ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ದಿಗ್ವಿಜಯ ಸಾಧಿಸಿ ಮತ್ತೊಮ್ಮೆ ಅಧಿಕಾರ ಹಿಡಿಯುವತ್ತ ಸಾಗಿದೆ. ತೀವ್ರ ಪೈಪೋಟಿ ನೀಡುವ ನಿರೀಕ್ಷೆ ಮೂಡಿಸಿದ್ದ , ಗಮನಾರ್ಹ ಸಾಧನೆ ತೋರಿದ್ದರೂ ದೀದಿಯಿಂದ ಅಧಿಕಾರ ಕಸಿದುಕೊಳ್ಳುವ ಪ್ರಯತ್ನದಲ್ಲಿ ವಿಫಲವಾಗಿದೆ.
ಬಂಗಾಳದಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಬೇಕೆಂದು ವ್ಯಾಪಕ ಪ್ರಚಾರ ನಡೆಸಿದ್ದ ಬಿಜೆಪಿಗೆ ಇದು ದೊಡ್ಡ ಮುಖಭಂಗ. ದೀದಿ ವಿರುದ್ಧದ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಲು ಬಿಜೆಪಿಯು ಟಿಎಂಸಿಯ ಅನೇಕ ಮುಖಂಡರನ್ನು ತನ್ನತ್ತ ಸೆಳೆದುಕೊಂಡಿತ್ತು. ಸಿನಿಮಾ, ಚಿತ್ರರಂಗದ ತಾರೆಯರನ್ನು ಕಣಕ್ಕಿಳಿಸಿತ್ತು ಹಾಗೂ ಪ್ರಚಾರಕ್ಕೆ ಬಳಸಿಕೊಂಡಿತ್ತು. ಆದರೆ ದೀದಿಯ ಮೂರೆಲೆಯ ಗಿಡವು ಬಿಜೆಪಿಯ ಕಮಲವನ್ನು ಅರಳಲು ಬಿಟ್ಟಿಲ್ಲ.
ಬಂಗಾಳದಲ್ಲಿ ಬಿಜೆಪಿ ಎದುರು ಅಮೋಘ ಗೆಲುವು ದಾಖಲಿಸಿದ್ದರೂ, ನಂದಿಗ್ರಾಮ ಕ್ಷೇತ್ರದಲ್ಲಿ ತಮ್ಮ ಮಾಜಿ ಸಹೋದ್ಯೋಗಿಯ ಎದುರೇ ತೀವ್ರ ಪೈಪೋಟಿ ಎದುರಿಸಿರುವುದು ಮಮತಾ ಬ್ಯಾನರ್ಜಿಗೆ ತೀವ್ರ ಆಘಾತ ಉಂಟುಮಾಡಿದೆ. ಬಂಗಾಳದಲ್ಲಿ ನೆಲೆಯನ್ನೇ ಹೊಂದಿರದ ಕೇಸರಿ ಪಡೆ, ಟಿಎಂಸಿ ಸರ್ಕಾರಕ್ಕೆ ಪ್ರಮುಖ ಎದುರಾಳಿಯಾಗಿ ವಿಪಕ್ಷ ಸ್ಥಾನದಲ್ಲಿ ಕೂರುತ್ತಿದೆ. ಬಿಜೆಪಿ ಪಾಲಿಗೆ ಈ ಎರಡೂ ಸಣ್ಣ ಸಾಧನೆಯೇನಲ್ಲ.
