ಕೆಂಪಡಕೆ ದರವನ್ನೂ ಮೀರಿದ ಚಾಲಿ ಬೆಲೆ; ಹಳೆ ಅಡಕೆಗೆ ಮಾರ್ಕೆಟ್‌ನಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್!
ಕೆಂಪಡಕೆ ದರವನ್ನೂ ಮೀರಿದ ಚಾಲಿ ಬೆಲೆ; ಹಳೆ ಅಡಕೆಗೆ ಮಾರ್ಕೆಟ್‌ನಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್!
ಚಾಲಿ ಅಡಕೆ ಕೆಂಪಡಕೆ ದರವನ್ನೂ ಮೀರಿ ಇತಿಹಾಸದಲ್ಲೇ ದಾಖಲಾರ್ಹ ದರದತ್ತ ದಾಪುಗಾಲು ಇಡುತ್ತಿದೆ. ಆದರೆ ಹಲ್ಲಿದ್ದಾಗ ಕಡಲೆಯಿಲ್ಲ, ಕಡಲೆಯಿದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ ಅಡಕೆ ಬೆಳೆಗಾರರ ಸ್ಥಿತಿ. ಮಾರುಕಟ್ಟೆಯಲ್ಲಿ ದರವೇನೋ ಇದೆ. ಆದರೆ ಸಾಕಷ್ಟು ರೈತರಲ್ಲಿ ಬೆಳೆ ಇಲ್ಲ. ಇನ್ನು ಹೊಸ ಅಡಕೆ ಸಿದ್ಧ ಮಾಡಿ ಮಾರುಕಟ್ಟೆಗೆ ತರೋಣ ಎಂದರೆ ಮಳೆ, ಮೋಡದ ಅಡ್ಡಿ. ಇದು ಬೆಳೆಗಾರರು ಕೈ ಹಿಸುಕಿಕೊಳ್ಳುವಂತಾಗಿದೆ.
ಕೃಷ್ಣಮೂರ್ತಿ ಟಿ.ಕೆರೆಗದ್ದೆ
ಶಿರಸಿ: ಡಿಸೆಂಬರ್ ತಿಂಗಳು ಬಂತೆಂದರೆ ಹೊಸ ಅಡಕೆ ಮಾರುಕಟ್ಟೆಗೆ ಆವಕವಾಗಲು ಶುರುವಾಗುತ್ತಿತ್ತು. ಆದರೆ ಈ ಬಾರಿ ಹವಾಮಾನ ವೈಪರೀತ್ಯ ಹೊಸ ಅಡಕೆ ಸಿದ್ಧತೆಗೆ ತೊಡರುಗಾಲು ಹಾಕಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಹಳೆ ಅಡಕೆಯನ್ನೇ ನೆಚ್ಚಿಕೊಳ್ಳುವಂತಾಗಿದ್ದು ಡಿಮ್ಯಾಂಡಪ್ಪೋ ಡಿಮ್ಯಾಂಡ್ ಎನ್ನುವಂತಾಗಿದೆ.
ಕೆಂಪಡಕೆ ಹಾಗೂ ಚಾಲಿ ಅಡಕೆ ಎರಡೂ ಸಹ ಕ್ವಿಂಟಲ್‌ಗೆ ಗರಿಷ್ಟ ಅರ್ಧ ಲಕ್ಷ ದರದಲ್ಲೇ ಮುನ್ನಡೆಯುತ್ತಿವೆ. ಅದರಲ್ಲೂ ಚಾಲಿ ಅಡಕೆ ಕೆಂಪಡಕೆ ದರವನ್ನೂ ಮೀರಿ ಇತಿಹಾಸದಲ್ಲೇ ದಾಖಲಾರ್ಹ ದರದತ್ತ ದಾಪುಗಾಲು ಇಡುತ್ತಿದೆ. ಆದರೆ ಹಲ್ಲಿದ್ದಾಗ ಕಡಲೆಯಿಲ್ಲ, ಕಡಲೆಯಿದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ ಅಡಕೆ ಬೆಳೆಗಾರರ ಸ್ಥಿತಿ. ಮಾರುಕಟ್ಟೆಯಲ್ಲಿ ದರವೇನೋ ಇದೆ. ಆದರೆ ಸಾಕಷ್ಟು ರೈತರಲ್ಲಿ ಬೆಳೆ ಇಲ್ಲ. ಇನ್ನು ಹೊಸ ಅಡಕೆ ಸಿದ್ಧ ಮಾಡಿ ಮಾರುಕಟ್ಟೆಗೆ ತರೋಣ ಎಂದರೆ ಮಳೆ, ಮೋಡದ ಅಡ್ಡಿ. ಇದು ಬೆಳೆಗಾರರು ಕೈ ಹಿಸುಕಿಕೊಳ್ಳುವಂತಾಗಿದೆ.
ಪ್ರತಿ ವರ್ಷ ಡಿಸೆಂಬರ್ ಅವಧಿಯಲ್ಲಿ ಹೊಸ ಅಡಕೆ ಮಾರುಕಟ್ಟೆಗೆ ಆವಕವಾಗುತ್ತಿತ್ತು. ಆ ಸಂದರ್ಭದಲ್ಲಿ ಹಳೆ ಅಡಕೆ ದರ ಇಳಿಮುಖವಾಗುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಹೊಸ ಕೆಂಪಡಕೆ ನಿರೀಕ್ಷೆಯಷ್ಟು ಆವಕವಾಗಲು ತಿಂಗಳು ಕಾಲ ಕಳೆಯಬಹುದು. ಹೊಸ ಚಾಲಿ ಅಡಕೆಯಂತೂ ಬರಲು ಮೂರ್ನಾಲ್ಕು ತಿಂಗಳು ಕಳೆಯಬಹುದು.
ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಬೆಳೆಗಾರರು ಮನೆ ಹಾಗೂ ಸಹಕಾರಿ ಸಂಘಗಳಲ್ಲಿ ದೊಡ್ಡ ಪ್ರಮಾಣದಲ್ಲಿ ದಾಸ್ತಾನಿಟ್ಟು ಬೆಲೆಗೆ ಕಾಯುವುದಕ್ಕೆ ಹಿಂಜರಿಯುತ್ತಿದ್ದಾರೆ. ದರ ಏರಿಳಿತವಾಗುತ್ತಿದ್ದರೂ ಕೊರಾನಾ ಕಾರಣದಿಂದ ಮಾರುಕಟ್ಟೆಯಲ್ಲಿಏನೆಲ್ಲ ತಲ್ಲಣ ಆಗಬಹುದೋ ಎಂಬ ಆತಂಕದಲ್ಲಿ ನಿರಂತರವಾಗಿ ಅಡಕೆ ಮಾರಾಟ ಮಾಡುತ್ತಲೇ ಬಂದಿದ್ದಾರೆ. ಇದರಿಂದ ಅಡಕೆ ಚಾಲಿ ಹಾಗೂ ಕೆಂಪಡಕೆ ದಾಸ್ತಾನಿನಲ್ಲಿ ಆಗುತ್ತಿದ್ದ ಅಸಮತೋಲನ ಕಡಿಮೆಯಾಗಿದೆ. ಈ ಮಧ್ಯೆ ಬೆರಣಿಕೆಯ ಬೆಳೆಗಾರರು ಅಡಕೆ ಹಾಗೇ ಇಟ್ಟಿದ್ದು ದರ ಇನ್ನು ಬರಬಹುದು ಎಂಬ ಲೆಕ್ಕಾಚಾರದಲ್ಲಿ ಕಾಯುತ್ತಿದ್ದಾರೆ. ಇದರಿಂದ ಅಡಕೆ ಅಂಗಳದಲ್ಲಿ ಮಾರಾಟಕ್ಕೆ ಹಾಕುವ ಅಡಕೆ ಪ್ರಮಾಣ ಇಳಿಮುಖದತ್ತ ಸಾಗಿದೆ.
