ಬೆಂಗಳೂರು: ವಾಯುಪಡೆ ಸಿಬ್ಬಂದಿಯ ಸುಲಿಗೆ ಮಾಡಿದ್ದವನ ಸೆರೆ

ಆರೋಪಿಗಳು ಒಂಟಿಯಾಗಿ ಹೋಗುವವರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದರು. ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಬೆಂಗಳೂರು: ವಾಯುಪಡೆ ಸಿಬ್ಬಂದಿಯ ಸುಲಿಗೆ ಮಾಡಿದ್ದವನ ಸೆರೆ
Linkup
ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆಯ ಕಮಾಂಡ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವಾಯುಪಡೆಯ ಹೆಡ್‌ ಕಾನ್ಸ್‌ಟೇಬಲ್‌ ಒಬ್ಬರನ್ನು ಬೆದರಿಸಿ ಸುಲಿಗೆ ಮಾಡಿದ್ದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ನಸುಕಿನಲ್ಲಿ ಹಾಗೂ ರಾತ್ರಿ ವೇಳೆ ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ಹಣ, ಮೊಬೈಲ್‌ ದರೋಡೆ ಮಾಡುತ್ತಿದ್ದ. ಜಗ ಜೀವನ್‌ ರಾಮ್‌ ನಗರದ ಮೊಹಮ್ಮದ್‌ ಯಾಸಿನ್‌ ಬಂಧಿತ ಆರೋಪಿ. ಈತನಿಂದ 1.26 ಲಕ್ಷ ರೂ. ಬೆಲೆ ಬಾಳುವ ಬೈಕ್‌, ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಗಳು ಒಂಟಿಯಾಗಿ ಹೋಗುವವರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದರು. ಅದೇ ರೀತಿ ಕಮಾಂಡ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವಾಯುಪಡೆಯ ಹೆಡ್‌ ಕಾನ್ಸ್‌ಟೇಬಲ್‌ ವೈಶಾಖ್‌ ಅವರು ಬೆಳಗಿನ ಜಾವ ಸೈಕ್ಲಿಂಗ್‌ಗೆ ಹೋಗುತ್ತಿದ್ದರು. ಈ ವೇಳೆ ಇಬ್ಬರು ದರೋಡೆಕೋರರು ಅವರನ್ನು ಮಾತನಾಡಿಸುವ ಸೋಗಿನಲ್ಲಿ ಬಂದು ಬೆದರಿಸಿ, ಅವರ ಮೊಬೈಲ್‌ ಕಸಿದು ಪರಾಯಾಗಿದ್ದರು. ಈ ಸಂಬಂಧ ವೈಶಾಖ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಾರಪೇಟೆ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಡಿ.17 ರಂದು ರಾತ್ರಿ 7.30 ರ ವೇಳೆಯಲ್ಲಿ ಉಪ್ಪಾರಪೇಟೆಯಲ್ಲಿ ಒಂಟಿಯಾಗಿ ನಡೆದು ಹೋಗುತ್ತಿದ್ದವರನ್ನು ತಡೆದು ಮಾರಕಾಸ್ತ್ರ ತೋರಿಸಿ ಬೆದರಿಸಿ ಅವರಿಂದ ಮೊಬೈಲ್‌ ಕಸಿದು ಪರಾರಿಯಾಗಿದ್ದ ಬಗ್ಗೆಯೂ ವಿಚಾರಣೆ ವೇಳೆ ಆರೋಪಿ ಬಾಯಿ ಬಿಟ್ಟಿದ್ದಾನೆ. ಅಲ್ಲದೇ, ಬ್ಯಾಟರಾಯನಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಕಳವು ಮಾಡಿರುವುದನ್ನು ಕೂಡ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು. ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ ಆಟೊದಲ್ಲಿ ಗಾಂಜಾ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಇರ್ಫಾನ್‌, ಇಮ್ರಾನ್‌ ಪಾಷಾ ಬಂಧಿತರು. ಆರೋಪಿಗಳಿಂದ 7 ಕೆ.ಜಿ ಗಾಂಜಾ, ಒಂದು ಆಟೊ ವಶಪಡಿಸಿಕೊಳ್ಳಲಾಗಿದೆ. ಇವರು ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆಟೊದಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು. ಅದರಲ್ಲೂಹಾಸ್ಟೆಲ್‌ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಸ್ಥಳೀಯ ನಿವಾಸಿಗಳು ನೀಡಿದ್ದ ಮಾಹಿತಿಗೆ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಗಾಂಜಾವನ್ನು ಎಲ್ಲಿಂದ ತರುತ್ತಿದ್ದರು, ಯಾರಿಗೆ ಮಾರಾಟ ಮಾಡುತ್ತಿದ್ದರು, ಎಷ್ಟು ದಿನಗಳಿಂದ ದಂಧೆ ನಡೆಸುತ್ತಿದ್ದರು ಎಂಬುದರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.