ಕಳೆದ ಲೋಕಸಭೆ ಚುನಾವಣೆಯಲ್ಲಿ ತನಗೆ ದೊರೆತ ಬೃಹತ್ ಗೆಲುವಿನ ಭರವಸೆಯಲ್ಲಿ, ಟಿಎಂಸಿಯನ್ನು ಅದರ ನೆಲದಲ್ಲಿ ಧೂಳೀಪಟ ಮಾಡಲು ಬಿಜೆಪಿ ಯೋಜನೆ ರೂಪಿಸಿತ್ತು. ಒಂದು ಕಾಲದಲ್ಲಿ ಬಂಗಾಳವನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿ ಇರಿಸಿಕೊಂಡಿದ್ದ ಎಡಪಕ್ಷಗಳು ಹೇಳ ಹೆಸರಿಲ್ಲದಂತೆ ನೆಲಕಚ್ಚಿರುವಾಗ ಮತ್ತು ಸತತ ಎರಡು ಅವಧಿಗಳಲ್ಲಿ ಅಧಿಕಾರ ನಡೆಸಿರುವ ಮಮತಾ ವಿರುದ್ಧ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಇರಲಿದೆ ಎಂಬ ವಿಶ್ವಾಸ ಬಿಜೆಪಿ ಉತ್ಸಾಹ ಹೆಚ್ಚಿಸಿತ್ತು. ಅದಕ್ಕೆ ಪೂರಕವಾಗಿ ಸುವೇಂದು ಅಧಿಕಾರಿ ಹಾಗೂ ಮುಂತಾದ ಟಿಎಂಸಿ ನಾಯಕರು ಕೇಸರಿ ಪಡೆಯನ್ನು ಸೇರಿಕೊಂಡರು. ಬಿಜೆಪಿ ಚಾಣಾಕ್ಷ ಅಮಿತ್ ಶಾ ತಮ್ಮನ್ನು ಗೆಲ್ಲಿಸುವುದು ಶತಃಸಿದ್ಧ ಎಂಬ ಭರವಸೆ ಅವರಲ್ಲಿ ಇದ್ದಂತಿತ್ತು. ಇದಕ್ಕಾಗಿಯೇ ಅವರು ದೀದಿಯನ್ನು ಎದುರು ಹಾಕಿಕೊಳ್ಳುವ ಧೈರ್ಯ ಪ್ರದರ್ಶಿಸಿದ್ದರು. ಆದರೆ ಬಿಜೆಪಿ ನಂಬಿ ಬಂದಿದ್ದ ಅನೇಕ ನಾಯಕರು ಇಲ್ಲಿ ಸೋಲಿನ ಹೊಡೆತ ಅನುಭವಿಸಿದ್ದಾರೆ.
ಬಂಗಾಳದಲ್ಲಿ ಚುನಾವಣೆ ಸಮೀಪಿಸಿದ ಸಂದರ್ಭದಿಂದ ಸುಮಾರು 34 ಶಾಸಕರು ಟಿಎಂಸಿ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಆದರೆ ಇವರಲ್ಲಿ ಬಿಜೆಪಿಯ ಟಿಕೆಟ್ ದೊರಕಿದ್ದು 13 ಮಂದಿಗೆ ಮಾತ್ರ. ಬಿಜೆಪಿಯಿಂದ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸದೊಂದಿಗೆ ಪಕ್ಷಾಂತರ ಮಾಡಿದ್ದ ಮುಖಂಡರಿಗೆ ಇದು ತೀವ್ರ ಮುಜುಗರ ಉಂಟುಮಾಡಿತ್ತು. ಹೀಗೆ ಟಿಕೆಟ್ ಸಿಕ್ಕವರಲ್ಲಿಯೂ ಬಹುತೇಕರಿಗೆ ಕಹಿಯೇ ಸಿಕ್ಕಿದೆ. ನಿರೀಕ್ಷೆಯಷ್ಟು ಮತಗಳನ್ನು ಪಡೆಯಲು ಬಿಜೆಪಿಗೆ ಸಾಧ್ಯವಾಗದೆ ಇರುವುದಕ್ಕೆ ಈ 'ನಂಬಿಕೆದ್ರೋಹ'ದ ನಡೆಯೂ ಕಾರಣವಿರಬಹುದು.
ಮಮತಾ ಅವರ ಆಪ್ತರ ವರ್ಗದಲ್ಲಿ ಗುರುತಿಸಿಕೊಂಡವರಾದ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್ ಇಬ್ಬರೂ ಗೆಲುವಿನ ನಗೆ ಬೀರಿದ್ದಾರೆ. ಕೃಷ್ಣನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಕುಲ್ ರಾಯ್, ಒಂದು ಕಾಲದಲ್ಲಿ ಮಮತಾ ಅವರ ಬಲಗೈ ಬಂಟ ಎನಿಸಿಕೊಂಡಿದ್ದರು. ಆದರೆ 2001ರಲ್ಲಿ ಜಗತ್‌ದಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಂತರದ 20 ವರ್ಷದಲ್ಲಿ ಕಣಕ್ಕಿಳಿಯುವ ಅವಕಾಶ ಸಿಕ್ಕಿದ್ದು ಇದೇ ಮೊದಲ ಬಾರಿ. ಆಗ ಸೋಲು ಕಂಡಿದ್ದ ಮುಕುಲ್, ಎರಡು ದಶಕದ ನಂತರ ಗೆಲುವು ಅನುಭವಿಸಿದ್ದಾರೆ.
