರ್ಪಡೆಯಾಗುತ್ತಿರುವ ರಾಷ್ಟ್ರಗಳ ಸಾಲಿಗೆ ಭಾರತ ಕೂಡಾ ಸೇರುತ್ತಿದೆ ಎಂದು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ತಮ್ಮ ಟ್ವೀಟ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.