ಬೆದರಿಕೆ ಹಾಕುವ ನಾಯಕರ ಕೈ-ಕಾಲು ಮುರಿಯಿರಿ: ಬಿಜೆಪಿ ಶಾಸಕನ ವಿವಾದ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಜಿದ್ದಾಜಿದ್ದಿ ನಡೆಯುತ್ತಿದ್ದು, ಬಿಜೆಪಿ ಶಾಸಕ ಸ್ವಪನ್‌ ಮಜುಂದಾರ್‌ ಬೆದರಿಕೆ ಹಾಕುವ ತೃಣಮೂಲ ಕಾಂಗ್ರೆಸ್‌ ನಾಯಕರ ಕೈ-ಕಾಲು ಮುರಿಯಿರಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ.

ಬೆದರಿಕೆ ಹಾಕುವ ನಾಯಕರ ಕೈ-ಕಾಲು ಮುರಿಯಿರಿ: ಬಿಜೆಪಿ ಶಾಸಕನ ವಿವಾದ
Linkup
ಕೊಲ್ಕತ್ತಾ: ಪಶ್ಚಿಮ ಬಂಗಾಳ ಶಾಸಕ ಸ್ವಪನ್‌ ಮಜುಂದಾರ್‌ ತೃಣಮೂಲ ಕಾಂಗ್ರೆಸ್‌ ನಾಯಕರ ಕೈ-ಕಾಲು ಮುರಿಯಿರಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ನಾಯಕರು ಹೆದರಿಸಿದರೆ, ಸುಳ್ಳು ಆರೋಪಗಳನ್ನು ಮಾಡಿದರೆ ಅವರ ಕೈ-ಕಾಲು ಮುರಿಯಿರಿ ಎಂದು ಸ್ವಪನ್‌ ಮಜುಂದಾರ್‌ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬೊಂಗಾವ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸ್ವಪನ್‌ ಮಜಂದಾರ್‌ ತೊಂದರೆಗೀಡಾದ ಪಕ್ಷದ ಕಾರ್ಯಕರ್ತರಿಗೆ ಸಂಪೂರ್ಣವಾಗಿ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಟಿಎಂಸಿ ನಾಯಕರು ನಮ್ಮ ಕಾರ್ಯಕರ್ತರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸಿ ನಮ್ಮ ಕಾರ್ಯಕರ್ತರಲ್ಲಿ ಭಯ ಹುಟ್ಟಿಸಿದರೆ ಆ ನಾಯಕ ಸುರಕ್ಷಿತವಾಗಿ ಹಿಂತಿರುಗುವುದಿಲ್ಲ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಆಗಿದ್ದು ಆಗೋಗಿದೆ. ಇನ್ಮೇಲೆ ಸುಮ್ಮನಿರಲು ಆಗಲ್ಲ. ಆತ್ಮರಕ್ಷಣೆಗಾಗಿ ನಿಮ್ಮನ್ನು ಹೆದರಿಸಿದ ಟಿಎಂಸಿ ನಾಯಕನ ಕೈ ಕಾಲುಗಳನ್ನು ಮುರಿದು ನನ್ನ ಬಳಿಗೆ ಬನ್ನಿ. ನಾನು ನಿಮ್ಮ ಪರವಾಗಿ ಇರುತ್ತೇನೆ ಎಂಬ ಭರವಸೆಯನ್ನು ನೀಡುತ್ತೇನೆ ಎಂದು ಸ್ವಪನ್‌ ಮಜುಂದಾರ್ ಪಕ್ಷದ ಸಭೆಯಲ್ಲಿ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ. ಇನ್ನು, ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿಲ್ಲ ಎಂದು ಪಿಟಿಐ ಹೇಳಿದೆ. ಸ್ವಪನ್‌ ಮಜುಂದಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್, ಇದು ಬಿಜೆಪಿ ನಾಯಕರ ಮನಸ್ಥಿತಿ ಮತ್ತು ಸಂಸ್ಕೃತಿಯನ್ನು ತೋರಿಸುತ್ತದೆ. ಇಂತಹ ಭಾಷೆ, ಮಾತು ಮತ್ತು ಬೆದರಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಅವರ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಜನಪ್ರಿಯತೆ ಹೆಚ್ಚಾದ ಹಿನ್ನೆಲೆ ಹತಾಶರಾಗಿರುವ ಮಜುಂದಾರ್‌ ಇಂತಹ ಬೆದರಿಕೆಗಳನ್ನು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಮಾತನಾಡಿ, ಹಿಂಸಾಚಾರದ ರಾಜಕೀಯದಲ್ಲಿ ನಮ್ಮ ಪಕ್ಷಕ್ಕೆ ನಂಬಿಕೆ ಇಲ್ಲ. ಬೊಂಗಾವ್‌ ದಕ್ಷಿಣ ಕ್ಷೇತ್ರದ ಶಾಸಕರು ಇಂತಹ ಹೇಳಿಕೆ ನೀಡಿದ್ದರೆ ಅದಕ್ಕೆ ಸ್ಥಳೀಯ ಟಿಎಂಸಿ ನಾಯಕ ಅಲೋರಾಣಿ ಸರ್ಕಾರ್‌ ಕಾರಣ. ಬೊಂಗಾವ್ ಪುರಸಭೆ ಚುನಾವಣೆಗೂ ಮುನ್ನ ತನ್ನ ರಾಜಕೀಯ ವಿರೋಧಿಗಳನ್ನು ತೊಲಗಿಸುವುದಾಗಿ ಅಲೋರಾಣಿ ಸರ್ಕಾರ್ ಬೆದರಿಕೆ ಒಡ್ಡಿದ್ದರು. ಅದಕ್ಕೆ ಸ್ವಪನ್‌ ಮಜುಂದಾರ್‌ ಪ್ರತಿಕ್ರಿಯಿಸಿರಬಹುದು ಎಂದು ಹೇಳಿದ್ದಾರೆ. ಇನ್ನು, ತಮ್ಮ ಪ್ರದೇಶದಲ್ಲಿ ಯಾವುದೇ ಬಿಜೆಪಿ ಕಾರ್ಯಕರ್ತನಿಗೆ ನಾನು ಬೆದರಿಕೆ ಹಾಕಿಲ್ಲ ಎಂದು ಅಲೋರಾಣಿ ಸರ್ಕಾರ್ ಹೇಳಿದ್ದು, ಈ ಹಿಂದೆಯೂ ನನ್ನ ಮತ್ತು ಇತರ ಟಿಎಂಸಿ ನಾಯಕರ ವಿರುದ್ಧ ಸ್ವಪನ್‌ ಮಜುಂದಾರ್‌ ನಿಂದನೀಯ ಪದಗಳನ್ನು ಬಳಸಿದ್ದರು ಎಂದು ಹೇಳಿದ್ದಾರೆ.