ಪಂಜಾಬ್‌ನಲ್ಲಿ ತೀವ್ರಗೊಂಡ ಕಾಂಗ್ರೆಸ್‌ ಬಂಡಾಯ, ಖರ್ಗೆ ನೇತೃತ್ವದ ಸಮಿತಿ ರಚಿಸಿದ ಸೋನಿಯಾ

ಪಂಜಾಬ್‌ನಲ್ಲಿ ಬಂಡಾಯ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಅಸಮಧಾನಿತರ ದನಿ ಆಲಿಸಲು ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಮೂವರು ಸದಸ್ಯರ ಸಮಿತಿ ರಚಿಸಿದ್ದಾರೆ.

ಪಂಜಾಬ್‌ನಲ್ಲಿ ತೀವ್ರಗೊಂಡ ಕಾಂಗ್ರೆಸ್‌ ಬಂಡಾಯ, ಖರ್ಗೆ ನೇತೃತ್ವದ ಸಮಿತಿ ರಚಿಸಿದ ಸೋನಿಯಾ
Linkup
ಅಮೃತಸರ: ಕೆಲವೇ ಕೆಲವು ರಾಜ್ಯದಲ್ಲಿಯಷ್ಟೇ ಅಧಿಕಾರದಲ್ಲಿರುವ , ಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿರುವ ಪಂಜಾಬ್‌ನಲ್ಲಿ ಭಾರಿ ಬಂಡಾಯ ಎದುರಿಸುತ್ತಿದೆ. ಅಲ್ಲಿನ ಮುಖ್ಯಮಂತ್ರಿ ಕ್ಯಾಪ್ಟನ್‌ ವಿರುದ್ಧ ಶಾಸಕರು ಮತ್ತು ಸಚಿವರು ಅಸಮಧಾನಗೊಂಡಿದ್ದಾರೆ. 2017ರಲ್ಲಿ, ಅಕಾಲಿದಳ-ಬಿಜೆಪಿ ಮೈತ್ರಿಕೂಟದ 10 ವರ್ಷಗಳ ಅಧಿಕಾರ ನಂತರ ಮಾಸ್‌ ಲೀಡರ್ ಇಮೇಜ್‌ನ ಅಮರಿಂದರ್‌ ಸಿಂಗ್‌ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಎಎಪಿಯ ಭಾರಿ ಪೈಪೋಟಿಯ ನಡುವೆಯೂ ಕಾಂಗ್ರೆಸ್‌ ಸ್ವಂತ ಬಲದಿಂದ ಅಧಿಕಾರಕ್ಕೇರಿತ್ತು. ಆದರೆ ಮುಂದಿನ ವರ್ಷದ (2022) ಚುನಾವಣೆಯಲ್ಲಿ ಸಿಂಗ್‌ ನಾಯಕತ್ವದಲ್ಲಿ ನಾವು ಗೆಲ್ಲಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ನಾಯಕರು ಹೇಳಲಾರಂಭಿಸಿದ್ದಾರೆ. ಬಂಡಾಯ ಹೆಚ್ಚಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಮೂರು ಸದಸ್ಯರ ಸಮಿತಿ ರಚಿಸಿದ್ದಾರೆ. ಪ್ರತಿ ನಾಯಕರನ್ನು ವೈಯಕ್ತಿಕವಾಗಿ ಭೇಟಿಯಾಗುವಂತೆ ಈ ತಂಡಕ್ಕೆ ಸೂಚನೆ ನೀಡಲಾಗಿದೆ. ಈ ತಂಡ ಸೋಮವಾರ 25 ನಾಯಕರ ಜತೆ ಸಭೆ ನಡೆಸಿದೆ. ತಂಡದಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸುನಿಲ್‌ ಜಾಖರ್‌ ಕೂಡ ಇದ್ದಾರೆ. ಸಮಿತಿಯು ಶನಿವಾರ ದಿಲ್ಲಿಯಲ್ಲಿ ಸಭೆ ನಡೆಸಿತ್ತು. ನಂತರ ಎಲ್ಲಾ ಸಂಸದರು, ಶಾಸಕರು, ಎಲ್ಲಾ ಘಟಕಗಳ ಹಾಲಿ ಮತ್ತು ಮಾಜಿ ಮುಖ್ಯಸ್ಥರನ್ನು ಭೇಟಿಯಾಗಲು