ಅಹಮದಾಬಾದ್: ಗುಜರಾತ್ನಲ್ಲಿ ಮೊದಲ ಬಾರಿಯ ಶಾಸಕ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿಯು 'ಕಪ್ಪು ಕುದುರೆ'ಯನ್ನು ಚುನಾವಣಾ ರೇಸ್ಗೆ ಇಳಿಸಿದೆ.
ಭಾನುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಗಮಿತ ವಿಜಯ್ ರೂಪಾನಿ ಅವರೇ ತಮ್ಮ ಉತ್ತರಾಧಿಕಾರಿಯಾಗಿ 59 ವರ್ಷದ ಪಟೇಲ್ ಹೆಸರು ಸೂಚಿಸಿದರು. ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪ್ರಲ್ಹಾದ್ ಜೋಶಿ ಅವರು ವೀಕ್ಷಕರಾಗಿ ಉಪಸ್ಥಿತರಿದ್ದರು. ಸಂಜೆ ಪಕ್ಷದ ಮುಖಂಡರ ಜತೆ ರಾಜ್ಯಪಾಲ ಆಚಾರ್ಯ ದೇವವ್ರತ ಅವರನ್ನು ಭೇಟಿ ಮಾಡಿದ ಭೂಪೇಂದ್ರ ಪಟೇಲ್ ಅವರು ಸರಕಾರ ರಚನೆ ಹಕ್ಕು ಮಂಡಿಸಿದರು. ಸೋಮವಾರ ಮಧ್ಯಾಹ್ನ 2 ಗಂಟೆಗೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಾರದೊಳಗೆ ಸಂಪುಟ ರಚನೆಯಾಗಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಾಲಿ ಉತ್ತರ ಪ್ರದೇಶ ರಾಜ್ಯಪಾಲರಾಗಿರುವ ಗುಜರಾತ್ನ ಮಾಜಿ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರ ಆಪ್ತರಾಗಿರುವ ಭೂಪೇಂದ್ರ ಪಟೇಲ್ 2017ರ ಚುನಾವಣೆಯಲ್ಲಿ ಮೊದಲ ಸಲ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಆನಂದಿ ಬೆನ್ ಪ್ರತಿನಿಧಿಸುತ್ತಿದ್ದ ಘಾಟ್ಲೋಡಿಯಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಶಿಕಾಂತ್ ಪಟೇಲ್ ಅವರನ್ನು 1.17 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಸಚಿವ ಸ್ಥಾನವನ್ನೂ ನಿಭಾಯಿಸದ ಅವರು ನೇರವಾಗಿ ಮುಖ್ಯಮಂತ್ರಿ ಪದವಿ ಏರುತ್ತಿದ್ದಾರೆ. ನರೇಂದ್ರ ಮೋದಿ ಅವರು 20 ವರ್ಷ ಹಿಂದೆ ಮೊದಲ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಶಾಸಕರೂ ಆಗಿರಲಿಲ್ಲ ಎನ್ನುವುದನ್ನು ಇಲ್ಲಿ ಉಲ್ಲೇಖಿಸಬಹುದು.
ಅನಿವಾರ್ಯವಾಗಿದ್ದ ಪಾಟೀದಾರರು: ವಿಜಯ್ ರೂಪಾನಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ನಿರ್ಧಾರ ಮಾಡಿದ ಬಿಜೆಪಿಯು ಪಾಟೀದಾರ್ ಸಮುದಾಯದ ಮುಖಂಡರೊಬ್ಬರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತದೆ ಎನ್ನುವುದು ಖಚಿತವಾಗಿತ್ತು. ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಪಾಟೀದಾರರು ಯಾವ ಪಕ್ಷವನ್ನು ಬೆಂಬಲಿಸುತ್ತಾರೆಯೋ ಅದೇ ಪಕ್ಷ ಅಧಿಕಾರಕ್ಕೆ ಬರುತ್ತದೆ. ಮೂರು ದಶಕಗಳಿಂದ ಪಾಟೀದಾರರು ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಕಳೆದ ಬಾರಿ ಬಿಜೆಪಿಯು ಅಲ್ಪಸಂಖ್ಯಾತ ಜೈನ ಸಮುದಾಯದ ವಿಜಯ್ ರೂಪಾನಿ ನಾಯಕತ್ವದಲ್ಲಿ ಚುನಾವಣೆ ಎದುರಿಸಿದರೂ ಪಾಟೀದಾರರು ಕೈ ಬಿಟ್ಟಿರಲಿಲ್ಲ. ಪಾಟೀದಾರರಿಗೆ ಮೀಸಲು ಸೌಲಭ್ಯಕ್ಕೆ ಆಗ್ರಹಿಸಿ ಹಾರ್ದಿಕ್ ಪಟೇಲ್ ನಡೆಸಿದ ಪ್ರತಿಭಟನೆ ನಡುವೆಯೂ ಸಮುದಾಯ ಬಿಜೆಪಿ ಜತೆಗಿತ್ತು.
