ಹಾಲಿ ಪಿಎಫ್‌ ಖಾತೆ 2 ಖಾತೆಗಳಾಗಿ ವಿಭಜನೆ, ಯಾಕೆ ಹೀಗೆ?

ಹಾಲಿ ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗಳು ಎರಡಾಗಿ ವಿಭಜನೆಯಾಗಲಿವೆ. ತೆರಿಗೆ ಮತ್ತು ತೆರಿಗೆಯಲ್ಲದ ಕೊಡುಗೆ ಖಾತೆಗಳು ಎನ್ನುವ ಹೆಸರಿನೊಂದಿಗೆ ಹೊಸ ಖಾತೆಗಳು ಸೃಷ್ಟಿಯಾಗಲಿದ್ದು, ವಾರ್ಷಿಕ 2.5 ಲಕ್ಷ ರೂ. ಹೆಚ್ಚು ಮೊತ್ತದ ಮೇಲಿನ ಆದಾಯ ತೆರಿಗೆ ವಿಧಿಸಲು ಕೇಂದ್ರ ನಿರ್ಧರಿಸಿದೆ.

ಹಾಲಿ ಪಿಎಫ್‌ ಖಾತೆ 2 ಖಾತೆಗಳಾಗಿ ವಿಭಜನೆ, ಯಾಕೆ ಹೀಗೆ?
Linkup
ಹೊಸದಿಲ್ಲಿ: ಕೇಂದ್ರ ಸರಕಾರ ಹೊಸ ಆದಾಯ ತೆರಿಗೆ ನಿಯಮಗಳನ್ನು ಘೋಷಿಸಿದ್ದು, ಇದರ ಅಡಿಯಲ್ಲಿ ಖಾತೆಗಳನ್ನು ಎರಡು ಖಾತೆಗಳಾಗಿ ವಿಭಜಿಸಲಾಗುತ್ತದೆ. ವಾರ್ಷಿಕ 2.5 ಲಕ್ಷ ರೂ. ಹೆಚ್ಚು ಮೊತ್ತವನ್ನು ಖಾತೆಗೆ ಜಮೆ ಮಾಡುವ ಉದ್ಯೋಗಿಗಳು ತಮ್ಮ ಹಣದ ಮೇಲೆ ಗಳಿಸುವ ಪಿಎಫ್‌ ಆದಾಯದ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರಕಾರ ಈ ವ್ಯವಸ್ಥೆ ಜಾರಿಗೆ ತರುತ್ತಿದೆ. ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈ ಸಂಬಂಧ ನಿಯಮಗಳನ್ನು ಪ್ರಕಟಿಸಿದ್ದು, ಪಿಎಫ್‌ ಖಾತೆಯ ಒಳಗೆ ಪ್ರತ್ಯೇಕ ಖಾತೆಗಳನ್ನು ನಿರ್ವಹಣೆ ಮಾಡುವಂತೆ ಸೂಚಿಸಿದೆ. ಪರಿಣಾಮ ಹಾಲಿ ಉದ್ಯೋಗಿಗಳು ಭವಿಷ್ಯ ನಿಧಿ ಖಾತೆಗಳು ಎರಡಾಗಿ ವಿಭಜನೆಯಾಗಲಿವೆ. ತೆರಿಗೆ ಮತ್ತು ತೆರಿಗೆಯಲ್ಲದ ಕೊಡುಗೆ ಖಾತೆಗಳು ಎನ್ನುವ ಹೆಸರಿನೊಂದಿಗೆ ಹೊಸ ಖಾತೆಗಳು ಸೃಷ್ಟಿಯಾಗಲಿವೆ. ತೆರಿಗೆ ರಹಿತ ಖಾತೆಯಲ್ಲಿ ಮಾರ್ಚ್ 31, 2021ರ ಮೊದಲು ಇದ್ದ ಮೊತ್ತವೂ ಇರುತ್ತದೆ. ಆಗಸ್ಟ್‌ 31 ರಂದು ಹಣಕಾಸು ಇಲಾಖೆ ಹೊಸ ನಿಯಮಗಳನ್ನು ಘೋಷಿಸಿತ್ತು. ಇದೇ ವೇಳೆ ಆದಾಯ ತೆರಿಗೆ ಇಲಾಖೆಗೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಸರಕಾರಿ ಮೂಲಗಳ ಪ್ರಕಾರ ಹೊಸ ನಿಯಮಗಳು ಮುಂದಿನ ಹಣಕಾಸು ವರ್ಷದಿಂದ ಅಂದರೆ ಏಪ್ರಿಲ್‌ 1, 2022ರಿಂದ ಜಾರಿಗೆ ಬರಲಿವೆ. ವಾರ್ಷಿಕ 2.5 ಲಕ್ಷ ರೂ.ಗಿಂತ ಹೆಚ್ಚಿನ ಪಿಎಫ್‌ ಕೊಡುಗೆ ಮೇಲೆ ಪಡೆಯುವ ಆದಾಯದ ಮೇಲೆ ತೆರಿಗೆ ವಿಧಿಸಲು, ಆದಾಯ ತೆರಿಗೆ ನಿಯಮಾವಳಿಯಲ್ಲಿ '9ಡಿ'ಯನ್ನು ಹೊಸದಾಗಿ ಸೇರಿಸಲಾಗಿದೆ. ತೆರಿಗೆ ವಿಧಿಸಬಹುದಾದ ಬಡ್ಡಿಯನ್ನು ಲೆಕ್ಕಹಾಕಲು, ಅಸ್ತಿತ್ವದಲ್ಲಿರುವ ಭವಿಷ್ಯ ನಿಧಿ ಖಾತೆಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಹಣಕಾಸು ವರ್ಷದಲ್ಲಿ ಮತ್ತು ಹಿಂದಿನ ಎಲ್ಲಾ ವರ್ಷಗಳಲ್ಲಿ ಎರಡು ಪ್ರತ್ಯೇಕ ಖಾತೆಗಳನ್ನು ನಿರ್ವಹಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯ ತೆರಿಗೆ ವಿಧಿಸಬಹುದಾದ ಮತ್ತು ತೆರಿಗೆಯಲ್ಲದ ಕೊಡುಗೆಯನ್ನು ಪರಿಶೀಲಿಸಲು ಹೀಗೆ ಮಾಡಬೇಕಾಗುತ್ತದೆ. ಆದಾಯ ಸಂಗ್ರಹಕ್ಕೆ ಹೊಸ ಹೊಸ ಮೂಲಗಳನ್ನು ಕಂಡುಕೊಳ್ಳುತ್ತಿರುವ ಕೇಂದ್ರ ಸರಕಾರ ಬಜೆಟ್‌ನಲ್ಲಿ ಪಿಎಫ್‌ ನಿಧಿಗೆ ವಾರ್ಷಿಕ 2.5 ಲಕ್ಷಕ್ಕಿಂತ ಹೆಚ್ಚಿನ ಕೊಡುಗೆ ನೀಡುವ ಉದ್ಯೋಗಿಗಳ ಹಣದ ಆದಾಯದ ಮೇಲೆ ತೆರಿಗೆ ವಿಧಿಸುವುದಾಗಿ ಹೇಳಿತ್ತು. ಅದರಂತೆ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಸರಕಾರ ಆರಂಭಿಸಿದ್ದು, ತೆರಿಗೆ ವಿಧಿಸಲು ಸಜ್ಜಾಗಿದೆ.