ಎಲ್‌ಐಸಿ ಐಪಿಒದಲ್ಲಿ ಚೀನಾದ ಹೂಡಿಕೆಗೆ ಅವಕಾಶ ನೀಡದಿರಲು ಕೇಂದ್ರ ಸರಕಾರ ಚಿಂತನೆ

ಭಾರತೀಯ ಜೀವ ವಿಮಾ ನಿಗಮದ ಆರಂಭಿಕ ಷೇರು ಕೊಡುಗೆ (ಐಪಿಒ) ವೇಳೆ ಚೀನಾದ ಹೂಡಿಕೆಯನ್ನು ನಿರ್ಬಂಧಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ ಎಂದು ರಾಯ್ಟರ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎಲ್‌ಐಸಿ ಐಪಿಒದಲ್ಲಿ ಚೀನಾದ ಹೂಡಿಕೆಗೆ ಅವಕಾಶ ನೀಡದಿರಲು ಕೇಂದ್ರ ಸರಕಾರ ಚಿಂತನೆ
Linkup
ಹೊಸದಿಲ್ಲಿ: ವಿಮಾ ದೈತ್ಯ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ಆರಂಭಿಕ ಷೇರು ಕೊಡುಗೆ (ಐಪಿಒ) ವೇಳೆ ಚೀನಾದ ಹೂಡಿಕೆಯನ್ನು ನಿರ್ಬಂಧಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ ಎಂದು ನಾಲ್ವರು ಹಿರಿಯ ಅಧಿಕಾರಿಗಳು ಹಾಗೂ ಬ್ಯಾಂಕರ್‌ ಒಬ್ಬರು ಸುದ್ದಿ ಸಂಸ್ಥೆ ರಾಯ್ಟರ್ಸ್‌ಗೆ ತಿಳಿಸಿದ್ದಾರೆ. ಎರಡೂ ದೇಶಗಳ ನಡುವೆ ಇರುವ ಬಿಗುವಿನ ವಾತಾವರಣ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ನಿರ್ಧಾರಕ್ಕೆ ಬರಲು ನಿರ್ಧರಿಸಿದೆ. ಸರಕಾರಿ ಒಡೆತನದ ಜೀವ ವಿಮಾ ನಿಗಮ, ವಿಮಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ದೇಶದ ವಿಮಾ ಕ್ಷೇತ್ರದಲ್ಲಿ ಶೇ. 60ಕ್ಕೂ ಹೆಚ್ಚು ಪಾಲು ಹೊಂದಿದೆ. ಜತೆಗೆ ಸುಮಾರು 37 ಲಕ್ಷ ಕೋಟಿ ರೂ. ಆಸ್ತಿಯನ್ನೂ ಹೊಂದಿದೆ. ಇದೇ ಸಂಸ್ಥೆಯ ಷೇರುಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲು ಸರಕಾರ ಉದ್ದೇಶಿಸಿದ್ದು, ಇದು ದೇಶದ ಇತಿಹಾಸದ ಅತೀ ದೊಡ್ಡ ಆರಂಭಿಕ ಷೇರು ಕೊಡುಗೆಯಾಗುವ ಸಾಧ್ಯತೆ ಇದೆ. ಐಪಿಒದಲ್ಲಿ ಸುಮಾರು 90,000 ಕೋಟಿ ರೂ. ಸಂಗ್ರಹವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ವಿದೇಶಿ ಹೂಡಿಕೆದಾರರಿಗೂ ಅವಕಾಶ ಕಲ್ಪಿಸಲು ಸರಕಾರ ಚಿಂತನೆ ನಡೆಸಿದ್ದು, ಚೀನಾದ ಹೂಡಿಕೆದಾರರಿಗೆ ಮಾತ್ರ ಬಾಗಿಲು ಮುಚ್ಚುವ ಸಾಧ್ಯತೆ ಇದೆ. ಲಡಾಖ್‌ನ ವಿವಾದಿತ ಪ್ರದೇಶದಲ್ಲಿ ಚೀನಾ ಹಾಗೂ ಭಾರತದ ಸೈನಿಕರ ನಡುವೆ ಹೊಡೆದಾಟ ನಡೆದ ಬಳಿಕ ಎರಡೂ ದೇಶಗಳ ನಡುವೆ ಪರಿಸ್ಥಿತಿ ಸರಿಯಿಲ್ಲ. ಇದಾದ ಬಳಿಕ ಸೂಕ್ಷ್ಮ ಕಂಪನಿಗಳು ಮತ್ತು ವಲಯಗಳಲ್ಲಿ ಚೀನಾದ ಹೂಡಿಕೆಯನ್ನು ಸರಕಾರ ನಿಯಂತ್ರಿಸುತ್ತಾ ಬಂದಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಹಲವು ಚೀನಾದ ಮೊಬೈಲ್‌ ಅಪ್ಲಿಕೇಷನ್‌ಗಳನ್ನೂ ಸರಕಾರ ನಿಷೇಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. "ಗಡಿ ಘರ್ಷಣೆಯ ನಂತರ ಚೀನಾದೊಂದಿಗೆ ಎಂದಿನಂತೆ ವ್ಯವಹಾರವು ಸಾಧ್ಯವಿಲ್ಲ. ವಿಶ್ವಾಸದ ಕೊರತೆ ಗಮನಾರ್ಹವಾಗಿ ವಿಸ್ತರಿಸಿದೆ," ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಜತೆಗೆ ಎಲ್‌ಐಸಿಯಂಥ ಕಂಪನಿಯಲ್ಲಿ ಚೀನಾದ ಹೂಡಿಕೆಯು ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಯಾವ ರೀತಿಯಲ್ಲಿ ಚೀನಾದ ಹೂಡಿಕೆಯನ್ನು ತಡೆಯಬೇಕು ಎಂಬುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿರುವುದರಿಂದ ಹಾಗೂ ಅಂತಿಮ ತೀರ್ಮಾನವನ್ನು ಇನ್ನೂ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅಧಿಕಾರಿಗಳು ತಮ್ಮ ಗುರುತು ಬಿಟ್ಟುಕೊಡಲು ಇಚ್ಚಿಸುತ್ತಿಲ್ಲ. ಈ ಬಗ್ಗೆ ಎಲ್‌ಐಸಿ ಹಾಗೂ ಹಣಕಾಸು ಸಚಿವಾಲಯ ರಾಯ್ಟರ್ಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚೀನಾದ ವಿದೇಶಾಂಗ ಇಲಾಖೆ ಹಾಗೂ ವಾಣಿಜ್ಯ ಇಲಾಖೆ ಕೂಡ ಪ್ರತಿಕ್ರಿಯೆ ಕೊಟ್ಟಿಲ್ಲ. ಮಾರ್ಚ್‌ಗೆ ಅಂತ್ಯಗೊಳ್ಳಲಿರುವ ಈ ಹಣಕಾಸು ವರ್ಷದಲ್ಲೇ ಎಲ್‌ಐಸಿಯ ಶೇ. 5 ರಿಂದ 10ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ ಸುಮಾರು 90,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಕಿಕೊಂಡಿದೆ. ಹಣ ಸಂಗ್ರಹಿಸಲು ಒಂದೇ ಹಂತದಲ್ಲಿ ಷೇರು ಮಾರಾಟ ಮಾಡಬೇಕಾ, ಎರಡು ಹಂತದಲ್ಲಿ ಮಾಡಬೇಕೇ ಎಂಬುದನ್ನು ಸರಕಾರ ಇನ್ನೂ ಅಂತಿಮಗೊಳಿಸಿಲ್ಲ. ಸದ್ಯದ ಕಾನೂನು ಪ್ರಕಾರ ವಿದೇಶಿಯರು ಎಲ್‌ಐಸಿಯಲ್ಲಿ ಹೂಡಿಕೆ ಮಾಡುವಂತಿಲ್ಲ. ಆದರೆ ಆರಂಭಿಕ ಷೇರು ಕೊಡುಗೆಯಲ್ಲಿ ವಿದೇಶಿಯರಿಗೆ ಶೇ. 20ರಷ್ಟು ಷೇರುಗಳನ್ನು ಖರೀದಿಸಲು ಅವಕಾಶ ನೀಡುವಂತೆ ಕಾನೂನು ಮಾರ್ಪಾಡು ಮಾಡಲು ಸರಕಾರ ಪರಿಶೀಲನೆ ನಡೆಸುತ್ತಿದೆ. ಐಪಿಒ ನಿರ್ವಹಣೆ ಮಾಡಲು ಗೋಲ್ಡ್‌ಮ್ಯಾನ್‌ ಸ್ಯಾಷ್‌, ಸಿಟಿಗ್ರೂಪ್‌ ಮತ್ತು ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್‌ ಸೇರಿ ಒಟ್ಟು 10 ಹೂಡಿಕೆ ಬ್ಯಾಂಕ್‌ಗಳನ್ನು ಗುರುತಿಸಲಾಗಿದೆ.