ಅಡಕೆ ಸಿದ್ಧತೆಯ ಹೊಯ್ದಾಟಉತ್ತಮ ಬೆಲೆ ನೋಡಿ ಬೆಳೆಗಾರರು ಅಂತು ಇಂತೂ ಹೊಸ ಅಡಕೆ ಸಿದ್ಧಗೊಳಿಸುವುದಕ್ಕೆ ಹರಸಾಹಸಪಡುತ್ತಿದ್ದಾರೆ. ಮಳೆಯ ಹೊಯ್ದಾಟ ಬೆಳೆಗಾರರಿಗೆ ಕಿರಿಕಿರಿ ತಂದಿದೆ. ಅದರಲ್ಲೂ ಕೆಂಪಡಕೆ ತಯಾರಿ ಮಾಡುವುದೇ ದೊಡ್ಡ ಸವಾಲಾಗಿದೆ. ಈಗಿನ ದರದಲ್ಲಿ ಚಾಲಿ ಹಾಗೂ ಕೆಂಪು ಯಾವುದೂ ಮಾಡಿದರೂ ಒಂದೇ ಆಗಿದ್ದು ಆದರೆ ಈ ಬಾರಿ ಚಾಲಿ ಪ್ರಮಾಣ ಜಾಸ್ತಿಯಾಗುವುದರಿಂದ ಸಾಧ್ಯವಾದಷ್ಟಾದರೂ ಕೆಂಪಡಕೆ ತಯಾರಿಸಬೇಕು ಎಂಬುದು ರೈತರ ಆಲೋಚನೆ.
ತೀರಾ ಇಳಿಮುಖವಾದ ದಾಸ್ತಾನುಜಿಲ್ಲೆಯಲ್ಲಿ ಮಾಹಿತಿಯಂತೆ ಪ್ರತಿವರ್ಷ 5ಲಕ್ಷ ಕ್ವಿಂಟಲ್ ಅಡಕೆ ಬೆಳೆಯುತ್ತಾರೆ. ಅದರಲ್ಲಿ 3.5ಲಕ್ಷ ಕ್ವಿಂಟಲ್ ಚಾಲಿ ಹಾಗೂ 1.5ಲಕ್ಷ ಕ್ವಿಂಟಲ್ ಕೆಂಪಡಕೆ ಸಿದ್ಧಪಡಿಸಲಾಗುತ್ತದೆ. ಜಿಲ್ಲೆಯಲ್ಲಿ ಹೆಚ್ಚೆಂದೆರೆ 10ಸಾವಿರ ಕ್ವಿಂಟಲ್ ಚಾಲಿ ಅಡಕೆ ಆದರೆ ಈ ಬಾರಿ ರೈತರು ಹಾಗೂ ಸಹಕಾರಿ ಸಂಘಗಳಲ್ಲಿ ಇರಬಹುದು. ಕೆಂಪಡಕೆ ಸಾವಿರ ಕ್ವಿಂಟಲ್ ಆಸುಪಾಸು ದಾಸ್ತಾನಿರಬಹುದು ಎಂಬ ಅಂದಾಜಿದೆ.
ಚಾಲಿಗೆ ದಾಖಲೆ ದರಚಾಲಿ ಅಡಕೆ ಇತಿಹಾಸದಲ್ಲೇ ದಾಖಲಾರ್ಹ ದರ ಬಂದಿದೆ. ನವೆಂಬರ್ ಕೊನೆಯಲ್ಲಿ ಗರಿಷ್ಟ 51,408 ರೂ., ದಾಖಲಾಗಿತ್ತು. ಆ ನಂತರ ಕೊಂಚ ಇಳಿಮುಖವಾಗಿದ್ದ ಬೆಲೆ ಕಳೆದ ವಾರದಲ್ಲಿ ಏರುಮುಖವಾಗಿ 51ಸಾವಿರ ರೂ.ದಾಟಿ ಮುನ್ನಡೆಯುತ್ತಿದೆ. ದೇಶದಲ್ಲಿ ಗಡಿಗಳಲ್ಲಿ ಬಿಗಿ ಕ್ರಮ ಅನುಸರಿಸಿರುವುದು ಅಕ್ರಮವಾಗಿ ದೇಶಕ್ಕೆ ನುಸುಳುವ ಅಡಕೆ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಚಾಲಿ ದರ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆಯಿದೆ. ಗುಟ್ಕಾ, ಮಾಮಾಕ್ಕೆ ಹೆಚ್ಚಾಗಿ ಬಳಸುವ ಚಾಲಿಗೆ ನಾಗ್ಪುರ್, ಗುಜರಾತ್, ಮಹಾರಾಷ್ಟ್ರ, ಉತ್ತರಪ್ರದೇಶಗಳಿಂದ ಬೇಡಿಕೆಯಿದೆ.