Farm Laws: ಮೂರು ಕೃಷಿ ಕಾಯ್ದೆಗಳು ರದ್ದು: ಪ್ರಧಾನಿ ಮೋದಿ ಮಹತ್ವದ ಘೋಷಣೆ

ಕೇಂದ್ರ ಸರ್ಕಾರವು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದೆ. ವ್ಯಾಪಕ ಪ್ರತಿಭಟನೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಈ ಮಹತ್ವದ ಘೋಷಣೆ ಮಾಡಿದ್ದಾರೆ.

Farm Laws: ಮೂರು ಕೃಷಿ ಕಾಯ್ದೆಗಳು ರದ್ದು: ಪ್ರಧಾನಿ ಮೋದಿ ಮಹತ್ವದ ಘೋಷಣೆ
Linkup
ಹೊಸದಿಲ್ಲಿ: ಕಳೆದ ಒಂದು ವರ್ಷದಿಂದ ವ್ಯಾಪಕ ವಿರೋಧ, ಪ್ರತಿಭಟನೆಗೆ ಕಾರಣವಾಗಿದ್ದ ವಿವಾದಾತ್ಮಕ ಮೂರು ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಶುಕ್ರವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಮೋದಿ ಅವರು ಈ ಮೂರು ಕಾಯ್ದೆಗಳನ್ನು ರದ್ದುಗೊಳಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ. ಗುರು ಪರಬ್ ಅಂಗವಾಗಿ ಶುಕ್ರವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಪಂಜಾಬ್ ಮತ್ತು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸನ್ನಿಹಿತದಲ್ಲಿ ಇರುವಾಗಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೂರು ಕೃಷಿ ಕಾಯ್ದೆಗಳು ಸಣ್ಣ ರೈತರನ್ನು ಸಬಲೀಕರಣಗೊಳಿಸಲಿವೆ. ಇವುಗಳನ್ನು ಕೃಷಿ ವಲಯದಲ್ಲಿ ಮತ್ತಷ್ಟು ಸುಧಾರಣೆಗಾಗಿ ಜಾರಿಗೊಳಿಸಲಾಗಿದೆ. ಹಿಂದಿನ ಸರ್ಕಾರಗಳೂ ಕೃಷಿ ಕಾಯ್ದೆಗಳ ಬಗ್ಗೆ ಚಿಂತನೆ ನಡೆಸಿದ್ದವು. ದೇಶದ ಮೂಲೆ ಮೂಲೆಗಳಲ್ಲಿ ಕೃಷಿಯಲ್ಲಿ ತೊಡಗಿರುವ ಎಲ್ಲರೂ ಈ ಕಾಯ್ದೆಗಳನ್ನು ಸ್ವಾಗತಿಸಿದ್ದಾರೆ. ನಮ್ಮ ಕೈಲಾದ ಪ್ರಯತ್ನದ ಬಳಿಕವೂ ಕೆಲವು ರೈತರು ಈ ಕಾಯ್ದೆಗಳ ಬಗ್ಗೆ ತಪ್ಪು ತಿಳಿದುಕೊಂಡಿದ್ದರು ಎಂದು ಮೋದಿ ತಿಳಿಸಿದ್ದಾರೆ. ರೈತರನ್ನು ನಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳಲು ಎಲ್ಲ ಮಟ್ಟದ ಪ್ರಯತ್ನಗಳನ್ನು ನಡೆಸಿದ್ದೆವು. ಅವರ ಆಕ್ಷೇಪಣೆಗಳು ಇರುವ ವಿಭಾಗಗಳಲ್ಲಿ ಬದಲಾವಣೆ ತರಲು ಕೂಡ ಸಿದ್ಧರಿದ್ದೆವು. ಒಂದು ವರ್ಗದ ರೈತರನ್ನು ನಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳಲು ನಮ್ಮಿಂದ ಸಾಧ್ಯವಾಗದೆ ಇರುವುದಕ್ಕೆ ದೇಶದ ಜನತೆಯ ಕ್ಷಮೆ ಕೋರುತ್ತೇನೆ. ನಾವು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ. ಈ ತಿಂಗಳು ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಕಾಯ್ದೆಗಳ ರದ್ದತಿ ಪ್ರತಿಕ್ರಿಯೆಯನ್ನು ಆರಂಭಿಸಲಿದ್ದೇವೆ. ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಮನೆಗಳಿಗೆ ಹಿಂದಿರುಗುವಂತೆ ಮತ್ತು ಹೊಸ ಆರಂಭ ಮಾಡುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ. ರೈತರಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ ನಾನು ನನ್ನ ಐದು ದಶಕಗಳ ಸಾರ್ವಜನಿಕ ಜೀವನದಲ್ಲಿ ರೈತರ ಸಂಕಷ್ಟಗಳನ್ನು ನೋಡಿದ್ದೇನೆ. ನಾನು 2014ರಲ್ಲಿ ಪ್ರಧಾನಿಯಾದಾಗ ನಮ್ಮ ಸರ್ಕಾರವು ರೈತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿತ್ತು. ನೂರರಲ್ಲಿ ಎಂಬತ್ತು ಮಂದಿ ಎರಡು ಹೆಕ್ಟೇರ್‌ಗೂ ಕಡಿಮೆ ಭೂಮಿ ಹೊಂದಿದ್ದಾರೆ ಮತ್ತು ಅವರ ಸಂಖ್ಯೆ 10 ಕೋಟಿಗೂ ಅಧಿಕವಿದೆ ಎಂಬ ಸತ್ಯ ಅನೇಕ ಜನರಿಗೆ ಗೊತ್ತಿಲ್ಲ. ಈ ಜಮೀನುಗಳ ಮೂಲಕವೇ ಅವರು ಕುಟುಂಬವನ್ನು ಸಲಹುತ್ತಿದ್ದಾರೆ. ರೈತರು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆಯನ್ನು ಪಡೆದುಕೊಳ್ಳುವುದನ್ನು ನೋಡಿಕೊಳ್ಳಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಣ್ಣ ರೈತರನ್ನು ವಿಮೆಯ ಅಡಿ ತರಲಾಗಿದೆ. ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಈ ಸರ್ಕಾರದ ಪ್ರಮುಖ ಸಾಧನೆಗಳಲ್ಲಿ ಒಂದು. ಕೇಂದ್ರ ಸರ್ಕಾರವು ಈವರೆಗೂ 22 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ರೈತರಿಗೆ ನೀಡಲಾಗಿದೆ. ಇದು ಕೃಷಿ ಉತ್ಪಾದನೆಯನ್ನು ವೃದ್ಧಿಸಿದೆ. ಬೆಳೆ ವಿಮೆಯನ್ನು ಪರಿಣಾಮಕಾರಿಯಾಗಿ ಮಾಡಲಾಗಿದೆ. ಗ್ರಾಮೀಣ ಮಾರುಕಟ್ಟೆ ಮೂಲಸೌಕರ್ಯವನ್ನು ಸುಧಾರಿಸಲಾಗಿದೆ. ರೈತರ ಅಭಿವೃದ್ಧಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ರೈತರಿಗೆ ವಿಮೆಗಳು ಸಮರ್ಪಕವಾಗಿ ಸಿಗುವಂತೆ ಖಾತರಿ ಪಡಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಹಾಗೂ ಸಗಟು ವ್ಯಾಪಾರ ಮಾರುಕಟ್ಟೆ ವ್ಯವಹಾರಗಳನ್ನು ಆನ್‌ಲೈನ್‌ನಲ್ಲಿ ನಡೆಸುವಂತೆ ಮಾಡಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆ. ಕೇಂದ್ರದ ಕೃಷಿ ಬಜೆಟ್ ಅನ್ನು ಐದು ಪಟ್ಟಿಗೂ ಅಧಿಕ ಹೆಚ್ಚಿಸಲಾಗಿದೆ. ಕಿರು ನೀರಾವರಿ ಅನುದಾನ ಹಂಚಿಕೆಯು ಈಗ 10,000 ಕೋಟಿ ರೂ ಇದೆ. ಪಶು ಸಂಗೋಪನೆ ಮತ್ತು ಮೀನುಗಾರಿಕೆಯಲ್ಲಿ ತೊಡಗಿರುವವರನ್ನೂ ವಿವಿಧ ಯೋಜನೆಗಳ ಫಲಾನುಭವಿಗಳ ಅಡಿಯಲ್ಲಿ ತರಲಾಗಿದೆ ಎಂದು ತಿಳಿಸಿದ್ದಾರೆ. ರೈತರಿಗೆ ಕಡಿಮೆ ಬೆಲೆಯಲ್ಲಿ ಬಿತ್ತನೆ ಬೀಜಗಳು ಮತ್ತು ಹನಿ ನೀರಾವರಿಯಂತಹ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ. ನಾವು ಫಸಲ್ ಬಿಮಾ ಯೋಜನೆಯನ್ನು ಬಲಗೊಳಿಸಿ ಮತ್ತಷ್ಟು ರೈತರನ್ನು ಅದರ ಅಡಿ ತಂದಿದ್ದೇವೆ ಎಂದಿದ್ದಾರೆ. 'ನಾನು ಏನೇ ಮಾಡಿದ್ದರೂ ರೈತರಿಗಾಗಿ ಮಾಡಿದ್ದೇನೆ. ನಾನು ಏನು ಮಾಡುತ್ತಿದ್ದೇನೋ ಅದು ಈ ದೇಶದ ಜನತೆಗಾಗಿ ಮಾಡುತ್ತಿದ್ದೇನೆ. ನಿಮ್ಮ ಆಶೀರ್ವಾದದೊಂದಿಗೆ ನಾನು ಕಠಿಣ ಶ್ರಮದಲ್ಲಿ ಯಾವುದನ್ನೂ ಬಿಟ್ಟಿಲ್ಲ. ಇನ್ನು ಮುಂದೆ ನಾನು ಮತ್ತಷ್ಟು ಕಠಿಣ ಪರಿಶ್ರಮ ಪಡುತ್ತೇನೆ ಎಂದು ಇಂದು ನಿಮಗೆ ಭರವಸೆ ನೀಡುತ್ತೇನೆ. ಇದರಿಂದ ನಿಮ್ಮ ಕನಸುಗಳು, ದೇಶದ ಕನಸುಗಳು ನನಸಾಗಬಹುದು' ಎಂದು ಪ್ರಧಾನಿ ಹೇಳಿದ್ದಾರೆ.