ನಿರ್ಧರಿಸಿತ್ತು. ಇದಾದ ಬೆನ್ನಿಗೆ ಸರಣಿ ಸಭೆಗಳು ನಡೆಯುತ್ತಿವೆ. ಸಭೆಯಲ್ಲಿ ಹಲವು ನಾಯಕರು, ಅಮರಿಂದರ್‌ ಸಿಂಗ್‌ ವಿರುದ್ಧ ಹಲವು ಆರೋಪಗಳನ್ನು ಹೊರಿಸಿದ್ದಾರೆ. ಅವುಗಳಲ್ಲಿ, ಮಿಟೂ ಪ್ರಕರಣದ ವೇಳೆ ಸಚಿವರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿದೆ. ಪ್ರಮುಖವಾಗಿ 2015ರಲ್ಲಿ ಗುರುಗ್ರಂಥ ಸಾಹೀಬ್‌ ಅಪವಿತ್ರಗೊಳಿಸಿದ್ದ ಪ್ರಕರಣ ಹಾಗೂ ಶಾಂತಿಯುತ ಪ್ರತಿಭಟನೆ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಪ್ರಕರಣದ ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಈ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ನೀಡಲಾಗುವುದು ಎನ್ನುವ ಭರವಸೆಯನ್ನು ಪಕ್ಷ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲೇ ನೀಡಿತ್ತು. ಹಾಗಾಗಿ ಈ ಬಾರಿ ಇದು ಚುನಾವಣೆಯಲ್ಲಿ ಜನರ ವಿರೋಧಕ್ಕೆ ಕಾರಣವಾಗಬಹುದು ಎಂಬುದು ಹಲವು ನಾಯಕರ ಅಭಿಪ್ರಾಯವಾಗಿದೆ. ಇನ್ನು ಕ್ರಿಕೆಟಿಗ ಕಂ ರಾಜಕಾರಣಿ ನವಜೋತ್‌ ಸಿಂಗ್‌ ಸಿಧು ಪಕ್ಷದೊಳಗಿನ ಸಿಂಗ್‌ ಪ್ರಮುಖ ವಿರೋಧಿಯಾಗಿದ್ದಾರೆ. 2017ರಲ್ಲಿ ಅಧಿಕಾರಕ್ಕೆ ಬಂದಾಗ ಸಿಧು ಡಿಸಿಎಂ ಹುದ್ದೆಯ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಆ ಹುದ್ದೆ ನೀಡದೇ ಸಾಮಾನ್ಯ ಸಚಿವ ಸ್ಥಾನ ಮಾತ್ರ ನೀಡಲಾಗಿತ್ತು. ನಂತರ ಇಬ್ಬರ ನಡುವೆಯೂ ಶೀತಲ ಸಮರ ಜೋರಾಗಿ ಅವರು ರಾಜೀನಾಮೆ ನೀಡಿ ಸಂಪುಟದಿಂದ ಹೊರಬಂದಿದ್ದರು. ಹೀಗಿದ್ದೂ ಇಬ್ಬರ ನಡುವೆ ಬಹಿರಂಗ ಗುದ್ದಾಟ ಮುಂದುವರಿದೇ ಇದೆ. ಒಮ್ಮೆಯಂತೂ ಸಿಧು ವಿರೋಧ ಪಕ್ಷ ಎಎಪಿ ಸೇರಬಹುದು ಎಂದೂ ಸಿಂಗ್‌ ಆರೋಪಿಸಿದ್ದರು. ಇದರಿಂದ ಕೆರಳಿರುವ ಸಿಧು, ಸಿಎಂ ತಮ್ಮ ಆರೋಪ ಸಾಬೀತುಪಡಿಸಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಈಗ ಹೈಕಮಾಂಡ್‌ ಮಧ್ಯ ಪ್ರವೇಶಿಸಿದ್ದು, ತಾಳ್ಮೆಯಿಂದ ಕಾಯುವುದಾಗಿ ಸಿಧು ಹೇಳಿದ್ದಾರೆ. ಹಾಗಾಗಿ ಮುಂದಿನ ಬೆಳವಣಿಗೆಗಳು ಯಾವ ತಿರುವು ಪಡೆದುಕೊಳ್ಳಲಿವೆ ಎಂಬುದು ಕುತೂಹಲ ಮೂಡಿಸಿದೆ.