ಲಖನೌ: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿ 'ಲಖೀಮ್‌ಪುರ ಖೇರಿ ಹಿಂಸಾಚಾರ ಪ್ರಕರಣ' ಈಗ ರಾಜಕೀಯ ದಾಳವಾಗಿ ಮಾರ್ಪಾಡಾಗಿದೆ.
ಒಂದೆಡೆ ಪ್ರಕರಣದ ತೀವ್ರತೆ ತಗ್ಗಿಸುವುದರ ಜೊತೆಗೆ ಜನರಿಂದ ಛೀಮಾರಿ ಬೀಳುವುದನ್ನು ತಪ್ಪಿಸುವುದು ಮಾತ್ರವಲ್ಲದೇ, ರೈತರ ಕೆಂಗಣ್ಣಿಗೆ ಗುರಿಯಾಗಿ ಮತಗಳು ಕೈತಪ್ಪಿ ಹೋಗೋದನ್ನು ನಿಲ್ಲಿಸಲು ರಾಜ್ಯ ಸರಕಾರವು ರೈತರ ಜತೆ ಸಂಧಾನಕ್ಕೆ ಮುಂದಾಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಸೇರಿ ಬಹುತೇಕ ಪ್ರತಿಪಕ್ಷಗಳು ಪ್ರಕರಣವನ್ನು ರಾಜಕೀಯ ಕೇಂದ್ರಿತ ವಿಷಯವನ್ನಾಗಿ ಮಾರ್ಪಡಿಸಿದ್ದಾರೆ. ಭಾನುವಾರ ಲಖೀಮ್‌ಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಮೃತಪಟ್ಟಿದ್ದಾರೆ ಎಂಬ ವಿಷಯ ಸುದ್ದಿಯಾಗುತ್ತಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ರಾತ್ರಿಯೇ ಲಖನೌಗೆ ಬಂದಿಳಿದರು. ಸೋಮವಾರ ಬೆಳಗಿನ ಜಾವವೇ ಲಖೀಮ್‌ಪುರದತ್ತ ತೆರಳಲು ಮುಂದಾದರು.
ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಬಿಎಸ್‌ಪಿ ನಾಯಕ ಸತೀಶ್ ಚಂದ್ರ ಮಿಶ್ರಾ, ಆಮ್ ಆದ್ಮಿ ಪಾರ್ಟಿಯ ಸಂಜಯ್ ಸಿಂಗ್, ಪಂಜಾಬ್ ಉಪ ಮುಖ್ಯಮಂತ್ರಿ ಸುಖ್‌ಜಿಂದರ್ ಸಿಂಗ್ ರಾಂಧವ ಸೇರಿ ಹಲವು ಪಕ್ಷಗಳ ನಾಯಕರು ಲಖೀಮ್‌ಪುರಕ್ಕೆ ತೆರಳಲು ಮುಂದಾದರು. ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಂತೂ ವಿಮಾನದಲ್ಲಿ ಆಗಮಿಸಲು ತುದಿಗಾಲ ಮೇಲೆ ನಿಂತಿದ್ದರು. ಇದಕ್ಕೂ ಮೊದಲು ಸಹ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ನವಜೋತ್ ಸಿಂಗ್ ಸಿಧು, ಶಿರೋಮಣಿ ಅಕಾಲಿ ದಳದ ನಾಯಕರು ಸಹ ಭೇಟಿ ನೀಡುತ್ತೇವೆ ಎಂದು ಘೋಷಿಸಿದ್ದರು. ಇಷ್ಟೆಲ್ಲ ಅಂಶಗಳನ್ನು ಗಮನಿಸಿದರೆ, ಚುನಾವಣೆಗೆ ಎಲ್ಲ ಪಕ್ಷಗಳು ಸಿದ್ಧವಾಗಿದ್ದು, ರೈತರ ಸಾವಿನ ವಿಚಾರವನ್ನೇ ರಾಜಕೀಯ ದಾಳವನ್ನಾಗಿಸಲು, ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಇದನ್ನು ಬಳಸುತ್ತಿರುವುದು ಸ್ಪಷ್ಟವಾಗಿದೆ.
