ಕೊಲೆಯಾದ ರೈತರ ಪರ ಮಾತನಾಡಿದ್ದೇ ಮುಳುವಾಯ್ತು; ಬಿಜೆಪಿ ಕಾರ್ಯಕಾರಿಣಿಯಿಂದ ವರುಣ್‌, ಮನೇಕಾ ಔಟ್‌!

ಲಖೀಮ್‌ಪುರ ಖೇರಿ ಘಟನೆಗೆ ಸಂಬಂಧಿಸಿ ರೈತರ ಮೇಲೆ ಕಾರು ಹರಿದ ವಿಡಿಯೋವನ್ನು ಸಂಸದ ವರುಣ್‌ ಗಾಂಧಿ ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡಿ ಘಟನೆಯನ್ನು ಖಂಡಿಸಿದ್ದರು. ಗುರುವಾರ ಸಹ ಮತ್ತೆ ಅದೇ ವಿಡಿಯೋ ಅಪ್‌ಲೋಡ್‌ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಮೃತರ ಪರ ಸಹಾನುಭೂತಿ ವ್ಯಕ್ತಪಡಿಸಿದ್ದರು. ಅಲ್ಲದೇ ಉ.ಪ್ರ. ಸಿಎಂ ಆದಿತ್ಯನಾಥ್‌ಗೆ ಪತ್ರ ಬರೆದು ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದರು. ಇದೀಗ ಸಂತ್ರಸ್ತರ ಪರವಾಗಿ ಧ್ವನಿಯೆತ್ತಿದ್ದೇ ವರುಣ್‌ ಗಾಂಧಿಗೆ ಮುಳುವಾಗಿ ಪರಿಣಮಿಸಿದೆ

ಕೊಲೆಯಾದ ರೈತರ ಪರ ಮಾತನಾಡಿದ್ದೇ ಮುಳುವಾಯ್ತು; ಬಿಜೆಪಿ ಕಾರ್ಯಕಾರಿಣಿಯಿಂದ ವರುಣ್‌, ಮನೇಕಾ ಔಟ್‌!
Linkup
ಹೊಸದಿಲ್ಲಿ: ಲಖೀಮ್‌ಪುರ ಖೇರಿ ಪ್ರಕರಣದಲ್ಲಿ ರೈತರ ಪರ ನಿಲುವು ತಾಳಿರುವ ಸಂಸದ ವರುಣ್‌ ಗಾಂಧಿ ಹಾಗೂ ಅವರ ತಾಯಿ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯಿಂದ ಕೈ ಬಿಡುವ ಮೂಲಕ ಬಿಜೆಪಿ ಎಚ್ಚರಿಕೆ ಮತ್ತು ಪಕ್ಷದ ವಿರುದ್ಧ ಮಾತನಾಡುವಂತಿಲ್ಲ ಎಂಬ ಸಂದೇಶ ರವಾನಿಸಿದೆ.! ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು 80 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದರು. ಫಿಲಿಬಿತ್‌ ಸಂಸದ ವರುಣ್‌ ಗಾಂಧಿ, ಕೇಂದ್ರದ ಮಾಜಿ ಸಚಿವರೂ ಆಗಿರುವ ಸುಲ್ತಾನ್‌ಪುರ ಕ್ಷೇತ್ರದ ಸಂಸದೆ ಮನೇಕಾ ಗಾಂಧಿ ಹಾಗೂ ಕೇಂದ್ರದ ಮತ್ತೊಬ್ಬ ಮಾಜಿ ಸಚಿವ ಬೀರೇಂದ್ರ ಸಿಂಗ್‌ ಅವರನ್ನೂ ಕಾರ್ಯಕಾರಿಣಿಯಿಂದ ಕೈ ಬಿಡಲಾಗಿದೆ. ಬೀರೇಂದ್ರ ಸಿಂಗ್‌ ಸಹ ಕೇಂದ್ರದ ಕೃಷಿ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ಸಹಾನುಭೂತಿ ಹೊಂದಿದ್ದಾರೆ. ಲಖೀಮ್‌ಪುರ ಖೇರಿ ಘಟನೆಗೆ ಸಂಬಂಧಿಸಿ ರೈತರ ಮೇಲೆ ಕಾರು ಹರಿದ ವಿಡಿಯೋವನ್ನು ಸಂಸದ ವರುಣ್‌ ಗಾಂಧಿ ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡಿ ಘಟನೆಯನ್ನು ಖಂಡಿಸಿದ್ದರು. ಗುರುವಾರ ಸಹ ಮತ್ತೆ ಅದೇ ವಿಡಿಯೋ ಅಪ್‌ಲೋಡ್‌ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಮೃತರ ಪರ ಸಹಾನುಭೂತಿ ವ್ಯಕ್ತಪಡಿಸಿದ್ದರು. ಅಲ್ಲದೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪತ್ರ ಬರೆದು ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದರು. ಇದೀಗ ಸಂತ್ರಸ್ತರ ಪರವಾಗಿ ಧ್ವನಿಯೆತ್ತಿದ್ದೇ ವರುಣ್‌ ಗಾಂಧಿಗೆ ಮುಳುವಾಗಿ ಪರಿಣಮಿಸಿದ್ದು, ಕಾರ್ಯಕಾರಿಣಿಯಿಂದ ಕೈ ಬಿಡುವ ಮೂಲಕ ಪಕ್ಷ ಮತ್ತು ಪಕ್ಷದೊಳಗಿನ ನಾಯಕರ ಅನ್ಯಾಯಗಳ ಕುರಿತು ಧ್ವನಿಯೆತ್ತುವಂತಿಲ್ಲ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ ರವಾನಿಸಿದೆ. ಆಡ್ವಾಣಿ, ಜೋಶಿಗೆ ಸ್ಥಾನ: ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ, ಡಾ.ಮುರಳಿ ಮನೋಹರ ಜೋಶಿ ಅವರಿಗೆ ಸ್ಥಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ರಾಜ್ಯಸಭೆಯಲ್ಲಿ ಸದನ ನಾಯಕ ಪಿಯೂಶ್‌ ಗೋಯಲ್‌, ಮಾಜಿ ಸಚಿವರಾದ ಪ್ರಕಾಶ್‌ ಜಾವಡೇಕರ್‌, ರವಿಶಂಕರ ಪ್ರಸಾದ್‌, ಡಾ.ಹರ್ಷವರ್ಧನ್‌ ಅವರಿಗೂ ಅವಕಾಶ ನೀಡಲಾಗಿದೆ. ರಾಷ್ಟ್ರೀಯ ಕಾರ್ಯಕಾರಿಣಿಯು 80 ಸದಸ್ಯರಲ್ಲದೇ 50 ಮಂದಿ ವಿಶೇಷ ಆಹ್ವಾನಿತರು, 179 ಮಂದಿ ಕಾಯಂ ಸದಸ್ಯರನ್ನೂ ಒಳಗೊಂಡಿದೆ. ಕಾಯಂ ಸದಸ್ಯರ ಪಟ್ಟಿಯಲ್ಲಿ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು, ಹಾಲಿ ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳು, ರಾಜ್ಯಗಳ ಶಾಸಕಾಂಗ ಪಕ್ಷದ ನಾಯಕರು, ರಾಷ್ಟ್ರೀಯ ವಕ್ತಾರರು, ರಾಜ್ಯ ಉಸ್ತುವಾರಿಗಳು, ರಾಜ್ಯ ಘಟಕಗಳ ಅಧ್ಯಕ್ಷರು, ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಇರುತ್ತಾರೆ. ರಾಷ್ಟ್ರೀಯ ಕಾರ್ಯಕಾರಿಣಿಯು ಪಕ್ಷದ ಸರಕಾರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತದೆ. ಜತೆಗೆ ಪಕ್ಷದ ನೀತಿ- ನಿಲುವು, ಸಂಘಟನೆಗೆ ಸಂಬಂಧಿಸಿ ತೀರ್ಮಾನ ಕೈಗೊಳ್ಳುತ್ತದೆ. ಕಳೆದ ವರ್ಷ ಕೋವಿಡ್‌ ಕಾರಣದಿಂದ ಕಾರ್ಯಕಾರಿಣಿ ಸಭೆ ನಡೆದಿರಲಿಲ್ಲ.