ಕೃಷಿ ಕಾಯಿದೆಗಳಿಗೆ ತಡೆ ನೀಡಿದರೂ ರೈತ ಸಂಘಟನೆಗಳೇಕೆ ಪ್ರತಿಭಟನೆ ನಡೆಸುತ್ತಿವೆ?; ಸುಪ್ರೀಂ ಕೋರ್ಟ್ ಪ್ರಶ್ನೆ

ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಬೇಕು ಎಂದು ರೈತರ ಸಂಘಟನೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್‌ ಹಾಗೂ ಸಿ.ಟಿ.ರವಿಕುಮಾರ್‌ ಅವರ ನೇತೃತ್ವದ ನ್ಯಾಯಪೀಠವು, ಮೂರು ಕೃಷಿ ಕಾಯಿದೆಗಳ ಮಾನ್ಯತೆಯನ್ನು ಕೋರ್ಟ್‌ ನಿರ್ಧರಿಸುತ್ತದೆ. ಈಗಾಗಲೇ ಕಾಯಿದೆಗಳಿಗೆ ತಡೆ ನೀಡಲಾಗಿದೆ. ಸರಕಾರವೂ ಸದ್ಯಕ್ಕೆ ಜಾರಿಗೊಳಿಸುವುದಿಲ್ಲ ಎಂದು ತಿಳಿಸಿದೆ. ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌ ವಿಚಾರಣೆ ಹಂತದಲ್ಲಿದೆ. ಹೀಗಿದ್ದರೂ ರೈತರು ಪ್ರತಿಭಟನೆ ಏಕೆ ನಡೆಸುತ್ತಿದ್ದಾರೆ? ಎಂದು ಪ್ರಶ್ನಿಸಿತು.

ಕೃಷಿ ಕಾಯಿದೆಗಳಿಗೆ ತಡೆ ನೀಡಿದರೂ ರೈತ ಸಂಘಟನೆಗಳೇಕೆ ಪ್ರತಿಭಟನೆ ನಡೆಸುತ್ತಿವೆ?; ಸುಪ್ರೀಂ ಕೋರ್ಟ್ ಪ್ರಶ್ನೆ
Linkup
ಹೊಸದಿಲ್ಲಿ: ಉತ್ತರ ಪ್ರದೇಶದ ಲಖೀಮ್‌ಪುರದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ನಾಲ್ವರು ರೈತರು ಸೇರಿದಂತೆ 8 ಜನರು ಮೃತಪಟ್ಟ ಬೆನ್ನಲ್ಲೇ ರೈತರ ಪ್ರತಿಭಟನೆಗಳ ಕುರಿತು ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಕೇಂದ್ರ ಸರಕಾರ ವಿವಾದಿತ ಮೂರು ಕೃಷಿ ಕಾಯಿದೆಗಳಿಗೆ ತಡೆ ನೀಡಿದರೂ ರೈತ ಸಂಘಟನೆಗಳೇಕೆ ಪ್ರತಿಭಟನೆ ನಡೆಸುತ್ತಿವೆ ಎಂದು ಪ್ರಶ್ನಿಸಿದೆ. ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಬೇಕು ಎಂದು ರೈತರ ಸಂಘಟನೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್‌ ಹಾಗೂ ಸಿ.ಟಿ.ರವಿಕುಮಾರ್‌ ಅವರ ನೇತೃತ್ವದ ನ್ಯಾಯಪೀಠವು, ಮೂರು ಕೃಷಿ ಕಾಯಿದೆಗಳ ಮಾನ್ಯತೆಯನ್ನು ಕೋರ್ಟ್‌ ನಿರ್ಧರಿಸುತ್ತದೆ. ಈಗಾಗಲೇ ಕಾಯಿದೆಗಳಿಗೆ ತಡೆ ನೀಡಲಾಗಿದೆ. ಸರಕಾರವೂ ಸದ್ಯಕ್ಕೆ ಜಾರಿಗೊಳಿಸುವುದಿಲ್ಲ ಎಂದು ತಿಳಿಸಿದೆ. ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌ ವಿಚಾರಣೆ ಹಂತದಲ್ಲಿದೆ. ಹೀಗಿದ್ದರೂ ರೈತರು ಪ್ರತಿಭಟನೆ ಏಕೆ ನಡೆಸುತ್ತಿದ್ದಾರೆ? ಎಂದು ಪ್ರಶ್ನಿಸಿತು. ಅಲ್ಲದೆ, ನಿಜವಾಗಿಯೂ ಪ್ರತಿಭಟನೆ ಅವಶ್ಯವೇ ಎಂಬ ಕುರಿತು ಅಕ್ಟೋಬರ್‌ 21ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್‌ ತಿಳಿಸಿತು. ಲಖೀಮ್‌ಪುರ ಖೇರಿಯಲ್ಲಿ ರೈತ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ 8 ಜನರು ಮೃತಪಟ್ಟ ಬಗ್ಗೆ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಕೋರ್ಟ್‌ಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇಂತಹ ಘಟನೆಗಳು ನಡೆದಾಗ ಯಾರೂ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ, ಹೊಣೆ ಹೊತ್ತುಕೊಳ್ಳುವುದಿಲ್ಲ’ ಎಂದು ಕೋರ್ಟ್‌ ಬೇಸರ ವ್ಯಕ್ತಪಡಿಸಿತು. ‘ರೈತರ ಪ್ರಾಣಕ್ಕೆ ಕುತ್ತು ಬಂದಾಗ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟಾದಾಗ ಯಾರೂ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಹೀಗಿದ್ದರೂ ರೈತರೇಕೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಔಚಿತ್ಯವೇನಿದೆ?’ ಎಂದು ನ್ಯಾ.ಖಾನ್ವಿಲ್ಕರ್‌ ಪ್ರಶ್ನಿಸಿದರು. ಪ್ರತಿಭಟನೆಗಿಲ್ಲ ಅವಕಾಶ ಜಂತರ್‌ ಮಂತರ್‌ನಲ್ಲಿ 200 ರೈತರು ಸೇರಿ ‘ಸತ್ಯಾಗ್ರಹ’ ನಡೆಸಲು ಅನುಮತಿ ನೀಡಬೇಕು ಎಂದು ರೈತರ ಸಂಘಟನೆ ಸಲ್ಲಿಸಿದ್ದ ಮನವಿಗೆ ನ್ಯಾಯಪೀಠ ಆಕ್ಷೇಪ ವ್ಯಕ್ತಪಡಿಸಿತು. ‘ಸರಕಾರವೇ ಕೃಷಿ ಕಾಯಿದೆಗಳನ್ನು ಜಾರಿ ಮಾಡುವುದಿಲ್ಲ ಎಂದು ತಿಳಿಸಿದೆ. ನಾವು ಸಹ ತಡೆ ನೀಡಿದ್ದೇವೆ. ಪ್ರಕರಣವೀಗ ಕೋರ್ಟ್‌ನಲ್ಲಿದೆ. ಹಾಗಾಗಿ ನಿಮಗೆ ಪ್ರತಿಭಟನೆ ನಡೆಸಲು ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿತು. ಕೃಷಿ ಕಾಯಿದೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಲವು ವ್ಯಕ್ತಿಗಳು ಮತ್ತು ಸಂಘಟನೆಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿವೆ. ಪ್ರಕರಣ ವಿಚಾರಣೆ ಹಂತದಲ್ಲಿರುವಾಗ, ಇದೇ ವ್ಯಕ್ತಿ ಅಥವಾ ಸಂಘಟನೆಗಳಿಗೆ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸುವುದಾಗಿ ನ್ಯಾಯಪೀಠ ಹೇಳಿದೆ. ಬಿಕ್ಕಟ್ಟು ಬಗೆಹರಿಸಲು ಕರೆಯಲಾದ ಸಂಧಾನ ಸಭೆಯಲ್ಲಿ ರೈತ ಮುಖಂಡರು ಪಾಲ್ಗೊಳ್ಳುತ್ತಿಲ್ಲ ಎಂದು ಹರಿಯಾಣ ಸರಕಾರ ಸಲ್ಲಿಸಿರುವ ಮನವಿ ಕುರಿತು 43 ರೈತ ಸಂಘಟನೆಗಳು ಮತ್ತು ಅವುಗಳ ಮುಖಂಡರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿಮಾಡಿದೆ. ಈ ಕುರಿತು ಉತ್ತರಿಸಲು ಸೂಚಿಸಿದೆ. ಕೇಂದ್ರ ಮಂತ್ರಿ ಪುತ್ರನ ವಿರುದ್ಧ ಕೊಲೆ ಕೇಸ್‌ ಲಖೀಮ್‌ಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಸಹಾಯಕ ಗೃಹ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಸ್‌ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಇದೇ ವೇಳೆ, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸುವುದಾಗಿ ಉ.ಪ್ರದೇಶ ಸರಕಾರ ಘೋಷಿಸಿದೆ. ಇದೇ ವೇಳೆ ಲಖೀಮ್‌ಪುರ ಖೇರಿಗೆ ಪ್ರತಿಪಕ್ಷಗಳ ಮುಖಂಡರ ಭೇಟಿಯನ್ನು ಉ.ಪ್ರದೇಶ ಸರ್ಕಾರ ನಿರ್ಬಂಧಿಸಿದೆ. ಸೋಮವಾರ ಹಿಂಸಾಚಾರ ನಡೆದ ಸ್ಥಳಕ್ಕೆ ಹೊರಟಿದ್ದ ಕಾಂಗ್ರೆಸ್‌ ನಾಯಕಿ ಪ್ರಯಾಂಕಾ ಗಾಂಧಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಮಾರ್ಗಮಧ್ಯೆ ತಡೆದು ವಶಕ್ಕೆ ಪಡೆದರು. ಎಸ್‌ಪಿ ಮುಖಂಡ ಅಖಿಲೇಶ್‌ ಯಾದವ್‌, ಛತ್ತೀಸ್‌ಗಢ ಸಿಎಂ, ಪಂಜಾಬ್‌ ಸಿಎಂ, ಆಪ್‌ ಮುಖಂಡರನ್ನು ಪೊಲೀಸರು ತಡೆದರು.