ಆದರೆ, ಈ ಸಲ ಪರಿಸ್ಥಿತಿ ಬದಲಾಗಿದೆ. ಪಾಟೀದಾರರು ಪ್ರಮುಖವಾಗಿರುವ ಸೌರಾಷ್ಟ್ರ ಪ್ರದೇಶದ ಸೂರತ್ ನಗರಪಾಲಿಕೆಯ ಎಂಟು ವಾರ್ಡ್ಗಳಲ್ಲಿ ಆಮ್ ಆದ್ಮಿ ಪಾರ್ಟಿ ಗೆಲುವು ಸಾಧಿಸಿದೆ. ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆ ಸಿದ್ಧತೆಯ ಭಾಗವಾಗಿ ಪಕ್ಷ ರಾಜ್ಯದಲ್ಲಿ ಹಮ್ಮಿಕೊಂಡ 'ಜನ ಸಂವೇದನಾ ಮುಲಾಕಾತ್'ಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ್ದರಿಂದ ಇಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ ನಿರ್ಣಾಯಕ ಸಮುದಾಯದ ಪ್ರೀತಿ ಉಳಿಸಿಕೊಳ್ಳಲು ಪಾಟೀದಾರರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವುದು ಬಿಜೆಪಿಗೆ ಅನಿವಾರ್ಯವಾಗಿತ್ತು.
ಹಾಲಿ ಉಪ ಮುಖ್ಯಮಂತ್ರಿಯಾಗಿದ್ದ ನಿತಿನ್ ಪಟೇಲ್, ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್.ಪಾಟೀಲ್, ಕೇಂದ್ರಾಡಳಿತ ಪ್ರದೇಶ ದಾದ್ರಾ ಮತ್ತು ನಗರ್ ಹವೇಲಿಯ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವೀಯ ಹೆಸರುಗಳು ಪ್ರಮುಖವಾಗಿ ಕೇಳಿಬಂದಿದ್ದವು. ಅಚ್ಚರಿಯ ಆಯ್ಕೆಯಾಗಿ ಭೂಪೇಂದ್ರ ಪಟೇಲ್ ಹೆಸರನ್ನು ಪಕ್ಷ ಘೋಷಿಸಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಆರಂಭವಾದಾಗ ಕೊನೆಯ ಸಾಲಿನಲ್ಲಿ ಕುಳಿತಿದ್ದ ಭೂಪೇಂದ್ರ ಪಟೇಲ್ ಹೆಸರನ್ನು ರೂಪಾನಿ ಮುಖ್ಯಮಂತ್ರಿ ಹುದ್ದೆಗೆ ಸೂಚಿಸಿದಾಗ ಬಹುತೇಕರು ಆಶ್ಚರ್ಯದಲ್ಲಿ ಮುಳುಗಿದರು.
ಭೂಪೇಂದ್ರ ಅವರು ರಾಜ್ಯದ ಜನಸಂಖ್ಯೆಯಲ್ಲಿ ಶೇ.12.4ರಷ್ಟಿರುವ ಪಾಟೀದಾರ್ ಸಮುದಾಯದ ಕಾದ್ವಾ ಪಟೇಲ್ ಪಂಗಡಕ್ಕೆ ಸೇರಿದವರು. ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾದವರೆಲ್ಲ ಲುವಾ ಪಟೇಲ್ ಪಂಗಡದವರು. ಹೀಗಾಗಿ ಕಾದ್ವಾ ಪಟೇಲ್ ಸಮುದಾಯದ ಮೊದಲ ಮುಖ್ಯಮಂತ್ರಿ ಎಂಬ ಹಿರಿಮೆಗೂ ಭೂಪೇಂದ್ರ ಪಟೇಲ್ ಪಾತ್ರರಾಗಿದ್ದಾರೆ.
ಹಲವು ಸಚಿವರಿಗೆ ಕೊಕ್?
ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಗುಜರಾತ್ನಲ್ಲಿಗುಪ್ತ ಸಮೀಕ್ಷೆ ನಡೆಸಿ ಸರಕಾರದ ಕಾರ್ಯವೈಖರಿ ಕುರಿತು ಜನರ ಮನಸ್ಸು ಅರಿಯುವ ಪ್ರಯತ್ನ ಮಾಡಿತ್ತು. ವಿಜಯ್ ರೂಪಾನಿ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಿದರೆ ಸೋಲು ಖಚಿತ ಎನ್ನುವ ತೀರ್ಮಾನಕ್ಕೆ ಬಂದಿದ್ದ ಸಂಘವು, ಸಮೀಕ್ಷೆಯ ವಿವರವನ್ನು ಬಿಜೆಪಿಗೆ ನೀಡಿತ್ತು.
ಅಲ್ಲದೇ, ಸತತ 27 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ನಿಧಾನವಾಗಿ ಏಳುತ್ತಿದೆ ಎನ್ನುವುದನ್ನೂ ಸಂಘ ಗಮನಿಸಿತ್ತು. ಹೀಗಾಗಿ ಮುಖ್ಯಮಂತ್ರಿಯನ್ನು ಬದಲಿಸುವ ನಿರ್ಧಾರವನ್ನು ಪಕ್ಷ ಕೈಗೊಂಡಿತು. ಎರಡು ದಿನ ಹಿಂದೆ ರಾತ್ರೋರಾತ್ರಿ ರಾಜ್ಯಕ್ಕೆ ಖಾಸಗಿ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರೂಪಾನಿ ಸೇರಿದಂತೆ ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿ ನಾಯಕತ್ವ ಬದಲಾವಣೆ ಅನಿವಾರ್ಯ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು.
ರೂಪಾನಿ ಸಂಪುಟದಲ್ಲಿ ಹಲವು ಸಚಿವರ ಕಾರ್ಯವೈಖರಿ ಕುರಿತಾಗಿಯೂ ಆರ್ಎಸ್ಎಸ್ ವರದಿ ನೀಡಿದ್ದು, ಹೊಸ ಸಂಪುಟ ರಚನೆ ವೇಳೆ ಕೆಲವರನ್ನು ಕೈ ಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ, ರೂಪಾನಿ ಸಂಪುಟದಲ್ಲಿದ್ದ ಯಾರನ್ನೂ ಕೈ ಬಿಡುವುದಿಲ್ಲಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಿ. ಆರ್. ಪಾಟೀಲ್ ತಿಳಿಸಿದ್ದಾರೆ.
ಜಾರ್ಖಂಡ್ನಿಂದ ಕಲಿತ ಪಾಠ
2019ರ ಲೋಕಸಭೆ ಚುನಾವಣೆಯ ಭರ್ಜರಿ ಗೆಲುವಿನ ಗುಂಗಿನಲ್ಲಿದ್ದ ಬಿಜೆಪಿಗೆ 2020ರ ಜನವರಿಯಲ್ಲಿ ನಡೆದ ಜಾರ್ಖಂಡ್ ವಿಧಾನಸಭೆ ಚುನಾವಣೆಯು ಸೋಲಿನ ಮೊದಲ ಏಟು ಕೊಟ್ಟಿತ್ತು. ಚುನಾವಣೆಗೆ ಮುನ್ನ ಮುಖ್ಯಮಂತ್ರಿ ರಘುಬರ ದಾಸ್ ಬದಲಾವಣೆಗೆ ಬಿಜೆಪಿ ಶಾಸಕರೇ ಒತ್ತಾಯಿಸಿದರೂ ಪಕ್ಷ ಕಡೆಗಣಿಸಿತ್ತು. ಅದರ ಫಲವಾಗಿ ಜಾರ್ಖಂಡ್ ಮುಕ್ತಿ ಮೋರ್ಚಾದ ಹೇಮಂತ್ ಸೊರೇನ್ ನೇತೃತ್ವದ ಮೈತ್ರಿಕೂಟವು 81 ಕ್ಷೇತ್ರಗಳ ಪೈಕಿ 51ರಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿದಿತ್ತು. ಮುಂದಿನ ವರ್ಷ ಡಿಸೆಂಬರ್ನಲ್ಲಿ ನಡೆಯುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿಯೂ ಜಾರ್ಖಂಡ್ನಲ್ಲಿ ಆದಂತೆ ಆಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಮುಖ್ಯಮಂತ್ರಿಯನ್ನು ಬದಲಿಸುವ ತೀರ್ಮಾನಕ್ಕೆ ಬರಲಾಯಿತು ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಪಾಟೀದಾರರ ನಂಬಿಕಸ್ಥ ನಾಯಕ
