ಕೇಂದ್ರದ ವಿಮಾ ಯೋಜನೆಗಳಿಗೆ ಫಲಾನುಭವಿಗಳ ಖಾತೆಯಿಂದ ಪ್ರೀಮಿಯಂ ಹಣ ಕಡಿತ

ಕೇಂದ್ರ ಸರಕಾರದ ವಿಮಾ ಯೋಜನೆಗಳಾದ ಪಿಎಂಜೆಜೆವಿವೈ ಮತ್ತು ಪಿಎಂಎಸ್‌ಬಿವೈ ಯೋಜನೆಯ ನವೀಕರಣದ ವಾರ್ಷಿಕ ಪ್ರೀಮಿಯಂ ಮೊತ್ತವನ್ನು ಆಯಾ ಗ್ರಾಹಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತಿದೆ.

ಕೇಂದ್ರದ ವಿಮಾ ಯೋಜನೆಗಳಿಗೆ ಫಲಾನುಭವಿಗಳ ಖಾತೆಯಿಂದ ಪ್ರೀಮಿಯಂ ಹಣ ಕಡಿತ
Linkup
ಧಾರವಾಡ: ಕೇಂದ್ರ ಸರಕಾರ ಜೀವ ವಿಮಾ ಯೋಜನೆಯನ್ನು ಸಮಾಜದಲ್ಲಿನ ಬಡವರು ಮತ್ತು ಕಡಿಮೆ ಆದಾಯವಿರುವ ವರ್ಗದ ಜನರ ಬೆಳವಣಿಗೆಯನ್ನು ಗಮನದಲ್ಲಿಇಟ್ಟುಕೊಂಡು ಪ್ರಾರಂಭಿಸಲಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ ಜೀವ ವಿಮೆಯನ್ನು ಒದಗಿಸುವ ಉದ್ದೇಶವನ್ನು ಈ ಹೊಂದಿದೆ. ಟರ್ಮ್‌ ಯೋಜನೆ ಪ್ರಕಾರ ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆಯು 18- 50 ವರ್ಷ ವಯಸ್ಸಿನ ಜನರಿಗೆ ಲಭ್ಯವಿರುತ್ತದೆ. ಈ ಯೋಜನೆ ಒಂದು ನವೀಕರಣ ಮಾಡಬಹುದಾದ (ಪಿಎಂಜೆಜೆಬಿವೈ) ವಿಮೆ ಆಗಿದ್ದು, ಇದರಲ್ಲಿ ವಾರ್ಷಿಕ ಜೀವನ ವಿಮಾ ರಕ್ಷಣೆ 2 ಲಕ್ಷ ರೂ.ಗಳನ್ನು ವಿಮಾದಾರನ ಮರಣದ ಸಂದರ್ಭದಲ್ಲಿ ನೀಡಲಾಗುವುದು. ಅಂದರೆ ಅತೀ ಕಡಿಮೆ ವಾರ್ಷಿಕ 330 ರೂ.ಗಳ ಪ್ರೀಮಿಯಮ್‌ ದರದಲ್ಲಿ ಇದನ್ನು ನೀಡಲಾಗುತ್ತದೆ. ಅಲ್ಲದೆ ಈ ಪ್ರೀಮಿಯಮ್‌ ದರವು 18 - 50 ವರ್ಷ ವಯಸ್ಸಿನ ಎಲ್ಲರಿಗೂ ಒಂದೇ ಸಮನಾಗಿರುತ್ತದೆ. ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆಯನ್ನು ಹೊಂದಿರುವ ವಿಮಾದಾರನ ಮರಣದ ಸಮಯದಲ್ಲಿ ನಾಮಾಂಕಿತ ಫಲಾನುಭವಿಗೆ 2 ಲಕ್ಷ ರೂ.ಗಳನ್ನು ಮರಣದ ಸಂದರ್ಭದಲ್ಲಿ ನೀಡುತ್ತದೆ. ಮುಂದುವರೆದು, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (ಪಿಎಂಎಸ್‌ಬಿವೈ) ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯಗಳಿಗೆ ಒಂದು ವರ್ಷದವರೆಗೆ ಕವರೇಜ್‌ ನೀಡುತ್ತದೆ. ಈ ಯೋಜನೆಯು 18-70 ವರ್ಷ ವಯಸ್ಸಿನ ಜನರಿಗೆ ಲಭ್ಯವಿರುತ್ತದೆ. ಕೇವಲ ವಾರ್ಷಿಕ 12 ರೂ.ಗಳ ಪ್ರೀಮಿಯಮ್‌ ಮೊತ್ತವನ್ನು ಹೊಂದಿರುವ ಈ ವಿಮೆಯು ಬಡವರಿಗೆ ಮತ್ತು ಕಡಿಮೆ ಆದಾಯ ಹೊಂದಿರುವ ಜನರಿಗೆ ಬಹಳ ಪ್ರಯೋಜನಕಾರಿ. ಪ್ರಧಾನಮಂತ್ರಿ ಸುರಕ್ಷಾವಿಮಾ ಯೋಜನೆಯಡಿ ಆಕಸ್ಮಿಕ ಮರಣ ಮತ್ತು ಶಾಶ್ವತಪೂರ್ಣ ಅಂಗವೈಕಲ್ಯಕ್ಕೆ 2 ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ. ಲೈಫ್‌ ಕವರೇಜ್‌ ಲಭಿಸುವುದು. ಎಲ್ಲ ಬ್ಯಾಂಕ್‌ಗಳು ಮೇ ತಿಂಗಳ ಕೊನೆ ವಾರದಲ್ಲಿ ಅಂದರೆ ಮೇ 24 ರಿಂದ ಮೇ 31ರವರೆಗೆ ಪಿಎಂಜೆಜೆವಿವೈ ಮತ್ತು ಪಿಎಂಎಸ್‌ಬಿವೈಯ ನವೀಕರಣದ ವಾರ್ಷಿಕ ಮೊತ್ತವನ್ನು ಗ್ರಾಹಕರ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಆದ್ದರಿಂದ ಗ್ರಾಹಕರು ಮೇ ತಿಂಗಳ ಕೊನೆಯ ವಾರದಲ್ಲಿ ತಮ್ಮ ತಮ್ಮ ಖಾತೆಯಲ್ಲಿ ವಿಮೆಯ ನವೀಕರಣದ ಮೊತ್ತವನ್ನು ಮುಂಚಿತವಾಗಿಯೇ ಜಮಾ ಮಾಡಲು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಆರ್‌.ಅಣ್ಣಯ್ಯ ಪ್ರಕಟಣೆಯಲ್ಲಿ ಕೋರಿದ್ದಾರೆ.