ಕಾಶ್ಮೀರದಲ್ಲಿ ಐಸಿಸ್‌ ಸ್ಥಾಪಿಸಿದ್ದ ಕಾಸಿಂ ಖೋರಸಾನಿ ಬಂಧನ: ಟೆಲಿಗ್ರಾಂ ಆ್ಯಪ್‌ ಮೂಲಕ ಉಗ್ರ ಸಂಪರ್ಕ..!

​​ಭಾರತದಲ್ಲಿ ಐಸಿಸ್‌ ಅಸ್ತಿತ್ವ ಕುರಿತ ವಿಚಾರ ಧಾರೆಗಳನ್ನು ಐಸಿಸ್‌ ಮ್ಯಾಗಜಿನ್‌ ಸ್ವಾತ್‌ ಅಲ್‌-ಹಿಂದ್‌ ಮೂಲಕ ಪಸರಿಸುವುದು, ಕಣಿವೆಯಲ್ಲಿ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಿಕೊಳ್ಳುವುದು ಸೇರಿ ಹಲವು ವಿಚಾರಗಳ ಕುರಿತು ಟೆಲಿಗ್ರಾಂನಲ್ಲಿ ಚರ್ಚಿಸಲಾಗುತ್ತಿತ್ತು.

ಕಾಶ್ಮೀರದಲ್ಲಿ ಐಸಿಸ್‌ ಸ್ಥಾಪಿಸಿದ್ದ ಕಾಸಿಂ ಖೋರಸಾನಿ ಬಂಧನ: ಟೆಲಿಗ್ರಾಂ ಆ್ಯಪ್‌ ಮೂಲಕ ಉಗ್ರ ಸಂಪರ್ಕ..!
Linkup
: ಜಮ್ಮು-ಕಾಶ್ಮೀರದಲ್ಲಿ ಐಸಿಸ್‌ ಸಂಸ್ಥಾಪಕರಲ್ಲಿ ಒಬ್ಬನಾದ ಹಾಗೂ ಆತನ ಇಬ್ಬರು ಸಹಚರರನ್ನು ಸೋಮವಾರ ಬಂಧಿಸಲಾಗಿದ್ದು, ಆ ಮೂಲಕ ಕಣಿವೆಯಲ್ಲಿ ಐಸಿಸ್‌ ಅಸ್ತಿತ್ವವನ್ನು ಭೇದಿಸಿದಂತಾಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿಯೇ ಉಮರ್‌ ನಾಸಿರ್‌ ಭಟ್‌ ಅಲಿಯಾಸ್‌ ಕಾಸಿಂ ಖೋರಸಾನಿಯು ಟೆಲಿಗ್ರಾಂ ಮೆಸೇಜಿಂಗ್‌ ಆ್ಯಪ್‌ ಮೂಲಕ ಐಸಿಸ್‌ ಸದಸ್ಯರ ಜತೆ ಸಂವಹನ ನಡೆಸುತ್ತಿರುವುದನ್ನು ಗುಪ್ತಚರ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಅಲ್ಲದೆ, ಜಮ್ಮು-ಕಾಶ್ಮೀರದಲ್ಲಿ ಇವರ ಚಟುವಟಿಕೆ ಕುರಿತು ನಿಗಾ ವಹಿಸಿದ್ದರು. ಈಗ ಖೋರಸಾನಿ, ಆತನ ಸಹಚರರಾದ ತನ್ವೀರ್‌ ಅಹ್ಮದ್‌ ಭಟ್‌ ಹಾಗೂ ರಮೀಜ್‌ ಲೋನ್‌ರನ್ನು ಬಂಧಿಸಲಾಗಿದೆ. ಭಾರತದಲ್ಲಿ ಐಸಿಸ್‌ ಅಸ್ತಿತ್ವ ಕುರಿತ (ವಿಲಾಯತ್‌ ಅಲ್‌ - ಹಿಂದ್‌) ವಿಚಾರ ಧಾರೆಗಳನ್ನು ಐಸಿಸ್‌ ಮ್ಯಾಗಜಿನ್‌ ಸ್ವಾತ್‌ ಅಲ್‌-ಹಿಂದ್‌ (ವಾಯ್ಸ್ ಆಫ್‌ ಹಿಂದ್‌) ಮೂಲಕ ಪಸರಿಸುವುದು, ಕಣಿವೆಯಲ್ಲಿ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಿಕೊಳ್ಳುವುದು ಸೇರಿ ಹಲವು ವಿಚಾರಗಳ ಕುರಿತು ಟೆಲಿಗ್ರಾಂನಲ್ಲಿ ಚರ್ಚಿಸಲಾಗುತ್ತಿತ್ತು ಎಂಬುದನ್ನು ಗುಪ್ತಚರ ಇಲಾಖೆ ಪತ್ತೆ ಹಚ್ಚಿದೆ. ಲಷ್ಕರ್ ಉಗ್ರರ ಹತ್ಯೆ ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಲಷ್ಕರೆ ತೊಯ್ಬಾದ ಕಮಾಂಡರ್‌ ಸೇರಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ‘ಶೋಪಿಯಾನ್‌ ಜಿಲ್ಲೆ ಚೆಕ್‌-ಐ-ಸಿದ್ದಿಕ್‌ ಖಾನ್‌ ಪ್ರದೇಶದ ಅರಣ್ಯದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಭಾನುವಾರ ರಾತ್ರಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಗುಂಡಿನ ಚಕಮಕಿಯಲ್ಲಿ ಲಷ್ಕರ್‌ ಕಮಾಂಡರ್‌ ಇಶ್ಫಾಕ್‌ ದರ್‌ ಅಲಿಯಾಸ್‌ ಅಬು ಅಕ್ರಮ್‌ ಸೇರಿ ಇಬ್ಬರು ಉಗ್ರರು ಹತರಾಗಿದ್ದಾರೆ’ ಎಂದು ಡಿಜಿಪಿ ದಿಲ್ಬಾಗ್‌ ಸಿಂಗ್‌ ತಿಳಿಸಿದ್ದಾರೆ. ‘ಇಶ್ಫಾಕ್‌ ದರ್‌ ಹಲವು ಉಗ್ರ ದಾಳಿಯಲ್ಲಿ ಭಾಗಿಯಾಗಿದ್ದು, ಭದ್ರತಾ ಸಿಬ್ಬಂದಿ, ಪೊಲೀಸರು ಹಾಗೂ ನಾಗರಿಕರ ಹತ್ಯೆಯ ರೂವಾರಿಯಾಗಿದ್ದ. ನಿಖರ ಯೋಜನೆ ರೂಪಿಸಿ ದಾಳಿ ಮಾಡುವಲ್ಲಿ ನಿಪುಣನಾಗಿದ್ದ. ಯುವಕರ ಮನವೊಲಿಸಿ, ಅವರನ್ನು ಉಗ್ರ ಸಂಘಟನೆಯತ್ತ ಸೆಳೆಯುತ್ತಿದ್ದ’ ಎಂದು ಅವರು ಮಾಹಿತಿ ನೀಡಿದ್ದಾರೆ.