ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ ಮತ್ತೆ 12 ಹೊಸ ತಳಿ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದ ಒಟ್ಟು ಹೊಸ ತಳಿ ಕೇಸ್‌ಗಳ ಸಂಖ್ಯೆ 31ಕ್ಕೆ ತಲುಪಿದೆ. ಇದರಲ್ಲಿ ಮೈಸೂರು ಮತ್ತು ಮಂಗಳೂರಿನ ತಲಾ ಒಂದು ಪ್ರಕರಣಗಳು ಸೇರಿದ್ದು, ಉಳಿದ ಮಂದಿ ಬೆಂಗಳೂರಿನವರಾಗಿದ್ದಾರೆ. ಮೈಸೂರಿನ 9 ವರ್ಷದ ಹೆಣ್ಣುಮಗುವಿಗೆ ಓಮಿಕ್ರಾನ್ ಸೋಂಕು ತಗುಲಿದೆ.
ಸೋಂಕಿತರಲ್ಲಿ ಹೆಚ್ಚಿನವರು ಬ್ರಿಟನ್‌ನಿಂದ ರಾಜ್ಯಕ್ಕೆ ಮರಳಿದವರಾಗಿದ್ದಾರೆ. ಈ ಹೊಸ ಪ್ರಕರಣಗಳಲ್ಲಿ ಮಹಿಳೆಯರ ಸಂಖ್ಯೆ ಅಧಿಕವಾಗಿದೆ. ಹೊಸ ಸೋಂಕಿತರ ಬಗ್ಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಹೊಸ ಓಮಿಕ್ರಾನ್ ಸೋಂಕಿತರ ವಿವರ ಇಲ್ಲಿದೆ.
ಬೆಂಗಳೂರಿನ 20 ವರ್ಷದ ಯುವತಿಗೆ ಸೋಂಕು ತಗುಲಿದೆ. ಈಕೆಯ ಸಹೋದರಿ ಬ್ರಿಟನ್‌ನಿಂದ ಬಂದಿದ್ದು, ಅವರಲ್ಲಿ ಬುಧವಾರ ಓಮಿಕ್ರಾನ್ ಪತ್ತೆಯಾಗಿತ್ತು. ಈ ಯುವತಿ ಆಕೆಯ ಪ್ರಾಥಮಿಕ ಸಂಪರ್ಕಿತೆಯಾಗಿದ್ದಾರೆ. ಈಕೆ ಒಂದು ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿದ್ದರು. ಈ ಯುವತಿಯರ 56 ವರ್ಷದ ತಂದೆ ಹಾಗೂ 54 ವರ್ಷದ ತಾಯಿ ಇಬ್ಬರೂ ಕೂಡ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಅವರ ಜಿನೋಮ್ ಸೀಕ್ವೆನ್ಸಿಂಗ್ ವರದಿ ಗುರುವಾರ ಬಂದಿದೆ.
ಬೆಂಗಳೂರಿನ 27 ವರ್ಷದ ಡಿ. 16ರಂದು ಘಾನಾದಿಂದ ದುಬೈ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿದಾಗ ಅವರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದ್ದರಿಂದ ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಲ್ಲಿ ರೋಗ ಲಕ್ಷಣಗಳಿಲ್ಲ. ಅವರು ಮಾಡೆರ್ನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರು. ಅವರ 26 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ. ಅವರಲ್ಲಿ ದಕ್ಷಿಣ ಕನ್ನಡದ ಎಲ್ಲ 17 ಮಂದಿಯಲ್ಲಿ ಕೋವಿಡ್ ವರದಿ ನೆಗೆಟಿವ್ ಬಂದಿದೆ.
ಬ್ರಿಟನ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಡಿ. 17ರಂದು ಬಂದಿದ್ದ 31 ವರ್ಷದ ಪುರುಷನನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಪತ್ತೆಯಾಗಿತ್ತು. ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಬ್ರಿಟನ್‌ನಲ್ಲಿ ಎರಡೂ ಡೋಸ್ ಆಸ್ಟ್ರಾಜೆನಿಕಾ ಲಸಿಕೆ ಪಡೆದಿದ್ದಾರೆ. ಅವರಲ್ಲಿ ರೋಗ ಲಕ್ಷಣಗಳು ಕಂಡುಬಂದಿಲ್ಲ.
ಬ್ರಿಟನ್‌ನಿಂದ ಬೆಂಗಳೂರಿಗೆ ಡಿ. 17ರಂದು ಬಂದ ಕೇರಳದ ವ್ಯಕ್ತಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಅವರನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಕಂಡುಬಂದಿತ್ತು. ಅದೇ ದಿನ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಆಸ್ಟ್ರಾಜೆನಿಕಾದ ಎರಡು ಡೋಸ್ ಜತೆಗೆ ಬೂಸ್ಟರ್ ಡೋಸ್ ಕೂಡ ಪಡೆದುಕೊಂಡಿದ್ದಾರೆ.
18 ವರ್ಷದ ಯುವತಿ ಬ್ರಿಟನ್‌ನಿಂದ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ಇರುವುದು ಪತ್ತೆಯಾಗಿದೆ. ಅವರು ಕೂಡ ಡಿ. 17ರಂದು ನಗರಕ್ಕೆ ಮರಳಿದ್ದರು. ಅವರು ಒಂದು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದರು. ಅವರಲ್ಲಿ ರೋಗ ಲಕ್ಷಣಗಳು ಕಾಣಿಸಿಲ್ಲ.
ಬ್ರಿಟನ್‌ನಿಂದ ಬೆಂಗಳೂರಿಗೆ ಡಿ. 17ರಂದು ಮರಳಿದ 21 ವರ್ಷದ ಯುವಕನಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದ್ದರಿಂದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡೂ ಡೋಸ್ ಲಸಿಕೆ ಪಡೆದಿದ್ದ ಅವರು ಪ್ರಸ್ತುತ ಕೇರಳಕ್ಕೆ ತೆರಳಿ ಅಲ್ಲಿನ ಆಸ್ಪತ್ರೆಯೊಂದರಲ್ಲಿ ಐಸೋಲೇಟ್ ಆಗಿದ್ದಾರೆ.
ಡೆನ್ಮಾರ್ಕ್‌ನಿಂದ ಡಿ. 17ರಂದು ಬೆಂಗಳೂರಿನ 49 ವರ್ಷದ ಮಹಿಳೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಟ್ಟಾಗ ಪಾಸಿಟಿವ್ ದೃಢಪಟ್ಟಿತ್ತು. ಅವರು ಎರಡು ಡೋಸ್ ಫೈಜರ್ ಲಸಿಕೆಯ ಜತೆಗೆ ಒಂದು ಬೂಸ್ಟರ್ ಡೋಸ್ ಮಾಡೆರ್ನಾ ಲಸಿಕೆಯನ್ನು ಕೂಡ ಪಡೆದುಕೊಂಡಿದ್ದರು.
ಬ್ರಿಟನ್‌ನಿಂದ ಬಂದ 11 ವರ್ಷದ ಹೆಣ್ಣುಮಗಳಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಈಕೆ ಡಿ. 18ರಂದು ಕುಟುಂಬದವರೊಂದಿಗೆ ಬೆಂಗಳೂರಿಗೆ ಬಂದಿದ್ದಳು.
ನೈಜೀರಿಯಾದಿಂದ ಬೆಂಗಳೂರಿಗೆ ಡಿ. 18ರಂದು ಬಂದ 59 ವರ್ಷದ ಮಹಿಳೆಗೆ ವಿಮಾನ ನಿಲ್ದಾಣದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ಪತ್ತೆಯಾಗಿತ್ತು. ಅವರು ಎರಡೂ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದರು.
ಇನ್ನೊಂದು ಹೆಣ್ಣುಮಗು 9 ವರ್ಷದ್ದಾಗಿದ್ದು, ಈಕೆ ಸ್ವಿಟ್ಜರ್ಲೆಂಡ್‌ನಿಂದ ಅಬುದಾಬಿ ಮೂಲಕ ಬೆಂಗಳೂರಿಗೆ ಬಂದಿದ್ದಳು. ಮೈಸೂರಿನ ಈ ಬಾಲಕಿಗೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಕಂಡುಬಂದಿತ್ತು. ರೋಗ ಲಕ್ಷಣಗಳಿಲ್ಲದ ಬಾಲಕಿ, ಮೈಸೂರಿನಲ್ಲಿ ಐಸೋಲೇಷನ್‌ನಲ್ಲಿ ಇದ್ದಾಳೆ.