ಕೋವಿಡ್‌ನಿಂದ ಮೃತಪಟ್ಟವರಿಗೆ 30 ದಿನದಲ್ಲಿ ₹50 ಸಾವಿರ ಪಾವತಿ; ಕೇಂದ್ರದ ಪರಿಹಾರಕ್ಕೆ ಸುಪ್ರೀಂ ಸಮ್ಮತಿ

ನ್ಯಾ. ಎಂ. ಆರ್‌. ಶಾ ಅವರ ನೇತೃತ್ವದ ಪೀಠವು, ರಾಜ್ಯ ಸರಕಾರಗಳು ಮರಣ ಪ್ರಮಾಣ ಪತ್ರದಲ್ಲಿ ಸಾವಿಗೆ ಕಾರಣವು 'ಕೋವಿಡ್‌-19' ಎಂದು ನಮೂದಿಸಲಾಗಿಲ್ಲ ಎಂಬ ಒಂದೇ ಕಾರಣಕ್ಕೆ ಪರಿಹಾರ ನಿರಾಕರಿಸುವಂತಿಲ್ಲ. ಅರ್ಜಿಯ ಜತೆಗೆ ಮೃತರ ಕುರಿತು ಸಲ್ಲಿಕೆಯಾಗುವ ವೈದ್ಯರ ವರದಿ, ಚಿಕಿತ್ಸೆ ಸಂಬಂಧಿತ ದಾಖಲೆಗಳನ್ನು ಕೂಡ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು. ಏಕಾ ಏಕಿಯಾಗಿ ಪರಿಹಾರದ ಅರ್ಜಿ ತಿರಸ್ಕರಿಸುವಂತಿಲ್ಲ ಎಂದು ಕೋರ್ಟ್‌ ಖಡಕ್ಕಾಗಿ ನಿರ್ದೇಶಿಸಿದೆ.

ಕೋವಿಡ್‌ನಿಂದ ಮೃತಪಟ್ಟವರಿಗೆ 30 ದಿನದಲ್ಲಿ ₹50 ಸಾವಿರ ಪಾವತಿ; ಕೇಂದ್ರದ ಪರಿಹಾರಕ್ಕೆ ಸುಪ್ರೀಂ ಸಮ್ಮತಿ
Linkup
ಹೊಸದಿಲ್ಲಿ: ಕೊರೊನಾ ವೈರಾಣು ಸೋಂಕಿನಿಂದ ಮೃತಪಟ್ಟಿರುವವರ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ನೀಡುವ ಕೇಂದ್ರ ಸರಕಾರದ ಪ್ರಸ್ತಾವನೆಗೆ ಸುಪ್ರೀಂಕೋರ್ಟ್‌ ಸಮ್ಮತಿ ಸೂಚಿಸಿದೆ. ಈ ಹಿಂದೆ ಸೋಂಕಿಗೆ ಬಲಿಯಾದವರು ಮತ್ತು ಮುಂದೆ ಮೃತಪಡುವವರಿಗೂ ಪರಿಹಾರ ಅನ್ವಯವಾಗಲಿದೆ. ರಾಜ್ಯ ಸರಕಾರಗಳು ಈಗಾಗಲೇ ಘೋಷಿಸಿರುವ ಪರಿಹಾರ ಮೊತ್ತದ ಜತೆಗೆ ಕೇಂದ್ರದ ಪರಿಹಾರವು ಪ್ರತ್ಯೇಕವಾಗಿ ಸಂತ್ರಸ್ತರ ಕುಟುಂಬಕ್ಕೆ ಸಿಗಲಿದೆ. ಸಂತ್ರಸ್ತರು ಮೃತರ ಸಂಬಂಧಿ ದಾಖಲೆಗಳನ್ನು ಸಲ್ಲಿಕೆ ಮಾಡಿ , ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಪರಿಹಾರವನ್ನು ತಲುಪಿಸುವಂತೆ ಸುಪ್ರೀಂಕೋರ್ಟ್‌ ಆದೇಶಿಸಿದೆ. ಸೋಮವಾರ ಈ ಸಂಬಂಧ ವಿಚಾರಣೆ ನಡೆಸಿದ ನ್ಯಾ. ಎಂ. ಆರ್‌. ಶಾ ಅವರ ನೇತೃತ್ವದ ಪೀಠವು, ರಾಜ್ಯ ಸರಕಾರಗಳು ಮರಣ ಪ್ರಮಾಣ ಪತ್ರದಲ್ಲಿ ಸಾವಿಗೆ ಕಾರಣವು 'ಕೋವಿಡ್‌-19' ಎಂದು ನಮೂದಿಸಲಾಗಿಲ್ಲ ಎಂಬ ಒಂದೇ ಕಾರಣಕ್ಕೆ ಪರಿಹಾರ ನಿರಾಕರಿಸುವಂತಿಲ್ಲ. ಅರ್ಜಿಯ ಜತೆಗೆ ಮೃತರ ಕುರಿತು ಸಲ್ಲಿಕೆಯಾಗುವ ವೈದ್ಯರ ವರದಿ, ಚಿಕಿತ್ಸೆ ಸಂಬಂಧಿತ ದಾಖಲೆಗಳನ್ನು ಕೂಡ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು. ಅರ್ಜಿದಾರರ ಬಗ್ಗೆ ಸಂಶಯವಿದ್ದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯಬೇಕು. ಏಕಾ ಏಕಿಯಾಗಿ ಪರಿಹಾರದ ಅರ್ಜಿ ತಿರಸ್ಕರಿಸುವಂತಿಲ್ಲ ಎಂದು ಕೋರ್ಟ್‌ ಖಡಕ್ಕಾಗಿ ನಿರ್ದೇಶಿಸಿದೆ. ಸಂತ್ರಸ್ತರು ಸಂಪರ್ಕಿಸಲು ಹಾಗೂ ಪರಿಹಾರದ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ 'ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ' ವಿಳಾಸವನ್ನು ರಾಜ್ಯ ಸರಕಾರಗಳು ಮಾಧ್ಯಮಗಳಲ್ಲಿ ಬಿತ್ತರಿಸಬೇಕು. ಜಾಗೃತಿಗಾಗಿ ಪತ್ರಿಕೆಗಳಲ್ಲೂ ಮುದ್ರಿಸಬೇಕು ಎಂದು ಕೋರ್ಟ್‌ ಸೂಚಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪರಿಹಾರ ನಿಧಿಯಿಂದ ಆಯಾ ರಾಜ್ಯ ಸರಕಾರಗಳು ಕೋವಿಡ್‌ ಸಂತ್ರಸ್ತರಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲಿವೆ ಎಂದು ಕೇಂದ್ರ ಸರಕಾರವು ಕೋರ್ಟ್‌ಗೆ ತಿಳಿಸಿತ್ತು.