ಕೂಚ್ ಬೆಹಾರ್ ದಕ್ಷಿಣ ಕ್ಷೇತ್ರದ ಟಿಎಂಸಿ ಶಾಸಕರಾಗಿದ್ದ ಮಿಹಿರ್ ಗೋಸ್ವಾಮಿ, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ನಟಬರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇಲ್ಲಿನ ಹಾಲಿ ಶಾಸಕ, ಟಿಎಂಸಿಯ ರಬೀಂದ್ರ ನಾಥ್ ಘೋಷ್‌ಗೆ ಅವರು ಸೋಲುಣಿಸಿದ್ದಾರೆ.
ದೊಮ್ಜುರ್‌ನಲ್ಲಿ ಟಿಎಂಸಿಯಿಂದ ಎರಡು ಬಾರಿ ಗೆದ್ದಿದ್ದ ರಾಜಿಬ್ ಬ್ಯಾನರ್ಜಿ, ಈ ಬಾರಿ ಬಿಜೆಪಿ ಪಾಳೆಯಕ್ಕೆ ಜಿಗಿದ್ದರು. ಅವರ ಹ್ಯಾಟ್ರಿಕ್ ಗೆಲುವಿನ ಕನಸನ್ನು ಟಿಎಂಸಿ ಅಭ್ಯರ್ಥಿ ಕಲ್ಯಾಣೇಂದು ಘೋಷ್ ನುಚ್ಚುನೂರು ಮಾಡಿದ್ದಾರೆ.
ಭಾರತದ ಕ್ರಿಕೆಟ್ ಸಂಸ್ಥೆ ಬಿಸಿಸಿಐನ ಮಾಜಿ ಅಧ್ಯಕ್ಷ, ದಿವಂಗತ ಜಗಮೋಹನ್ ದಾಲ್ಮಿಯಾ ಅವರ ಮಗಳು ಬೈಶಾಲಿ ದಾಲ್ಮಿಯಾ ಅವರನ್ನು ಪಕ್ಷದ ವಿರುದ್ಧ ಮಾತನಾಡಿದ್ದಕ್ಕಾಗಿ ಉಚ್ಚಾಟನೆ ಮಾಡಲಾಗಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಅವರು ಬಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಡಾ. ರಾಣಾ ಚಟರ್ಜಿ ಎದುರು ಸೋಲು ಕಂಡಿದ್ದಾರೆ.
ಡೈಮಂಡ್ ಹಾರ್ಬರ್‌ನಲ್ಲಿ ಬಿಜೆಪಿಯ ದೀಪಕ್ ಹಲ್ದೆರ್, ಟಿಎಂಸಿಯ ಪನ್ನಲಾಲ್ ಹಲ್ದೆರ್ ಎದುರು ಸೋಲು ಕಂಡಿದ್ದಾರೆ. ದೀಪಕ್ ಅವರು ಟಿಎಂಸಿಯಿಂದ ಎರಡು ಬಾರಿ ಶಾಸಕರಾಗಿದ್ದರು. ಸಿಂಗೂರ್‌ನಲ್ಲಿ ಟಿಎಂಸಿ ತೊರೆದು ಬಂದಿದ್ದ ರವೀಂದ್ರನಾಥ್ ಭಟ್ಟಾಚಾರ್ಯಗೆ ಕೂಡ ಸೋಲಾಗಿದೆ. ಇಲ್ಲಿ ರಬೀಂದ್ರನಾಥ್ ಅವರಿಗೆ ಟಿಕೆಟ್ ನೀಡುವುದಕ್ಕೆ ಬಿಜೆಪಿಯಲ್ಲಿಯೇ ತೀವ್ರ ವಿರೋಧವಿತ್ತು.