- ಭೂಪೇಂದ್ರ ಪಟೇಲ್ ಎಂಜಿನಿಯರಿಂಗ್ ಪದವೀಧರ, ವೃತ್ತಿಯಲ್ಲಿಬಿಲ್ಡರ್
- 1999-2000ನೇ ಸಾಲಿನಲ್ಲಿಮೇಮ್ನಗರ ಪಾಲಿಕೆ ಅಧ್ಯಕ್ಷ
- ಅಹಮದಾಬಾದ್ ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ, ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
- 2017ರಲ್ಲಿಮೊದಲ ಬಾರಿ ಘಾಟ್ಲೋಡಿಯಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ, 1.17 ಲಕ್ಷ ಮತಗಳ ಅಂತರದಿಂದ ಗೆಲುವು, ಚಲಾವಣೆಯಿಂದ ಮತಗಳ ಪೈಕಿ ಶೇ.72ರಷ್ಟು ಮತ ಪಡೆದು ದಾಖಲೆ
- ಪಾಟೀದಾರ್ ಸಮುದಾಯದ ಸಂಸ್ಥೆಗಳಾದ ಸರ್ದಾರ್ ಧಾಮ್ ಮತ್ತು ವಿಶ್ವ ಉಮಿಯಾ ಫೌಂಡೇಷನ್ಗಳ ಟ್ರಸ್ಟಿ
ಕಾಂಗ್ರೆಸ್ಗೇಕೆ ಸಾಧ್ಯವಾಗುತ್ತಿಲ್ಲ?
ಬಿಜೆಪಿಯು ತನ್ನ ಮುಖ್ಯಮಂತ್ರಿಗಳ ಸಾಧನೆ ವಿಚಾರದಲ್ಲಿಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲ. ಹೀಗಾಗಿಯೇ ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಾಧನೆಯನ್ನು ಸದಾ ಪರಾಮರ್ಶೆಗೆ ಒಳಪಡಿಸುತ್ತಿದೆ. ಆ ಮೂಲಕ ಆಡಳಿತ ವಿರೋಧಿ ಅಲೆ ಏಳುವುದನ್ನು ತಡೆಯುವ ಪ್ರಯತ್ನ ಮಾಡುತ್ತಿದೆ.
ಅದಕ್ಕೆ ಕಾರಣ ಪಕ್ಷದಲ್ಲಿ ದೃಢವಾದ ನಾಯಕತ್ವ ಇರುವುದು. ಆದರೆ ಕಾಂಗ್ರೆಸ್ ತನ್ನ ರಾಜ್ಯ ಘಟಕಗಳಲ್ಲಿಆಂತರಿಕ ಸಂಘರ್ಷ ಶುರುವಾದರೆ ಅಥವಾ ಮುಖ್ಯಮಂತ್ರಿಗಳ ವಿರುದ್ಧ ಅಪಸ್ವರ ಕೇಳಿಬಂದರೆ ನಾಯಕತ್ವ ಬದಲಾವಣೆಯಂತಹ ಕಠಿಣ ನಿಲುವು ತೆಗೆದುಕೊಳ್ಳಲು ಮೀನಮೇಷ ಎಣಿಸುತ್ತದೆ. ಪಂಜಾಬ್ನಲ್ಲಿ ಕ್ಯಾ.ಅಮರೀಂದರ್-ಸಿಧು ನಡುವಿನ ಮನಸ್ತಾಪಕ್ಕೆ ಮದ್ದರೆಯಲು ವರ್ಷಗಳೇ ಬೇಕಾದವು.
ಈಗಲೂ ಛತ್ತೀಸ್ಗಢ, ರಾಜಸ್ಥಾನಗಳಲ್ಲಿ ನಾಯಕತ್ವಕ್ಕಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಹೈಕಮಾಂಡ್ ಏನೂ ಗೊತ್ತಿಲ್ಲದಂತೆ ಸುಮ್ಮನೆ ಕುಳಿತಿದೆ. ಇಂತಹ ಧೋರಣೆಯಿಂದಾಗಿ ಕಾಂಗ್ರೆಸ್ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಲವು ಯುವ ನಾಯಕರನ್ನು ಕಳೆದುಕೊಂಡಿದೆ.