ಅತ್ತ, ಆಡಳಿತಾರೂಢ ಬಿಜೆಪಿ ಸರಕಾರವೂ ಲಖೀಮ್‌ಪುರ ಖೇರಿ ಹಿಂಸಾಚಾರದ ಗಂಭೀರತೆ ತಗ್ಗಿಸಲು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದು, ಮತಗಳ ಧ್ರುವೀಕರಣ ಆಗುವುದನ್ನು ತಪ್ಪಿಸುವುದರ ಜೊತೆಗೆ ಸರ್ಕಾರದ ಮೇಲಾಗಿರುವ ಕಪ್ಪುಚುಕ್ಕೆಯಿಂದ ಪಾರಾಗಲು ಶತಾಯಗತಾಯ ಪ್ರಯತ್ನ ಪಡುತ್ತಿದೆ. ಕ್ಷಿಪ್ರವಾಗಿ ರೈತರ ಜತೆ ಒಡಂಬಡಿಕೆ ಮಾಡಿಕೊಂಡಿದೆ. ಇದರ ಭಾಗವಾಗಿ ಮೃತ ರೈತರ ಕುಟುಂಬಸ್ಥರಿಗೆ ತಲಾ 45 ಲಕ್ಷ ರೂ. ಪರಿಹಾರ, ಕುಟುಂಬದಲ್ಲಿ ಒಬ್ಬರಿಗೆ ಸರಕಾರಿ ನೌಕರಿ ನೀಡುವುದಾಗಿ ಒಪ್ಪಿದೆ. ಅಲ್ಲದೆ, ಪ್ರತಿಪಕ್ಷಗಳ ನಾಯಕರು ಲಖೀಮ್‌ಪುರ ಖೇರಿಗೆ ಕಾಲಿಡದಂತೆ ನೋಡಿಕೊಳ್ಳುವ ಮೂಲಕ ಪ್ರಕರಣ ಮತ್ತಷ್ಟು ಜಟಿಲಗೊಳ್ಳದಂತೆ ತಡೆದಿದೆ. ಇದೇ ಕಾರಣಕ್ಕೆ ಪ್ರತಿಪಕ್ಷಗಳು ಮತ್ತಷ್ಟು ಕೆರಳಿ ಕೆಂಡವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಕರಣವನ್ನು ಯಾವ ರೀತಿ ಬಳಸುತ್ತಾರೆ ಎಂಬುವುದು ಕುತೂಹಲ ಹುಟ್ಟಿಸಿದೆ.
ನ್ಯಾಯಾಂಗ ತನಿಖೆ, 45 ಲಕ್ಷ ರೂ. ಪರಿಹಾರ:ಲಖೀಮ್‌ಪುರ ಖೇರಿ ಹಿಂಸಾಚಾರ ಪ್ರಕರಣವನ್ನು ರಾಜ್ಯ ಸರಕಾರವು ನ್ಯಾಯಾಂಗ ತನಿಖೆಗೆ ವಹಿಸಿದೆ. ಅಲ್ಲದೆ, ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರು ರೈತರ ಕುಟುಂಬಸ್ಥರಿಗೆ ತಲಾ 45 ಲಕ್ಷ ರೂ. ಪರಿಹಾರ, ಒಬ್ಬರಿಗೆ ಸರಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದೆ. ಗಾಯಗೊಂಡವರಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ‘ರೈತರ ಜತೆ ಮಾತುಕತೆ ನಡೆಸಲಾಗಿದ್ದು, ಒಪ್ಪಂದಕ್ಕೆ ಬರಲಾಗಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಯಲಿದೆ’ ಎಂದು ಸರಕಾರ ತಿಳಿಸಿದೆ.