ಜಗತ್‌ದಲ್‌ನಲ್ಲಿ ಅರಿಂದಮ್ ಭಟ್ಟಾಚಾರ್ಯ, ಟಿಎಂಸಿಯ ಸೋಮೆನಾಥ್ ಶ್ಯಾಮ್ ಇಚಿನಿ ಎದುರು ಪರಾಭವ ಹೊಂದಿದ್ದಾರೆ. ಅರಿಂದಮ್ ಕಳೆದ ಚುನಾವಣೆಯಲ್ಲಿ ಶಾಂತಿಪುರ್ ಕ್ಷೇತ್ರದಲ್ಲಿ ಟಿಎಂಸಿಯಿಂದ ಕಣಕ್ಕಿಳಿದು ಗೆದ್ದಿದ್ದರು. ಪಂಡಬೇಶ್ವರ್‌ನಲ್ಲಿ ಟಿಎಂಸಿ ವಿರುದ್ಧ ಬಂಡಾಯವೆದ್ದು ಬಿಜೆಪಿಗೆ ಸೇರಿಕೊಂಡಿದ್ದ ಜಿತೇಂದ್ರ ತಿವಾರಿಗೆ ಸೋಲಿನ ಕಹಿ ಸಿಕ್ಕಿದೆ.
ದುರ್ಗಾಪುರ ಪರ್ಬಾದಲ್ಲಿ ಟಿಎಂಸಿಯ ಹಿರಿಯ ನಾಯಕ ಮತ್ತು ಮುಖ್ಯಮಂತ್ರಿಯ ಮಾಜಿ ಸಲಹೆಗಾರರಾಗಿದ್ದ ದೀಪ್ತಂಗ್ಶು ಚೌಧುರಿ, ಟಿಎಂಸಿಯ ಪ್ರದೀಪ್ ಮಜುಂದಾರ್ ಎದುರು ಸೋಲು ಕಂಡಿದ್ದಾರೆ. ಕಲ್ನಾ ಕ್ಷೇತ್ರದಲ್ಲಿ ಬಿಸ್ವಜಿತ್ ಕುಂಡು ಈ ವರ್ಷದ ಆರಂಭದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು, ಕುಂಡು ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಮುಂದಿಟ್ಟು ಬಿಜೆಪಿಯ ಸುಮಾರು 70 ಕಾರ್ಯಕರ್ತರು ಟಿಎಂಸಿ ಸೇರಿಕೊಂಡಿದ್ದರು. ಭಾನುವಾರದ ಫಲಿತಾಂಶದಲ್ಲಿ ಟಿಎಂಸಿಯ ದೇಬೊಪ್ರಸಾದ್ ಬಾಗ್ ಎದುರು ಕುಂಡು ಅವರಿಗೆ ಮುಖಭಂಗ ಉಂಟಾಗಿದೆ.
ಮಾಂಟೇಸ್ವರದಲ್ಲಿ 2016ರಲ್ಲಿ ಭಾರಿ ಅಂತರದಿಂದ ಗೆಲುವು ಕಂಡಿದ್ದ ಟಿಎಂಸಿ ಶಾಸಕ ಸೈಕತ್ ಪಂಜಾ, ಬಿಜೆಪಿ ಪಾಳೆಯಕ್ಕೆ ಜಿಗಿದಿದ್ದರು. ಆದರೆ ಅವರಿಗೆ ಟಿಎಂಸಿಯ ಸಿದ್ದಿಕುಲ್ಲಾ ಚೌಧುರಿ ಸೋಲಿನ ರುಚಿ ತೋರಿಸಿದ್ದಾರೆ.
ರಾಣಾಘಾಟ್ ಉತ್ತರ ಪಶ್ಚಿಮದಲ್ಲಿ ಟಿಎಂಸಿಯ ಮಾಜಿ ಶಾಸಕ ಪಾರ್ಥ ಸಾರಥಿ ಚಟರ್ಜಿ, 2016ರಲ್ಲಿ ಕಾಂಗ್ರೆಸ್‌ನ ಶಂಕರ್ ಸಿನ್ಹಾ ಎದುರು ಸೋಲು ಕಂಡಿದ್ದರು. ಈ ಬಾರಿ ಪಾರ್ಥಸಾರಥಿ ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಶಂಕರ್ ಸಿನ್ಹಾ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಇಲ್ಲಿ ಪಾರ್ಥಸಾರಥಿ ಮುನ್ನಡೆಯ ಖುಷಿಯಲ್ಲಿದ್ದಾರೆ.