ಮಿಶ್ರಾ ವಜಾಕ್ಕೆ ಕಾಂಗ್ರೆಸ್ ಪಟ್ಟುಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ‘ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಸಿದಂತೆ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವ ಜತೆಗೆ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಬಂಧಿಸಬೇಕು. ರೈತರ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು’ ಎಂದು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾಆಗ್ರಹಿಸಿದ್ದಾರೆ. ಇನ್ನು ಉತ್ತರ ಪ್ರದೇಶ ಹಿಂಸಾಚಾರದಲ್ಲಿ ರೈತರು ಮೃತಪಟ್ಟ ಹಿನ್ನೆಲೆಯಲ್ಲಿ ದಿಲ್ಲಿಯ ಸಿಂಘು ಗಡಿಯಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ ತನಕ ಪ್ರತಿಭಟನೆ ನಡೆಸಿದ ರೈತರು, ಕಪ್ಪು ಧ್ವಜ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣ ಕುರಿತು ಉನ್ನತ ತನಿಖೆಯಾಗಬೇಕು, ಮೃತ ರೈತರ ಕುಟುಂಬಸ್ಥರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ನಾನು ಕಾರಿನಲ್ಲಿ ಇರಲಿಲ್ಲ: ಆಶಿಶ್
‘ರೈತರ ಮೇಲೆ ಚಲಿಸಿದೆ ಎನ್ನಲಾದ ಕಾರಿನಲ್ಲಿ ನಾನು ಇರಲೇ ಇಲ್ಲ’ ಎಂದು ಆಶಿಶ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ. ‘ನಮ್ಮ ಹಿರಿಕರ ಊರಾದ ಬನ್ವಿರ್‌ಪುರದಲ್ಲಿ ಕುಸ್ತಿ ಪಂದ್ಯ ಆಯೋಜಿಸಿದ್ದು, ನಾನು ಇಡೀ ದಿನ ಅಲ್ಲಿಯೇ ಇದ್ದೆ. ಲಖೀಮ್‌ಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ವೇಳೆ ನಾನು ಇರಲಿಲ್ಲ. ಬೆಳಗ್ಗೆಯಿಂದ ಸಾಯಂಕಾಲದವರೆಗೆ ಬನ್ವಿರ್‌ಪುರದಲ್ಲಿಯೇ ಇದ್ದೆ’ ಎಂದು ಹೇಳಿದ್ದಾರೆ. ‘ನಾವು 35 ವರ್ಷದಿಂದ ಬನ್ವಿರ್‌ಪುರದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸುತ್ತಿದ್ದೇವೆ. ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳನ್ನು ಕರೆದುಕೊಂಡು ಬರಲು ನನ್ನ ಮಹೀಂದ್ರಾ ಥಾರ್ ಸೇರಿ ಕೆಲವು ಕಾರ್‌ಗಳನ್ನು ಕಳುಹಿಸಲಾಗಿತ್ತು. ಆಗ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಕರೆದುಕೊಂಡು ಬರಲು ತೆರಳುತ್ತಿದ್ದ ನನ್ನ ಕಾರಿನ ಮೇಲೆ ದಾಳಿಯಾಗಿದೆ. ಕಲ್ಲು ಹಾಗೂ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ’ ಎಂದು ವಿವರಿಸಿದ್ದಾರೆ. ಆಶಿಶ್ ಅವರಿದ್ದ ಕಾರೇ ರೈತರ ಮೇಲೆ ಚಲಿಸಿ ನಾಲ್ವರು ಮೃತಪಟ್ಟಿದ್ದಾರೆ ಎಂಬುದು ಗಂಭೀರ ಆರೋಪವಾಗಿದೆ.
ಪ್ರಿಯಾಂಕಾ ಗಾಂಧಿ ನಿರಶನಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರು ರೈತರ ಕುಟುಂಬಸ್ಥರನ್ನು ಭೇಟಿ ಮಾಡಲು ತೆರಳುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೇರಿ ಹಲವರನ್ನು ಪೊಲೀಸರು ಬಂಧಿಸಿದರು. ಪ್ರಿಯಾಂಕಾ ಗಾಂಧಿ ಅವರನ್ನು ಮೊದಲಿಗೆ ಪೊಲೀಸರು ಲಖನೌನಲ್ಲಿಯೇ ತಡೆದರು. ಆದರೂ, ಲಖೀಮ್‌ಪುರ ಖೇರಿಗೆ ತೆರಳಲು ಯತ್ನಿಸಿದ ಪ್ರಿಯಾಂಕಾ ಅವರನ್ನು ಸೀತಾಪುರದಲ್ಲಿ ಪೊಲೀಸರು ಬಂಧಿಸಿ, ಅಲ್ಲಿನ ಅತಿಥಿ ಭವನದಲ್ಲಿ ಇರಿಸಿದ್ದಾರೆ. ಬಂಧನ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕಾ, ಉಪವಾಸ ಸತ್ಯಾಗ್ರಹ ಸಹ ನಡೆಸಿದರು. ‘ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿದ್ದಾರೆ. ಅವರೀಗ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸುವವರೆಗೆ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ತಿಳಿಸಿದೆ. ತಮ್ಮನ್ನು ಬಂಧಿಸಿ ಇರಿಸಿರುವ ಕೊಠಡಿಯ ಕಸವನ್ನು ಪ್ರಿಯಾಂಕಾ ತಾವೇ ಗುಡಿಸಿ ಸ್ವಚ್ಛಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ದಿನದ ಪ್ರಮುಖ ಬೆಳವಣಿಗೆಗಳು
- ಲಖೀಮ್‌ಪುರ ಖೇರಿಗೆ ತೆರಳಲು ಬೆಳಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಯತ್ನ, ಬಂಧನ, ಗೆಸ್ಟ್‌ಔಸ್‌ನಲ್ಲಿ ವಾಸ
- ಮುಂಜಾಗ್ರತಾ ಕ್ರಮವಾಗಿ ಲಖೀಮ್‌ಪುರ ಖೇರಿಯಲ್ಲಿ ಅಂತರ್ಜಾಲ ಸೇವೆ ಸ್ಥಗಿತ, ಸೆಕ್ಷನ್ 144 ಜಾರಿ
- ಹಲವು ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಆಕ್ರೋಶ, ಕಾಂಗ್ರೆಸ್ಸಿಗರಿಂದ ಪ್ರತಿಭಟನೆ, ಹಲವರ ಬಂಧನ, ಬಿಡುಗಡೆ
- ಪ್ರತಿಭಟನಾ ನಿರತ ರೈತರೊಂದಿಗೆ ಉತ್ತರ ಪ್ರದೇಶ ಸರಕಾರ ಸಂಧಾನ, ಪರಿಹಾರ ನೀಡಲು ಒಪ್ಪಿಗೆ, ರಾಜಿ ಯಶಸ್ವಿ
- ಅಕ್ಟೋಬರ್ ಆರರವರೆಗೆ ಲಖೀಮ್‌ಪುರದಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆಗೆ ಕೇಂದ್ರ ಸರಕಾರ ಆದೇಶ
ಮಿಶ್ರಾ ಹೇಳಿಕೆಯೇ ಹಿಂಸೆಗೆ ಕಾರಣ?ನಾಲ್ವರು ರೈತರು ಸೇರಿ ಎಂಟು ಜನರ ಸಾವಿಗೆ ಕಾರಣವಾದ, ದೇಶದ ಹಲವೆಡೆ ಪ್ರತಿಭಟನೆ, ಆಕ್ರೋಶಕ್ಕೆ ಗುರಿಯಾದ ಉತ್ತರ ಪ್ರದೇಶದ ಲಖೀಮ್‌ಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಕುಮಾರ್ ಮಿಶ್ರಾ ನೀಡಿದ ಹೇಳಿಕೆಯೇ ಕಾರಣ ಎಂಬ ಪ್ರಶ್ನೆ ಮೂಡುವಂತಾಗಿದೆ. ಹಿಂಸಾಚಾರಕ್ಕೂ ಮುನ್ನ ಪ್ರತಿಭಟನೆ ನಡೆಸುವ ರೈತರಿಗೆ ಅಜಯ್ ಮಿಶ್ರಾ ಎಚ್ಚರಿಕೆ ನೀಡಿದ್ದಾರೆ ಎನ್ನಲಾದ ವಿಡಿಯೊ ವೈರಲ್ ಆಗಿದೆ. ‘ನನ್ನನ್ನು ಎದುರು ಹಾಕಿಕೊಂಡರೆ ರೈತರನ್ನು ಎರಡೇ ನಿಮಿಷದಲ್ಲಿ ಪ್ರತಿಭಟನಾ ಸ್ಥಳದಿಂದ ಕಾಲ್ಕೀಳುವಂತೆ ಮಾಡುತ್ತೇನೆ. ನನಗೂ ಸವಾಲುಗಳೆಂದರೆ ತುಂಬ ಇಷ್ಟ’ ಎನ್ನುವ ಮಿಶ್ರಾ ಹೇಳಿಕೆಯ ವಿಡಿಯೊ ಭಾರಿ ಸುದ್ದಿ ಮಾಡಿದೆ. ಸಚಿವನ ಇಂತಹ ಪ್ರಚೋದನಾತ್ಮಕ ಮಾತುಗಳಿಂದ ಆಕ್ರೋಶಗೊಂಡ ರೈತರು ಸಚಿವನ ಪುತ್ರನಿಗೆ ಸೇರಿದ ಕಾರಿನ ಮೇಲೆ ದಾಳಿ ಮಾಡಲು, ಮುತ್ತಿಗೆ ಹಾಕಲು ಮುಂದಾದರು ಎನ್ನಲಾಗಿದೆ.
‘ನಾನು ಬರೀ ಒಬ್ಬ ಸಚಿವ, ಒಬ್ಬ ಸಂಸದ ಹಾಗೂ ಶಾಸಕನಲ್ಲ. ನಾನು ಸಂಸದನಾಗುವ ಮೊದಲಿನಿಂದಲೂ ನನ್ನ ಬಗ್ಗೆ ಜನರಿಗೆ ಚೆನ್ನಾಗಿ ಗೊತ್ತಿದೆ. ನಾನು ಯಾವಾಗಲೂ ಸವಾಲುಗಳಿಗೆ ಬೆನ್ನು ತೋರಿ ಹೋಗುವವನಲ್ಲ. ನಾನು ಸವಾಲು ಸ್ವೀಕರಿಸಿದ ದಿನ ಅವರು (ರೈತರು) ಪಾಲಿಯಾ ಪ್ರದೇಶ ಮಾತ್ರವಲ್ಲ, ಲಖೀಮ್‌ಪುರವನ್ನೇ ತೊರೆಯಬೇಕಾಗುತ್ತದೆ’ ಎಂದು ಮಿಶ್ರಾ ಹೇಳಿದ್ದಾರೆ ಎನ್ನಲಾಗಿದೆ.
ಪತ್ರಕರ್ತ ಸಹ ಸಾವು?ಹಿಂಸಾಚಾರದಲ್ಲಿ ನಾಲ್ವರು ರೈತರು, ಮೂವರು ಬಿಜೆಪಿ ಕಾರ್ಯಕರ್ತರು ಸೇರಿ ಎಂಟು ಜನ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿರುವ ಬೆನ್ನಲ್ಲೇ ವಾಹನಕ್ಕೆ ಸಿಲುಕಿ ಒಬ್ಬ ಪತ್ರಕರ್ತ ಸಹ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಟಿವಿ ಚಾನೆಲ್ ಒಂದರ ವರದಿಗಾರನಾಗಿರುವ ರತನ್ ಕಶ್ಯಪ್ ಎಂಬುವರು ವರದಿ ಮಾಡಲು ತೆರಳಿದ್ದಾಗ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಈ ವೇಳೆ ವೇಗವಾಗಿ ಚಲಿಸುತ್ತಿದ್ದ ವಾಹನ ಹಾಯ್ದು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.